ADVERTISEMENT

ಅತ್ಯುತ್ತಮವೀ ಸ್ಮಾರ್ಟ್‌ಫೋನ್

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 8:57 IST
Last Updated 16 ಜೂನ್ 2018, 8:57 IST

ಗಣಕಗಳಲ್ಲಿ ಬಳಸುವ ಮದರ್‌ಬೋರ್ಡ್‌ ತಯಾರಿಕೆಯ ಮೂಲಕ ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಏಸಸ್ ಕಂಪೆನಿ ತುಂಬ ದೂರ ಸಾಗಿ ಬಂದಿದೆ. ಮದರ್‌ ಬೋರ್ಡ್‌ಗಳಿಂದ ಮುಂದುವರೆದು ಹಲವು ನಮೂನೆಯ ಲ್ಯಾಪ್‌ಟಾಪ್, 2-ಇನ್-1, ಟ್ಯಾಬ್ಲೆಟ್ ಜೊತೆ ಸ್ಮಾರ್ಟ್‌ಫೋನ್‌ಗಳನ್ನೂ ಈ ಕಂಪೆನಿ ತಯಾರಿಸುತ್ತಿದೆ.

ಏಸಸ್ ಕಂಪೆನಿಯ ಉತ್ಪನ್ನಗಳು ನೀಡುವ ಹಣಕ್ಕೆ ಮೋಸವಿಲ್ಲ ಎನ್ನುವಂತಿವೆ. ಈ ಕಂಪೆನಿ ಇತ್ತೀಚೆಗೆ ಝೆನ್‌ಫೋನ್‌ 2 (Asus ZenFone 2) ಎಂಬ ಹೆಸರಿನಲ್ಲಿ ನಾಲ್ಕು ಫೋನ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಇದು ನಮ್ಮ ಈ ಸಲದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು
1.8/2.3 ಗಿಗಾಹರ್ಟ್ಸ್ ವೇಗದ 4 ಹೃದಯಗಳ ಇಂಟೆಲ್ ಆಟಂ ಪ್ರೊಸೆಸರ್ (Z3560/Z3580), 2 ಅಥವಾ 4 ಗಿಗಾಬೈಟ್ ಪ್ರಾಥಮಿಕ ಮೆಮೊರಿ, 16, 32 ಅಥವಾ 64 ಗಿಗಾಬೈಟ್ ಮೆಮೊರಿ, 64 ಗಿಗಾಬೈಟ್ ತನಕ ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, ಯುಎಸ್‌ಬಿ ಓಟಿಜಿ ಸೌಲಭ್ಯ, 2ಜಿ ಮತ್ತು 2ಜಿ/3ಜಿ/4ಜಿ ಎರಡು ಸಿಮ್, 5.5 ಇಂಚು ಗಾತ್ರದ 1920 x 1080 ಪಿಕ್ಸೆಲ್ ರೆಸೊಲೂಶನ್‌ನ ಐಪಿಎಸ್  ಸ್ಪರ್ಶಸಂವೇದಿ ಪರದೆ, ಗೊರಿಲ್ಲ-3 ಗಾಜು, 13  ಮೆಗಾಪಿಕ್ಸೆಲ್ ರೆಸೊಲೂಶನ್ನ ಪ್ರಾಥಮಿಕ ಮತ್ತು 5 ಮೆಗಾಪಿಕ್ಸೆಲ್‌ನ ಇನ್ನೊಂದು (ಸ್ವಂತೀ) ಕ್ಯಾಮೆರಾಗಳು,  ಪ್ರಾಥಮಿಕ ಕ್ಯಾಮೆರಾಕ್ಕೆ ಫ್ಲಾಶ್, 77.2 x 152.5 x 3.9 x 10.9 ಮಿ.ಮೀ. ಗಾತ್ರ, 170 ಗ್ರಾಂ ತೂಕ, 3000 mAh ಶಕ್ತಿಯ ಬ್ಯಾಟರಿ, ಎಫ್ಎಂ ರೇಡಿಯೊ, ಆಂಡ್ರಾಯಿಡ್ 5.0, ಇತ್ಯಾದಿ. ಮೆಮೊರಿ ಮತ್ತು ಬಳಸಿದ ಪ್ರೊಸೆಸರ್‌ಗೆ ಹೊಂದಿಕೊಂಡು ಬೆಲೆ ₹13,000 - 20,000. 

ಫೋನಿನ ಹಿಂಭಾಗ ಬಾಗಿದ್ದು, ತಲೆದಿಂಬಿನಂತಿದೆ. ಬದಿಗಳಲ್ಲಿ ಇದರ ದಪ್ಪ ಸುಮಾರು 4 ಮಿ.ಮೀ. ಇದ್ದು ಮಧ್ಯ ಭಾಗದಲ್ಲಿ ಸುಮಾರು 11 ಮಿ.ಮೀ. ಇದೆ. ಐದೂವರೆ ಇಂಚು ಗಾತ್ರದ ಪರದೆ ಇರುವುದರಿಂದ ಸ್ವಲ್ಪ ದೊಡ್ಡ ಫೋನ್ ಎಂದೇ ಹೇಳಬಹುದು. ಹಿಂದಿನ ಕವಚ ನಯವಾಗಿಲ್ಲ. ಆದುದರಿಂದ ಕೈಯಿಂದ ಜಾರಿ ಬೀಳುವ ಭಯವಿಲ್ಲ. ಮೇಲ್ಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್‌ ಕಿಂಡಿ ಮತ್ತು ಆನ್/ಆಫ್ ಬಟನ್‌ಗಳಿವೆ.

ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿ ಇದೆ. ಇದರ ವಾಲ್ಯೂಮ್ ಬಟನ್‌ ಮಾತ್ರ ಫೋನಿನ ಹಿಂಭಾಗದಲ್ಲಿದೆ. ಎಲ್‌ಜಿ ಜಿ2 ಫೋನಿನಲ್ಲೂ ಇದೇ ರೀತಿ ವಾಲ್ಯೂಮ್ ಬಟನ್ ಹಿಂಭಾಗದಲ್ಲಿದೆ. ಕೈಯಲ್ಲಿ ಹಿಡಿದು ಮಾತನಾಡುತ್ತಿರುವಾಗ ಈ ಬಟನ್‌ ಬಳಸಿ ವಾಲ್ಯೂಮ್ ಹೆಚ್ಚು ಕಡಿಮೆ ಮಾಡುವುದು ತುಂಬ ಸುಲಭ.

ನನಗಂತೂ ಈ ಸೌಲಭ್ಯ ತುಂಬ ಇಷ್ಟವಾಯಿತು. ಒನ್‌ ಪ್ಲಸ್‌ ಫೋನಿನಲ್ಲಿರುವಂತೆ ಇದರಲ್ಲೂ ಫೋನನ್ನು ನಿದ್ದೆಯಿಂದ ಎಬ್ಬಿಸಲು ಪರದೆಯ ಮೇಲೆ ಎರಡು ಸಲ ಕುಟ್ಟಿದರೆ ಸಾಕು. ಅಂದರೆ ಇದರ ಆನ್/ಆಫ್ ಬಟನ್‌ನ ಬಳಕೆ ಕಡಿಮೆ ಎಂದು ಹೇಳಬಹುದು. ದೇಹ ಗಡುಸಾಗಿಲ್ಲ ಎಂಬುದೊಂದು ಕೊರತೆ ಇದೆ.  

ಏಸಸ್ ಕಂಪೆನಿ ಇಂಟೆಲ್ ಮತ್ತು ಮೈಕ್ರೋಸಾಫ್ಟ್ ಜೊತೆ ಉತ್ತಮ ಸ್ನೇಹ ಹೊಂದಿದೆ. ಏಸಸ್ ತಯಾರಿಸುವ ಮದರ್‌ಬೋರ್ಡ್‌ಗಳಲ್ಲಿರುವುದು ಇಂಟೆಲ್ ಪ್ರೊಸೆಸರ್‌ಗಳೇ. ಅವರ ಲ್ಯಾಪ್‌ಟಾಪ್‌ಗಳಲ್ಲಿರುವುದು ಮೈಕ್ರೋಸಾಫ್ಟ್‌ ವಿಂಡೋಸ್. ಝೆನ್‌ಫೋನ್‌ 2 ನಲ್ಲಿರುವುದು ಇಂಟೆಲ್ ಆಟಂ ಪ್ರೊಸೆಸರ್. ಇದು ತುಂಬ ಶಕ್ತಿಶಾಲಿ ಪ್ರೊಸೆಸರ್. 2-ಇನ್-1ಗಳಲ್ಲಿ ಇವನ್ನೇ ಬಳಸುವುದು.

ಅಂದರೆ ಹೆಸರಿಗೆ ಫೋನ್ ಆದರೂ ನಿಮ್ಮ ಕೈಯಲ್ಲಿರುವುದು ಒಂದು ಮಟ್ಟಿನ ಶಕ್ತಿಶಾಲಿಯಾದ ಚಿಕ್ಕ ಲ್ಯಾಪ್‌ಟಾಪ್‌ ಎಂದೇ ಹೇಳಬಹುದು. ಏಸಸ್ ಕಂಪೆನಿ ಮೈಕ್ರೋಸಾಫ್ಟ್ ಜೊತೆ ಉತ್ತಮ ಸ್ನೇಹ ಹೊಂದಿರುವಾಗ ಅವರ ಸ್ಮಾರ್ಟ್‌ಫೋನ್‌ನಲ್ಲಿ ವಿಂಡೋಸ್‌ಫೋನ್ ಕಾರ್ಯಾಚರಣ ವ್ಯವಸ್ಥೆಯ ಬದಲಿಗೆ ಆಂಡ್ರಾಯಿಡ್ ಇರುವುದು ಮಾತ್ರ ಸ್ವಲ್ಪ ಆಶ್ಚರ್ಯಕರ.

ಮಾರುಕಟ್ಟೆಯಲ್ಲಿ ಆಂಡ್ರಾಯಿಡ್ ಮೊದಲ ಸ್ಥಾನದಲ್ಲಿರುವುದರಿಂದ ಗೆದ್ದೆತ್ತಿನ ಬಾಲ ಹಿಡಿಯೋಣ ಎಂದು ಏಸಸ್ ಕಂಪೆನಿ ಭಾವಿಸಿದಂತಿದೆ. ಏಸಸ್ ಝೆನ್‌ಫೋನಿನಲ್ಲಿರುವುದು ಶಕ್ತಿಶಾಲಿಯಾದ ಇಂಟೆಲ್ ಪ್ರೊಸೆಸರ್ ಎಂದು ಹೇಳಿದೆನಲ್ಲ? ಈ ಶಕ್ತಿಶಾಲಿಯಾದ ಪ್ರೊಸೆಸರ್ ಮತ್ತು ಜೊತೆಗೆ ಗ್ರಾಫಿಕ್ಸ್‌ಗೆಂದೇ  ಅಧಿಕ ಪ್ರೊಸೆಸರ್ ಇರುವುದರಿಂದ ಇದರ ಕೆಲಸದ ವೇಗ ಅತ್ಯುತ್ತಮವಾಗಿದೆ.

ಎಲ್ಲ ನಮೂನೆಯ ಆಟಗಳನ್ನು ಆಡುವ ಅನುಭವ ಅದರಲ್ಲೂ ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮಗಳ ಆಟ ಆಡುವ ಅನುಭವ ನಿಜಕ್ಕೂ ಚೆನ್ನಾಗಿದೆ. ಅಸ್ಫಾಲ್ಟ್ 8 ಆಡಿದರೆ ನಿಮಗೇ ಗೊತ್ತಾಗುತ್ತದೆ. ವಿಡಿಯೊ ವೀಕ್ಷಣೆಯ ಅನುಭವ ಚೆನ್ನಾಗಿದೆ. ಇದು ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊಗಳನ್ನೂ ಯಾವುದೇ ಅಡೆತಡೆ ಯಿಲ್ಲದೆ ಪ್ಲೇ ಮಾಡುತ್ತದೆ. ಈ ಫೋನಿನ ಆಡಿಯೊ ಇಂಜಿನ್ ಕೂಡ ಉತ್ತಮವಾಗಿದೆ.

ಫೋನಿನ ಜೊತೆ ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿರುವ ಯಾವುದಾದರೂ ಉತ್ತಮ ಇಯರ್‌ಫೋನ್ ಜೋಡಿಸಿದರೆ ಉತ್ತಮ ಸಂಗೀತ ಆಲಿಸುವ ಅನುಭವ ನಿಮ್ಮದಾಗುವುದು. ಚೆನ್ನಾಗಿರುವ ಆಡಿಯೊ ಇಂಜಿನ್, ಉತ್ತಮ ಗುಣಮಟ್ಟದ ಹೈಡೆಫಿನಿಶನ್ ಪರದೆ, ಶಕ್ತಿಶಾಲಿಯಾದ ಪ್ರೊಸೆಸರ್ ಇವೆಲ್ಲ ಜೊತೆಗೂಡಿ ನಿಮಗೆ ಉತ್ತಮ ಅನುಭವ ನೀಡುತ್ತವೆ. ಈ ಫೋನಿನಲ್ಲಿರುವ ಪ್ರಾಥಮಿಕ ಕ್ಯಾಮೆರಾ 13 ಮೆಗಾಪಿಕ್ಸೆಲ್‌ನದು.

ಎರಡು ಎಲ್ಇಡಿಗಳ ಫ್ಲಾಶ್ ಇದೆ. ಕ್ಯಾಮೆರಾದ ಗುಣಮಟ್ಟ ಚೆನ್ನಾಗಿದೆ. ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೊ ಮೂಡಿಬಂತು. ವಿಡಿಯೊ ಚಿತ್ರೀಕರಣವೂ ತೃಪ್ತಿದಾಯಕವಾಗಿದೆ. ಆದರೆ 4k ವಿಡಿಯೊ ಚಿತ್ರೀಕರಣ ಇಲ್ಲ. ಹೈಡೆಫಿನಿಶನ್ ವಿಡಿಯೊ ಚಿತ್ರೀಕರಣ ಮಾತ್ರ ಸಾಧ್ಯ. ಒನ್‌ಪ್ಲಸ್ ಫೋನಿನಲ್ಲಿ 4k ವಿಡಿಯೊ ಚಿತ್ರೀಕರಣ ಸಾಧ್ಯವಿದೆ.

ಆಂಡ್ರಾಯಿಡ್ 5.0 ಆಧಾರಿತ ಫೋನ್ ಆಗಿರುವುದ ರಿಂದ ಕನ್ನಡದ ತೋರುವಿಕೆ (ರೆಂಡರಿಂಗ್) ಸರಿಯಾಗಿದೆ. ಅಷ್ಟು ಮಾತ್ರವಲ್ಲ. ಈ ಫೋನಿನಲ್ಲಿ ಕನ್ನಡದ ಸಂಪೂರ್ಣ ಯೂಸರ್ ಇಂಟರ್‌ಫೇಸ್‌ ಕೂಡ ಇದೆ. ಜೊತೆಗೆ ಅವರದೇ ಕೀಲಿಮಣೆಯೂ ಇದೆ. ಬ್ಯಾಟರಿಯ ವಿಷಯದಲ್ಲಿ ಮಾತ್ರ ಇದರ ಕ್ಷಮತೆ ಅಷ್ಟೇನೂ ತೃಪ್ತಿದಾಯಕವಾಗಿಲ್ಲ. ವೇಗವಾಗಿ ಚಾರ್ಜ್ ಏನೋ ಆಗುತ್ತದೆ. ಆದರೆ ಜೊತೆಗೆ ವೇಗವಾಗಿ ಖಾಲಿಯೂ ಆಗುತ್ತದೆ.

ವಾರದ ಆಪ್
ಸ್ಕೈರೋ ವಾಯ್ಸ್ ರೆಕಾರ್ಡರ್

ಆಂಡ್ರಾಯಿಡ್ ಕಾರ್ಯಾಚರಣ ವ್ಯವಸ್ಥೆಯಲ್ಲಿ ಕೆಲಸ ಮಾಡುವ ರೆಕಾರ್ಡಿಂಗ್ ಕಿರುತಂತ್ರಾಂಶಗಳು ಹಲವಾರಿವೆ. ಆದರೆ ಈ ಸ್ಕೈರೋ ವಾಯ್ಸ್ ರೆಕಾರ್ಡರ್ (Skyro Voice Recorder) ಇವುಗಳಲ್ಲೆಲ್ಲ ಅತ್ಯುತ್ತಮ ವಾದುದು ಎನ್ನಬಹುದು. ಇದನ್ನು ಬಳಸಿ ಧ್ವನಿಮುದ್ರಣ (ರೆಕಾರ್ಡಿಂಗ್) ಏನೋ ಮಾಡಿಕೊಳ್ಳಬಹುದು.


ಜೊತೆಗೆ ಮಧ್ಯ ಮಧ್ಯ ಫೋಟೊಗಳನ್ನೂ ತೆಗೆದು ಅದರ ಜೊತೆ ಸೇರಿಸಿಟ್ಟುಕೊಳ್ಳಬಹುದು. ಯಾವುದಾದರೂ ಸಭೆ, ಭಾಷಣ ರೆಕಾರ್ಡಿಂಗ್ ಮಾಡಿಕೊಳ್ಳುವಾಗ ಮಧ್ಯೆ ಮಧ್ಯೆ ಮಾತನಾಡುವವರ ಫೋಟೊ ಅಥವಾ ಅವರ ಸ್ಲೈಡ್‌ಗಳ ಫೋಟೊ ತೆಗೆದು ಒಟ್ಟಿಗೆ ಇಟ್ಟುಕೊಳ್ಳಲು ಇದು ಉತ್ತಮ ಸೌಲಭ್ಯ. ಇದರಲ್ಲಿ ಇನ್ನೂ ಹಲವಾರು ಉಪಯುಕ್ತ ಸೌಲಭ್ಯಗಳಿವೆ.

ಗ್ಯಾಜೆಟ್ ಸುದ್ದಿ
ಸ್ಯಾಮ್‌ಸಂಗ್‌ ನಿಂದ ಹೊಸ ಎಸ್ಎಸ್‌ಡಿ ಹಾರ್ಡ್‌ಡಿಸ್ಕ್‌

ಎಸ್ಎಸ್‌ಡಿ (solid state disk) ಹಾರ್ಡ್‌ಡಿಸ್ಕ್‌ಗಳು ಮಾರುಕಟ್ಟೆಯಲ್ಲಿ ಹೊಸತೇನೂ ಅಲ್ಲ. ಸ್ಯಾಮ್‌ಸಂಗ್‌ನವರು ಈಗ ಮಾರುಕಟ್ಟೆಗೆ ತಂದಿರುವ ಎಸ್ಎಸ್‌ಡಿ ಹಾರ್ಡ್‌ಡಿಸ್ಕ್‌ಗಳ ವೈಶಿಷ್ಟ್ಯಗಳು - ತುಂಬ ಚಿಕ್ಕದಾಗಿದ್ದು, ಕ್ರೆಡಿಟ್ ಕಾರ್ಡ್‌ನ ಗಾತ್ರದವು, ಕಡಿಮೆ ತೂಕ, ಅತಿ ವೇಗವಾಗಿ ಮಾಹಿತಿಯ ವರ್ಗಾವಣೆ ಸಾಧ್ಯ, ಇತ್ಯಾದಿ.

ಈ ಡ್ರೈವ್‌ಗಳು 250, 500 ಗಿಗಾಬೈಟ್ ಮತ್ತು 1 ಟೆರ್ರಾಬೈಟ್ ಸಂಗ್ರಹ ಶಕ್ತಿಗಳಲ್ಲಿ ಲಭ್ಯ. ಈ ಡ್ರೈವ್‌ಗಳ ಮಾಹಿತಿ ವರ್ಗಾವಣೆಯ ವೇಗ ಸೆಕೆಂಡಿಗೆ 450 ಮೆಗಾಬೈಟ್‌ಗಳ ತನಕ ಇರುತ್ತದೆ. ಇದು ಮಾಮೂಲಿ ಹಾರ್ಡ್‌ಡಿಸ್ಕ್‌ಗಳ ವೇಗಕ್ಕಿಂತ ತುಂಬ ಜಾಸ್ತಿ. ಇವುಗಳ ತೂಕ ಸುಮಾರು 30 ಗ್ರಾಂ ಮಾತ್ರ. 1 ಟೆರ್ರಾಬೈಟ್ ಸಂಗ್ರಹ ಶಕ್ತಿಯ ಎಸ್ಎಸ್‌ಡಿ ಡ್ರೈವ್‌ನ ಬೆಲೆ ಸುಮಾರು ₹ 35,000.

ಗ್ಯಾಜೆಟ್ ತರ್ಲೆ
ಆಂಡ್ರಾಯಿಡ್ ಕಾರ್ಯಾಚರಣ ವ್ಯವಸ್ಥೆಯ ಆವೃತ್ತಿಗಳಿಗೆ ತಿನಿಸುಗಳ ಹೆಸರಿರುವುದು ನಿಮಗೆ ಗೊತ್ತೇ ಇರಬಹುದು. ಇದು ತನಕದ ಕೆಲವು ಆವೃತ್ತಿಗಳ ಹೆಸರುಗಳು - ಐಸ್ಕ್ರೀಂ, ಜೆಲ್ಲಿಬೀನ್, ಕಿಟ್‌ಕ್ಯಾಟ್, ಲಾಲಿಪಾಪ್, ಇತ್ಯಾದಿ. ಮುಂದಿನ ಆವೃತ್ತಿಯ ಹೆಸರು ಇಂಗ್ಲಿಷಿನ M ಅಕ್ಷರದಿಂದ ಪ್ರಾರಂಭವಾಗಬೇಕು. ಎಂದಿನಂತೆ ಅದೊಂದು ತಿನಿಸಿನ ಹೆಸರಾಗಿರತಕ್ಕದ್ದು. ನಾವೂ ಒಂದಿಷ್ಟು ಹೆಸರುಗಳನ್ನು ಸೂಚಿಸೋಣ. ನಾವು ಸೂಚಿಸುವ ಹೆಸರುಗಳು - ಮೈಸೂರುಪಾಕ್, ಮಂಡಿಗೆ, ಮುದ್ದೆ (ರಾಗಿ), ಮಸಾಲೆದೋಸೆ, ಮೋದಕ.

ಗ್ಯಾಜೆಟ್ ಸಲಹೆ
ವಿಶಾಲ್ ಶೆಟ್ಟಿ ಅವರ ಪ್ರಶ್ನೆ: ನೀವು ಶಿಯೋಮಿ ಮತ್ತು ಎಪಿಸಿ ಅವರ ಪವರ್‌ಬ್ಯಾಂಕ್‌ಗಳ ವಿಮರ್ಶೆ ಬರೆದದ್ದು ಓದಿದೆ. ಸೋನಿ ಮತ್ತು ಸ್ಯಾಮ್‌ಸಂಗ್‌ನವರ ಪವರ್‌ಬ್ಯಾಂಕ್‌ಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉ: ಎರಡೂ ಚೆನ್ನಾಗಿವೆ. ಸ್ಯಾಮ್‌ಸಂಗ್‌ ಪವರ್‌ಬ್ಯಾಂಕ್‌ನ ವಿಮರ್ಶೆ ಇದೇ ಅಂಕಣದಲ್ಲಿ ಪ್ರಕಟವಾಗಿತ್ತು. ನಮ್ಮ ಮನೆಯಲ್ಲಿ ಸೋನಿ ಕಂಪೆನಿಯ ಒಂದು ಪವರ್‌ಬ್ಯಾಂಕ್‌  ಇದೆ. ಅದೂ ಚೆನ್ನಾಗಿದೆ.
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.