ADVERTISEMENT

ಪುನರಪಿ ಜನನಂ ಪುನರಮಿ ಮರಣಂ...

ಪ್ರಕಾಶ್ ರೈ
Published 16 ಜೂನ್ 2018, 19:03 IST
Last Updated 16 ಜೂನ್ 2018, 19:03 IST
ಪುನರಪಿ ಜನನಂ ಪುನರಮಿ ಮರಣಂ...
ಪುನರಪಿ ಜನನಂ ಪುನರಮಿ ಮರಣಂ...   

ಗಂ ಗಾನದಿಯ ತೀರದಲ್ಲಿದ್ದೆ. ಸೆಪ್ಟೆಂಬರ್ ತಿಂಗಳ ಗಂಗೆ ಶಾಂತವಾಗಿರುತ್ತಾಳೆ. ಗೆಳೆಯ ತನಿಕೆಳ್ಳ ಭರಣಿಯೊಂದಿಗೆ ಹರಟುತ್ತ ಕುಳಿತಿದ್ದೆ.

‘ಇಳಿದು ಬಾ ತಾಯಿ ಇಳಿದು ಬಾ

ಹರನ ಜಡೆಯಿಂದ ಹರಿಯ ಅಡಿಯಿಂದ

ADVERTISEMENT

ಋಷಿಯ ತೊಡೆಯಿಂದ ನುಸುಳಿ ಬಾ;

ದೇವದೇವರನು ತಣಿಸಿ ಬಾ

ದಿಗ್ದಿಗಂತದಲಿ ಹನಿಸಿ ಬಾ

ಚರಾಚರಗಳಿಗೆ ಉಣಿಸಿ ಬಾ’

ಬೇಂದ್ರೆ ಅಜ್ಜನ ಗಂಗಾವತರಣ, ಕಾಳಿಂಗರಾಯರ ದನಿಯಲ್ಲಿ ಎದೆಯಾಳದಲ್ಲಿ ಗುನುಗತೊಡಗಿತು. ರೌದ್ರವೂ ಕರುಣಾರಸವೂ ತುಂಬಿ ತುಳುಕುತ್ತಿದ್ದ ಆ ಪದ್ಯದಲ್ಲಿದ್ದ ಗಂಗೆ ನಾನಲ್ಲ ಎನ್ನುವಂತೆ ನನ್ನ ಕಣ್ಣ ಮುಂದೆ ಶಾಂತವಾಗಿ ಜುಳುಜುಳು ಮುಗುಳುನಗುತ್ತ ಹರಿಯುತ್ತಿದ್ದಳು ಗಂಗೆ. ಗೆಳೆಯ ಭರಣಿ ತನ್ನ ಗಂಗಾವತರಣದ ಕಥೆ ಹರಿಯಬಿಟ್ಟ:

ಗಂಗೆಯನ್ನು ಭೂಮಿಗೆ ತರಬೇಕೆಂದು ತಪಸ್ಸಿಗೆ ಕೂತ ಭಗೀರಥ, ಕೊನೆಗೂ ಗಂಗೆಯನ್ನು ಒಲಿಸಿಕೊಳ್ಳುತ್ತಾನೆ. ಅವನ ಕರೆಗೆ ಓಗೊಟ್ಟು, ಗಂಗೆಯು ತಾನು ಭೂಮಿಗೆ ಬರುತ್ತೇನೆಂದು ಮಾತುಕೊಟ್ಟ ಮೇಲೆ ಸಮಸ್ಯೆ ಎದುರಾಗುತ್ತದೆ. ಆ ಎತ್ತರದಿಂದ ಧುಮ್ಮಿಕ್ಕುವ ಗಂಗೆಯನ್ನು ಭೂಮಿ ತಾಳಲಾರದು. ಧಾರೆಯಾಗಿ ಸಾಗರವಾಗಿ ಧುಮುಕಿದರೆ ಭೂಮಿಯಲ್ಲಿ ಪ್ರಳಯವಾದೀತು.

ಹಾಗಾದರೆ ಆಕೆಯನ್ನು ಧರೆಗಿಳಿಸಬಲ್ಲ ಸಮರ್ಥರು ಯಾರು? ಭಗೀರಥ ಶಿವನ ಮೊರೆ ಹೋಗುತ್ತಾನೆ. ‘ಲೋಕಕಲ್ಯಾಣಕ್ಕಾಗಿ ಆಕಾಶದಿಂದ ಭೂಮಿಗೆ ಅಪ್ಪಳಿಸುವ ಗಂಗೆಯನ್ನು ನೀನು ಮೊದಲು ಧರಿಸಬೇಕು’ ಎಂಬ ಅವನ ಪ್ರಾರ್ಥನೆಗೆ ಶಿವ ಒಪ್ಪುತ್ತಾನೆ.

ತನ್ನನ್ನು ಬರಮಾಡಿಕೊಳ್ಳುವವರು ಯಾರೆಂಬ ಕುತೂಹಲದಿಂದ ಧರೆಗಿಳಿದು ಬರುವ ಗಂಗೆ ಕಂಡಿದ್ದು ತನ್ನ ಜಟೆಯನ್ನು ಎರಡೂ ಕೈಗಳಲ್ಲಿ ದಶದಿಕ್ಕುಗಳಿಗೆ ಹರಡಿಕೊಂಡು ನಿಂತ ಶಿವನನ್ನು. ತನ್ನೆರಡೂ ಕಾಲುಗಳನ್ನು ಅಗಲಿಸಿ ನಿಂತ ದೃಢ ನಿಲುವು, ಚಾಚಿದ ಬಾಹುಗಳ ಸ್ನಾಯು, ಚೂಪಾದ ಮೂಗು ಮಾತ್ರ ಕಾಣಿಸುತ್ತಿದೆ ಆಕೆಗೆ. ಆ ಕ್ಷಣದಲ್ಲಿ ಮೋಹಗೊಂಡ ಆಕಾಶಗಂಗೆ ಅನಂತ ಆಗಸದಲ್ಲಿ ಹೆಪ್ಪುಗಟ್ಟಿ ನಿಂತಳಂತೆ.

ಕೊನೆಗೂ ಧಾವಿಸಿ ಬಂದ ಗಂಗೆಯನ್ನು ಶಿವನು ತನ್ನ ಜಡೆಯಲ್ಲಿ ಕಟ್ಟಿಹಾಕುತ್ತಾನೆ. ಜಡೆಯೊಳಗಿನ ಕತ್ತಲಲ್ಲಿ ಮರೆಯಾದ ಗಂಗೆಗೆ ಕತ್ತಲು ಕಣ್ಣು ಕುಕ್ಕಿತಂತೆ. ಆದರೂ ಶಿವನನ್ನು ನೋಡುವ ಕಾತರದಿಂದ ನುಸುಳಿ ಹೊರಳಿ ಸಾಗುತ್ತ ಆ ಪಯಣದಿಂದ ಬಳುಕು ಲಾಲಿತ್ಯಗಳನ್ನು ಮೈಗೂಡಿಸಿಕೊಳ್ಳುತ್ತ ತನ್ನ ದಾರಿಯನ್ನು ತಾನೇ ಕಂಡುಕೊಳ್ಳುತ್ತ ಶಿವನ ಜಡೆಯಿಂದ ಹೊರಬರುತ್ತಾಳೆ.

ಅಲ್ಲಿಂದ ನೆಲಕ್ಕೆ ಧಾರೆಯಾಗಿ ಇಳಿಯುವಾಗ ಅವಳ ಕಣ್ಣಿಗೆ ಶಿವನ ಹಣೆ, ಮೂರನೆಯ ಕಣ್ಣು, ಹುಬ್ಬು, ಕಣ್ಣು, ಮೂಗು, ತುಟಿ, ಗಲ್ಲ, ಒಂದೊಂದಾಗಿ ಬೀಳತೊಡಗುತ್ತಿದ್ದಂತೆ ಗಂಗೆಯಲ್ಲಿ ಪ್ರೇಮಾವೇಶ ಉಕ್ಕಿತಂತೆ. ಶಿವನ ಮೇಲಿನ ಪ್ರೇಮಕ್ಕೆ ಸಿಲುಕಿ, ಗಂಗೆ ಮನಸಿನಲ್ಲಿ ಅವನನ್ನು ಮೋಹಿಸಿ, ಕನಸಿನಲ್ಲಿ ಅವನನ್ನು ಕಾಮಿಸಿ ಆ ದಣಿವಿಗೆ ಬೆವರಿದಳಂತೆ.

ಕಲ್ಪನೆಯಲ್ಲಿ ನಡೆದ ಮಹಾಸಂಗಮ! ಹೀಗಾಗಿ ಇಂದಿಗೂ ಶೂನ್ಯಲಿಂಗವೇ ಆಗಿರಲಿ, ರಾಮೇಶ್ವರದ ಮಣ್ಣಿನ ಲಿಂಗವೇ ಆಗಲಿ, ಗಂಗೆಯ ನೀರಿನ ಅಭಿಷೇಕ ಮಾಡಿದರೇ ಅದು ಪವಿತ್ರ. ಶಿವಲಿಂಗದ ಮೇಲೆ ಗಂಗೆ ಎರೆಯಬೇಕು. ಅಲ್ಲಿ ಅವರಿಬ್ಬರೂ ಸೇರಬೇಕು.

ಇವರಿಬ್ಬರ ಮೌನ ಸಂಭಾಷಣೆಯನ್ನು ದೂರದಿಂದ ಕಂಡ ವಿನಾಯಕ, ‘ಅಪ್ಪನಿಗೂ ಗಂಗೆಗೂ ಪ್ರೀತಿ ಹುಟ್ಟಿದಂತಿದೆ’ ಎಂದು ಅಮ್ಮನಿಗೆ ಸುದ್ದಿ ಮುಟ್ಟಿಸುತ್ತಾನೆ. ಪಾರ್ವತಿ ಧಾವಿಸಿ ಬರುವಷ್ಟರಲ್ಲಿ ಶಿವನಿಗೂ ಗಂಗೆಗೂ ಮಾತಾಗಿದೆ. ಈ ಸಂಬಂಧ ಸರಿಹೊಂದದು ಎಂದು ಗಂಗೆಯನ್ನು ತನ್ನ ಕಮಂಡಲದ ಮೂಲಕ ಧರೆಗಿಳಿಸುತ್ತಾ ಅವಳ ಪ್ರೀತಿಗೊಂದು ವರಕೊಡುತ್ತಾನೆ; ನಿನ್ನ ನೀರಿನಲ್ಲಿ ಮುಳುಗಿದವರು ಶಾಪವಿಮುಕ್ತರಾಗುತ್ತಾರೆ ಎಂದು. ಗಂಗೆ ಕಮಂಡಲದಿಂದ ಹರಿದುಹೋಗುತ್ತಾಳೆ.

ಈ ಸುದ್ದಿಯನ್ನು ಅಗಸ್ತ್ಯಮುನಿ ಕೇಳಿಸಿಕೊಳ್ಳುತ್ತಾನೆ. ಗಂಗೆಯೆಂಬ ದೇವಲೋಕದ ಬಳುಕು ಸುಂದರಿ ಭೂಮಿಗೆ ಬಂದಿದ್ದಾಳೆ; ಅವಳು ಶಿವನಿಂದ ಬೇರ್ಪಟ್ಟವಳು; ಯಾರಿಗೆ ಬೇಕಾದರೂದಕ್ಕುತ್ತಾಳೆಂಬ ವದಂತಿ ಕಿವಿಗೆ ಬೀಳುತ್ತದೆ. ಅವನು ಗಂಗೆಯನ್ನು ಹಿಡಿದು ಕುಡಿದುಬಿಡುತ್ತಾನೆ. ಮುಂದೆ ಶಿವನು ಮುನಿಯನ್ನು ಕಂಡು ‘ಯಾವ ಕಿವಿಯಿಂದ ಅವಳು ಕೆಟ್ಟವಳು ಎಂಬ ಮಾತನ್ನು ಕೇಳಿದೆಯೋ ಅದೇ ಕಿವಿಯಿಂದ ಅವಳನ್ನು ಹೊರಗಡೆ ಕಳುಹಿಸು’ ಎಂದು ಗಂಗೆಗೆ ಬಿಡುಗಡೆ ಕೊಡಿಸುತ್ತಾನೆ. ಅಲ್ಲಿಂದ ಮುಂದೆ ಗಂಗೆ ಹರಿದು ಬಂಗಾಳ ಸಮುದ್ರ ಸೇರುತ್ತಾಳೆ.

ಇದು ಕಥೆ. ಇದನ್ನು ಹೇಳಿದ್ದು ನನ್ನ ಗೆಳೆಯ, ತೆಲುಗು ಕವಿ ತನಿಕೆಳ್ಳ ಭರಣಿ. ಹೇಳಿದ್ದು ಗಂಗೆಯ ದಡದಲ್ಲಿಯೇ. ನಾವಿಬ್ಬರೂ ಗಂಗೋತ್ರಿಯೆಂಬ ತೆಲುಗು ಸಿನಿಮಾದ ಚಿತ್ರೀಕರಣಕ್ಕೆಂದು ಹಿಮಾಲಯಕ್ಕೆ ಹೋಗಿದ್ದೆವು. ಆಗ ತನಿಕೆಳ್ಳ ಭರಣಿ ಕಾಲಿಗೆ ಗಾಯ ಮಾಡಿಕೊಂಡು ಚಿಕಿತ್ಸೆ ಮುಗಿಸಿಕೊಂಡು ಬಂದಿದ್ದ. ಆ ಸಂಜೆ ನಾನೇ ಅಡುಗೆ ಮಾಡುತ್ತಿದ್ದೆ. ಇಬ್ಬರೂ ಗಂಗೆಯ ದಡದಲ್ಲಿ ಕುಳಿತಿದ್ದಾಗ ಈ ಶೃಂಗಾರ ಗಂಗಾವತರಣದ ಕಥೆಯನ್ನು ಅವನು ನನಗೆ ಹೇಳಿದ್ದ.

ಈ ಕಥೆಯನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದೆ. ಒಂದು ಕಥೆ; ಅದರಿಂದ ಹುಟ್ಟುವ ಮತ್ತೊಂದು ಕಥೆ. ಯಾವುದೋ ಸಂದರ್ಭಕ್ಕೋ ಗ್ರಹಿಕೆಗೋ ಕಾಲದ ಕಟ್ಟುಪಾಡಿಗೋ ಹುಟ್ಟಿದ ಕಥೆ, ಮತ್ತೊಬ್ಬ ಕಥೆಗಾರನ ಕೈಗೋ, ಕವಿಯ ಕೈಗೋ ಸಿಕ್ಕಿದಾಗ ಬೇರೆಯದೇ ಕಥೆಯಾಗಿ ರೂಪಾಂತರ ಹೊಂದುವುದೇ ಆ ಕಥೆಯ ಸಾರ್ಥಕತೆಯೂ ಅಲ್ಲವೇ?

ಹೀಗೆಇನ್ನೊಂದನ್ನು ಸೃಷ್ಟಿಮಾಡದೇ ಹೋದರೆ ಅದು ಅಲ್ಲಿಗೆ ಮುಗಿದಂತೆ. ಹುಟ್ಟಿದ್ದು ಮತ್ತೊಂದನ್ನು ಹುಟ್ಟಿಸದೇ ಹೋದರೆ ಸತ್ತಂತೆ.

ಇಂಥದ್ದೇ ಇನ್ನೊಂದು ಕಥೆಯನ್ನು ನಾನು ಬಂಗಾಳಿ ಭಾಷೆಯ ಮಿತ್ರನಿಂದ ಕೇಳಿಸಿಕೊಂಡೆ. ಅದು ಮಹಾಭಾರತದಲ್ಲಿ ಇರುವ ಪಾತ್ರಗಳ ಸುತ್ತ ಹೆಣೆದ ಕಥೆ.

ಮತ್ಸ್ಯ ಯಂತ್ರವನ್ನು ಭೇದಿಸಿ ಅರ್ಜುನ ದ್ರೌಪದಿಯನ್ನು ಗೆದ್ದುತಂದಿದ್ದಾನೆ. ಕುಂತಿಗೆ ಆಕೆ ಹೆಣ್ಣು ಎಂದು ತಿಳಿಯದೆ ‘ಐವರೂ ಹಂಚಿಕೊಳ್ಳಿ’ ಎಂದಿದ್ದಾಳೆ. ಸಂಸಾರ ಹೀಗೆಯೇ ಸಾಗಿದೆ. ಒಂದೊಂದು ವರ್ಷ ದ್ರೌಪದಿ ಒಬ್ಬೊಬ್ಬರ ಜತೆ ಇರಬೇಕು ಎಂದು ತೀರ್ಮಾನವಾಗಿದೆ. ಮೊದಲನೆಯದಾಗಿ ಧರ್ಮರಾಯ, ಆಮೇಲೆ ಅವನ ತಮ್ಮ ಭೀಮ, ಆನಂತರ ಮಧ್ಯಮ ಪಾಂಡವ ಅರ್ಜುನ, ಕೊನೆಗೆ ನಕುಲ ಸಹದೇವರು.

ಧರ್ಮರಾಯ ಯಾವಾಗಲೂ ರಾಜ್ಯಭಾರದಲ್ಲಿ ನಿರತನಾಗಿರುತ್ತಾನೆ. ಅವನೊಂದಿಗೆ ಬದುಕು ನೀರಸ ದ್ರೌಪದಿಗೆ. ಅರ್ಜುನನೋ ಹತ್ತು ಹಲವು ಹೆಂಗಳೆಯರನ್ನು ಅರಸುತ್ತ ದೇಶ ದೇಶಗಳನ್ನು ಅಲೆಯುತ್ತಿರುವಾಗ, ಅವನೊಂದಿಗಿನ ಬದುಕು ಒಂಟಿತನ. ನಕುಲ ಸಹದೇವರು ತನ್ನ ಮಕ್ಕಳಂತೆ ಕಾಣುತ್ತಾರೆ ಆಕೆಗೆ. ಆದರೆ ಒಂದು ಕ್ಷಣವೂ ತನ್ನನ್ನು ಬಿಟ್ಟಿರದ ಭೀಮನೆಂದರೆ ಆಕೆಗೆ ಪಂಚಪ್ರಾಣ.

ಈ ಕಥೆಯಲ್ಲಿ ದ್ರೌಪದಿ ಮೊದಲ ವರ್ಷದ ಸಂಸಾರವನ್ನು ಧರ್ಮರಾಯನ ಜತೆ ಮುಗಿಸಿ, ಭೀಮನ ಬಳಿ ಬಂದು ಒಂದಿಷ್ಟು ದಿನಗಳಾಗಿವೆ. ಒಂದು ದಿನ ಅವಳ ಬಟ್ಟೆಯನ್ನು ತೊಳೆಯುವ ಅಗಸಗಿತ್ತಿಗೆ ಅವಳ ಬಟ್ಟೆಯಲ್ಲಿ ರಕ್ತದ ಕಲೆಯಿಲ್ಲದಿರುವುದು ಗಮನಕ್ಕೆ ಬರುತ್ತದೆ. ಅವಳು ಕೂಡಲೇ ಧಾವಿಸಿ ಬಂದು ಆ ಸುದ್ದಿಯನ್ನು ಅತ್ತೆ ಕುಂತಿಗೆ ಹೇಳುತ್ತಾಳೆ. ಕುಂತಿ ಅರೆಕ್ಷಣ ಚಿಂತಾಕ್ರಾಂತಳಾಗುತ್ತಾಳೆ.

ರಕ್ತದ ಕಲೆಗಳಿಲ್ಲ ಎಂದರೆ ದ್ರೌಪದಿ ಋತುಮತಿಯಾಗಿಲ್ಲ ಎಂದು ಅರ್ಥ. ಹಾಗೆಂದರೆ ಅವಳು ಗರ್ಭವತಿಯಾಗಿದ್ದಾಳೆ ಎನ್ನುವುದು ಖಚಿತ. ಕುಂತಿಗೆ ಅರೆಕ್ಷಣ ಭಯವಾಗುತ್ತದೆ. ರಾಜಕಾರಣದ ಪುಟವೊಂದು ಅವಳ ಮನಸ್ಸಿನಲ್ಲಿ ಸರಿದು ಹೋಗುತ್ತದೆ. ಅವಳು ಥಟ್ಟನೆ ದ್ರೌಪದಿಯ ಬಳಿ ಬರುತ್ತಾಳೆ. ದ್ರೌಪದಿಗೋ ತಾನು ಗರ್ಭಿಣಿಯಾದ ಸಂತೋಷ. ಅಭಿನಂದಿಸುವುದಕ್ಕೆ ಅತ್ತೆ ಬಂದಿದ್ದಾಳೆಂಬ ಸಂಭ್ರಮ.

ಕುಂತಿ ನಿರ್ಭಾವುಕಳಾಗಿ ಹೇಳುತ್ತಾಳೆ: ‘ಮಗಳೇ, ಸಂತೋಷವಾಗಿದೆ. ನೀನು ವಂಶೋದ್ಧಾರಕನನ್ನು ಹೊತ್ತಿದ್ದೀಯಾ. ಆದರೆ ನನ್ನ ಒಂದು ಬೇಡಿಕೆ ಈಡೇರಿಸಿಕೊಡು. ಈ ಮಗು ಹಿರಿಯ ಧರ್ಮರಾಯನದು ಎಂದು ಹೇಳು. ಭೀಮನ ಜತೆ ನಾನು ಮಾತನಾಡಿಕೊಳ್ಳುತ್ತೇನೆ. ಮೊದಲ ಮಗನಿಗೆ ಹುಟ್ಟಿದ ಮಗುವಲ್ಲ ಎಂದು ತಿಳಿದರೆ ಪ್ರಮಾದವಾಗುತ್ತದೆ’ಎನ್ನುತ್ತಾಳೆ.

ಎಂದೋ ಬರೆದಿರುವ ಒಂದು ಕಥೆಯನ್ನು ಹೀಗೆ ಇನ್ನೊಂದು ಗ್ರಹಿಕೆಯಿಂದಲೂ ನೋಡಲು ಸಾಧ್ಯ ಎನ್ನುವುದು ನನಗೆ ಹೊಳೆದಿದ್ದು ಈ ಕಥೆಯನ್ನು ಕೇಳಿದಾಗ. ಯಾವುದಕ್ಕೆ ನಿರಂತರತೆ ಇಲ್ಲವೋ ಅದು ಜಡ. ಯಾವುದು ಜಡವೋ ಅದು ಕೊನೆಯಾಗುತ್ತದೆ. ಹೀಗೆ ಪ್ರತಿಕ್ಷಣ ವಿಕಸಿಸುತ್ತ ವಿಕಸಿಸುತ್ತ ಮರುಹುಟ್ಟು ಪಡೆಯುತ್ತ ವಿಕಾಸದೆಡೆಗೆ ತುಡಿಯುವುದೇ ಬದುಕಿಗೆ ಇರಬೇಕಾದ ನದಿಯ ಗುಣ.

ಬದುಕೂ ಅಷ್ಟೆ, ಧರ್ಮವೂ ಅಷ್ಟೆ, ಕಾಮವೂ ಅಷ್ಟೆ, ಪ್ರೇಮವೂ ಅಷ್ಟೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.