ADVERTISEMENT

ಕಿಟ್ಟು ಪುಟ್ಟು ಹುಟ್ಟಿದ್ದು...

ದ್ವಾರಕೀಶ್
Published 25 ಆಗಸ್ಟ್ 2012, 19:30 IST
Last Updated 25 ಆಗಸ್ಟ್ 2012, 19:30 IST
ಕಿಟ್ಟು ಪುಟ್ಟು ಹುಟ್ಟಿದ್ದು...
ಕಿಟ್ಟು ಪುಟ್ಟು ಹುಟ್ಟಿದ್ದು...   

`ಭಾಗ್ಯವಂತರು~ ಸಿನಿಮಾ ಸಮಯದಲ್ಲೇ ನಾನು ಮದ್ರಾಸ್‌ನಿಂದ ಮತ್ತೆ ಬೆಂಗಳೂರಿಗೆ ಬಂದೆ. ಅಂಬುಜಾ ಕುಟುಂಬದವರು ವಾಸವಿದ್ದ ಎನ್.ಆರ್.ಕಾಲೋನಿಯ ಕಾರ್ನರ್ ಸೈಟಿನ ಮನೆಯನ್ನು 40 ಸಾವಿರ ರೂಪಾಯಿಗೆ ಕೊಂಡುಕೊಂಡೆ. ಒಂದೂಮುಕ್ಕಾಲು ಲಕ್ಷ ಖರ್ಚು ಮಾಡಿ ಹಳೆ ಮನೆಯನ್ನು ಹೊಸದನ್ನಾಗಿಸಿದೆ. ಬೆಂಗಳೂರಿನಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಈಗಿನ `ಗೋಪಾಲನ್ ಬಿಲ್ಡರ್ಸ್‌~ನ ಗೋಪಾಲನ್ ಅವರೇ ಆಗ ಆ ಮನೆಯನ್ನು ನವೀಕರಿಸಿದ್ದು. ಆಮೇಲೆ ಜೋರು ಗೃಹಪ್ರವೇಶ. ಆ ಸಂಭ್ರಮ ಮೂರು ದಿನ ನಡೆಯಿತು. ಮೊದಲ ದಿನ ಚಿತ್ರರಂಗದ ಎಲ್ಲ ನಟ-ನಟಿಯರೂ ಬಂದಿದ್ದರು. ನಮ್ಮ ಮಾವನವರು ಟಾಟಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಎರಡನೇ ದಿನದ ಸಂಭ್ರಮ ಅವರ ಕಂಪೆನಿಯ ಸಿಬ್ಬಂದಿಗಾಗಿ. ಮೂರನೇ ದಿನ ರಾಜ್‌ಕುಮಾರ್ ಅವರಿಗೇ ಮೀಸಲಾಗಿತ್ತು. ಅವರು ಸಂಜೆ 6.30ರ ಸುಮಾರಿಗೆ ಬಂದವರು ರಾತ್ರಿ 11 ಗಂಟೆಯವರೆಗೆ ನಮ್ಮ ಜೊತೆಗಿದ್ದರು. ಆ ದಿನ ಅವರೊಂದಿಗೆ ಕಳೆದ ಆಪ್ತಕ್ಷಣಗಳನ್ನು ನಾನು ಜೀವನದಲ್ಲಿಯೇ ಮರೆಯಲಾರೆ.

ಎನ್.ಆರ್.ಕಾಲೋನಿಯ ಆ ಮನೆಗೂ ನನ್ನ ಸಿನಿಮಾ ಬದುಕಿಗೂ ದೊಡ್ಡ ಸಂಬಂಧವೇ ಇದೆ. ವಿಷ್ಣುವರ್ಧನ್ ಅನೇಕ ಸಲ ಆ ಮನೆಗೆ ಬರುತ್ತಿದ್ದ. ಒಮ್ಮೆ ಅವನು ಹೊಸ ಕಾರು ಕೊಂಡುಕೊಂಡಿದ್ದ. ಅದರಲ್ಲೇ ನನ್ನ ಆ ಮನೆಗೆ ಬಂದ. ಅವನು ಬಂದದ್ದನ್ನು ಯಾರೋ ನೋಡಿಬಿಟ್ಟರು. ಒಬ್ಬರ ಬಾಯಿಂದ ಒಬ್ಬರ ಬಾಯಿಗೆ ವಿಷಯ ಹರಡಿ ಜನ ಸೇರಿಬಿಟ್ಟರು. ಅವನು ಬುದ್ಧಿ ಉಪಯೋಗಿಸಿ ಡ್ರೈವರ್‌ಗೆ ಹೇಳಿ ತನ್ನ ಕಾರನ್ನು ಮನೆಗೆ ಕಳಿಸಿಬಿಟ್ಟ. ಆ ಕಾರಿನಲ್ಲಿ ವಿಷ್ಣು ಇರಲಿಲ್ಲ ಎಂಬುದು ಅಭಿಮಾನಿಗಳಿಗೆ ಖಾತರಿಯಾಯಿತು. ರಾತ್ರಿ ಹನ್ನೊಂದು ಹನ್ನೊಂದೂವರೆಯಾದರೂ ಜನ ಕರಗಲೇ ಇಲ್ಲ. ವಿಷ್ಣು ನನ್ನ ಕಾರನ್ನು ತೆಗೆದುಕೊಂಡು ಹೋಗುವುದಾಗಿ ಹೇಳಿದ. ಆ ಕಾರನ್ನು ಹೊರಗೆ ತೆಗೆದದ್ದೇ ಜನ ಅದರ ಮೇಲೆಲ್ಲಾ ಹತ್ತಿ ಕುಣಿದಾಡಿಬಿಟ್ಟರು. ಹೇಗೋ ಅವರಿಂದ ತಪ್ಪಿಸಿಕೊಂಡು ಅವನು ಮನೆ ತಲುಪಿದ ಎಂದು ಕಾಣುತ್ತದೆ.

ಮರುದಿನ ಬೆಳಿಗ್ಗೆ ಅವನು ಫೋನ್ ಮಾಡಿ, `ಜನ ನಿನ್ನ ಕಾರನ್ನು ಪ್ರೀತಿಯಿಂದ ಜಜ್ಜಿದ್ದಾರೆ. ಬಂದು ತೆಗೆದುಕೊಂಡು ಹೋಗು~ ಎಂದು ತಮಾಷೆ ಮಾಡಿದ.
`ಭಾಗ್ಯವಂತರು~ ಸಿನಿಮಾ ಸುಮಾರಾಗಿ ಹೋಯಿತು. ಅದಕ್ಕೂ ಮೊದಲು ರಾಜ್‌ಕುಮಾರ್ ಅವರನ್ನೇ ನಾಯಕರನ್ನಾಗಿಸಿ `ಆಲಿಬಾಬಾ ಮತ್ತು ನಲವತ್ತು ಕಳ್ಳರು~ ಸಿನಿಮಾ ಮಾಡುವುದು ನನ್ನ ಬಯಕೆಯಾಗಿತ್ತು. ಎಂಜಿಆರ್, ಎನ್‌ಟಿಆರ್ ತಮ್ಮ ತಮ್ಮ ಭಾಷೆಗಳಲ್ಲಿ ಆ ಚಿತ್ರಗಳಲ್ಲಿ ನಟಿಸಿದ್ದರು. ಆ ಸಿನಿಮಾಗಳು ಸೂಪರ್‌ಹಿಟ್ ಆಗಿದ್ದವು. ಅದಲ್ಲದೆ ನಾನು, ರಾಜ್‌ಕುಮಾರ್ ಇಬ್ಬರೂ ಒಂದು ಬಾಂಡ್ ಚಿತ್ರದಲ್ಲಿ ಅಭಿನಯಿಸಬೇಕು ಎಂಬ ಆಸೆ ಇತ್ತು. ಅವರೂ ಬಾಂಡ್ ಚಿತ್ರಗಳ ನಾಯಕರಾಗಿದ್ದರು.

ನಾನೂ ಆ ಯತ್ನದಲ್ಲಿ ಗೆದ್ದಿದ್ದೆ. ಇಬ್ಬರ ಕಾಂಬಿನೇಷನ್‌ನಲ್ಲಿ ಇನ್ನೊಂದು ಬಾಂಡ್ ಸಿನಿಮಾ ಬಂದರೆ ಭರ್ಜರಿಯಾಗಿರುತ್ತದೆಂಬುದು ನನ್ನ ಲೆಕ್ಕಾಚಾರವಾಗಿತ್ತು. ಚಿ.ಉದಯಶಂಕರ್, ವರದಪ್ಪನವರ ಬಳಿ ಆ ಬಗ್ಗೆ ಅನೇಕ ಸಲ ಮಾತನಾಡಿದ್ದೆ. ಆದರೂ ಆ ಸಿನಿಮಾ ಮಾಡಲು ಆಗಲೇ ಇಲ್ಲ.

`ಭಾಗ್ಯವಂತರು~ ಚಿತ್ರ ಮಾಡಿದ ನಂತರ ರಾಜ್‌ಕುಮಾರ್ ನಿಲುಕದ ನಕ್ಷತ್ರವಾದರು. ಆಮೇಲೆ ನಾನು ವಿಷ್ಣುವರ್ಧನ್ ಜೊತೆಯಲ್ಲಿಯೇ ಸಿನಿಮಾಗಳನ್ನು ಮಾಡುವ ಯೋಚನೆ ಮಾಡತೊಡಗಿದೆ.

ಒಮ್ಮೆ ಗೆಳೆಯ ನಾಗರಾಜ್ ಜೊತೆ ನಾನು ಮಂತ್ರಾಲಯಕ್ಕೆ ಹೋಗಿದ್ದೆ. ಅಲ್ಲಿಂದ ವಾಪಸ್ ಬರುವಾಗ ಸಿನಿಮಾ ಕತೆಗಳ ಚರ್ಚೆ ನಡೆಸತೊಡಗಿದೆವು. ಐದು ವರ್ಷಗಳ ಹಿಂದೆ ನಾನು `ಅನುಭವಿ ರಾಜಾ ಅನುಭವಿ~ ಎಂಬ ತಮಿಳು ಸಿನಿಮಾ ನೋಡಿದ್ದೆ.

ಹಾಸ್ಯನಟನೇ ದ್ವಿಪಾತ್ರ ಮಾಡಿದ್ದ ಆ ಕಪ್ಪು-ಬಿಳುಪು ಚಿತ್ರದ ಸಾರಾಂಶ ನನಗೆ ಇಷ್ಟವಾಗಿತ್ತು. ಅದೇ ಕತೆಯ ಎಳೆ ಇಟ್ಟುಕೊಂಡು ನಾವೂ ಒಂದು ಸಿನಿಮಾ ಯಾಕೆ ಮಾಡಬಾರದು ಎನ್ನಿಸಿತು. ಹಾಸ್ಯನಟನಾಗಿ ದ್ವಿಪಾತ್ರವನ್ನು ನಾನೇ ಮಾಡುವುದು ಎಂದು ತೀರ್ಮಾನಿಸಿದೆ. ನಾವು ಮಂತ್ರಾಲಯದಿಂದ ಮನೆ ತಲುಪುವಷ್ಟರಲ್ಲಿ ಚಿತ್ರಕ್ಕೆ `ಕಿಟ್ಟು ಪುಟ್ಟು~ ಎಂದು ಹೆಸರಿಡಬೇಕು ಎಂದು ನಿರ್ಧರಿಸಿದೆವು. ನಾನು ಎಷ್ಟೋ ಚಿತ್ರಗಳಿಗೆ ಶೀರ್ಷಿಕೆಯನ್ನು ಕ್ಷಣಮಾತ್ರದಲ್ಲಿ ಅಂತಿಮಗೊಳಿಸಿದ್ದೇನೆ. ರಾಘವೇಂದ್ರ ಸ್ವಾಮಿಯ ಭಕ್ತ ನಾನಾಗಿರುವುದರಿಂದಲೋ ಏನೋ ಅಲ್ಲಿಗೆ ಹೋಗಿ, ಬರುವಾಗಲೆಲ್ಲಾ ಅನೇಕ ಚಿತ್ರಕತೆಗಳು ಹುಟ್ಟಿವೆ. ಚಿಟಿಕೆ ಹೊಡೆಯುವುದರಲ್ಲಿ ಸಿನಿಮಾ ತೆಗೀತಿದ್ದೆ ಎಂದು ಸ್ವಲ್ಪ ಉತ್ಪ್ರೇಕ್ಷೆಯಿಂದ ಹೇಳಬಹುದೇನೋ.

ವೀರಾಸ್ವಾಮಿಯವರಿಗೆ ತುಂಬಾ ಪರಿಚಿತನಾಗಿದ್ದ ಸಿ.ವಿ.ರಾಜೇಂದ್ರನ್ ಎಂಬ ನಿರ್ದೇಶಕನಿದ್ದ. `ದೀಪಾ~ ಎಂಬ ಚಿತ್ರ ನಿರ್ದೇಶಿಸಿದ್ದ ಅವನು ತಮಿಳಿನಲ್ಲಿ ಹೆಸರು ಮಾಡಿದ್ದ. ವೀರಾಸ್ವಾಮಿಯವರ ಕಚೇರಿಗೆ ನಾನೂ ಹೋಗಿ ಬಂದು ಮಾಡುತ್ತಿದ್ದುದರಿಂದ ಪರಿಚಿತನಾಗಿದ್ದ. `ಕಿಟ್ಟು ಪುಟ್ಟು~ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಅವನಿಗೇ ಕೊಡೋಣ ಎನ್ನಿಸಿತು. ವಿಷ್ಣು ನನ್ನ ಜೊತೆಗೇ ಇದ್ದಿದ್ದರಿಂದ ಅವನ ಕಾಲ್‌ಷೀಟ್ ನನಗೆ ಸಮಸ್ಯೆಯೇ ಆಗಿರಲಿಲ್ಲ. ಮಂಜುಳಾ ನಾಯಕಿಯಾಗಿ ಆಗ ಜನಪ್ರಿಯಳಾಗಿದ್ದಳು. ಅವಳ ಬಳಿಗೆ ಹೋಗಿ `ಕಿಟ್ಟು ಪುಟ್ಟು~ ಆಫರ್ ಮುಂದಿಟ್ಟೆ. ಹೀರೊ ಆಗಿ ಶ್ರೀನಾಥ್ ನಟಿಸಲಿ ಎಂಬುದು ಅವಳ ಬಯಕೆ.

`ವಿಷ್ಣು ಬೇಡ, ಶ್ರೀನಾಥ್ ಅವರನ್ನೇ ಹಾಕಿ~ ಎಂದು ಸಲಹೆ ಕೊಟ್ಟಳು. ಆಗ ಶ್ರೀನಾಥ್-ಮಂಜುಳಾ ಜೋಡಿ ಜನಮೆಚ್ಚುಗೆ ಗಳಿಸಿತ್ತು. ನಾನು ವಿಷ್ಣು ಕೂಡ ಒಳ್ಳೆಯ ನಟ ಎಂದು ಅವಳಿಗೆ ಮನದಟ್ಟು ಮಾಡಿಸಿ, ಕೊನೆಗೂ ಪಾತ್ರ ಮಾಡುವಂತೆ ಒಪ್ಪಿಸಿದೆ.

ಕೆ.ವಿಜಯಾ ಎಂಬ ಹೊಸ ಹುಡುಗಿಯನ್ನು ಆರಿಸಿದೆವು. ರಂಗಭೂಮಿ ನಟಿಯಾಗಿ ಗಮನ ಸೆಳೆದಿದ್ದ ವೈಶಾಲಿ ಕಾಸರವಳ್ಳಿಯನ್ನು ಇನ್ನೊಂದು ಪಾತ್ರಕ್ಕೆ ಆಯ್ಕೆ ಮಾಡಿದೆ. ವೈಶಾಲಿ ತಂದೆ ಚಿಟುಗೋಪಿಯವರು ನನಗೆ ತುಂಬಾ ಬೇಕಾದವರು. ಅವರಿಗೆ ನಾನೆಂದರೆ ಬಲು ಇಷ್ಟವಿತ್ತು. `ಕುಳ್ಳ ಕುಳ್ಳ~ ಎಂದೇ ಕರೆಯುತ್ತಿದ್ದ ಅವರಿಗೆ ಸಿನಿಮಾ ಮಾಡುವ ಬಯಕೆಯೂ ಇತ್ತು. ನನಗೆಂದೇ `ಕುಳ್ಳ ಮತ್ತು ಅದ್ಭುತ ದೀಪ~ ಎಂಬ ಕತೆಯನ್ನು ಬರೆದು, ಗಾಂಧಿನಗರದಲ್ಲಿ ಓಡಾಡಿದ್ದರು. ಯಾಕೋ ಆ ಸಿನಿಮಾ ಮಾಡಲು ಅವರಿಗೆ ಆಗಲಿಲ್ಲ. ಅವರ ಮಗಳು ವೈಶಾಲಿ ಮುದ್ದಾದ ನಟಿ.

ಲೋಕನಾಥ್, ನರಸಿಂಹರಾಜಣ್ಣ ಉಳಿದ ಮುಖ್ಯ ಪಾತ್ರಗಳಿಗೆ ಒಪ್ಪಿದರು. `ಅಜ್‌ನಬಿ~ ಎಂಬ ಸಿನಿಮಾದಲ್ಲಿ ರಾಜೇಶ್ ಖನ್ನಾ `ಹಮ್ ದೋನೋ ದೋ ಪ್ರೇಮಿ ದುನಿಯಾ ಛೋಡ್ ಚಲೇ...~ ಹಾಡಿಗೆ ಅಭಿನಯಿಸಿದ್ದರು. ರೈಲಿನಲ್ಲಿ ಚಿತ್ರವಾದ ಜನಪ್ರಿಯ ಗೀತೆ ಅದು. ನನಗೂ ಅದನ್ನು ನೋಡಿ ಅಂಥದ್ದೇ ಒಂದು ಹಾಡು ಬರೆಸಿ, ಅದನ್ನು ರೈಲಿನಲ್ಲೇ ಚಿತ್ರೀಕರಣ ಮಾಡಬೇಕು ಎಂಬ ಆಸೆ ಹುಟ್ಟಿತು. ಚಿ.ಉದಯಶಂಕರ್ `ಕಾಲವನ್ನು ತಡೆಯೋರು ಯಾರೂ ಇಲ್ಲ ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ~ ಹಾಡು ಬರೆದುಕೊಟ್ಟ. `ಕಿಟ್ಟು ಪುಟ್ಟು~ ಚಿತ್ರದ ಆ ಹಾಡನ್ನೇ `ಆಪ್ತಮಿತ್ರ~ ಚಿತ್ರದಲ್ಲೂ ರೀಮಿಕ್ಸ್ ಮಾಡಿ ಬಳಸಿಕೊಂಡೆವು.

ರೈಲಿನಲ್ಲಿ ಆ ಹಾಡನ್ನು ತೆಗೆಯಬೇಕೆಂಬ ನನ್ನ ಆಸೆ ದುಬಾರಿಯಾಗಿತ್ತು. ಆ ಕಾಲದಲ್ಲೇ ರೈಲಿನಲ್ಲಿ ಚಿತ್ರೀಕರಣಕ್ಕೆ ಅನುಮತಿ ಬೇಕೆಂದರೆ ಆರೇಳು ಲಕ್ಷ ರೂಪಾಯಿ ಕಟ್ಟಬೇಕಿತ್ತು. ಐದು ಲಕ್ಷಕ್ಕೆ ಕನ್ನಡದಲ್ಲಿ ಇಡೀ ಸಿನಿಮಾ ತೆಗೆಯಬಹುದಾಗಿತ್ತು.

ಕೃಷ್ಣಮೂರ್ತಿ ಎಂಬುವರೊಬ್ಬರು ಒಂದು ಐಡಿಯಾ ಕೊಟ್ಟರು. ಕೆಮ್ಮಣ್ಣುಗುಂಡಿಯಲ್ಲಿ ನಾವು ಚಿತ್ರೀಕರಣ ಮಾಡುತ್ತಿದ್ದನ್ನು ನೋಡಲು ಬಂದಿದ್ದ ಅವರು, ಭದ್ರಾವತಿಗೆ ಕೆಮ್ಮಣ್ಣುಗುಂಡಿಯಿಂದ ಕಬ್ಬಿಣದ ಅದಿರು ಸಾಗಿಸಲು ಗೂಡ್ಸ್ ರೈಲು ಓಡಾಡುತ್ತದೆ ಎಂದೂ ಅದರಲ್ಲೇ ಚಿತ್ರೀಕರಣ ಮಾಡುವ ಸಾಧ್ಯತೆ ಇದೆ ಎಂದೂ ಹೇಳಿದರು. ನಾವು ಭದ್ರಾವತಿಗೆ ಹೋದೆವು. ಅಲ್ಲಿನ ಅಧಿಕಾರಿಗಳ ಜೊತೆ ಮಾತನಾಡಿ ರೈಲಿನಲ್ಲಿ ಚಿತ್ರೀಕರಣಕ್ಕೆ ಅನುಮತಿ ಪಡೆದೆವು. ಅದೇ ರೈಲಿನಲ್ಲಿ `ಕಾಲವನ್ನು ತಡೆಯೋರು ಯಾರೂ ಇಲ್ಲ~ ಹಾಡನ್ನು ಚಿತ್ರೀಕರಿಸಿದ್ದು. ಎರಡು ದಿನ ರೈಲಿನ ಹಿಂದೆ ಓಡಿ ಓಡಿ ನಾನು ಸುಸ್ತಾಗಿದ್ದೆ. ರಾಜನ್- ನಾಗೇಂದ್ರ ಸಂಗೀತ ನೀಡಿದ್ದ ಆ ಹಾಡನ್ನು ಜನ ಇಂದಿಗೂ ಗುನುಗುತ್ತಾರೆ.

ಜಯರಾಂ ನೃತ್ಯ ನಿರ್ದೇಶನ, ಮದ್ರಾಸ್‌ನಲ್ಲಿ ಹೆಸರುವಾಸಿಯಾಗಿದ್ದ ವಿಜಯ್ ಸ್ಟಂಟ್ ಮಾಸ್ಟರ್ ಸಾಹಸಗಳು ಚಿತ್ರದ ಮನರಂಜನೆಯನ್ನು ಹೆಚ್ಚಿಸಿದವು. ಮಂಗಳೂರು ಹುಡುಗಿ ಪಾತ್ರದಲ್ಲಿ ವೈಶಾಲಿ ಆಡಿದ ಮಾತುಗಳಲ್ಲಿ ತುಳು ಕೂಡ ಸೇರಿಸಿದೆವು.

`ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ~ ಹಾಡಿನಲ್ಲಿ ನನ್ನ-ವೈಶಾಲಿ ಜೋಡಿ ಕೂಡ ಜನರಿಗೆ ಇಷ್ಟವಾಯಿತು. ಆ ಸಿನಿಮಾ ದೊಡ್ಡ ಹಿಟ್ ಆಯಿತು. ಮಂಗಳೂರಿನಲ್ಲೇ ಅದ್ಭುತ ಓಪನಿಂಗ್ ಸಿಕ್ಕಿತ್ತು. ನನ್ನ-ವಿಷ್ಣು ಕೆಮಿಸ್ಟ್ರಿ ಜನಾಕರ್ಷಣೆ ಯಾಗುತ್ತಿದೆ ಎಂಬುದು ನನಗೆ ಸ್ಪಷ್ಟವಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.