ADVERTISEMENT

ಗ್ರೀಕರ ಪ್ರಪಂಚ ನಮಗೇಕೆ ಬೇಕು?

ಪಶ್ಚಿಮದ ಅರಿವು /ಹಾರಿತಾನಂದ
Published 30 ಮಾರ್ಚ್ 2018, 19:30 IST
Last Updated 30 ಮಾರ್ಚ್ 2018, 19:30 IST

ಪ್ರಾಚೀನ ಗ್ರೀಕ್‌ ತತ್ತ್ವಶಾಸ್ತ್ರದ ಕೆಲವೊಂದು ಪ್ರಾಥಮಿಕ ಅಂಶಗಳ ಕಿರುಪರಿಚಯವನ್ನು ಇದುವರೆಗೂ ಮಾಡಿಕೊಂಡಿದ್ದೇವೆ. ಆದರೆ ಇದರಿಂದ ಸಮಗ್ರವಾಗಿ ವಿಷಯವನ್ನು ಗ್ರಹಿಸುವುದು ಕಷ್ಟ. ಅದಕ್ಕೂ ಮೊದಲು ಇಲ್ಲೊಂದು ಪ್ರಶ್ನೆ ಉದ್ಭವವಾಗುತ್ತದೆ – ‘ನಾವು ಗ್ರೀಕರ ತತ್ತ್ವಶಾಸ್ತ್ರವನ್ನು ಏಕಾದರೂ ಓದಬೇಕು?’

ಕನ್ನಡದಲ್ಲಿ ಗ್ರೀಕರ ತತ್ತ್ವಶಾಸ್ತ್ರವನ್ನು ಕುರಿತು ಮೊದಲು ಪ್ರಕಟವಾದ ಕೃತಿಗಳಲ್ಲಿ ಪ್ರಮುಖವಾದವು ಎರಡು; ಮೊದಲನೆಯದು ‘ಸಾಕ್ರೆಟಿಸನ ಕೊನೆಯ ದಿನಗಳು’ (ಎ. ಎನ್‌. ಮೂರ್ತಿರಾವ್‌); ಎರಡನೆಯದು: ‘ಗ್ರೀಕರ ತತ್ವಶಾಸ್ತ್ರ ಸಂಗ್ರಹ’ (ಕೆ. ಆರ್‌. ಶ್ರೀನಿವಾಸಯ್ಯಂಗಾರ್‌). ಈ ಎರಡು ಕೃತಿಗಳು ಕೂಡ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಕಟವಾಗಿದ್ದವು.

ಗ್ರೀಕರ ತತ್ವಶಾಸ್ತ್ರ ಸಂಗ್ರಹ – ಈ ಕೃತಿಗೆ ಮುನ್ನುಡಿಯನ್ನು ಬರೆದವರು ಬಿ. ಎಂ. ಶ್ರೀಕಂಠಯ್ಯ. ಅವರ ಕೆಲವು ಮಾತುಗಳು ಹೀಗಿವೆ:

ADVERTISEMENT

‘ಪ್ರಪಂಚದ ಜ್ಞಾನವಿಜ್ಞಾನಗಳನ್ನೂ, ರಾಜಕೀಯ ಸಾಮಾಜಿಕ ರಚನೆಗಳನ್ನೂ, ಕಲಾ ಸಾಹಿತ್ಯ ಸೌಂದರ್ಯಗಳನ್ನೂ, ವಿಚಾರಕ್ರಮಗಳನ್ನೂ, ಬೇರೆ ಆಧಾರವನ್ನು ಬಯಸದೆ ಕೇವಲ ಬುದ್ಧಿವ್ಯಾಪಾರದ ಅನುಭವದಿಂದಲೇ ಸತ್ಯಾನ್ವೇಷಣೆ ಮಾಡತಕ್ಕ ಧೈರ್ಯಸ್ಥೈರ್ಯಗಳನ್ನೂ, ಪಾಶ್ಚಾತ್ಯ ಸಂಸ್ಕಾರ ವ್ಯವಹಾರಗಳ ಮೂಲಾಧಾರಗಳನ್ನೂ ಅರಿಯಬೇಕೆಂಬವರಿಗೆ – ಯಾವ ವಿದ್ಯಾವಂತನು ತಾನೆ ಇವನ್ನು ಅರಿಯದೆ ವಿದ್ಯಾವಂತನಾಗುವನು?  – ಪೂರ್ವಕಾಲದ ಗ್ರೀಕರ ಸರ್ವತೋಮುಖವಾದ ಸಾಹಿತ್ಯದ ಪರಿಚಯ ಅತ್ಯಾವಶ್ಯಕ. ಇತಿಹಾಸಕಾವ್ಯವೆ, ನಾಟಕವೆ, ಭಾವಗೀತೆಯೆ, ಚರಿತ್ರೆಯೆ, ತತ್ವವೆ, ವಾಗ್ಮಿತೆಯೆ, ರಂಜನಕಥೆಯೆ, ರಾಜಕೀಯ ಆದರ್ಶಗಳೆ, ಧಾರ್ಮಿಕ ಸೂಕ್ಷ್ಮತೆಯೆ, ವ್ಯಾವಹಾರಿಕ ವಿವೇಕವೆ, ಕಲೆಯೆ, ಶಿಲ್ಪವೆ, ಚಿತ್ರವೆ, ಸಂಗೀತವೆ, ವಿಜ್ಞಾನವೆ, ಕುಶಲಕರ್ಮವೆ, ನಿತ್ಯಜೀವನದ ಸೊಬಗೆ, ವ್ಯಾಯಾಮವೆ, ಆರೋಗ್ಯವೆ, ವಿನೋದವೆ, ಗಂಭೀರತೆಯೆ, ದ್ಯಾವಪೃಥಿವಿಯ ವಿಶ್ವವರ್ತನೆಯಲ್ಲಿ ಸಕಲ ಸೌಭಾಗ್ಯಗಳಿಗೂ ಪುರಾತನ ಹೆಲಸ್‌ ತವರುಮನೆಯಾಗಿತ್ತು. ಇಂತಹ ಇನ್ನೊಂದು ದೇಶವೆಂದರೆ ಭಾರತ, ಇಂತಹ ಇನ್ನೊಂದು ಜನವೆಂದರೆ ಪುರಾತನ ಭಾರತೀಯರು. ಇಂದಿನ ಭಾರತೀಯರು ಈ ಎರಡು ಜನರ ಇತಿಹಾಸಗಳನ್ನೂ ಕಾರ್ಯಸಾಧನೆಗಳನ್ನೂ ವಿಶ್ವಾಸದಿಂದ ಅಭ್ಯಾಸ ಮಾಡಬೇಕು. ತಮ್ಮ ಹಿರಿಯ ಹೆಸರುಗಳ ಸಾಲಿನಲ್ಲಿ ಗ್ರೀಕರ ಹಿರಿಯರ ಹೆಸರುಗಳನ್ನೂ ಕೂಡಿಸಿಕೊಳ್ಳಬೇಕು. ಹೋಮರ್, ಈಸ್ಖಿಲಸ್‌, ಸಾಕ್ರಟೀಸ್‌, ಪ್ಲೇಟೊ, ಅರಿಸ್ಟಾಟಲ್‌, ಹೆರೆಡೊಟಸ್‌, ಥೂಸಿಡಿಡಿಸ್‌, ಪೆರಿಕ್ಲಿಸ್‌, ಅಲೆಕ್ಸಾಂಡರ್‌, ಡೆಮಾಸ್ಥಿನಿಸ್‌, ಎಪಿಕ್ಟೆಟಿಸ್‌, ಮಾರ್ಕಸ್‌ ಅರಲಿಯಸ್‌ – ಒಂದೊಂದು ವ್ಯಕ್ತಿಯೂ ಒಂದೊಂದು ಪ್ರಪಂಚ; ಒಂದೊಂದು ಉಪನಿಷತ್ತು; ಒಂದೊಂದು ಜೀವ ಸಂಜೀವನ.’

ಸುಮಾರು ಎಪ್ಪತ್ತೈದು ವರ್ಷಗಳ ಹಿಂದೆ (1941) ಬರೆದ ಈ ಮಾತುಗಳು ಇಂದಿಗೂ ಸಲ್ಲುತ್ತವೆ.

**

ನಿಮ್ಮ ಅನಿಸಿಕೆಗಳನ್ನು ನಮಗೆ ಕಳುಹಿಸಿ. ವಿಳಾಸ: ಸಂಪಾದಕರು, ಪ್ರಜಾವಾಣಿ, ಅರಿವು ವಿಭಾಗ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560001 email: arivu@prajavani.co.in.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.