ADVERTISEMENT

ಮರುಕಳಿಕೆ

ಬಿ ಎಂ ಶ್ರೀ
Published 4 ಮೇ 2013, 19:59 IST
Last Updated 4 ಮೇ 2013, 19:59 IST

ಭಾಷೆಯೆನ್ನುವುದು ನಿತ್ಯಗಟ್ಟಳೆಯ ವ್ಯಾಪಾರಕ್ಕಾಗಿ ಇರುವುದು ಮಾತ್ರವಲ್ಲ. ಅದರ ಮುಖ್ಯ ಕಾರ‌್ಯ ಒಂದು ಜನಾಂಗವನ್ನು ಸಂಸ್ಕಾರದಲ್ಲಿ ಮುಂದಕ್ಕೆ ತೆಗೆದುಕೊಂಡು ಹೋಗಲು ಸಾಧಕವಾಗುವುದು, ಆನಂದರಸವನ್ನು ಕಲೆಯ ಮೂಲಕ ಹೃದಯಕ್ಕೆ ತುಂಬುವುದು, ಆತ್ಮೋದ್ಧಾರಕ್ಕೆ ಸೋಪಾನವಾಗುವುದು- ಒಂದು ಇಡಿಯ ಜನವನ್ನು: ಅಲ್ಲೊಬ್ಬರನ್ನು ಇಲ್ಲೊಬ್ಬರನ್ನಲ್ಲ; ಕೇವಲ ವಿದ್ಯಾಪಾರಂಗತರನ್ನಲ್ಲ: ಜನಸಾಮಾನ್ಯರನ್ನು: ನಾಡಿನ ಗಂಡಸರು, ಹೆಂಗಸರು, ಮಕ್ಕಳನ್ನು. ಈ ಕೆಲಸ ಕಷ್ಟಪಟ್ಟು ನಮ್ಮ ಬುದ್ಧಿಶಕ್ತಿಯನ್ನೆಲ್ಲಾ ವೆಚ್ಚಮಾಡಿ ಕಲಿಯುವ ಪರಭಾಷೆಯಿಂದ ನೆರವೇರುವುದಿಲ್ಲ.

ಯಾವುದು ಸರಾಗವಾಗಿ ನಮ್ಮನ್ನು ಒಲಿದು ಬಂದಿರುತ್ತದೆಯೋ, ಯಾವುದು ನಮ್ಮನ್ನು ಬೆನ್ನಟ್ಟಿ ಬಂದು ರಕ್ತಗತವಾಗಿರುತ್ತದೆಯೋ ಅಂಥ ಭಾಷೆಯಿಂದ ಮಾತ್ರವೇ ಇದು ಸಾಧ್ಯ. ಆ ಭಾಷೆ ದೇಶಭಾಷೆ. ಈ ತತ್ತ್ವವನ್ನು ಹಿಡಿದು ಹಿಂದಿನ ಕಾಲದಲ್ಲಿ ಮಹನೀಯರಾದವರು ದೇಶ ಭಾಷೆಯ ಮೂಲಕ ಜನರನ್ನು ಬದುಕಿಸಬೇಕೆಂದು ಯೋಚನೆಮಾಡಿ ಕನ್ನಡವನ್ನು ಪುಷ್ಟಿಗೊಳಿಸುವುದಕ್ಕೆ, ಕನ್ನಡದ ಜ್ಞಾನಭಂಡಾರವನ್ನು ಹೆಚ್ಚಿಸುವುದಕ್ಕೆ, ಸಂಸ್ಕೃತವನ್ನು ಮರೆಹೊಕ್ಕರು. ಅದರ ಮೂಲಕ ಕನ್ನಡ ನಾನಾಮುಖವಾಗಿ ಪುಷ್ಟಿಹೊಂದಿತು. ಅವರಿಗೆ ಸಂಸ್ಕೃತದ ಮೇಲಿದ್ದ ಮಮತೆಯಲ್ಲಿ ಕನ್ನಡದ ಶಕ್ತಿಗೆ ಮೀರಿ ಅದು ಹೊರಲಾರದಷ್ಟು ಹೊರೆ ಅಲ್ಲಿಂದ ಬಂದಿದ್ದರೂ ಬಂದಿರಬಹುದು-ಬಂದಿದೆ; ಆ ಹೆಚ್ಚು ಹೊರೆಯನ್ನು ಇಳಿಸಿ. ಕನ್ನಡವನ್ನು ತಿಳಿಮಾಡಬೇಕೆಂಬುದು ನನ್ನ ಮತ.

ಅದು ಹೇಗಾದರೂ ಇರಲಿ, ಅಂತೂ ಒಟ್ಟಿನ ಮೇಲೆ, ಒಂದು ಕಾಲದಲ್ಲಿ ಕನ್ನಡ ಭಾಷೆ ಸಂಸ್ಕೃತದ ಮೂಲಕ ಹೊಸ ಚೈತನ್ಯವನ್ನು ಪಡೆಯಿತು. ಒಂದು ಒಂದೂವರೆ ಸಾವಿರ ವರ್ಷಗಳ ಕಾಲ ಸಂಸ್ಕೃತ ಭಾಷೆಯ ಪ್ರಭಾವ ಕನ್ನಡದ ಮೇಲೆ ನಡೆಯಿತು. ಆ ಭಂಡಾರದಲ್ಲಿ ತುಂಬಿರತಕ್ಕ ವಸ್ತುಗಳಲ್ಲಿ ತಮ್ಮ ಜನರಿಗೆ ಅಗತ್ಯವಾಗಿ ಕೊಡಬೇಕಾದಂಥವನ್ನು, ಕೊಡಬಹುದಾದಂಥವನ್ನು, ಒಟ್ಟಿನಲ್ಲಿ ಜನರನ್ನು ಮೇಲಕ್ಕೆ ಎತ್ತುವುದಕ್ಕೆ ಯಾವ ವಿಷಯಗಳನ್ನು ತಿಳಿಸಬೇಕೋ ತಿಳಿಸಬಹುದೋ ಅದನ್ನೆಲ್ಲಾ ಅಲ್ಲಿಂದ ತೆಗೆದುಕೊಂಡು ನಮ್ಮ ಹಿರಿಯರು ದೇಶಭಾಷೆಯಾದ ಕನ್ನಡದ ಮೂಲಕ ಜನರಿಗೆ ಕೊಟ್ಟರು.
(ಬಿಎಂಶ್ರೀ ಅವರ ಪ್ರಸಿದ್ಧ ಲೇಖನ `ಕನ್ನಡದ ಪುನರುಜ್ಜೀವನ'ದಿಂದ ಆಯ್ದ ಭಾಗ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.