ADVERTISEMENT

ಗ್ಲೋಬಲ್ ವಿಲೇಜ್‌ನ ವಿಲಕ್ಷಣ ಗಮಾರತನ

ಎ.ಎನ್‌ ಎಮ ಇಸ್ಮಾಯಿಲ್
Published 1 ಫೆಬ್ರುವರಿ 2017, 4:40 IST
Last Updated 1 ಫೆಬ್ರುವರಿ 2017, 4:40 IST
ಗ್ಲೋಬಲ್ ವಿಲೇಜ್‌ನ ವಿಲಕ್ಷಣ ಗಮಾರತನ
ಗ್ಲೋಬಲ್ ವಿಲೇಜ್‌ನ ವಿಲಕ್ಷಣ ಗಮಾರತನ   

‘ಗ್ಲೋಬಲ್ ವಿಲೇಜ್’ ಅಥವಾ ಜಾಗತಿಕ ಹಳ್ಳಿ ಎಂಬ ಪಾರಿಭಾಷಿಕವನ್ನು ಚಲಾವಣೆಗೆ ತಂದದ್ದು ಕೆನಡಾದ ಮಾಧ್ಯಮ ತಜ್ಞ ಮಾರ್ಷಲ್ ಮ್ಯಾಕ್ಲುಹಾನ್. ಕ್ಷಣಾರ್ಧದಲ್ಲಿ ಜಗತ್ತಿನ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಮಾಹಿತಿ ಹರಿದಾಡುವ ‘ಎಲೆಕ್ಟ್ರಿಕ್ ಟೆಕ್ನಾಲಜಿ’ಯೊಂದು ಜಗತ್ತನ್ನು ಹಳ್ಳಿಯಾಗಿಸಿಬಿಡುತ್ತದೆ ಎಂದು ಆತ ಹೇಳಿದಾಗ ಅದನ್ನು ಅಚ್ಚರಿಯಿಂದ ಕೇಳಿಸಿಕೊಂಡವರು, ಅದರ ಕುರಿತು ಮುಂದಿನ ಎಂಟು ದಶಕಗಳ ಕಾಲ ಚರ್ಚಿಸುತ್ತಾ ಬಂದವರಾರೂ ಜಗತ್ತು ನಿಜಕ್ಕೂ ಹಳ್ಳಿಯೊಂದರಂತೆ ಆಲೋಚಿಸುತ್ತದೆ ಎಂದು ಭಾವಿಸಿರಲಿಲ್ಲ. ಈ ಹೊತ್ತಿಗಾಗಲೇ ಕಾರ್ಲ್ ಮಾರ್ಕ್ಸ್‌ನಿಂದ ತೊಡಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತನಕದ ಚಿಂತಕರೆಲ್ಲಾ ಹಳ್ಳಿಯನ್ನು ಸಂಶಯದಿಂದ ನೋಡಿದ್ದರಾದರೂ ಅದನ್ನು ಮಾರ್ಷಲ್ ಮ್ಯಾಕ್ಲುಹಾನ್‌ನ ಜಾಗತಿಕ ಹಳ್ಳಿಗೆ ಅನ್ವಯಿಸಿ ನೋಡುವ ಕೆಲಸವನ್ನು ಯಾರೂ ಮಾಡಿರಲಿಲ್ಲ.

ಕಾರ್ಲ್ ಮಾರ್ಕ್ಸ್ ಬರೆದ ‘ಕಮ್ಯುನಿಸ್ಟ್ ಪಕ್ಷದ ಪ್ರಣಾಳಿಕೆ’ಯಲ್ಲಿ ಕಾಣಿಸಿಕೊಳ್ಳುವ ‘ವಿಲೇಜ್ ಇಡಿಯಸಿ’ ಅಥವಾ ‘ಹಳ್ಳಿ ಗಮಾರತನ’ವೋ ಅಥವಾ ಅದು ಹಳ್ಳಿಯಲ್ಲಿ ಬದುಕುವದರಿಂದ ಒದಗುವ ಪ್ರತ್ಯೇಕತೆಯೋ ಎಂಬ ಚರ್ಚೆ ಮತ್ತೊಂದು ಬಗೆಯಲ್ಲಿ ಇನ್ನೂ ಚಾಲನೆಯಲ್ಲಿದೆ. ಗಾಂಧೀಜಿ ಪ್ರತಿಪಾದಿಸಿದ ಗ್ರಾಮಗಳನ್ನು ಬಲಪಡಿಸುವ ಸಿದ್ಧಾಂತವನ್ನು ಅಂಬೇಡ್ಕರ್ ವಿರೋಧಿಸಿದ್ದು ಭಾರತ ನಿರ್ಮಾಣ ಪ್ರಕ್ರಿಯೆಯ ದೊಡ್ಡ ವಾಗ್ವಾದಗಳಲ್ಲೊಂದು. 1940ರಲ್ಲಿ ಅಂಬೇಡ್ಕರ್ ಹೇಳಿದ ಮಾತುಗಳು ಹೀಗಿವೆ: ‘ಹಳ್ಳಿಯೆಂದರೆ ಏನು– ಸ್ಥಳೀಯತೆಯಿಂದ ಹುಟ್ಟಿದ ಸಂಕುಚಿತ ಮನೋಭಾವದ ಬಚ್ಚಲುಗುಂಡಿ, ಅಜ್ಞಾನದ ಗವಿ, ಸಣ್ಣತನ ಮತ್ತು ಕೋಮುವಾದ’. ನಗರೀಕರಣದಲ್ಲಿ ಅಂಬೇಡ್ಕರ್ ಜಾತೀಯತೆಯ ಅಂತ್ಯವನ್ನು ಕಂಡಿದ್ದರು. ನಗರೀಕರಣ ಪ್ರಕ್ರಿಯೆಯೇನೋ ಬಲಗೊಂಡಿತು. ಆದರೆ ನಗರೀಕರಣಗೊಂಡ ಜಗತ್ತೇ ಅಂಬೇಡ್ಕರ್ ಅನುಮಾನಿಸಿದಂಥ ಹಳ್ಳಿಯಾಯಿತು.

ಜಗತ್ತಿನ ಯಾವುದೇ ಮೂಲೆಯಲ್ಲಿರುವ ಒಬ್ಬಾತ ಮತ್ತೊಂದು ಮೂಲೆಯಲ್ಲಿರುವ ಮತ್ತೊಬ್ಬನ ಜೊತೆ ಕ್ಷಣಾರ್ಧದಲ್ಲಿ ಸಂಪರ್ಕ ಸಾಧಿಸಬಹುದೆಂಬುದನ್ನು ಮಾಹಿತಿ ತಂತ್ರಜ್ಞಾನ ತೋರಿಸಿಕೊಟ್ಟಿದೆ. ಇದು ಉದ್ಯೋಗಗಳ ಜಾಗತೀಕರಣಕ್ಕೂ ಕಾರಣವಾಯಿತು. ಅಮೆರಿಕದ ಕಂಪೆನಿಯೊಂದರ ಗ್ರಾಹಕ ಸೇವೆಯನ್ನು ಭಾರತದಿಂದಲೂ ನಿರ್ವಹಿಸಲು ಸಾಧ್ಯವಾದದ್ದು ಈ ತಂತ್ರಜ್ಞಾನದಿಂದ. ತೃತೀಯ ಜಗತ್ತಿನಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುವವರು ದೊರೆಯುತ್ತಾರೆ ಎಂಬುದೇ ಒಂದು ವ್ಯಾಪಾರಿ ಸಾಧ್ಯತೆಯಾಯಿತು. ಸಮುದಾಯ ಎಂಬ ಪರಿಕಲ್ಪನೆಗೆ ಈಗ ಭೌಗೋಳಿಕ ಎಲ್ಲೆಗಳೇ ಇಲ್ಲ. ಗೆಳೆತನವೂ ಅಷ್ಟೇ.

ADVERTISEMENT

ಭೌಗೋಳಿಕವಾದ ಮಿತಿಗಳೆಲ್ಲವೂ ಅಳಿಸಿ ಹೋಗುವ ಈ ಸಂದರ್ಭದಲ್ಲಿ ಮನುಷ್ಯ ವಿಶ್ವಮಾನವನಾಗಬೇಕಾಗಿತ್ತು. ಆದರೆ ವ್ಯಾಪಾರಿ ಜಾಗತೀಕರಣ ಇದಕ್ಕೆ ನೀಡಿದ ಸ್ವರೂಪವೇ ಬೇರೆ. ಅಂಬೇಡ್ಕರ್ ಭಾರತದ ಹಳ್ಳಿಗಳನ್ನು ಗಮನದಲ್ಲಿಟ್ಟುಕೊಂಡು ಹೇಳಿದ್ದ ಮಾತುಗಳು ಇಡೀ ಜಗತ್ತಿಗೇ ಅನ್ವಯವಾಗ ತೊಡಗಿತು. ಉದ್ಯೋಗಗಳ ಜಾಗತೀಕರಣವೆಂಬುದು ಸಂಪತ್ತಿನ ನ್ಯಾಯಬದ್ಧ ಹಂಚಿಕೆಯಾಗುವ ಬದಲಿಗೆ ಹೊಸ ಬಗೆಯ ಕಾರ್ಮಿಕ ಶೋಷಣೆಯ ಮಾರ್ಗವಾಯಿತು. ಯೂರೋಪ್ ಮತ್ತು ಅಮೆರಿಕದ ಪ್ರಖ್ಯಾತ ಬ್ರಾಂಡ್‌ಗಳ ಉಡುಪುಗಳನ್ನು ತಯಾರಿಸುವ ಕೆಲಸ ಉಪಖಂಡದ ಸಿದ್ಧ ಉಡುಪು ಕಾರ್ಖಾನೆಗಳು ಉದ್ಯೋಗಗಳನ್ನೇನೋ ಒದಗಿಸಿದವು ಆದರೆ ಅದರ ಪರಿಣಾಮ ಈಸ್ಟ್ ಇಂಡಿಯಾ ಕಂಪೆನಿ ಸೃಷ್ಟಿಸಿದ ಅನಾಹುತಕ್ಕಿಂತ ಕಡಿಮೆಯದ್ದೇನೂ ಅಲ್ಲ.

ಮಾಹಿತಿ ತಂತ್ರಜ್ಞಾನದಂಥ ಬಿಳಿ ಕಾಲರಿನ ಕೆಲಸಗಳು ಯೂರೋಪು ಮತ್ತು ಅಮೆರಿಕಗಳಿಂದ ಭಾರತಕ್ಕೆ ಹರಿದು ಬಂದಾಗ ವಿಚಿತ್ರವೊಂದು ಸಂಭವಿಸಿತು. ಈಸ್ಟ್ ಇಂಡಿಯಾ ಕಂಪೆನಿ ಬಟ್ಟೆಗಳನ್ನು ಭಾರತಕ್ಕೆ ತಂದಾಗ ಇಲ್ಲಿನ ನೇಕಾರರು ಕಷ್ಟಪಟ್ಟರು. ಐ.ಟಿ. ಉದ್ಯಮ ಹೊರ ಗುತ್ತಿಗೆಗೆ ತೆರೆದುಕೊಂಡಾಗ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಉದ್ಯೋಗಕ್ಕೆ ಹಾಹಾಕಾರ ಆರಂಭವಾಯಿತು. ಈ ಆರ್ಥಿಕ ಪಲ್ಲಟಗಳ ಮರೆಯಲ್ಲೇ ಸಾಮಾಜಿಕ ಪಲ್ಲಟಗಳೂ ಎಲ್ಲೆಡೆ ಸಂಭವಿಸುತ್ತಿದ್ದವು. ಜಗತ್ತು ಚಪ್ಪಟೆಯಾಗಿಬಿಟ್ಟಿತು ಎಂದು ಘೋಷಿಸಿದ್ದ ಥಾಮಸ್ ಫ್ರೈಡ್‌ಮನ್‌ರಂಥ ಲೇಖಕರೇ ಇಂಟರ್ನೆಟ್‌ನಂಥ ಕ್ರಾಂತಿಕಾರಿ ತಂತ್ರಜ್ಞಾನ ಜನರ ಅರಿವನ್ನು ಹೆಚ್ಚಿಸುವ ಬದಲಿಗೆ ಅವರ ಪೂರ್ವಗ್ರಹಗಳನ್ನು ಹೆಚ್ಚಿಸುವ ದುರಂತವನ್ನು ಕಂಡು ಬೆಚ್ಚಿಬೀಳುವಂಥ ಸ್ಥಿತಿ ಉದ್ಭವವಾಯಿತು. 2002ರಲ್ಲಿ ಥಾಮಸ್ ಫ್ರೈಡ್ಮನ್ ನ್ಯೂಯಾರ್ಕ್ ಟೈಮ್ಸ್‌ಗೆ ಬರೆದ ಲೇಖನವೊಂದರಲ್ಲಿ ಅವರು ಪತ್ರಕರ್ತ ಮತ್ತು ಲೇಖಕ ಜಾರ್ಜ್ ಪಾರ್ಕರ್ ಅವರ ‘ಜಗತ್ತಿನಾದ್ಯಂತ ತಲುಪುವ ಸ್ಯಾಟಲೈಟ್ ಟಿ.ವಿ. ಮತ್ತು ಇಂಟರ್ನೆಟ್ ಜಗತ್ತನ್ನು ಹೆಚ್ಚು ಅಸಹನೀಯಗೊಳಿಸಿದೆ’ ಎಂಬ ಮಾತನ್ನು ಉಲ್ಲೇಖಿಸಿ ವಿಷಾದಿಸಿದ್ದರು.

ಥಾಮಸ್ ಫ್ರೈಡ್ಮನ್ ಈ ಮಾತುಗಳನ್ನು ಬರೆದಾಗ ಅವರಲ್ಲಿ ಇದ್ದದ್ದು ಜಾಗತೀಕರಣದ ಮತ್ತೊಂದು ಮುಖದ ಬಗೆಗಿನ ವಿಷಾದ ಮತ್ತು ಅದನ್ನು ಸರಿಪಡಿಸಲು ಸಾಧ್ಯ ಎಂಬ ನಂಬಿಕೆ. ಅವರ ನಂಬಿಕೆ ನಿಧಾನವಾಗಿ ಹುಸಿಯಾಗುತ್ತಿದೆ. ಕಳೆದ ವರ್ಷ ಬ್ರಿಟನ್ ಯೂರೋಪ್ ಒಕ್ಕೂಟದ ಒಳಗಿರಲಾರೆ ಎಂದಿತು. ಈ ವರ್ಷ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಡೋನಾಲ್ಡ್ ಟ್ರಂಪ್ ಮೊದಲು ಮಾಡಿದ ಕೆಲಸಗಳಲ್ಲಿ ‘ಟ್ರಾನ್ಸ್ ಪೆಸಿಫಿಕ್ ಪಾರ್ಟನರ್‌ಶಿಪ್’ ಎಂಬ ಒಪ್ಪಂದವನ್ನೇ ಕೈಬಿಡಲು ತೀರ್ಮಾನಿಸಿದ್ದು. ಕೆನಡಾ ಮತ್ತು ಮೆಕ್ಸಿಕೋಗಳ ಜೊತೆಗಿದ್ದ ವ್ಯಾಪಾರ ಒಪ್ಪಂದವಾದ ‘ನಾರ್ತ್ ಅಮೆರಿಕನ್ ಫ್ರೀ ಟ್ರೇಡ್ ಅಗ್ರಿಮೆಂಟ್’ ಅನ್ನು ಮರು ಪರಿಶೀಲನೆಯ ಸಿದ್ಧತೆಯಲ್ಲಿ ತೊಡಗಿದ್ದು. ಮಾಹಿತಿ ತಂತ್ರಜ್ಞಾನದ ಮೂಲಕ ಜಗತ್ತೇ ಒಂದಾಗುತ್ತಿರುವ ಕ್ಷಣದಲ್ಲಿ ಚೀನಾ ಮಾತ್ರ ತನ್ನ ಸುತ್ತ ಗೋಡೆ ಕಟ್ಟಿಕೊಂಡಿದೆ ಎಂದು ಆರೋಪಿಸುತ್ತಿದ್ದವರು ಈಗ ಹೊಸ ಗೋಡೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.

ಈ ಬೆಳವಣಿಗೆಗಳ ಫಲವೋ ಎಂಬಂತೆ ‘ಅಜಾಗತೀಕರಣ’ ಅಥವಾ ಡಿಗ್ಲೋಬಲೈಝೇಷನ್ ಎಂಬ ಪಾರಿಭಾಷಿಕವೊಂದು ಈಗ ಬಳಕೆಗೆ ಬರುತ್ತಿದೆ. ಇದು ಬ್ರೆಕ್ಸಿಟ್ ಅಥವಾ ಟ್ರಂಪೋತ್ತರ ಜಗತ್ತಿನಲ್ಲಿ ಠಂಕಿಸಲಾದ ಪದವೇನಲ್ಲ. 2005ರಲ್ಲೇ ಫಿಲಿಫೈನ್ಸ್‌ನ ವಿದ್ವಾಂಸ ಮತ್ತು ಸಾಮಾಜಿಕ ಕಾರ್ಯಕರ್ತ ವಾಲ್ಡನ್ ಬೆಲ್ಲೋ ‘ಅಜಾಗತೀಕರಣವಾದ’ ಎಂಬುದನ್ನು ಅಸಮಾನತೆಯ ಜಾಗತೀಕರಣಕ್ಕೆ ಪರ್ಯಾಯ ಎಂದು ಪ್ರತಿಪಾದಿಸಿದ್ದರು. ಹೊರಗುತ್ತಿಗೆಗಳ ಯುಗದ ಆರಂಭದ ಆ ಕಾಲದಲ್ಲಿ ಈ ಪದವನ್ನು ಯಾರೂ ಗಂಭೀರವಾಗಿ ಪರಿಗಣಿಸರಲಿಲ್ಲ. ಈಗ ಇದನ್ನು ಫೋರ್ಬ್ಸ್‌, ಎಕಾನಮಿಸ್ಟ್‌ನಂಥ ಪತ್ರಿಕೆಗಳು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಳಸತೊಡಗಿವೆ.

ವಿಶ್ವ ವ್ಯಾಪಾರ ಸಂಘಟನೆ ಈಗ ಬಹುತೇಕ ಅಪ್ರಸ್ತುತವಾಗಿಬಿಟ್ಟಿದೆ. ಎಂಬತ್ತರ ದಶಕದ ಅಂತ್ಯದಲ್ಲಿ ಜಗತ್ತಿನಾದ್ಯಂತ ಎಡಪಕ್ಷಗಳೂ ನಿರಂತರ ಚಳವಳಿಗಳ ಮೂಲಕ ತಡೆಯಲು ಪ್ರಯತ್ನಿಸಿದ್ದು ಈಗ ವಿಶ್ವ ವ್ಯಾಪಾರದ ಪ್ರತಿಪಾದಕರಿಂದಲೇ ಅಪ್ರಸ್ತುತವಾಗಿಬಿಟ್ಟಿರುವ ವಿಚಿತ್ರ ಸ್ಥಿತಿಯೊಂದು ನಮ್ಮ ಕಣ್ಣ ಮುಂದಿದೆ. ಆದರೆ ಈ ಚಕ್ರೀಯ ಬೆಳವಣಿಗೆಯಲ್ಲಿ ಮೈದೆಳೆದ ಮತ್ತೊಂದು ವಿಲಕ್ಷಣ ಸಂಗತಿಯಿದೆ. ಇಡೀ ಯೂರೋಪನ್ನು ಅಚ್ಚರಿಗೆ ದೂಡಿದ ಬ್ರೆಕ್ಸಿಟ್, ವಿಶ್ವವನ್ನೇ ಬೆಚ್ಚಿ ಬೀಳಿಸಿದ ಟ್ರಂಪ್ ವಿಜಯಗಳೆಲ್ಲವುಗಳ ಹಿಂದೆಯೇ ಇಂಟರ್ನೆಟ್ ಆಧಾರಿತ ತಂತ್ರಜ್ಞಾನದ ಮಹಿಮೆ ಇದೆ.

ಅರಬ್ ವಸಂತದ ಕಾಲದಲ್ಲಿ, ಭಾರತದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನದ ಸಂದರ್ಭದಲ್ಲಿ ಬಹಳ ಸಕಾರಾತ್ಮಕವಾಗಿ ಕಾಣುತ್ತಿದ್ದ ಸಾಮಾಜಿಕ ಮಾಧ್ಯಮಗಳೇ ಬ್ರೆಕ್ಸಿಟ್ ಮತ್ತು ಟ್ರಂಪ್ ವಿಜಯದ ಹಿಂದೆಯೂ ಇವೆ. ಇಂಟರ್ನೆಟ್ ಮಾಹಿತಿಯ ಹೆದ್ದಾರಿಯನ್ನು ಮುಕ್ತಗೊಳಿಸಿತು. ಕ್ಷಣಾರ್ಧದಲ್ಲಿ ಜಗತ್ತಿನ ಎಲ್ಲಾ ಮೂಲೆಗಳನ್ನೂ ಸಂಪರ್ಕಿಸಲು ಸಾಧ್ಯವಿರುವ ಈ ತಂತ್ರಜ್ಞಾನದಲ್ಲಿ ಹರಡಿದ್ದು ಬರೇ ಉಪಯುಕ್ತ ಮಾಹಿತಿಯಷ್ಟೇ ಅಲ್ಲ. ಮೊದಲು ತಮ್ಮ ಪೂರ್ವಗ್ರಹಗಳ ಜೊತೆಗೆ ತಮ್ಮ ಗೂಡಿನೊಳಗಷ್ಟೇ ಇದ್ದವರು ಈಗ ಜಗತ್ತಿನ ಮತ್ಯಾವುದೋ ಮೂಲೆಯಲ್ಲಿರುವ ತಮ್ಮಂಥವರನ್ನು ತಲುಪಿದರು. ಮಾಹಿತಿಯ ಪೂರೈಕೆ ಪೂರ್ವಗ್ರಹಗಳನ್ನು ತೊಡೆಯುವುದರ ಬದಲಿಗೆ ಅದನ್ನು ಗಟ್ಟಿಗೊಳಿಸಿತು. ಮುದ್ರಿತವಾದುದೆಲ್ಲವೂ ನಿಜವಿರಬೇಕು ಎಂಬ ಸಿದ್ಧ ಮಾದರಿ ಇಂಟರ್ನೆಟ್‌ನಲ್ಲಿ ಬಂದಿರುವುದರಿಂದ ಅದು ನಿಜವಿರಬೇಕು ಎಂಬ ನಂಬಿಕೆಯಾಗಿ ಬದಲಾಯಿತು.

ಇಂಟರ್ನೆಟ್ ಕಂಪ್ಯೂಟರ್ ವೈರಸ್‌ಗಳನ್ನು ಅತಿವೇಗದಲ್ಲಿ ಹರಡುತ್ತದೆ. ಒಂದೂವರೆ ದಶಕದ ಹಿಂದೆ ಬಹಳ ವ್ಯಾಪಕವಾಗಿದ್ದ ‘ಐ ಲವ್ ಯೂ’ ಎಂಬ ವೈರಸ್‌ ಅನ್ನು ಒಂದು ರೂಪಕದಂತೆ ಬಳಸಿಕೊಂಡು ಬರೆದಿದ್ದ ಥಾಮಸ್ ಫ್ರೈಡ್ಮನ್ ಹೇಳಿದ ಮಾತುಗಳು ಈಗ ಅಕ್ಷರಶಃ ನಿಜವಾಗಿದೆ. ‘ಐ ಲವ್ ಯೂ ಎಂಬ ವೈರಸ್‌ ನಿವಾರಿಸಿಕೊಳ್ಳಲು ಅಗತ್ಯವಿರುವ ಪರಿಕರಗಳಿವೆ. ಆದರೆ ಇದಕ್ಕಿಂತ ಅಪಾಯಕಾರಿಯಾಗಿರುವ ಮತ್ತೊಂದು ವೈರಸ್ ಇದೆ. ಅದನ್ನು ನಾನು ‘ಐ ಹೇಟ್ ಯು’ ವೈರಸ್ ಎಂದು ಕರೆಯುತ್ತೇನೆ. ಅದು ಸ್ಯಾಟಲೈಟ್ ಟಿ.ವಿ. ಮತ್ತು ವೆಬ್‌ಸೈಟುಗಳ ಮೂಲಕ ಮನುಷ್ಯರ ಮನಸ್ಸಿನೊಳಕ್ಕೆ ಹೇಯ ಕಲ್ಪನೆಗಳನ್ನು ತುಂಬುತ್ತದೆ. ಇದನ್ನು ನಿವಾರಿಸಲು ಒಂದು ಸಾಫ್ಟ್‌ವೇರ್ ಸಾಕಾಗುವುದಿಲ್ಲ’.

ಜಗತ್ತು ಹಳ್ಳಿಯಾದರೆ ಆ ಹಳ್ಳಿಯ ಜನರೆಲ್ಲಾ ವಿಶ್ವ ಮಾನವರಾಗುತ್ತಾರೆಂಬುದು ಥಾಮಸ್ ಫ್ರೈಡ್ಮನ್ ತರಹದವರ ಕಲ್ಪನೆಯಾಗಿತ್ತು. ಆದರೆ ಈ ಹಳ್ಳಿ ಅಂಬೇಡ್ಕರ್ ಅವರು ಸಂಶಯಿಸಿದ ಹಳ್ಳಿಯಾಗಿ ನಮ್ಮೆದುರು ಅನಾವರಣಗೊಂಡಿರುವ ಈ ಸಂದರ್ಭದಲ್ಲಿ ಸೋತವರ ಪಟ್ಟಿಯಲ್ಲಿ ಶೋಷಿತರಂತೆಯೇ ಶೋಷಕರೂ ಇರುವುದು ಮತ್ತೊಂದು ವಿಚಿತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.