ADVERTISEMENT

ಭಗವಾನ್‌ ಬುದ್ಧ

ಪಶ್ಚಿಮದ ಅರಿವು /ಹಾರಿತಾನಂದ
Published 27 ಏಪ್ರಿಲ್ 2018, 19:28 IST
Last Updated 27 ಏಪ್ರಿಲ್ 2018, 19:28 IST
ಭಗವಾನ್‌ ಬುದ್ಧ
ಭಗವಾನ್‌ ಬುದ್ಧ   

ಕನ್ನಡಭಾಷೆಯಲ್ಲಿ ಬೌದ್ಧದರ್ಶನದ ಬಗ್ಗೆ ಬರಹ ಮಾಡಿದ ಪ್ರಮುಖರಲ್ಲಿ ಒಬ್ಬರು ಜಿ.ಪಿ.ರಾಜರತ್ನಂ.  ಎರಡು ಸಾವಿರದ ಐದು ನೂರನೆಯ ಬುದ್ಧಜಯಂತಿಯ ದಿವಸ ನೆನಪಿಗಾಗಿ, 1956ರ ಮೇ 24ರಂದು ‘ಜ್ಞಾನದಯಾಸಿಂಧು ಭಗವಾನ್‌ ಬುದ್ಧ’ ಎಂಬ ಕೃತಿ ಅವರಿಂದ ಪ್ರಕಟವಾಯಿತು. ಈ ಕೃತಿಯಲ್ಲಿ ಏಳು ವಿಭಾಗಗಳಿದ್ದು, ಬುದ್ಧ ಭಗವಂತನ ಜೀವನ–ದರ್ಶನ, ಅವನು ಹೇಳಿದ ಕಥೆಗಳು, ಮಾಡಿದ ಉಪದೇಶಗಳು – ಇವೆಲ್ಲವೂ ಸಂಗ್ರಹವಾಗಿವೆ. ಬುದ್ಧನ ಜೀವನಕ್ಕೂ ಹುಣ್ಣಿಮೆಗೂ, ಅದರಲ್ಲೂ ವೈಶಾಖದ ಹುಣ್ಣಿಮೆ – ಇರುವ ನಂಟಿನ ಬಗ್ಗೆ ರಾಜರತ್ನಂ ಹೀಗೆ ಬರೆದಿದ್ದಾರೆ:

‘ಬುದ್ಧನಲ್ಲಿ ಶ್ರದ್ಧೆಯುಳ್ಳವರಿಗೆ ವೈಶಾಖ ಶುಕ್ಲ ಪೂರ್ಣಿಮಾ ಎಂಬುದು ಅತಿ ವಿಶೇಷವಾದ ಸಂಜ್ಞಾರ್ಥವನ್ನುಳ್ಳ ಒಂದು ಮಹಾದಿವಸ. ಏಕೆಂದರೆ –

ಬುದ್ಧನ ಜನನ: ವೈಶಾಖದ ಶುಕ್ಲ ಪೂರ್ಣಿಮಾ.
ಬುದ್ಧನ ಗೃಹತ್ಯಾಗ: ಆಷಾಢ ಶುಕ್ಲ ಪೂರ್ಣಿಮಾ.
ಬುದ್ಧನ ವನಪ್ರವೇಶ: ಆಷಾಢ ಶುಕ್ಲ ಪೂರ್ಣಿಮಾ.
ಬುದ್ಧನ ಬೋಧಿಲಾಭ: ವೈಶಾಖದ ಶುಕ್ಲ ಪೂರ್ಣಿಮಾ.
ಧರ್ಮಚಕ್ರಪ್ರವರ್ತನ: ಆಷಾಢ ಶುಕ್ಲ ಪೂರ್ಣಿಮಾ. 
ಬುದ್ಧನ ಪರಿನಿರ್ವಾಣ: ವೈಶಾಖದ ಶುಕ್ಲ ಪೂರ್ಣಿಮಾ.

ADVERTISEMENT

ವೈಶಾಖ ಶುಕ್ಲ ಪೂರ್ಣಿಮಾ ಹೀಗೆ ಮೂರು ಕಾರಣಗಳಿಂದ – ಬುದ್ಧನು ಹುಟ್ಟಿದ ದಿವಸವೆಂದು, ಬುದ್ಧನ ಬೋಧಿಯನ್ನು ಪಡೆದ ದಿವಸವೆಂದು, ಬುದ್ಧನು ಪರಿನಿರ್ವಾಣಪಡೆದ ದಿವಸವೆಂದು – ವಿಶೇಷವಾದ ಮಹತ್ತ್ವವನ್ನು ಪಡೆದಿದೆ.’

ಇದರ ಹಿಂದಿರುವ ಸಾಂಕೇತಿಕತೆಯನ್ನೂ ನಾವಿಲ್ಲಿ ಗಮನಿಸಬೇಕು.

ಹುಣ್ಣಿಮೆ ಎನ್ನುವುದು ಪೂರ್ಣತೆಗೆ ಸಂಕೇತ; ಮಾತ್ರವಲ್ಲ, ಅದು ಆಹ್ಲಾದಕ್ಕೂ ಸಂಕೇತ. ಬುದ್ಧ ಹೀಗೆ ಪೂರ್ಣತೆಗೂ ಆನಂದಕ್ಕೂ ಸಂಕೇತವಾಗಿ ಸಾವಿರಾರು ವರ್ಷಗಳಿಂದ ನಮ್ಮ ಜೀವನಕ್ಕೆ ಬೆಳಕಾಗಿದ್ದಾನೆ; ನೆಮ್ಮದಿಯನ್ನೂ ಒದಗಿಸುತ್ತಿದ್ದಾನೆ.

ಬುದ್ಧನ ತಾಯಿ ಮಾಯಾದೇವಿಯ ತಂಗಿ ಮಹಾಪ್ರಜಾಪತಿ ಗೌತಮೀದೇವಿ. ಅವಳು ಬುದ್ಧನನ್ನು ಸ್ತುತಿಸಿರುವ ಗಾಹೆಯ ಮೂಲವನ್ನೂ ಅದರ ಕನ್ನಡ ಅನುವಾದವನ್ನೂ ರಾಜರತ್ನಂ ಒದಗಿಸಿದ್ದಾರೆ:

ಬುದ್ಧ ವೀರ ನಮೋತ್ಯತ್ಥು ಸಬ್ಬಸತ್ತಾನಮುತ್ತಮ |
ಯೋ ಮಂ ದುಕ್ಖಾ ಪಮೋಚೇಸಿ ಆಞ್ಙಂ ಚ ಬಹುಕಂ ಜನಂ ||
ಬಹೂನಂ ವತ ಆತ್ಥಾಯ ಮಾಯಾ ಜನಯಿ ಗೋತಮಂ |
ಬ್ಯಾಧಿ ಮರಣತುನ್ನಾನಂ ದುಃಖಕ್ಖಂಧಂ ಬೃಪಾನುದಿ ||

‘ನಮ್ಮನ್ನು ದುಃಖದಿಂದ ವಿಮೋಚನಗೊಳಿಸಿ, ನನ್ನಂತೆಯೇ ಇನ್ನೂ ಇತರರು ಬಹುಜನಗಳನ್ನು ದುಃಖದಿಂದ ವಿಮೋಚನಗೊಳಿಸಿದ ಬುದ್ಧನೆ! ವೀರನೆ! ಸರ್ವ ಸತ್ತ್ವಗಳಲ್ಲಿ ಉತ್ತಮನಾದವನೆ! ನಿನಗೆ ನಮೋಸ್ತು!

ನಿಜವಾಗಿಯೂ ಬಹುಜನಗಳಿಗೆ ಅರ್ಥ(ಹಿತ)ವಾಗುವುದಕ್ಕೋಸ್ಕರವಾಗಿಯೇ ಮಾಯಾ ಗೌತಮನನ್ನು ಪ್ರಸವಿಸಿದಳು. ವ್ಯಾಧಿಮರಣಗಳಿಂದ ಏಟು ತಿಂದು ಆದ ದುಃಖಸ್ಕಂಧವನ್ನು ಆತನು ಹೋಗಲಾಡಿಸಿದನು.’

ಭಗವಂತನ ಕಟ್ಟ ಕಡೆಯ ಮಾತುಗಳು:
‘ಇದೋ, ಭಿಕ್ಷುಗಳೆ, ನಿಮ್ಮನ್ನು ಕರೆದು ಹೇಳುತ್ತೇನೆ: ಸಂಸ್ಕಾರಗಳು ವ್ಯಯವಾಗುವಂಥವು. ನಿಮ್ಮ ಮುಕ್ತಿಯನ್ನು ನೀವೇ ಅಪ್ರಮಾದದಿಂದ ಸಂಪಾದಿಸಿಕೊಳ್ಳಿ’ (ವಯಧಮ್ಮಾ ಸಂಖಾರಾ, ಅಪ್ಪಮಾದೇವ ಸಂಪಾದೇಥ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.