ADVERTISEMENT

ಹದಿನೈದು ಮಕ್ಕಳನ್ನು ಹಡೆದವಳ ನೆಪದಲ್ಲಿ....

ಸುದೇಶ ದೊಡ್ಡಪಾಳ್ಯ
Published 30 ಜೂನ್ 2015, 19:30 IST
Last Updated 30 ಜೂನ್ 2015, 19:30 IST

ಎರಡು ದಿನಗಳ ಹಿಂದೆಯಷ್ಟೇ ಹುಟ್ಟಿದ ಹಸು ಗೂಸು ಆಸ್ಪತ್ರೆಯಲ್ಲಿ ರಚ್ಚೆ ಹಿಡಿದಿತ್ತು. ದಾದಿ ದೂರದಿಂದಲೇ ‘ಸೇಠಾಣಿಬಾಯಿ ಕೂಸಿಗೆ ಮೊಲೆಯುಣಿಸು’ ಎಂದು ಕೂಗಿದರು. ಅಲ್ಲಿ ಸೇಠಾಣಿ ಬಾಯಿ ಇರಲೇ ಇಲ್ಲ! ಆಸ್ಪತ್ರೆ ಸಿಬ್ಬಂದಿ ದಿಗಿಲುಗೊಂಡರು.

ದಾಖಲೆ ಪತ್ರಗಳಲ್ಲಿ ನಮೂದಿಸಿದ್ದ ವಿವರ ಗಳನ್ನು ಹಿಡಿದು ಸೇಠಾಣಬಾಯಿ ವಾಸವಿದ್ದ ಬೀದರ್‌ ತಾಲ್ಲೂಕು ಸಿಂಧೋಲ ತಾಂಡಾಕ್ಕೆ ಹೋದರು. ಕತ್ತಲು ತುಂಬಿದ್ದ ಕೊಠಡಿಯ ಮೂಲೆಯಲ್ಲಿ ಸೇಠಾಣಿಬಾಯಿ ಅವಿತು ಕುಳಿತಿ ದ್ದರು. ಮತ್ತೆ ಆಸ್ಪತ್ರೆಗೆ ಬರುವಂತೆ ಸಿಬ್ಬಂದಿ ಕಳಕಳಿ ಯಿಂದ ಕೋರಿದರು. ಆಕೆ ಮತ್ತು ಕುಟುಂಬ ಒಪ್ಪಲೇ ಇಲ್ಲ.

ಈಕೆ ತಾನು ಹಡೆದ ಕೂಸನ್ನು  ಆಸ್ಪತ್ರೆಯಲ್ಲೇ ಬಿಟ್ಟು ಬರಲು ಕಾರಣವಿದೆ. ಹದಿನೈದು ದಿನಗಳ ಹಿಂದೆ ಈಕೆಗೆ ಹುಟ್ಟಿದ್ದು ಹದಿನೈದನೇ ಕೂಸು! ಅದೂ ಕೂಡ ಹೆಣ್ಣಾಗಿತ್ತು. ಈಕೆ ಹದಿನಾಲ್ಕು ಹೆಣ್ಣುಗಳು, ಒಂದು ಗಂಡುಕೂಸಿಗೆ ಜನ್ಮ ನೀಡಿ ದ್ದಾರೆ. ಅವುಗಳಲ್ಲಿ ಐದು ಹೆಣ್ಣು ಹಾಗೂ ಗಂಡು ಕೂಸು ಮೃತಪಟ್ಟಿವೆ. ಈಗ ಹುಟ್ಟಿದ ಕೂಸನ್ನು ಭಾಲ್ಕಿ ತಾಲ್ಲೂಕಿನ ಕರಡ್ಯಾಳದಲ್ಲಿ ಇರುವ ಚನ್ನ ಬಸವ ಗುರುಕುಲದ ಸ್ವದೇಶಿ ದತ್ತು ಕೇಂದ್ರಕ್ಕೆ ಕೊಡಲಾಗಿದೆ.

ಈಕೆ ಇಷ್ಟು ಮಕ್ಕಳನ್ನು ಹಡೆಯಲು ಇದ್ದ ಏಕೈಕ ಕಾರಣ ‘ಗಂಡು ಸಂತಾನ’. ಕುಟುಂಬಕ್ಕೆ ಒಂದಾ ದರೂ ಗಂಡು ಮಗು ಇರಲೇಬೇಕು ಎನ್ನುವ ಬಲವಾದ ನಂಬಿಕೆ.

ಈಗ ಸೇಠಾಣಿಬಾಯಿ ವಯಸ್ಸು ನಲವತ್ತೈದು. ಹದಿನೈದನೇ ವಯಸ್ಸಿಗೆ ಮದುವೆ, ಹದಿನಾರನೇ ವಯಸ್ಸಿಗೆ ಚೊಚ್ಚಲ ಮಗುವಿಗೆ ತಾಯಿ. ಮೊದಲು ಹೆಣ್ಣು ಕೂಸು ಹಡೆದಾಗ ಕುಟುಂಬದಲ್ಲಿ ಸಂಭ್ರಮ. ಆ ಕೂಸು ಇನ್ನೂ ಎದೆಹಾಲು ಕುಡಿಯುತ್ತಿ ದ್ದಂತೆಯೇ ಮತ್ತೆ ಗರ್ಭ ಧರಿಸಿದಳು. ಎರಡನೆ ಯದೂ ಹೆಣ್ಣು . ಆಗ ಇಡೀ ಕುಟುಂಬ ಒಂದೇ ಸ್ವರದಲ್ಲಿ ‘ಹೆಣ್ಣಾ...’ ಎಂದಿತು. ತಾಯಿಯ ಖುಷಿ ಮಾಯವಾಯಿತು.

ನಂತರದಲ್ಲಿ ಈಕೆ ವರ್ಷ ಇಲ್ಲವೇ ಒಂದೂ ವರೆ ವರ್ಷಕ್ಕೆ ಗರ್ಭ ಧರಿಸುವುದು, ಕೂಸು ಹಡೆ ಯುವುದು ವಾಡಿಕೆ ಆಯಿತು. ಪುಟ್ಟ ಜೋಪ ಡಿಯ ಒಂದು ಮೂಲೆಯಲ್ಲಿ ಸೇಠಾಣಬಾಯಿ, ಇನ್ನೊಂದು ಮೂಲೆಯಲ್ಲಿ ಮಗಳು ಬಾಣಂತನಕ್ಕೆ ಕುಳಿತುಕೊಳ್ಳುವ ವೈರುಧ್ಯವೂ ಕೆಲವು ವರ್ಷ ಗಳಿಂದ ಚಾಲ್ತಿಯಲ್ಲಿದೆ. ಇವರ ಪಾಲಿಗೆ ಬಾಣಂತನ ಎನ್ನುವುದು ಬರೀ ಶಬ್ದವಷ್ಟೆ.

ಬಂಜಾರ ಸಮುದಾಯದಲ್ಲಿ ಶಿಕ್ಷಣ ಪಡೆದ ವರ ಸಂಖ್ಯೆ ತೀರಾ ಕಡಿಮೆ. ತಾಂಡಾಗಳಲ್ಲೇ ಇವರ ವಾಸ. ಇನ್ನೂ ಹೆಚ್ಚಾಗಿ ನಾಗರಿಕ ಬದುಕಿಗೆ ತಮ್ಮನ್ನು ಒಡ್ಡಿಕೊಂಡಿಲ್ಲ. ಹೀಗಾಗಿ ಗಂಡು ಮಗುವಿಗೆ ಹಂಬಲಿಸಿ ಮಕ್ಕಳನ್ನು ಹಡೆಯುತ್ತಲೇ ಹೋಗುತ್ತಾರೆ.

ಮೂರು ವರ್ಷಗಳ ಹಿಂದಿನ ಮಾತು. ಕಲ ಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ತಾಂಡಾ ವೊಂದರಲ್ಲಿ ಮಹಿಳೆಯೊಬ್ಬಳು ಗಂಡು ಮಗು ವಿನ ಆಸೆಯಿಂದ ಏಳು ಹೆಣ್ಣು ಮಕ್ಕಳನ್ನು ಹಡೆ ದಳು. ಏಳನೆಯ ಮಗು ಇವರಿಗೆ ಬೇಡವಾಯಿತು. ಒಂದು ಮೂಲೆಯಲ್ಲಿ ಬಾಣಂತಿ, ಮತ್ತೊಂದು ಮೂಲೆ ಯಲ್ಲಿ ಅಜ್ಜಿ. ಮಧ್ಯದಲ್ಲಿ ಹಸುಗೂಸು. ಅದು ಹಸಿವಿನಿಂದ ಚೀರುತ್ತಲೇ ಇತ್ತು.

ವಿಷಯ ತಿಳಿದ ಆರೋಗ್ಯ ಇಲಾಖೆ ಸಿಬ್ಬಂದಿ ಅಲ್ಲಿಗೆ ಬಂದರು. ಕೂಸಿಗೆ ಹಾಲು ಕೊಡುವಂತೆ ಪರಿ ಪರಿಯಾಗಿ ಕೇಳಿದರೂ ತಾಯಿ ಒಪ್ಪಲಿಲ್ಲ. ‘ಕೂಸಿಗೆ ಹಾಲು ಕೊಟ್ಟರೆ ಬದುಕುಳಿಯುತ್ತದೆ. ಅದನ್ನು ಮುಂದೆ  ಸಾಕುವುದಾದರೂ ಹೇಗೆ’ ಎನ್ನುವುದು ಆ ಕುಟುಂಬದವರ ಪ್ರಶ್ನೆ.

‘ನಿಮಗೆ ಗಂಡುಕೂಸು ಅಷ್ಟೊಂದು ಮುಖ್ಯ ವೇ?’ ಎಂದು ಸೇಠಾಣಿಬಾಯಿಯನ್ನು ಕೇಳಿದರೆ, ‘ಹೆಣ್ಣು ಮಕ್ಕಳು ಮದುವೆಯಾಗಿ ಕೊಟ್ಟ ಮನೆಗೆ ಹೋಗುತ್ತವೆ. ಮುಂದೆ ನಮ್ಮನ್ನು ನೋಡಿಕೊಳ್ಳುವವರು ಯಾರು ಇರುವುದಿಲ್ಲ. ಸಲಹಲಿ, ಬಿಡಲಿ, ಗಂಡು ಬೇಕೇಬೇಕು. ಗಂಡು ಕೂಸು ಇಲ್ಲದಿದ್ದರೆ ನಾನು ಇದ್ದೂ ಇಲ್ಲದಂತೆ’ ಎಂದು ತನ್ನ ಅಸ್ತಿತ್ವದ ಪ್ರಶ್ನೆಯನ್ನು ಎತ್ತಿದಳು. ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಈಕೆಯ ಐದು ವರ್ಷದ ಮಗಳನ್ನು ಮಾತನಾ ಡಿಸಿ ದಾಗ ‘ನನಗೆ ತಮ್ಮ ಇಲ್ಲವಲ್ಲ ಅಂತ ಬೇಜಾರು’ ಎಂದಳು!

ನಮ್ಮ ಸಮಾಜದಲ್ಲಿ ಪುರುಷರಿಗೆ ಪ್ರಥಮ ಆದ್ಯತೆ. ನಂತರದ್ದು ಮಹಿಳೆಯರದು. ಕುಟುಂಬ ವನ್ನು ಮುನ್ನಡೆಸುವುದು, ಹೊರಗೆ ದುಡಿಯು ವುದು, ಸಂಪಾದಿಸುವುದು, ಪೋಷಿಸುವುದು ಪುರುಷರ ಕೆಲಸ. ಮನೆಯಲ್ಲಿದ್ದು ಮಕ್ಕಳನ್ನು ಹಡೆ ಯುವುದು, ಪೋಷಿಸುವುದು, ಪುರುಷರ ಬೇಕು, ಬೇಡಗಳನ್ನು ಪೂರೈಸುವುದು ಮಹಿಳೆಯರ ಕೆಲಸ ಎನ್ನುವ ಭಾವನೆ ಸಾವಿರಾರು ವರ್ಷಗಳಿಂದ ಬೇರೂರಿದೆ.

ಮಕ್ಕಳೇ ಇಲ್ಲದ ಮಹಿಳೆಗಿಂತ ‘ಗಂಡು ಹಡೆಯದ’ ಮಹಿಳೆಗೆ ಕುಟುಂಬದಲ್ಲಿ ಹೆಚ್ಚು ನಿಂದನೆ, ಅವಮಾನ, ಕಿರುಕುಳ.

ಜೀವ ವಿಜ್ಞಾನದ ಪ್ರಕಾರ ಭ್ರೂಣ ಬೆಳೆಯಲು ಗಂಡಿನ ವೀರ್ಯಾಣು ಹಾಗೂ ಹೆಣ್ಣಿನ ಅಂಡಾಣು ಬೇಕು. ಗಂಡಿನಲ್ಲಿ 'ಎಕ್ಸ್' ಮತ್ತು 'ವೈ' ಎಂಬ ಭಿನ್ನ ಕ್ರೋಮೊಸೋಮ್‌ಗಳಿದ್ದರೆ, ಹೆಣ್ಣಿನ ಅಂಡಾಣು ವಿನಲ್ಲಿ ಎರಡೂ ಕ್ರೋಮೊಸೋಮ್ 'ಎಕ್ಸ್' ಆಗಿರುತ್ತವೆ. ಭ್ರೂಣ ಕಟ್ಟುವ ಸಮಯದಲ್ಲಿ 'ಎಕ್ಸ್' ಮತ್ತು 'ಎಕ್ಸ್' ಸೇರಿದರೆ ಹೆಣ್ಣಾಗುತ್ತದೆ. ಹಾಗೆಯೇ 'ಎಕ್ಸ್' ಹಾಗೂ 'ವೈ' ಸೇರಿದರೆ  ಗಂಡಾಗುತ್ತದೆ. ಆದರೆ ಪುರುಷ ಸಮಾಜವನ್ನು ಒಪ್ಪಿಕೊಂಡವರು, ಪೋಷಿಸುವವರು ಮಹಿಳೆ ಹೆಣ್ಣು ಹೆತ್ತರೆ ಅದಕ್ಕೆ ಆಕೆಯನ್ನು ಹಳಿಯುತ್ತಾರೆ! ಇದರಲ್ಲಿ ಪುರುಷನೂ ಪಾಲುದಾರ ಎನ್ನುವುದನ್ನು  ಮರೆಯುತ್ತಾರೆ.

ಸೇಠಾಣಿಬಾಯಿ ಮತ್ತು ಕುಟುಂಬಕ್ಕೆ ಇಂಥ ಸಂಗತಿ ಗೊತ್ತಿಲ್ಲ. ಆದ್ದರಿಂದಲೇ ಈಕೆಯ ಪತಿ ಹೆಣ್ಣು ಮಗು ಹುಟ್ಟಿದ ಸುದ್ದಿ ಕೇಳಿ ಮಾತು ಬಿಟ್ಟ.

ಸೇಠಾಣಿಬಾಯಿ ಅನಕ್ಷರಸ್ಥೆ, ಬಡವಿ. ಈಕೆಗೆ ತನಗೆ ಬೇಡವಾದ ಹೆಣ್ಣು ಭ್ರೂಣವನ್ನು ಗರ್ಭ ದಲ್ಲೇ ಹೊಸಕಿ ಹಾಕುವುದು ಗೊತ್ತಿಲ್ಲ. ಆದ್ದ ರಿಂದಲೇ ‘ಗಂಡು ಮಗು’ ನಿರೀಕ್ಷೆಯಲ್ಲಿ ಮಕ್ಕಳನ್ನು ಹೆರುತ್ತಲೇ ಇದ್ದಳು. ಆದರೆ, ಕಲಿತವರು, ಹಣ ವಂತರು ತುಂಬಾ ನಯವಾಗಿ, ಗುಟ್ಟಾಗಿ ಹೆಣ್ಣು ಭ್ರೂಣವನ್ನು ಯಾವುದೋ ಹೈಟೆಕ್‌ ಆಸ್ಪತ್ರೆಯಲ್ಲಿ ತೊಳೆಸಿ, ಚರಂಡಿ ನೀರಲ್ಲಿ ಹರಿದು ಹೋಗುವಂತೆ ಮಾಡಿಬಿಡುತ್ತಾರೆ. ಸೇಠಾಣಿಬಾಯಿ ಅಂಥವರ ಸ್ಥಿತಿಯನ್ನು ಕಂಡು ನನಗೆ ಮರುಕ ಉಂಟಾಗುತ್ತಿದೆ. ಅವರಿಗೆ ತಮ್ಮ ಭಾವನೆ ಮತ್ತು ದೇಹದ ಮೇಲೆ ಯಾವುದೇ ಹಕ್ಕಿಲ್ಲ.

‘ದೇವರೇ ಗಂಡು ಮಗು ಕೊಡದಿದ್ದರೆ ಅವರೇನು ತಾನೆ ಮಾಡುತ್ತಾರೆ, ಪಾಪ’ ಎನ್ನುವ ಅಂಗನವಾಡಿ ಸಹಾಯಕಿ ಚಾವಳಾಬಾಯಿ ಒಂದು ಕಡೆ. ‘ಎರಡೇ ಮಕ್ಕಳು ಸಾಕು ಎನ್ನುವ ಅರಿವು ಮೂಡಿಸಬೇಕು. ಇಂದಿರಾಗಾಂಧಿ, ಕಲ್ಪನಾ ಚಾವ್ಲಾ ಅಂಥವರ ಸಾಧನೆಯನ್ನು ನೋಡಿಯೂ ಗಂಡು ಮಗುವಿನ ಮೋಹದಲ್ಲಿ ಬೀಳುವುದು ಮೂರ್ಖತನವಾಗುತ್ತದೆ’ ಎನ್ನುವ ತಾಂಡಾದ ನಿವಾಸಿ, ಸ್ನಾತಕೋತ್ತರ ಪದವೀಧರ ಗೋಪಾಲ ರಾಠೋಡ ಮತ್ತೊಂದು ಕಡೆಇದ್ದಾರೆ.

ಲಂಬಾಣಿಗಳು ಹೆಣ್ಣು ಕೂಸುಗಳಿಗೆ ಹಾಲು ಣಿಸದೆ ಸಾಯಿಸುತ್ತಾರೆ, ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಾರೆ ಎನ್ನುವ ಗುರುತರ ಆರೋಪಗಳಿವೆ. ಇಂಥ ಆರೋಪದಿಂದ ಲಂಬಾಣಿ ಸಮಾಜದ ವಿದ್ಯಾವಂತರು, ಉದ್ಯೋ ಗಸ್ಥರು, ಪ್ರಜ್ಞಾವಂತರು ಅವಮಾನದಿಂದ ಕುಗ್ಗಿ ಹೋಗುತ್ತಿರುವುದೂ ನಿಜ. ಆದರೆ, ಇವರೆಲ್ಲರೂ ಸ್ವಲ್ಪ ಸಾವಧಾನದಿಂದ ವಿಚಾರ ಮಾಡಬೇಕು. ಗಾಯವನ್ನು ಮುಚ್ಚಿಟ್ಟರೆ ಅದು ಮುಂದೆ ರಣಗಾಯವಾಗಿ ಜೀವಕ್ಕೆ ಕುತ್ತು ತರಬಹುದು. ಆದ್ದರಿಂದ ಅದನ್ನು ಆರಂಭದಲ್ಲಿ ಗುಣಪಡಿಸಿಕೊಳ್ಳುವುದು ಒಳ್ಳೆಯದು.

ಇಲ್ಲಿ ನನಗೆ ಅಂಗನವಾಡಿ ಸಹಾಯಕಿ, ಅನಕ್ಷರಸ್ಥೆ ಚಾವಳಾಬಾಯಿ ಲಂಬಾಣಿ ಸಮು ದಾಯದಲ್ಲಿ ಕತ್ತಲೆಯಂತೆಯೂ, ವಿದ್ಯಾವಂತ ಗೋಪಾಲ ರಾಠೋಡ ಭರವಸೆಯ ಬೆಳಕಿ ನಂತೆಯೂ ಗೋಚರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT