ADVERTISEMENT

ರಿಟೇಲ್ ಎಫ್‌ಡಿಐಗೆ ಎಳ್ಳುನೀರು?

ಡಿ.ಮರಳೀಧರ
Published 22 ಅಕ್ಟೋಬರ್ 2013, 19:30 IST
Last Updated 22 ಅಕ್ಟೋಬರ್ 2013, 19:30 IST
ರಿಟೇಲ್ ಎಫ್‌ಡಿಐಗೆ ಎಳ್ಳುನೀರು?
ರಿಟೇಲ್ ಎಫ್‌ಡಿಐಗೆ ಎಳ್ಳುನೀರು?   

ಜಾಗತಿಕ ಅರ್ಥ ವ್ಯವಸ್ಥೆಯು ಈಗಲೂ ಆರ್ಥಿಕ ಹಿಂಜರಿಕೆಯ ವಿನಾಶಕಾರಿ ಪರಿಣಾಮಗಳಿಂದ ಇನ್ನೂ ಸಂಪೂರ್ಣ­ವಾಗಿ ಚೇತರಿಸಿಕೊಂಡಿಲ್ಲ. ಅಮೆರಿಕದ ಆಡಳಿತ ಯಂತ್ರ ಕೆಲಕಾಲದವರೆಗೆ ಸ್ಥಗಿತಗೊಂಡಿದ್ದು ಮತ್ತು ಸರ್ಕಾರದ ಸಾಲದ ಮಿತಿ ಹೆಚ್ಚಿಸಲು ಅಮೆರಿಕ ಕಾಂಗ್ರೆಸ್ ಸಾಕಷ್ಟು ವಿಳಂಬ ಮಾಡಿರುವುದು ಅಂತರ್ ರಾಷ್ಟ್ರೀಯ ಉದ್ದಿಮೆ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಗಮನಾರ್ಹ ಪ್ರಮಾಣದ ನಗದು ಸಂಪನ್ಮೂಲದ ಮೀಸಲು ಇರಿಸಿಕೊಂಡು ಹಣಕಾಸು ಮಾರುಕಟ್ಟೆಯಲ್ಲಿ ತಮಗೆ ಇಷ್ಟ ಬಂದ ಹಾಗೆ ನಿರ್ಧಾರ ತೆಗೆದು­ಕೊಳ್ಳುವ ಸರ್ಕಾರಗಳ ಧೋರಣೆಯು ದೇಶಿ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಹರಿವಿನ ಮೇಲೆ ತಣ್ಣೀರೆರಚುತ್ತದೆ.

ಇಂತಹ ಮಂದಗತಿಯ ಮತ್ತು ಆರ್ಥಿಕ ಹಿಂಜರಿಕೆಯ ಸಂದರ್ಭದಲ್ಲಿ ಭಾರತದ  ಬಂಡವಾಳ ಮಾರುಕಟ್ಟೆ ಕೂಡ ಸಿಹಿ ಸುದ್ದಿ ಕೇಳಲು ಕಾತರದಿಂದ ಕಾದಿದೆ. ಇದೇ ಹೊತ್ತಿನಲ್ಲಿ ವರದಿಯಾದ ವಾಲ್‌ಮಾರ್ಟ್ ಮತ್ತು ಭಾರ್ತಿ ಸಂಸ್ಥೆ ನಡುವಣ ಒಡಕು, ದೇಶದ ಪಾಲಿಗೆ ಒಳ್ಳೆಯ ಶಕುನ­ವೇನೂ ಅಲ್ಲ.

ಕೇಂದ್ರ ಸರ್ಕಾರವು, ಬಹುಬ್ರಾಂಡ್ ಚಿಲ್ಲರೆ ವಹಿವಾಟು ರಂಗದಲ್ಲಿ ಎಫ್‌ಡಿಐ ಮಿತಿಯನ್ನು ಶೇ 51ಕ್ಕೆ ಹೆಚ್ಚಿಸುವ ವಿವಾದಾತ್ಮಕವಾದ ನಿರ್ಧಾರ ಕೈಗೊಂಡು ಒಂದು ವರ್ಷ ಪೂರ್ಣ­ಗೊಂಡ ಸಂದರ್ಭದಲ್ಲಿಯೇ ಭಾರ್ತಿ ಮತ್ತು ವಾಲ್‌ಮಾರ್ಟ್ ನಡುವೆ ಒಡಕು ಮೂಡಿದೆ.

ಎಫ್‌ಡಿಐ ಮಿತಿ ಹೆಚ್ಚಿಸಿದ್ದರಿಂದ ವಿಶ್ವದ ಎಲ್ಲ ಪ್ರಮುಖ ಬಹುರಾಷ್ಟ್ರೀಯ ಚಿಲ್ಲರೆ ವಹಿವಾಟಿನ ಸಂಸ್ಥೆಗಳು ಭಾರತದ ಮಾರುಕಟ್ಟೆ ಪ್ರವೇಶಿಸಲು ಪೈಪೋಟಿ ನಡೆಸಲಿವೆ.  ಇಲ್ಲಿಯ ಮಾರು­ಕಟ್ಟೆ ಗಾತ್ರ ಹಾಗೂ ಹೆಚ್ಚುತ್ತಿ­ರುವ ಮಧ್ಯಮ ವರ್ಗದ ಹಿನ್ನೆಲೆಯಲ್ಲಿ ದೈತ್ಯ ಸಂಸ್ಥೆ­ಗಳು ಭಾರತ ಪ್ರವೇಶಿಸಲು ತುದಿ­ಗಾಲಲ್ಲಿ ನಿಂತಿವೆ ಎಂದೂ ನಿರೀಕ್ಷಿಸ­ಲಾಗಿತ್ತು.

ವಾಲ್‌ಮಾರ್ಟ್ ಕೂಡ ಭಾರತದಲ್ಲಿ ತನ್ನ ವಹಿವಾಟು ವಿಸ್ತರಿಸಲು ಅವಸರಿ­ಸಲಿದೆ ಎಂದೂ ಭಾವಿಸಲಾಗಿತ್ತು. ಆದರೆ, ಆರಂಭದಲ್ಲಿನ ಎಚ್ಚರಿಕೆಯ ನಿಲುವು ಮತ್ತು ರಿಟೇಲ್ ವಹಿವಾಟಿ­ನಿಂದಲೇ ಹಿಂದೆ ಸರಿಯುವ ವಾಲ್‌ಮಾರ್ಟ್‌ ನಿಲುವಿನಿಂದ  ಜಾಗತಿಕ­ವಾಗಿ ಭಾರತದ ವರ್ಚಸ್ಸಿಗೆ ಧಕ್ಕೆ ಒದಗಿದೆ.

ಭಾರ್ತಿ ಜತೆಗಿನ ಸಹಭಾಗಿತ್ವದಿಂದ ಹಿಂದೆ ಸರಿದ ವಾಲ್‌ಮಾರ್ಟ್‌ನ ನಿರ್ಧಾರಕ್ಕೆ ವಿಶ್ವದಾದ್ಯಂತ ಮಾಧ್ಯಮ­ಗಳಲ್ಲಿ ವ್ಯಾಪಕ ಪ್ರಚಾರ ದೊರೆತಿದೆ. ಪ್ರಮುಖ ಹಣಕಾಸು ಪತ್ರಿಕೆಗಳು ವಿಶ್ಲೇಷಣಾತ್ಮಕ ಲೇಖನಗಳನ್ನು ಪ್ರಕಟಿ­ಸಿದ್ದರೆ, ಅಷ್ಟೇನೂ ಪ್ರಮುಖವಲ್ಲದ ಪತ್ರಿಕೆಗಳಂತೂ ಈಗಲೂ ಈ ಬಗ್ಗೆ ವರದಿಗಳನ್ನು ಪ್ರಕಟಿಸುತ್ತಲೇ ಇವೆ.

ಈ ವರದಿಗಳನ್ನು ವಾಲ್‌ಮಾರ್ಟ್‌ಗೆ ಸಂಬಂಧಿಸಿರುವಂತೆ ಅಷ್ಟೇ ನೋಡ­ಬಾರದು. ಚಿಲ್ಲರೆ ವಹಿವಾಟು ರಂಗದಲ್ಲಿ ಭಾರತವು ವಿದೇಶಿ ನೇರ ಬಂಡವಾಳ­ವನ್ನು ಆಕರ್ಷಿಸುವಲ್ಲಿ ವಿಫಲವಾಗಿರು­ವುದನ್ನೂ ಈ ಅನಿರೀಕ್ಷಿತ ಬೆಳವಣಿಗೆಯು ಸ್ಪಷ್ಟಪಡಿಸುತ್ತದೆ.

ಇತ್ತೀಚಿನ ಕೆಲ ವರ್ಷಗಳಲ್ಲಿ ದೇಶದ ಚಿಲ್ಲರೆ ವಹಿವಾಟಿನಲ್ಲಿ ಎಫ್‌ಡಿಐಗೆ ಅನುಮತಿ ನೀಡುವ ವಿಷಯವು ತೀವ್ರ ಚರ್ಚೆಗೆ ಒಳಪಟ್ಟಿದೆ. ಚಿಲ್ಲರೆ ವಹಿ­ವಾಟನ್ನು ಹೂಡಿಕೆ ಮಿತಿ ನಿರ್ಬಂಧದಿಂದ ಮುಕ್ತಗೊಳಿಸಬೇಕು ಎಂದು ಕೇಂದ್ರ­ದಲ್ಲಿನ ಆಡಳಿತಾರೂಢ ಯುಪಿಎ ಸರ್ಕಾರವು ತನ್ನ ಮಿತ್ರ ಪಕ್ಷಗಳ ಮನವೊಲಿಕೆಗೆ ಮಾಡಿದ ಕಸರತ್ತು ವಿಫಲವಾಗುತ್ತಲೇ ಬಂದಿತ್ತು.  ಅಳೆದು ಸುರಿದು ಕೊನೆಗೂ 2012ರಲ್ಲಿ ಬಹು ಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ಶೇ 51ರಷ್ಟು ‘ಎಫ್‌ಡಿಐ’ಗೆ ಅನುಮತಿ ನೀಡುವ ನಿರ್ಧಾರ­ವನ್ನು ಸರ್ಕಾರ ಪ್ರಕಟಿಸಿತು.

ಈ ಹೊಸ ‘ಎಫ್‌ಡಿಐ’ ನೀತಿ ಅನ್ವಯ, ಯಾವುದೇ ಬಹುರಾಷ್ಟ್ರೀಯ ಸಂಸ್ಥೆಯು ಕನಿಷ್ಠ 10 ಕೋಟಿ ಡಾಲರ್ (₨ 600 ಕೋಟಿ) ಹೂಡಿಕೆ ಮಾಡ­ಬೇಕು. ಇದರಲ್ಲಿ ಶೇ 50ರಷ್ಟು ಬಂಡವಾಳವನ್ನು ಮೂಲ ಸೌಕರ್ಯ­ಗಳ ನಿರ್ಮಾಣಕ್ಕೆ ವೆಚ್ಚ ಮಾಡ­ಬೇಕು. ಶೇ 30ರಷ್ಟು ಸರಕುಗಳನ್ನು ಸ್ಥಳೀಯ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಂದಲೇ ಖರೀದಿಸಬೇಕು ಎನ್ನುವ ನಿಬಂಧನೆ­ಗಳನ್ನು ವಿಧಿಸಲಾಗಿತ್ತು.

ಇದರ ಜತೆಗೆ, ಕನಿಷ್ಠ 10 ಲಕ್ಷ ಜನಸಂಖ್ಯೆಯ ನಗರಗಳಲ್ಲಿ ಮಾತ್ರ ಈ ಬಹುರಾಷ್ಟ್ರೀಯ ಸರ್ವ ಸರಕು ಮಳಿಗೆಗಳು ಕಾರ್ಯಾ­ರಂಭ ಮಾಡಬೇಕು.   ಬಹು­ರಾಷ್ಟ್ರೀಯ ಸಂಸ್ಥೆಗಳಿಗೆ ಪ್ರವೇಶ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡುವ ನಿಬಂಧನೆ ವಿಧಿಸಲಾಗಿತ್ತು.

ದೇಶದಲ್ಲಿ ಹೊಸದಾಗಿ ವಹಿವಾಟು ಆರಂಭಿಸಲಿದ್ದ ಬಹು ಬ್ರಾಂಡ್ ಚಿಲ್ಲರೆ ವಹಿವಾಟಿನ ಬಹುರಾಷ್ಟ್ರೀಯ ಸಂಸ್ಥೆ­ಗಳು ಸ್ಥಳೀಯ ಚಿಲ್ಲರೆ ಸರ್ವ ಸರಕು ವಹಿವಾಟಿನ ಸಂಸ್ಥೆಗಳ ಜತೆ ಸ್ಪರ್ಧೆ ಎದುರಿಸಬೇಕಾಗಿತ್ತು. ಈ ಸ್ಥಳೀಯ ಸಂಸ್ಥೆಗಳ ವಹಿವಾಟಿನ ಮೇಲೆ ಸದ್ಯಕ್ಕೆ ಯಾವುದೇ ನಿಬಂಧನೆಗಳು ಇಲ್ಲ ಮತ್ತು ಈಗಾಗಲೇ ಅವುಗಳ ವಹಿವಾಟು ಭದ್ರವಾಗಿ ಬೇರು ಬಿಟ್ಟಿತ್ತು. ವಹಿವಾಟಿಗೆ ಮುಕ್ತ ಅವಕಾಶ ಇದ್ದರೂ ಸ್ಥಳೀಯ ಚಿಲ್ಲರೆ ವಹಿವಾಟು ಸಂಸ್ಥೆಗಳು ಬಾಗಿಲು ಹಾಕುವ ಸಂಖ್ಯೆಯೂ ಗರಿಷ್ಠ ಮಟ್ಟದಲ್ಲಿ ಇದೆ.

ಭಾರತ ಸರ್ಕಾರ ವಿಧಿಸಿರುವ ನಿಬಂಧನೆಗಳಡಿ ತಾನು ಲಾಭ ಮಾಡಿ­ಕೊಳ್ಳಲು ಸಾಧ್ಯವೇ ಇಲ್ಲ. ಹೀಗಾಗಿ ಕ್ಯಾಷ್ ಆಂಡ್ ಕ್ಯಾರಿಯ ಸಗಟು ವಹಿವಾಟಿನಲ್ಲಿಯೇ ಆಸಕ್ತಿ ತಳೆದಿರು­ವುದಾಗಿ ವಾಲ್‌ಮಾರ್ಟ್‌ ಘೋಷಿಸಿದೆ. ಶೇ 30ರಷ್ಟು ಸರಕುಗಳನ್ನು ಸ್ಥಳೀಯ ಪೂರೈಕೆದಾರರಿಂದಲೇ ಖರೀದಿಸ­ಬೇಕು ಎನ್ನುವ ನಿಬಂಧನೆ ಪಾಲಿಸುವುದು ತುಂಬ ಕಠಿಣವಾಗಿದೆ.

ಈ ಷರತ್ತಿಗೆ ಒಳಪಟ್ಟರೆ ವಹಿವಾಟಿನಲ್ಲಿ ನಷ್ಟ ಖಚಿತ ಎನ್ನುವ ತೀರ್ಮಾನಕ್ಕೂ ವಾಲ್‌­ಮಾರ್ಟ್‌ ಬಂದಿದೆ.
ಮೇಲ್ನೋಟಕ್ಕೆ ವಾಲ್‌­ಮಾರ್ಟ್‌ನ  ನಿಲುವು ಚರ್ಚಾಸ್ಪದವಾಗಿದ್ದರೂ, ರಿಟೇಲ್ ವಹಿವಾಟಿನ ಆಳವಾದ ವಿಶ್ಲೇಷಣೆ ನಡೆಸಿದರೆ ಅನೇಕ ಆಸಕ್ತಿ­ದಾಯಕ ವಿವರಗಳು ತಿಳಿದು ಬರುತ್ತವೆ.

ಅನೇಕ ದೊಡ್ಡ ಚಿಲ್ಲರೆ ವಹಿವಾಟು ಮಳಿಗೆಗಳಲ್ಲಿ ಆಹಾರ ಪದಾರ್ಥಗಳು ಶೇ 30ರಿಂದ ಶೇ 35ರಷ್ಟು ಮಾರಾಟ­ಗೊಳ್ಳುತ್ತವೆ.  ಉಳಿದ ವಹಿವಾಟಿನಲ್ಲಿ ಗೃಹೋಪಯೋಗಿ ಇತರ ಸರಕುಗಳು, ಸೇವೆಗಳ ಪ್ರಮಾಣವೇ ಹೆಚ್ಚಿಗೆ ಇರುತ್ತದೆ.

ಬಹುಬ್ರಾಂಡ್‌  ಚಿಲ್ಲರೆ ವಹಿವಾಟಿನ ಆರಂಭಿಕ ಹಂತದಲ್ಲಿ ತಯಾರಿಕಾ ಸರಕುಗಳು ಗರಿಷ್ಠ ಶೇ 65ರಷ್ಟು ಪಾಲು ಹೊಂದಿರುತ್ತವೆ. ಇದರಲ್ಲಿ ಅರ್ಧದಷ್ಟು ಸರಕುಗಳನ್ನು ಸ್ಥಳೀಯ ‘ಎಸ್ ಎಂಇ’­ಗಳಿಂದಲೇ ಖರೀದಿಸುವುದು ಭಾರತದಲ್ಲಿ ಅಷ್ಟು ಸುಲಭವಲ್ಲ.

ದಕ್ಷಿಣ ಭಾರತದಲ್ಲಿ ಸಾಕಷ್ಟು ಅಭಿವೃದ್ಧಿ­ಗೊಂಡಿರುವ ಕೈಗಾರಿಕಾ ವಸಾಹತುವಿನಲ್ಲಿ ನನ್ನ ಸ್ವಂತ ಅನುಭವಕ್ಕೆ ಬಂದ ಸಂಗತಿಯನ್ನು ನಾನು ಇಲ್ಲಿ ಉಲ್ಲೇಖಿಸಲೇಬೇಕು. ಚಿಲ್ಲರೆ ಮಳಿಗೆ­ಗಳಿಗೆ ನೇರವಾಗಿ ಮಾರಾಟ ಮಾಡುವ ಸರಕುಗಳಲ್ಲಿ ‘ಎಸ್‌ಎಂಇ’ಗಳಿಂದ ಪಡೆಯುವ ಸರಕುಗಳ ಪ್ರಮಾಣ ಶೇ 10ಕ್ಕಿಂತ ಕಡಿಮೆ ಇರುತ್ತದೆ.

ಉಳಿದಂತೆ ಇತರ ‘ಎಸ್‌ಎಂಇ’ ಘಟಕಗಳು ಕೈಗಾರಿಕೆಗಳಿಗೆ ಬಿಡಿಭಾಗ ಪೂರೈಸುತ್ತವೆ. ಇಂತಹ ಘಟಕಗಳು ಚಿಲ್ಲರೆ ವಹಿವಾಟಿಗೆ ಅಗತ್ಯವಾದ ಸರಕುಗಳನ್ನು ಪೂರೈಸುವ ಅರ್ಹತೆ ಪಡೆದಿದ್ದರೂ ದೈತ್ಯ ಚಿಲ್ಲರೆ ವಹಿವಾಟಿನ ಸಂಸ್ಥೆಗಳಿಗೆ ಅಗತ್ಯ ಇರುವಷ್ಟು ಪ್ರಮಾಣದಲ್ಲಿ ಸರಕುಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ.

ಬೃಹತ್ ಪ್ರಮಾಣದಲ್ಲಿ  ಗುಣ­ಮಟ್ಟದ  ಸರಕುಗಳ ಅಗತ್ಯ ಇರುವ  ಆಧುನಿಕ ಚಿಲ್ಲರೆ ವಹಿವಾಟಿನ ದೈತ್ಯ ಮಳಿಗೆಗಳು ಎಲ್ಲ  ಕಾಲಕ್ಕೂ ಇಂತಹ ಸಣ್ಣ ಪುಟ್ಟ ಪೂರೈಕೆ­ದಾರರನ್ನು ನೆಚ್ಚಿ­ಕೊಂಡು ಕುಳಿತುಕೊಳ್ಳಲು ಸಾಧ್ಯವಾಗ­ಲಾರದು.

ನನಗೆ ಅನಿಸುವ ಮಟ್ಟಿಗೆ ಈ ಮಾತು ಬಹುತೇಕ ಕೈಗಾರಿಕಾ ಎಸ್ಟೇಟ್ ಗಳಿಗೆ ಸರಿಯಾಗಿ ಅನ್ವಯಿಸುತ್ತದೆ. ಬಹುಬ್ರಾಂಡ್ ಚಿಲ್ಲರೆ ವಹಿವಾಟಿನ ರಂಗಕ್ಕೆ ಪ್ರವೇಶಿಸುವ ಯಾವುದೇ ಹೊಸ ಸಂಸ್ಥೆಗೆ ಆರಂಭಿಕ ಹಂತದಲ್ಲಿಯೇ ಶೇ 30 ರಷ್ಟು ಸರಕನ್ನು ಸ್ಥಳೀಯ ಪೂರೈಕೆ­ದಾರರಿಂದಲೇ ಖರೀದಿಸ­ಬೇಕು ಎನ್ನುವ ನಿಬಂಧನೆ ಪಾಲಿಸಲು ಸಾಧ್ಯವಾಗ­ಲಾರದು ಎನ್ನುವುದು  ವಾಸ್ತವ.

ಇದೊಂದು ಕೋಳಿ ಮೊದಲೋ ಅಥವಾ - ಮೊಟ್ಟೆ ಮೊದಲೋ ಎನ್ನು­ವಂತಹ ಒಗಟಿನ ಪ್ರಶ್ನೆ. ಪೂರೈಕೆದಾರರು ಮೊದಲು ಸಿದ್ಧರಿ­ರಬೇಕೊ ಅಥವಾ ಖರೀದಿ­ದಾರರು ಮೊದಲು ಸರಕು ಕೊಳ್ಳಲು ಮುಂದಾಗಿರಬೇಕೊ ಎನ್ನು­ವುದು ಬಗೆಹರಿಯದ ಪ್ರಶ್ನೆ­ಯಾಗಿಯೇ ಉಳಿಯಲಿದೆ.

ವಾಹನ ಉದ್ದಿಮೆಯಲ್ಲಿಯೂ ನಾವು ಈ ಹಿಂದೆ ಇಂತಹ ಪರಿಸ್ಥಿತಿಯನ್ನು ಎದುರಿಸಿದ್ದೇವೆ. ದೇಶದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆಯಾಗಿರುವ ಮಾರುತಿ, ಆರಂಭಿಕ ಹಂತದಲ್ಲಿ ಬಹು­ತೇಕ ಬಿಡಿಭಾಗಗಳನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತಿತ್ತು.

ಕ್ರಮೇಣ ಜಾಗತಿಕ ಗುಣಮಟ್ಟದ ತಂತ್ರಜ್ಞಾನ­ವನ್ನು ಸ್ಥಳೀಯವಾಗಿಯೇ ಅಭಿವೃದ್ಧಿ­ಪಡಿಸಿ ಕಾರ್ಯರೂಪಕ್ಕೆ ತಂದು ದೇಶೀಯವಾಗಿಯೇ ಬಿಡಿಭಾಗಗಳನ್ನು ತಯಾರಿಸ­ತೊಡಗಿತು. ಈ ಪ್ರಕ್ರಿಯೆ ಪೂರ್ಣ­ಗೊಳ್ಳಲು ಎರಡು ದಶಕಗಳೇ ಬೇಕಾದವು. ಭಾರತ ಈಗ ವಾಹನಗಳ ಬಿಡಿಭಾಗಗಳನ್ನಷ್ಟೇ ಅಲ್ಲದೇ ಪೂರ್ಣ ಪ್ರಮಾಣದ ವಾಹನಗಳನ್ನೂ  ದೊಡ್ಡ ಪ್ರಮಾಣದಲ್ಲಿಯೇ ರಫ್ತು ಮಾಡುತ್ತಿದೆ.

ಬಹುಬ್ರಾಂಡ್ ಚಿಲ್ಲರೆ ವಹಿವಾಟಿ­ನಲ್ಲಿಯೂ ಆರಂಭದಲ್ಲಿ ಇದೇ ಪರಿಸ್ಥಿತಿ ಉದ್ಭವಿಸಲಿದ್ದರೂ, ವಹಿವಾಟಿನ ಸ್ವರೂಪ ಕೆಲ ಮಟ್ಟಿಗೆ ಭಿನ್ನವಾಗಿರಲಿದೆ. ವಾಹನ ತಯಾರಿಕೆ ಉದ್ಯಮದಿಂದ ಚಿಲ್ಲರೆ ವಹಿವಾಟು ರಂಗವು ಪಾಠ ಕಲಿಯಬೇಕಾಗಿದೆ.

ಚಿಲ್ಲರೆ ವಹಿವಾಟಿನಲ್ಲಿ ‘ಎಫ್‌ಡಿಐ’ ಬಗ್ಗೆ ಕೇಂದ್ರ ಸರ್ಕಾರವು ಒಂದು ವೇಳೆ ಗಂಭೀರ ನಿಲುವು ತಳೆದಿದ್ದರೆ ನಿಯಮಾ­ವಳಿ­ಗಳನ್ನು ಸೂಕ್ತವಾಗಿ ಬದಲಿಸಬೇಕು ಮತ್ತು ದೈತ್ಯ ಸಂಸ್ಥೆಗಳು ಎತ್ತಿರುವ ಆಕ್ಷೇಪಗಳನ್ನು ಪರಿಹರಿಸಬೇಕು. ಚಿಲ್ಲರೆ ವಹಿವಾಟನ್ನು ಉದಾರೀಕ­ರಣ­­ಗೊಳಿ­ಸಲು ಸರ್ಕಾರ ನಡೆಸುತ್ತಿರುವ ಸಮರಕ್ಕೆ ಇನ್ನೂ ಸಾಕಷ್ಟು ಬಲವಾದ ಕಾರಣಗಳು ಇದ್ದೇ ಇವೆ.

ಬಹುಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ‘ಎಫ್‌ಡಿಐ’ಗೆ ಅವಕಾಶ ಮಾಡಿಕೊಡುವ ಧೋರಣೆಯನ್ನು ತಾರ್ಕಿಕ ಅಂತ್ಯಕ್ಕೆ
ಕೊಂಡೊ­ಯ್ಯಲು ಸರ್ಕಾರ ಕೆಚ್ಚೆದೆ ಪ್ರದರ್ಶಿಸಬೇಕಾಗಿದೆ.

ಖಚಿತ ಮತ್ತು ಸ್ಥಿರವಾದ ತೆರಿಗೆ ನೀತಿಯು ಯಾವುದೇ ‘ಎಫ್‌ಡಿಐ’ಗೆ ಪೂರ್ವಭಾವಿಯಾಗಿ ಜಾರಿಗೆ ಬರ­ಬೇಕಾಗಿದೆ. ಚುನಾವಣೆಗಳು ಹತ್ತಿರ ಇರುವಾಗ ಸರ್ಕಾರಕ್ಕೆ ಹೆಚ್ಚು ಸಮಯಾವಕಾಶವೂ ಇಲ್ಲ.

ಪ್ರಧಾನಿ ಮನಮೋಹನ್ ಸಿಂಗ್ ಅವರಲ್ಲಿನ ಆರ್ಥಿಕ ತಜ್ಞ ಎಚ್ಚರಗೊಂಡು ಬದಲಾವಣೆಗೆ ಮುಂದಾಗುವನೇ?  ಅಥವಾ  ಚಿಲ್ಲರೆ ವಹಿವಾಟಿನಲ್ಲಿನ ‘ಎಫ್‌ಡಿಐ’ ಹಾದಿ ಇಲ್ಲಿಗೇ ಮುಚ್ಚಿ ಹೋಯಿತೇ? ಈ ಎರಡೂ ಅನುಮಾನ­ಗಳಿಗೆ ಕಾಲವೇ ಉತ್ತರ ಹೇಳಲಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.