ADVERTISEMENT

ಮಧ್ಯಂತರ ಚುನಾವಣೆ ಬಂದೇ ಬಿಡುತ್ತಾ ಸಾರ್...

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 14 ಜುಲೈ 2013, 19:59 IST
Last Updated 14 ಜುಲೈ 2013, 19:59 IST
ಮಧ್ಯಂತರ ಚುನಾವಣೆ ಬಂದೇ ಬಿಡುತ್ತಾ ಸಾರ್...
ಮಧ್ಯಂತರ ಚುನಾವಣೆ ಬಂದೇ ಬಿಡುತ್ತಾ ಸಾರ್...   

ಅಯ್ಯ ಅವರ ಭರಪೂರ ಉಡುಗೊರೆಗಳಿಂದಾಗಿ ಅಹಿಂದಾಗಳು ಕುಣಿದು ಕುಪ್ಪಳಿಸುತ್ತಿದ್ದರೆ, ಗುಂಡು ಪ್ರಿಯರು ಕುಡಿಯದೇ ಔಟಾಗಿ ಕುಳಿತಿದ್ದರು. `ಮಠಗಳಿಗೆ ಕೋಟಿ ಕೋಟಿ ಎಣಿಸಿಕೊಡದ ಬಜೆಟ್ಟನ್ನು ಬಜೆಟ್ ಎಂದು ಹೇಳುತ್ತಾರೆಯೇ ?' ಎಂದು ರಪ್ಪ ಅವರು ಕಾಮೆಂಟು ಮಾಡಿದರೆ, `ಇದು ನಾನು ಕೊಟ್ಟ ಬಜೆಟ್ಟಿನ ರೀಮೇಕು' ಎಂದು ಶೆಟ್ರು ಗೊಣಗಿದರು.

ಆದರೂ ಸಮನ್ವಯ ಸಮಿತಿ ರಚನೆ ಮಾಡಿ, ಮೂಗುದಾರ ಹಾಕಿ ಎಳೆದುಕಟ್ಟುವ ಕೆಲಸವಾಗುತ್ತಿರುವಾಗ, ರೂಪಾಯಿಗೊಂದು ಕೆಜಿ ಅಕ್ಕಿ ಕೊಟ್ಟು, ಚುನಾವಣೆ ಬಜೆಟ್ಟನ್ನು ರಟ್ಟುಮಾಡಿ, ಅಂಥಿಂಥ ಅಯ್ಯ ನಾನಲ್ಲ ಎಂದು ಅಯ್ಯ ಅವರು ಸೆಡ್ಡು ಹೊಡೆದು ತೋರಿಸಿಯೇ ಬಿಟ್ಟರು. ರಾಜ್ಯದ ಸಮಸ್ತ ಗಣಂಗಳೂ ಹೀಗೆ ಬಜೆಟ್ಟಿನ ಸಕಲಗುಣಗಳನ್ನು ಹೊಗಳುತ್ತಾ ಇರಬೇಕಾದರೆ, ಪೆಕರ ಅವಸರವಸರವಾಗಿ ಕಚೇರಿಗೆ ಓಡಿಬಂದು, `ಸಾರ್, ಸಾರ್, ಎಕ್ಸ್‌ಕ್ಲೂಸಿವ್ ನ್ಯೂಸ್ ಇದೇ ಸಾರ್, ಮಧ್ಯಂತರ ಚುನಾವಣೆ ಬರ್ತಾ ಇದೆ' ಎಂದು ಸಂಪಾದಕರ ಬಳಿ ಒಂದೇ ಉಸಿರಿನಲ್ಲಿ ಗಳಪಿದ.

`ಉಪೇಂದ್ರನ ತರಹ ಕನ್‌ಫ್ಯೂಸ್ ಡೈಲಾಗ್ ಹೇಳಬೇಡ್ರಿ ಪೆಕರ ಅವರೇ, ಡಿಸೆಂಬರ್ ಒಳಗೇ ಲೋಕಸಭೆ ಚುನಾವಣೆ ಬಂದೇ ಬರುತ್ತೆ ಅಂತ ರಾಜಕೀಯ ಪಂಡಿತರು ಹೇಳ್ತಾನೇ ಇದ್ದಾರೆ. ಎಲ್ಲ ರಾಜಕೀಯ ಪಕ್ಷಗಳೂ ಆರು ತಿಂಗಳಿಂದ ಸಖತ್ತಾಗಿಯೇ ತಯಾರಿಯಲ್ಲಿದ್ದಾರೆ. ಮೋದಿನಾ ಮುಂದಿಟ್ಟುಕೊಂಡು ಕಮಲದವರು ಮುಂದೆ ಮುಂದೆ ಹೋಗ್ತಾ ಇರೋದು ಕಾಣ್ತಾ ಇಲ್ವಾ?

ಅಯ್ಯ ಅವರೇ ಮೋದಿಗೆ ಸರಿಸಾಟಿ ಅಂತಾನೂ ಯಾರೋ ಒಬ್ಬರು ಬೂಸಿ ಬಿಟ್ಟಿದ್ದದ್ದೂ ನಿಮಗೆ ಗೊತ್ತಿಲ್ಲವ? ಮಧ್ಯಂತರ ಚುನಾವಣೆ ಅಲ್ಲ, ರೆಗ್ಯುಲರ್ ಆಗಿ ಬರೋ ಚುನಾವಣೆನೇ' ಸಂಪಾದಕರು ಪೆಕರನ ಮಾತುಗಳನ್ನು ತಿದ್ದಿದರು. `ಲೋಕಸಭೆ ಚುನಾವಣೆ ಹತ್ರ ಬರ್ತಾ ಇರೋದು ನನಗೂ ಗೊತ್ತು ಸಾರ್, ನಾನು ಅದನ್ನು ಹೇಳ್ತಾ ಇಲ್ಲ. ವಿಧಾನಸಭೆಗೆ ಮಧ್ಯಂತರ ಚುನಾವಣೆ ಹತ್ರ ಬರ್ತಾ ಇದೆ' ಎಂದು ಪೆಕರ ಖಚಿತ ದನಿಯಲ್ಲಿ ತನ್ನ ಮಾತುಗಳನ್ನು ರಿಪೀಟ್ ಮಾಡಿದ.

`ನೋಡಿ ಮಿಸ್ಟರ್ ಪೆಕರ ನಿಮ್ಮದು ತಪ್ಪು ಲೆಕ್ಕಾಚಾರ. ಯಾವಾಗ್ಲೂ ನೀವು ಹೀಗೇನೇ, ಓಡುತ್ತಿರುವ ಕಾರಿನ ಚಕ್ರದಡಿಯಲ್ಲಿ ಸಿಕ್ಕಿಹಾಕಿಕೊಂಡ ನಾಯಿಮರಿ ತರಹ ಆಡ್ತೀರಾ. ಬಿಜೆಪಿ, ಕೆಜೆಪಿ ವಿಲೀನ ಆದ್ರೆ, ಮಾರಸ್ವಾಮಿಗಳ ಪ್ರತಿಪಕ್ಷ ಸ್ಥಾನಕ್ಕೆ ಕುತ್ತು ಬರುತ್ತದೆಯೇ ಹೊರತು, ವಿಧಾನಸಭೆಯೇ ವಿಸರ್ಜನೆ ಆಗಿ ಬಿಡುವುದಿಲ್ಲ. ಅಷ್ಟಕ್ಕೂ ರಪ್ಪ ಅವರನ್ನು ಕಮಲವಾಸಿಗಳನ್ನಾಗಿ ಮಾಡೋದು ಅಷ್ಟು ಸುಲುಭವಲ್ಲ ಬಿಡಿ. ಅಡ್ವಾಣಿಜೀ ಒಪ್ಪಬೇಕು, ಅನಂತೂಜೀ ಒಪ್ಪಬೇಕು, ಶೋಭಾಜೀ ಒಪ್ಪಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಸಿಬಿಐನವರು ಒಪ್ಪಬೇಕು. ಇದೊಂದು ಜುಜುಬಿ ಬೆಳವಣಿಗೆ. ಇಷ್ಟಕ್ಕೇ ಮಧ್ಯಂತರ ಚುನಾವಣೆ ಬಂದು ಬಿಡೋಲ್ಲ. ಗೊತ್ತಾಯ್ತ, ನಡೀರಿ' ಎಂದು ಸಂಪಾದಕರು ಪೆಕರನಿಗೊಂದು ಪಾಠ ಹೇಳಿದರು.

ಪೆಕರ ಅಷ್ಟು ಸುಲುಭದಲ್ಲಿ ಬಿಡುವ ಆಸಾಮಿ ಅಲ್ಲ.  `ಇಲ್ಲಾ ಸಾರ್, ಬಂದು ಬಿಡುತ್ತೆ. ಮಾರಸ್ವಾಮಿಗಳು...  ಮಾರಸ್ವಾಮಿಗಳು ಹೇಳಿದ್ದು ನಿಜ. ಆರು ತಿಂಗಳು ಅಯ್ಯ ಅವರ ಸರ್ಕಾರದ ತಂಟೆಗೆ ಬರೋಲ್ಲ. ಅಲ್ಲೆವರೆಗೆ ತಾಳ್ಮೆಯಿಂದ ಕಾಯ್ತೀನಿ ಎಂದು ಹೇಳಿದ್ರು. ಆದರೆ ಮೊನ್ನೆ ದಿಢೀರಂಥ ಅಯ್ಯ ಅವರ ಮೇಲೆ ಬಿದ್ದು, ನಿಮ್ಮ ಫೈಲ್‌ನೆಲ್ಲಾ ತೆಗೀತೀನಿ ಅಂತಿದ್ದಾರೆ. ಜಾತಿ ರಾಜಕೀಯ ಮಾಡ್ತಾ ಇದ್ದೀರಿ, ಗೌಡರನ್ನೆಲ್ಲಾ ಹುಡುಕಿ, ಹುಡುಕಿ ನೀರು, ಬಾರು ಇಲ್ಲದ ಊರುಗಳಿಗೆ ಎತ್ತಾಕುತ್ತಿದ್ದೀರಿ. ಹೀಗೆ ಮಾಡಿದರೆ, ಸರ್ಕಾರ ಅಲ್ಲಾಡಿಸಿಬಿಡ್ತೀನಿ ಎಂದು ಗುಟುರು ಹಾಕಿದ್ದಾರೆ. ಡಿಕುಶಿ ಮಾರ ಅವರನ್ನು ಮಂತ್ರಿ ಮಾಡಿದ್ರೆ ಒಕ್ಕಲಿಗರನ್ನೆಲ್ಲಾ ಕಾಪಾಡ್ತಿದ್ರು ಎಂದು ಹೇಳಿ ಕಾಂಗ್ರೆಸ್ ಬಾಡಿ ಒಳಗೇ ಕೈ ಹಾಕಿಬಿಟ್ಟಿದ್ದಾರೆ'. ಆದ್ರೆ, `ಇಷ್ಟಕ್ಕೆಲ್ಲಾ ಸರ್ಕಾರ ಬಿದ್ದು ಹೋಗುತ್ತೆ ಅಂತ ನನಗನ್ನಿಸುವುದಿಲ್ಲ' ಎಂದು ಸಂಪಾದಕರು ಹೇಳಿದರು.

`ನಾನು ಹೇಳಿದ್ದು ಅದಲ್ಲ ಸಾರ್'  ಎಂದು ಪೆಕರ ಏನೋ ಹೇಳಲು ಹೊರಟ. `ಗೊತ್ತಾಯ್ತು ಬಿಡ್ರಿ, ಈ ದೇಶದ ರಾಜಕೀಯದಲ್ಲಿ ಯಾರು ಜಾತಿ ರಾಜಕೀಯ ಮಾಡಿಲ್ಲ. ರಪ್ಪ ಅವರು, ಸಿಎಂ ಕಚೇರಿ ತುಂಬ ಅವರ ಜನರನ್ನೇ ತುಂಬಿಕೊಂಡಿದ್ರಂತೆ. ನಗುವಾನಂದ ಗೌಡರು ಬಂದು ಒಂದಷ್ಟು ಜನರನ್ನು ಕಿತ್ತುಹಾಕಿದರಂತೆ. ಶೆಟ್ರು ಬಂದು ತಮ್ಮವರನ್ನು ಒಂದಷ್ಟು ತುಂಬಿ ಹೋದ್ರಂತೆ. ದೊಡ್ಡಗೌಡರ ಕಾಲದಲ್ಲಿ ಆಯಕಟ್ಟಿನ ಜಾಗಗಳಲ್ಲಿ ಅವರ ಕಡೆಯವರನ್ನೆಲ್ಲಾ ತುಂಬಿಕೊಂಡರಂತೆ. ಮಾರಸ್ವಾಮಿಗಳ ಕಾಲದಲ್ಲ ಸೈಲಂಟಾಗಿ ಅವರ ಜನರ ಭರ್ತಿ ಕಾರ್ಯಕ್ರಮ ನಡೆಯಿತಂತೆ. ಹೀಗಾಗಿ ವಿಧಾನಸೌಧದಿಂದ ಹೊರಡುವ ಎಲ್ಲ ಆದೇಶಗಳ ಜೆರಾಕ್ಸ್ ದೊಡ್ಡಗೌಡರ ಬಂಗಲೆಗೆ ತಾನಾಗಿಯೇ ಬಂದು ಬೀಳುವ ವ್ಯವಸ್ಥೆ ಆಗಿತ್ತಂತೆ.

ವಿಧಾನಸೌಧದಲ್ಲಿ, ಕೆಎಂಎಫ್‌ನಲ್ಲಿ ತಮ್ಮವರನ್ನೇ ತುಂಬಿಸಿಕೊಂಡು, ಈಗ ಅವರನ್ನು ವರ್ಗ ಮಾಡಬೇಡಿ, ಅವರ ತಂಟೆಗೆ ಹೋದ್ರೆ ಹುಷಾರ್ ಎಂದು ಹೇಳುವುದು ಎಷ್ಟರಮಟ್ಟಿಗೆ ಜಾತ್ಯತೀತ ಬಿಡ್ರಿ ಜಾಸ್ತಿ ಮಾತಾಡ್‌ಬೇಡಿ' ಎಂದು ಸಂಪಾದಕರು ಹೇಳುತ್ತಲೇ ಹೋದರು. `ನನ್ನ ಭಾಷಣದ ಪೂರ್ತಿ ಸಾರ ಕೇಳದೇ ನನ್ನ ಮೇಲೆ ಆರೋಪ ಮಾಡ್ತಾ ಇದಾರೆ ಎಂದು ಮಾರಸ್ವಾಮಿಗಳು ಹೇಳ್ತಾ ಇದಾರೆ ಸಾರ್, ಅಧಿಕಾರಿಯೊಬ್ಬರನ್ನು ಕೊಲೆ ಮಾಡಿಸಿದವರು ಇಂದು ಮಂತ್ರಿಗಳಾಗಿದ್ದಾರೆ ಎಂದು ಮಾರಸ್ವಾಮಿಗಳು ಗುರುತರ ಆಪಾದನೆ ಮಾಡಿದ್ದಾರೆ ಇಂಥ ಆಪಾದನೆಗಳ ಪಟ್ಟಿನೇ ಇರೋದ್ರಿಂದ ಮಧ್ಯಂತರ...'  `ಯೋಗರಾಜ ಭಟ್ಟರ ಡೈಲಾಗ್ ತರಹ ಹೇಳ್ಬೇಡ್ರಿ. ಅದೇನ್ ಡೈರೆಕ್ಟಾಗಿ ಹೇಳಿಬಿಡಿ' ಎಂದು ಸಂಪಾದಕರು ಪೆಕರನ ಲೈನ್ ಕ್ಲಿಯರ್ ಮಾಡಿದರು.

`ಥ್ಯಾಂಕ್ಯೂ ಸಾರ್' ಎಂದು ಹೇಳಿ ಪೆಕರ ಮೂಲ ವಿಷಯಕ್ಕೆ ಬಂದ. `ಸಾರ್, ಅಪರಾಧಿ ಜನಪ್ರತಿನಿಧಿಗಳ ಆರೋಪ ಸಾಬೀತಾದ ದಿನವೇ ಶಾಸಕರ ಸದಸ್ಯತ್ವ ರದ್ದಾಗುತ್ತದೆ ಎನ್ನುವ ಸುಪ್ರೀಂಕೋರ್ಟ್ ತೀರ್ಪು ಕೇಳಿ ನಾಲ್ಕೂ ಪಕ್ಷಗಳ ಶಾಸಕರು, ಸಚಿವರು ಅದುರಿಹೋಗಿದ್ದಾರೆ ಸಾರ್. ವಿವಿಧ ರಾಜ್ಯಗಳ ವಿಧಾನಮಂಡಳಗಳಲ್ಲಿ 1258 ಜನ ಅಕ್ರಮ ಮಾಡಿದ ಶಾಸಕರಿದ್ದಾರೆ. ಇವರಿಗೆಲ್ಲಾ ಶಿಕ್ಷೆ ಪ್ರಕಟವಾದರೆ, ತಕ್ಷಣ ಅವರಿಗೆ ವಿಧಾನಸೌಧದಿಂದ ಗೇಟ್‌ಪಾಸ್ ಕೊಡ್ತಾರೆ. ಆರು ವರ್ಷ ಚುನಾವಣೆಗೂ ನಿಲ್ಲುವಂತಿಲ್ಲ. ಲಾಲೂ, ಪಪ್ಪುಯಾದವ್ ಇವರ ಗತಿ ದೇವರೇ ಗತಿ' ಎಂದು ಪೆಕರ ಕಳವಳ ವ್ಯಕ್ತಪಡಿಸಿದ. `ಉತ್ತರದಲ್ಲಿ ಬಹಳಷ್ಟು ಜನ ಹೋಗಬಹುದು. ನಮ್ಮಲ್ಲೇನು ಆಗುತ್ತೆ ಅದನ್ನು ಹೇಳಿ'  ಎಂದು ಸಂಪಾದಕರು ಕೇಳಿದರು.

`ಅಯ್ಯ ಅವರು ಒಕ್ಕಲಿಗರನ್ನು ಎತ್ತಂಗಡಿ ಮಾಡ್ತಿದ್ದಾರೆ ಎನ್ನುವ ಮಾರಸ್ವಾಮಿಗಳ ಹೇಳಿಕೆ, ಐಪಿಸಿ 153 ಎ ಪ್ರಕಾರ ಜಾತಿ ವೈಷಮ್ಯ ಕದಡುವ ಯತ್ನ ಎಂದು ಉಗ್ರಪ್ಪನವರು ಹೇಳಿದ್ದಾರೆ. ಆದ್ದರಿಂದ ಮೊದಲು ಮಾರಸ್ವಾಮಿಗಳಿಗೆ ಕಂಟಕ. ರಪ್ಪ ಅವರ ವಿರುದ್ದ 17 ಕ್ರಿಮಿನಲ್ ಕೇಸ್ ಇರೋದ್ರಿಂದ ಕೆಜೆಪಿಗೆ ಮಾರಕ. ಯೋಗಪ್ಪನವರ ವಿರುದ್ದ 39 ಕ್ರಿಮಿನಲ್ ಕೇಸ್ ಇರೋದ್ರಿಂದ ಸಮಾಜವಾದಿ ಪಕ್ಷಕ್ಕೆ ಮಾರಕ. ಏಕೈಕ ಶಾಸಕರಿರುವ ಮಕ್ಕಳ ಪಕ್ಷಕ್ಕೂ ಕಳಂಕ ಅಂಟಿದೆ. ಬಿಜೆಪಿಯಲ್ಲಿ 21, ಕಾಂಗ್ರೆಸ್‌ನಲ್ಲಿ 51 ಜನ ಕಳಂಕಿತರ ಪಟ್ಟಿಯಲ್ಲಿದ್ದಾರೆ. ಗುಲ್ಬರ್ಗದಿಂದ ಮೈಸೂರುವರೆಗೆ ಪಟ್ಟಿ ಬೆಳೆದಿದೆ ಸಾರ್, ಹೀಗಾದ್ರೆ ಶಾಸಕರ ಭವನವೇ ಖಾಲಿ ಆಗೊಲ್ವ? ಮಧ್ಯಂತರ ಚುನಾವಣೆ ಗ್ಯಾರಂಟಿ ಅಲ್ವ?' ಎಂದು ಪೆಕರ ಪಟ್ಟಿಯೊಂದನ್ನು ಸಂಪಾದಕರ ಮುಂದೆ ಇಟ್ಟ. ಪೆಕರನ ಜಾಣ್ಮೆಯ ಪ್ರಖರತೆ ತಾಳಲಾರದೆ ಸಂಪಾದಕರು ಎದ್ದು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.