ADVERTISEMENT

ಚೆಲ್ಲಾಪಿಲ್ಲಿ ಚಿತ್ರಗಳು

ದ್ವಾರಕೀಶ್
Published 9 ಜೂನ್ 2012, 19:30 IST
Last Updated 9 ಜೂನ್ 2012, 19:30 IST

ನಿಜ, ಅಂಬುಜಾಳ ವಿಷಯ ಹೇಳುವುದು ನನಗೆ ತುಂಬಾ ಇಷ್ಟ. ಮನುಷ್ಯನಿಗೆ ಅವನ ಬದುಕಿನ ಮೊದಲ ತಿರುವೇ `ಫಸ್ಟ್ ಲವ್~. ಭವಿಷ್ಯದ ಬದುಕು ಆ ಪ್ರೀತಿಯಲ್ಲಿರುತ್ತದೆ. ನನ್ನ ಮೊದಲ ಪ್ರೇಮದ ವಿಷಯವನ್ನು ಸ್ವಲ್ಪ ತಡವಾಗಿ ಪರಿಚಯಿಸುತ್ತೇನೆ.

ಭಾರತ್ ಆಟೋ ಸ್ಪೇರ್ಸ್‌ನಲ್ಲಿ ನಾನು ಕಳೆದ ದಿನಗಳು ಮಹತ್ವದ್ದಾಗಿದ್ದವು. ನಟನಾಗಿ ಸಿನಿಮಾಲೋಕಕ್ಕೆ ಕಾಲಿಟ್ಟ ನಂತರದ ನನ್ನ ಬದುಕು ಅನೇಕರಿಗೆ ಗೊತ್ತಿದೆ. ಆದರೆ, ನಟನಾದದ್ದು ಹೇಗೆ ಎಂಬುದನ್ನು ಹೇಳಿಕೊಳ್ಳುವುದು ನನ್ನ ಉದ್ದೇಶ.
 
ನಾನು ಅನೇಕ ಸಿನಿಮಾ ನಟರ ಆತ್ಮಚರಿತ್ರೆ ಓದಿದಾಗಲೆಲ್ಲಾ ಅವರು ಚಿತ್ರರಂಗಕ್ಕೆ ಬರುವ ಮುನ್ನಾ ಬದುಕು ಹೇಗಿತ್ತು ಎಂಬುದನ್ನು ಕುತೂಹಲದಿಂದ ಗಮನಿಸಿದ್ದೇನೆ. ಸಿನಿಮಾ ಪ್ರವೇಶದ ಮುನ್ನಾ ದಿನಗಳನ್ನು ನಾನು ಇನ್ನೂ ಮರೆತಿಲ್ಲವಲ್ಲ ಎಂಬುದು ನನಗೇ ಸೋಜಿಗದಂತೆ ಕಾಣುತ್ತದೆ.

ಮೈಸೂರಿನ ರಾಜು ಹೋಟೆಲ್, ಇಂದಿರಾ ಭವನ, ಬಲ್ಲಾಳ್ ಹೋಟೆಲ್ ಮೊದಲಾದ ಕಡೆ ನಾನು ಅಣ್ಣ ಕೊಡಿಸಿದ ಸ್ಕೂಟರ್‌ನಲ್ಲಿ ಸ್ಟೈಲ್ ಹೊಡೆದುಕೊಂಡು ಸುತ್ತಾಡುತ್ತಿದ್ದೆ. ಮೈಸೂರು ದಸರಾ ಇದ್ದಾಗ ನಮ್ಮ ಮನೆಯಲ್ಲೂ ನೆಂಟರಿಷ್ಟರು ಸೇರುತ್ತಿದ್ದರು.

ಅರಮನೆಯಲ್ಲಿ ರಾಜರು ದರ್ಬಾರು ಮಾಡಿದಂತೆ ನಮ್ಮ ಮನೆಯಲ್ಲಿ ನನ್ನದೇ ದರ್ಬಾರು. ನಾನು ದಿವಿನಾಗಿ ಡ್ರೆಸ್ ಮಾಡಿಕೊಂಡು, ಸ್ಕೂಟರ್ ಹತ್ತಿದರೆ ಹ್ಯಾಂಡ್‌ಸಮ್ಮಾಗಿ ಕಾಣುತ್ತಿದ್ದೆನಂತೆ. ನಿಜ, ತಮಾಷೆಯಲ್ಲ. ಕತ್ತೆ ಕೂಡ ಚಿಕ್ಕ ವಯಸ್ಸಿನಲ್ಲಿ ಚೆನ್ನಾಗೇ ಕಾಣುತ್ತದೆ ಅಂತಾರಲ್ಲ; ಹಾಗೇ ಇರಬೇಕು! ಅಂಬುಜಾ ಕಣ್ಣಿಗೂ ನಾನು ಹ್ಯಾಂಡ್‌ಸಮ್ಮಾಗಿಯೇ ಕಂಡಿದ್ದೆ. ಆ ಕತೆ ಆಮೇಲೆ ಹೇಳುತ್ತೇನೆ.

ನನ್ನ ವ್ಯಾಪಾರಿ ಬದುಕಿನ ಸಮಯದಲ್ಲಿ ಶ್ರೀನಿವಾಸಮೂರ್ತಿ, ಅಶ್ವತ್ಥ ನಾರಾಯಣ, ಬೋಂಗ್ ರಾಮಾ, ಮಹದೇವ, ರಾಮಕೃಷ್ಣ ಮೊದಲಾದವರು ಆಪ್ತ ಸ್ನೇಹಿತರಾಗಿದ್ದರು. ರಾಮಕೃಷ್ಣ ಅಂದೊಡನೆ ಇನ್ನೊಂದು ಫ್ಲ್ಯಾಷ್‌ಬ್ಯಾಕ್ ನೆನಪಾಗುತ್ತದೆ. 1965ರಲ್ಲಿ ನಾನು `ಮಮತೆಯ ಬಂಧನ~ ಸಿನಿಮಾ ತೆಗೆದೆ.
 
ಬೆಂಗಳೂರಿನ ಮೆಜೆಸ್ಟಿಕ್‌ನ ಬ್ರಾಡ್‌ವೇ ಹೋಟೆಲ್‌ನಲ್ಲಿ ಇಳಿದುಕೊಂಡಿದ್ದೆ. ಆಗ ಒಬ್ಬ ಹುಡುಗ ಬಂದು, `ರಾಮಕೃಷ್ಣ ಅವರು ಗೊತ್ತಾ ಸರ್, ನಿಮಗೆ~ ಅಂತ ಕೇಳಿದ. ಅವನು ನನಗೆ ಒಳ್ಳೆ ದೋಸ್ತ್ ಅಂದೆ. `ಅವರು ಒಂದು ಲೆಟರ್ ಕೊಟ್ಟಿದಾರೆ... ನೋಡಿ ಸರ್~ ಎಂದು ಮುಂದೆ ಹಿಡಿದ. ಅದನ್ನು ತೆಗೆದು ಓದಿದೆ.
 
`ಈ ಹುಡುಗನಿಗೆ ಸಿನಿಮಾದಲ್ಲಿ ನಟಿಸುವ ಬಯಕೆ. ಅವನು ನನಗೆ ತುಂಬಾ ಬೇಕಾದವನು. ಸಾಧ್ಯವಾದರೆ ಅವನಿಗೊಂದು ಚಾನ್ಸ್ ಕೊಡಿಸು~ ಎಂದು ರಾಮಕೃಷ್ಣ ಶಿಫಾರಸು ಪತ್ರ ಬರೆದಿದ್ದ. ಅದನ್ನು ಓದಿ, ಹುಡುಗನನ್ನು ಗಮನಿಸಿದೆ. ನೋಡಲು ಮುದ್ದಾಗಿಯೇ ಇದ್ದ.

ಕಣ್ಣಲ್ಲಿ ನಟನಾಗಬೇಕೆಂಬ ಮಹತ್ವಾಕಾಂಕ್ಷೆಯೂ ಇದ್ದಂತೆ ಇತ್ತು. ಪಾರ್ಟ್ ಮಾಡುವುದು ಇದ್ದೇಇದೆ. ಕಾಫಿ ಕುಡಿಯುತ್ತೀಯೋ? ಬಿಯರ್ ಕುಡಿಯುತ್ತೀಯೋ ಎಂದು ಅವನನ್ನು ಕೇಳಿದೆ. ಆ ಭಲೆ ಹುಡುಗ ಬಿಯರ್ ಕುಡಿಯಲೇ ಸಿದ್ಧನಾದ. ನೋಡನೋಡುತ್ತಲೇ ಒಂದೇ ಬೀಸಿಗೆ ಅವನು ಮೂರು ಬಿಯರ್ ಕುಡಿದುಬಿಡೋದೆ! ಆಮೇಲೆ ಅವನನ್ನು ಹೋಗಿ ಬಾ ಎಂದು ಕಳುಹಿಸಿದೆ. ಮುಂದೆ `ಲಗ್ನ ಪತ್ರಿಕೆ~ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಅವನು ನಟಿಸಿದ.

ಅವನ ಹೆಸರೇ ನಾರಾಯಣ ಸ್ವಾಮಿ. ಕಾಲ ಕ್ರಮೇಣ ಅವನು ಚಿತ್ರರಂಗದಲ್ಲಿ ಒಳ್ಳೆಯ ನಾಯಕನಟನಾದ. ಅವನೇ ಪ್ರಣಯ ರಾಜ ಎಂದೇ ಹೆಸರಾದ ಶ್ರೀನಾಥ್. ರಾಮಕೃಷ್ಣ ಕಳುಹಿಸಿಕೊಟ್ಟಿದ್ದ ಶಿಫಾರಸು ಪತ್ರ ಹಿಡಿದು ಬಂದ ಹುಡುಗ ದೊಡ್ಡ ನಟನಾದದ್ದು ಕೂಡ ನನ್ನಂಥವನಿಗೆ ಸೋಜಿಗವೇ ಹೌದು.

`ಮಧೂಸ್ ಮಿಲ್ಸ್ ಸ್ಟೋರ್ಸ್‌ ಅಂಡ್ ಆಟೊಮೊಬೈಲ್ಸ್~ ಅಂತ ಅಣ್ಣನ ಅಂಗಡಿಯ ಹೆಸರು. ಮೈಸೂರಿನ ಹನುಮಂತರಾವ್ ಸ್ಟ್ರೀಟ್‌ನಲ್ಲಿ ಅದು ಪ್ರಭಾ ಟಾಕೀಸ್ ಪಕ್ಕದಲ್ಲಿತ್ತು. ಅದರ ಆಜೂಬಾಜೂ ಇದ್ದ ಪ್ರತಿ ಅಂಗಡಿಯ ಹೆಸರೂ ನನಗೆ ನೆನಪಿದೆ. ನನ್ನ ಅಂಗಡಿ `ಭಾರತ್ ಆಟೋ ಸ್ಪೇರ್ಸ್‌~. ಕರಿಯಪ್ಪ, ಯೂನಿಯನ್ ಮೋಟಾರ್ಸ್‌ನವರು, ಜಾರ್ಜ್, ಬಿ.ಎಂ.ನಾಗರಾಜ್ ಶೆಟ್ಟಿ ಅಂಡ್ ಸನ್ಸ್, ಊದಿನಕಡ್ಡಿ ಉದ್ಯಮ ಇಟ್ಟುಕೊಂಡಿರುವ ರಂಗರಾವ್ ಅಂಡ್ ಸನ್ಸ್ ಎಲ್ಲರೂ ನನ್ನ ಕಾಯಂ ಗಿರಾಕಿಗಳಾಗಿದ್ದರು.
 
ರಂಗರಾವ್ ವೈಟ್ ಆಯಿಲ್ ಕೊಂಡುಕೊಳ್ಳಲು ಪದೇಪದೇ ಬರುತ್ತಿದ್ದರು. ಆಗ ಒಂದು ಡ್ರಮ್ ವೈಟ್ ಆಯಿಲ್ ಕೊಂಡರೆ 250 ರೂಪಾಯಿ ಗಲ್ಲಾ ಸೇರುತ್ತಿತ್ತು. ಅದು ನನ್ನ ಪಾಲಿನ ದೊಡ್ಡ ಬಿಸಿನೆಸ್. ಸಿನಿಮಾರಂಗದಲ್ಲಿ ಏರಿಳಿತ ಕಂಡ ನಂತರವೂ ನನ್ನ ಹಿಂದಿನ ಬದುಕಿನ ಮುಖ್ಯ ಹೆಸರುಗಳು ನನಗಿನ್ನೂ ನೆನಪಿನಲ್ಲಿವೆ ಎಂಬುದಕ್ಕಷ್ಟೆ ಈ ಸಂಗತಿ.

ಭಾನುವಾರ ಬಂದರೆ ನಾನು, ನನ್ನ ಸ್ನೇಹಿತರು ಸಿನಿಮಾಗಳನ್ನು ನೋಡಲು ಹೋಗುತ್ತಿದ್ದೆವು. ದೇವಾನಂದ್, ಶಮ್ಮಿ ಕಪೂರ್, ರಾಜ್‌ಕಪೂರ್ ಅಭಿನಯದ ಹಿಂದಿ ಚಿತ್ರಗಳೆಂದರೆ ನಮಗೆ ಅಚ್ಚುಮೆಚ್ಚು. ಅದಕ್ಕೆ ಮುಖ್ಯ ಕಾರಣ ಹೆಚ್ಚು ಹೆಣ್ಣುಮಕ್ಕಳು ಅವರ ಚಿತ್ರಗಳನ್ನು ನೋಡಲು ಬರುತ್ತಿದ್ದರು. ಚಿತ್ರಮಂದಿರದಲ್ಲಿ ದೀಪಗಳನ್ನೆಲ್ಲಾ ಆರಿಸಿದ ಮೇಲೆಯೇ ನಾವು ಎಂಟ್ರಿ ಕೊಡುತ್ತಿದ್ದದ್ದು.
 
ಅಲ್ಲಿ ಕೂತಿರುತ್ತಿದ್ದ ಹುಡುಗಿಯರಿಗೆ ಬೇಕೆಂದೇ ಕೈ ತಗುಲಿಸಿ ನಾವು ಸಾರಿ ಎನ್ನುತ್ತಿದ್ದೆವು. ಅವರು `ಇಟ್ಸ್ ಓಕೆ~ ಎಂದು ನಗೆ ಚೆಲ್ಲುತ್ತಿದ್ದರು. ಆ `ಸಾರಿ~ಗಳು, `ಇಟ್ಸ್ ಓಕೆ~ಗಳನ್ನು ನೆನೆದು ನಮ್ಮ ಮೈಮನಸ್ಸು ಜುಮ್ಮೆನ್ನುತ್ತಿತ್ತು. ಅದು ನನ್ನ ತಪ್ಪಲ್ಲ, ಆ ವಯಸ್ಸಿನ ತಪ್ಪು.

ಆಗಿನ್ನೂ ನನಗೆ ಹತ್ತೊಂಬತ್ತು ಇಪ್ಪತ್ತು ವಯಸ್ಸು. ಒಮ್ಮೆ ಅಂಗಡಿ ಮೇಲೆ ಕೂತಿದ್ದಾಗ ಸೀಬೇಕಾಯಿ ಮಾರಿಕೊಂಡು ಒಬ್ಬ ಬಂದ. ಅದನ್ನು ಕೊಂಡು, ಉಪ್ಪು ಖಾರ ಹಚ್ಚಿಸಿಕೊಂಡು ಇನ್ನೇನು ಬಾಯಿಗಿಡಬೇಕು ಎನ್ನುವಷ್ಟರಲ್ಲಿ ನಮ್ಮಣ್ಣ ನೋಡಿ ಬಾಯಿಗೆ ಬಂದಂತೆ ಬೈದ.
 
ಗಲ್ಲಾ ಮೇಲೆ ಕೂತಿದ್ದಾಗ ಎಂಜಲು ಮಾಡಿಕೊಂಡು ತಿನ್ನುವುದು ಅಶಿಸ್ತು ಎಂಬುದೇ ಅವನ ಸಿಟ್ಟಿಗೆ ಕಾರಣ. ಈಗಲೂ ಸೀಬೆಹಣ್ಣು ತಿನ್ನುವಾಗ ಅವನ ಆ ಬೈಗುಳಗಳೇ ನೆನಪಾಗುತ್ತದೆ. ಅಣ್ಣನ ಬದುಕಿನಲ್ಲಿದ್ದ ಆ `ಸಿಸ್ಟಂ~ನ ಪಾಠವನ್ನೇ ನಾನೂ ಕಲಿತದ್ದು. ಅದನ್ನು ಸಿನಿಮಾರಂಗಕ್ಕೆ ಬಂದಮೇಲೂ ನಾನು ಅಳವಡಿಸಿಕೊಂಡೆ.
ಬದುಕಿನ ಪ್ರಾರಂಭ ಚೆನ್ನಾಗಿದ್ದರೆ ಭವಿತವ್ಯ ಕೂಡ ಚೆನ್ನಾಗೇ ಇರುತ್ತದೆಂಬುದಕ್ಕೆ ನನ್ನ ಬದುಕೇ ಉದಾಹರಣೆ.

ನಮ್ಮಣ್ಣ ತಾರಾನಾಥ ಇನ್ನೊಬ್ಬ ಮಹಾನ್ ಸಾಹಸಿ. ಅವನು ಆಗಲೇ ಲಂಡನ್‌ನಲ್ಲಿ ಹೋಗಿ ನೆಲೆಸಿದ್ದ. 1962ರಲ್ಲಿ ಲಂಡನ್‌ನಿಂದ ಮೈಸೂರಿಗೆ ಕಾರು ಓಡಿಸಿಕೊಂಡು ಬಂದ. `ವ್ಯಾಗ್ಜಾಲ್~ ಎಂಬ ಕೆಂಪು ಕಾರು ಅದು. ನಲವತ್ತೆಂಟು ದಿನ ಆ ಕಾರನ್ನು ಅಷ್ಟು ದೂರದಿಂದ ಆ ಕಾಲದಲ್ಲಿ ಓಡಿಸಿಕೊಂಡು ಬಂದಿದ್ದ. ಅವನು ಹಾಗೂ ಪಾಕಿಸ್ತಾನದ ಒಬ್ಬ ಸ್ನೇಹಿತ ಒಟ್ಟಾಗಿ ಅಲ್ಲಿಂದ ಹೊರಟಿದ್ದರು. ಪಾಕಿಸ್ತಾನದ ಆ ಸ್ನೇಹಿತನನ್ನು ಕರಾಚಿಯಲ್ಲಿ ಬಿಟ್ಟು, ಇಲ್ಲಿಗೆ ಆ ಕಾರನ್ನು ಓಡಿಸಿಕೊಂಡು ಅಣ್ಣ ಒಬ್ಬನೇ ಬಂದಿದ್ದ. ನಮಗೆಲ್ಲಾ ಅದೊಂದು ಬೆರಗಿನ ಸಂಗತಿ.

 ಆ ಕಾರನ್ನು ಮಾರಬೇಕೆಂದು ಮೈಸೂರಿನಲ್ಲಿ ಗಿರಾಕಿಗಳಿಗೆ ಹುಡುಕಿದ. ಅದನ್ನು ಕೊಳ್ಳುವಷ್ಟು ಶ್ರೀಮಂತರು ಆಗ ಇರಲಿಲ್ಲ. ಕೊನೆಗೆ ಜಾವಾ ಕಂಪೆನಿಯ ಮಾಲೀಕ ಇರಾನಿ ಅದನ್ನು ಕೊಂಡುಕೊಂಡರು. ಮುಂದೆ ಕರಾಚಿಯ ಆ ಸ್ನೇಹಿತ ಹಾಗೂ ತಾರಣ್ಣ ಅಲ್ಲಿ ದೊಡ್ಡ ಆರ್ಕಿಟೆಕ್ಟ್ ಎಂಜಿನಿಯರ್‌ಗಳೆಂದು ಹೆಸರು ಗಳಿಸಿದರು. ಶಿಕಾಗೋದಲ್ಲಿ ಅತಿ ಎತ್ತರದ ಕಟ್ಟಡ ನಿರ್ಮಿಸಿದರು. ಮೊನ್ನೆಮೊನ್ನೆ ಅಮೆರಿಕದಿಂದ ಅದೇ ಅಣ್ಣ ಬಂದಾಗಲೂ ಕಾರು ಓಡಿಸಿಕೊಂಡು ಬಂದಿದ್ದ ಈ ಸಾಹಸವನ್ನು ನಾವು ಮೆಲುಕು ಹಾಕುತ್ತಿದ್ದೆವು.

ಎರಡನೇ ಅಣ್ಣ ನಾಗಣ್ಣ ಲಡಾಖ್‌ನಲ್ಲಿ ಭೂಸೇನೆಯಲ್ಲಿ ಕೆಲಸ ಮಾಡುತ್ತಿದ್ದ. ಅವನು ಅಲ್ಲಿಂದ ಮೈಸೂರಿಗೆ ಬಂದ ಕಾಲಕ್ಕೆ ನನ್ನ ಅಂಗಡಿಯ ವ್ಯಾಪಾರ ಜೋರಾಗಿತ್ತು. ನನ್ನ ಶೋಕಿಯೂ ಮುಂದುವರಿದಿತ್ತು. ನಾನು ಹಣ ಎಣಿಸುವುದನ್ನು, ಕಷ್ಟ ಪಡದೆ ಸುಖವಾಗಿರುವುದನ್ನು ಕಂಡು ಅವನಿಗೆ ಅದೇನನ್ನಿಸಿತೋ ಗೊತ್ತಿಲ್ಲ; ನನಗೆ ಅಷ್ಟು ಹೊತ್ತಿಗಾಗಲೇ ಸಿನಿಮಾ ಗೀಳು ಮನಸ್ಸನ್ನು ಕಾಡುತ್ತಿತ್ತು. ನಾನು ಸಿನಿಮಾಗೆ ಹೋದಮೇಲೆ ಅದೇ ನಾಗಣ್ಣ `ಭಾರತ್ ಆಟೋ ಸ್ಪೇರ್ಸ್‌~ ನೋಡಿಕೊಳ್ಳತೊಡಗಿದ.
  ಮುಂದಿನ ವಾರ: ಸಿನಿಮಾ ಗೀಳು, ಅಣ್ಣ ಜೊತೆ ವಾಗ್ವಾದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.