ADVERTISEMENT

ಕಡಿಮೆ ಬೆಲೆಗೆ ಉತ್ತಮ ಫೋನ್

ಯು.ಬಿ ಪವನಜ
Published 5 ಜೂನ್ 2013, 19:59 IST
Last Updated 5 ಜೂನ್ 2013, 19:59 IST
ಬ್ರೌಸರ್‌ನಲ್ಲಿ ಕನ್ನಡ
ಬ್ರೌಸರ್‌ನಲ್ಲಿ ಕನ್ನಡ   

ಮೊಬೈಲ್ ಫೋನ್‌ಗಳು ಕೇವಲ ಫೋನ್‌ಗಳಾಗಿ ಉಳಿದಿಲ್ಲ. ಅವು ಸ್ಮಾರ್ಟ್‌ಫೋನ್‌ಗಳಾಗಿ ಪರಿವರ್ತಿತವಾಗಿವೆ.

ಸ್ಮಾರ್ಟ್‌ಫೋನ್‌ಗಳಲ್ಲೂ ಹಲವು ವಿಧ. ಹಲವು ಕಂಪೆನಿಗಳು ಈ ಮಾರುಕಟ್ಟೆಯಲ್ಲಿ ಸ್ಪರ್ಧಿಸುತ್ತಿವೆ. ಅವುಗಳಲ್ಲಿ ಪ್ರಮುಖವಾಗಿ ಎರಡು ವಿಧ. ಮೊದಲನೆಯದು ಮೇಲ್ದರ್ಜೆಯವು ಅನ್ನಿಸಿಕೊಳ್ಳುವವು. ಸ್ಯಾಮ್‌ಸಂಗ್, ಆಪಲ್, ಎಚ್‌ಟಿಸಿ, ಎಲ್‌ಜಿ, ನೋಕಿಯ, ಇತ್ಯಾದಿ ಇಲ್ಲಿ ಒಬ್ಬರಿಗೊಬ್ಬರು ಪೈಪೋಟಿ ನಡೆಸುತ್ತಿದ್ದಾರೆ. ಕೆಳದರ್ಜೆಯವು ಅಂದರೆ ಕಡಿಮೆ ಬೆಲೆಯವು ಅನ್ನಿಸಿಕೊಳ್ಳುವವುಗಳಲ್ಲಿ ಪ್ರಮುಖವಾದವು ಮೈಕ್ರೋಮಾಕ್ಸ್ ಮತ್ತು ಕಾರ್ಬನ್. ಕಾರ್ಬನ್ ಎ30 ಸ್ಮಾರ್ಟ್‌ಫೋನ್ ಅನ್ನು ಇದೇ ಅಂಕಣದಲ್ಲಿ ವಿಮರ್ಶಿಸಲಾಗಿತ್ತು. ಈಗ ಅದೇ ಕಂಪೆನಿಯ ಮತ್ತೊಂದು ಕಡಿಮೆ ಬೆಲೆಯ ಆದರೆ ಕೊಟ್ಟ ಹಣಕ್ಕೆ ಪರವಾಗಿಲ್ಲ ಅನ್ನಬಹುದಾದ ಸ್ಮಾರ್ಟ್‌ಫೋನ್ ಎಸ್5 ಟೈಟಾನಿಯಂ (Karbonn S5 Titanium) ನಮ್ಮ ಈ ವಾರದ ಗ್ಯಾಜೆಟ್. 

ಗುಣವೈಶಿಷ್ಟ್ಯಗಳು
1.2 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ (quad-core) ಪ್ರೋಸೆಸರ್, 5 ಇಂಚು ಗಾತ್ರದ 540x960 ಪಿಕ್ಸೆಲ್ ರೆಸೊಲೂಶನ್‌ನ ಐಪಿಎಸ್ ಸ್ಪರ್ಶಸಂವೇದಿ ಪರದೆ, 2ಜಿ ಸಂಪರ್ಕದ ಒಂದು ಮತ್ತು 2ಜಿ/3ಜಿ ಸಂಪರ್ಕದ ಇನ್ನೊಂದು ಸಿಮ್ ಕಾರ್ಡ್ ಸೌಲಭ್ಯ, 1 + 4 ಗಿಗಾಬೈಟ್ ಮೆಮೊರಿ, 8 ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 2 ಮೆಗಾಪಿಕ್ಸೆಲ್‌ನ ಎದುರುಗಡೆಯ ಕ್ಯಾಮೆರಾ, ಕ್ಯಾಮೆರಾಕ್ಕೆ ಎಲ್‌ಇಡಿ ಫ್ಲಾಶ್, ಮೆಮೊರಿ ಹೆಚ್ಚಿಸಿಕೊಳ್ಳಲು ಮೈಕ್ರೊಎಸ್‌ಡಿ ಕಾರ್ಡ್ ಹಾಕಲು ಕಿಂಡಿ, ವೈಫೈ, ಬ್ಲೂಟೂತ್, ಯುಎಸ್‌ಬಿ ಕಿಂಡಿ, 3.5 ಮಿ.ಮೀ. ಇಯರ್‌ಫೋನ್ ಕಿಂಡಿ, 2000mAhಶಕ್ತಿಯ ಬ್ಯಾಟರಿ, ಜಿಪಿಎಸ್, ಎಕ್ಸೆಲೆರೋಮೀಟರ್, ಇತ್ಯಾದಿ. ಒಂದು ಮೇಲ್ದರ್ಜೆಯ ಸ್ಮಾರ್ಟ್‌ಫೋನ್‌ನ ಎಲ್ಲ ಗುಣವೈಶಿಷ್ಟ್ಯಗಳು ಇದರಲ್ಲಿವೆ.

ನಾನು ನೋಡಿದ ಹಲವು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಫೋನ್ ನೋಡಲು ಚೆನ್ನಾಗಿದೆ ಮತ್ತು ಕೈಯಲ್ಲಿ ಹಿಡಿದಾಗಿನ ಅನುಭವ ಚೆನ್ನಾಗಿದೆ. ಸಾಮಾನ್ಯವಾಗಿ ಕಡಿಮೆ ಬೆಲೆಯ ಫೋನ್‌ಗಳಲ್ಲಿ ಈ ಅನುಭವ ಉತ್ತಮವಾಗಿರುವುದಿಲ್ಲ. ಆದರೆ ಟೈಟಾನಿಯಂ ಎಸ್5 ಇದಕ್ಕೆ ಅಪವಾದ. ಇದರ ಹಿಂದುಗಡೆಯ ಮುಚ್ಚಳ ತುಂಬ ನಯವಾಗಿದೆ. ಇದರಿಂದಾಗಿ ಕೈಯಿಂದ ಜಾರಿಬೀಳುವ ಸಂಭವವಿದೆ. ಕ್ಯಾಮೆರಾ ಯಾಕೋ ಸ್ವಲ್ಪ ಎದ್ದು ನಿಂತಿದೆ. ಸಪಾಟಾದ ಮೇಜಿನ ಮೇಲೆ ಇಡಲು ಈ ಕ್ಯಾಮೆರಾ ಒಂದು ಅಡ್ಡಿಯೆನ್ನಲೂಬಹುದು. ಕ್ಯಾಮೆರಾದ ಲೆನ್ಸ್‌ಗೆ ಇದರಿಂದಾಗಿ ಬೇಗನೆ ಏಟು ಬೀಳುವ ಸಾಧ್ಯತೆ ಇದೆ. ಹಲವು ಫೋನ್‌ಗಳಲ್ಲಿ ಕ್ಯಾಮೆರಾದ ಲೆನ್ಸ್ ಸ್ವಲ್ಪ ಒಳಗಡೆ ಇರುತ್ತದೆ. ಇದರಿಂದಾಗಿ ಲೆನ್ಸ್‌ಗೆ ಸ್ವಲ್ಪ ಸುರಕ್ಷೆ ಇದ್ದಂತಾಗುತ್ತದೆ. ಆದರೆ ಇದರಲ್ಲಿ ಉಲ್ಟಾ ಆಗಿದೆ.

ಇದರ ಸ್ಪರ್ಶಸಂವೇದಿ ಪರದೆಯ ಪ್ರತಿಸ್ಪಂದನ ಚೆನ್ನಾಗಿದೆ. ಕೆಲವು ಕಡಿಮೆ ಬೆಲೆಯ ಫೋನ್‌ಗಳಂತೆ ಇದು ಟಚ್‌ಸ್ಕ್ರೀನ್ ಹೋಗಿ ಒತ್ತು ಸ್ಕ್ರೀನ್ (ಈ ಪದ ನೀಡಿದವರು ಡಿ. ಎಸ್. ಶ್ರೀನಿಧಿ) ಆಗಿಲ್ಲ. ಅತಿ ವೇಗದ ಮತ್ತು ನಾಲ್ಕು ಹೃದಯಗಳ ಪ್ರೋಸೆಸರ್ ಇರುವುದರಿಂದ ವೇಗವಾಗಿ ಕೆಲಸ ಮಾಡುತ್ತದೆ.

ಪರದೆಯ ರೆಸೊಲೂಶನ್ ಅದ್ಭುತ ಎನ್ನುವಂತಿಲ್ಲ. ಅರ್ಧ ಹೈಡೆಫಿನಿಶನ್ ಕೂಡ ಇಲ್ಲ. ಇದರ 540x960 ಪಿಕ್ಸೆಲ್ ರೆಸೊಲೂಶನ್ ಅನ್ನು ಟಿಏಈ ಎನ್ನುತ್ತಾರೆ. ಹಾಗೆಂದು ಹೇಳಿ ಹೈಡೆಫಿನಿಶನ್ ವೀಡಿಯೊ ನೋಡುವಂತೆಯೇ ಇಲ್ಲ ಎನ್ನುವಂತಿಲ್ಲ. ಅರ್ಧ ಹೈಡೆಫಿನಿಶನ್ ಮತ್ತು ಪೂರ್ತಿ ಹೈಡೆಫಿನಿಶನ್ ವೀಡಿಯೊ ವೀಕ್ಷಣೆಯ ಅನುಭವ ಪರವಾಗಿಲ್ಲ. ಆದರೆ ಪೂರ್ತಿ ಹೈಡೆಫಿನಿಶನ್ ಇರುವ ಫೋನ್‌ನ ಮುಂದೆ ಇದು ಸೋಲುತ್ತದೆ. ಅಂತಹ ಫೋನ್‌ಗಳಿಗೆ ಇದರ ಬೆಲೆಯ ಮೂರರಷ್ಟು ಬೆಲೆ ಇದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡು ಇದನ್ನು ಅಂತಹ ಫೋನ್‌ಗಳನ್ನು ಹೋಲಿಸಬೇಕು. ಪರದೆಯಲ್ಲಿ ಜಾಳುಜಾಳಾಗಿ ಕಾಣಿಸಲಿಲ್ಲ. ಪ್ಲೇ ಮಾಡುವಾಗ ಸರಾಗವಾಗಿ ಪ್ಲೇ ಆಯಿತು. ಇದಕ್ಕೆ ಕಾರಣ ವೇಗದ ಪ್ರೋಸೆಸರ್. ವೀಡಿಯೊಗೆ ತುಂಬ ಮೆಚ್ಚುಗೆ ನೀಡುವಂತಿಲ್ಲದಿದ್ದರೂ ಪಾಸ್ ಎನ್ನಬಹುದು.

ವೈಫೈ ಸಂಪರ್ಕ ಸೌಲಭ್ಯ ಇದೆ. ಆದರೆ ಇದು ಏಕೋ ಸ್ವಲ್ಪ ಎಡಬಿಡಂಗಿಯಂತೆ ಆಡುತ್ತದೆ. ಒಮ್ಮಮ್ಮೆ ಚೆನ್ನಾಗಿ ಸಂಪರ್ಕ ಆಗುತ್ತದೆ. ಕೆಲವೊಮ್ಮೆ ಸಂಪರ್ಕ ಆಗುವುದೇ ಇಲ್ಲ. ಎಲ್ಲ ಆಯ್ಕೆಗಳ ಜೊತೆ ಗುದ್ದಾಡಿಯೂ ಪ್ರಯೋಜನ ಆಗಲಿಲ್ಲ. ಆಗ ಫೋನ್ ಅನ್ನು ಸ್ವಿಚ್ ಆಫ್ ಮಾಡಿ ಪುನಃ ಪ್ರಾರಂಭಿಸಿದಾಗ ಸಮಸ್ಯೆಯ ಪರಿಹಾರವಾಯಿತು. ಹಲವು ಮಂದಿ ಅಂತರಜಾಲದಲ್ಲಿ ಇದೇ ದೂರು ನೀಡಿದ್ದಾರೆ.

ಕ್ಯಾಮೆರಾ 8 ಮೆಗಾಪಿಕ್ಸೆಲ್ ಇದ್ದರೂ ಗುಣಮಟ್ಟ ಅದಕ್ಕೆ ಸರಿತೂಗುವಂತೆ ಇಲ್ಲ. ಕಡಿಮೆ ಬೆಳಕಿನಲ್ಲಂತೂ ಫೋಟೊ ಕೆಟ್ಟದಾಗಿ ಮೂಡಿ ಬರುತ್ತದೆ. ಮೆಗಾಪಿಕ್ಸೆಲ್ ಒಂದೇ ಕ್ಯಾಮೆರಾದ ಗುಣಮಟ್ಟವನ್ನು ನಿರ್ಧರಿಸುವುದಿಲ್ಲ ಎಂದು ನಾನು ಹಲವು ಸಲ ಬರೆದಿದ್ದೇನೆ. ಇದು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಆದರೆ ಉತ್ತಮ ಬೆಳಕಿದ್ದಾಗ ಮತ್ತು ಹಗಲು ಬೆಳಕಿನಲ್ಲಿ ಫೋಟೊ ಉತ್ತಮವಾಗಿಯೇ ಮೂಡಿಬರುತ್ತದೆ. ಕ್ಯಾಮೆರಾಕ್ಕೆ ಒಂದು ಪ್ರತ್ಯೇಕ ಬಟನ್ ನೀಡಿದ್ದರೆ ಚೆನ್ನಾಗಿರುತ್ತಿತ್ತು. ಕ್ಯಾಮೆರಾ ಅಲ್ಲಿಂದಲ್ಲಿಗೆ ಪಾಸ್ ಎನ್ನಬಹುದು.

ಧ್ವನಿಯ ಗುಣಮಟ್ಟ ಫೋನ್ ಮಾಡಿದಾಗ ಚೆನ್ನಾಗಿದೆ. ಆದರೆ ಸಂಗೀತ ಆಲಿಸುವಾಗ ಅಷ್ಟಕ್ಕಷ್ಟೆ. ಎಫ್‌ಎಂ ರೇಡಿಯೊದ ಗುಣಮಟ್ಟವೂ ಅಷ್ಟಕ್ಕಷ್ಟೆ. ಅಷ್ಟು ಮಾತ್ರವಲ್ಲ ಆಡಿಯೊದ ವಾಲ್ಯೂಮ್ ಕೂಡ ತುಂಬ ಕಡಿಮೆ ಇದೆ. ಪೂರ್ತಿ ವಾಲ್ಯೂಮ್ ನೀಡಿದರೆ ಮಾತ್ರ ಸಂಗೀತ ಆಲಿಸಬಹುದು. ಒಟ್ಟಿನಲ್ಲಿ ಆಡಿಯೊಗೆ ಪಾಸ್ ಮಾರ್ಕು ನೀಡುವಂತಿಲ್ಲ.

ಟೈಟಾನಿಯಂ ಎಸ್5ರಲ್ಲಿ ಬಳಸಿರುವ ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ 4.1.2 ಅಂದರೆ ಜೆಲ್ಲಿಬೀನ್. ಇದರಲ್ಲಿ ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳನ್ನು ಅಳವಡಿಸಲಾಗಿದೆ. ಆದರೆ ಕಾರ್ಬನ್ ಕಂಪೆನಿಯವರು ಇದನ್ನು ಅರೆಬರೆಯಾಗಿ ಅಳವಡಿಸಿದ್ದಾರೆ. ಬ್ರೌಸರ್‌ನಲ್ಲಿ ಕನ್ನಡ ಸರಿಯಾಗಿ ಮೂಡಿಬರುತ್ತದೆ. ಎಸ್‌ಎಂಎಸ್‌ನಲ್ಲಿ ಸರಿ ಬರುವುದಿಲ್ಲ.

ಕಾರ್ಬನ್ ಎಸ್5 ಟೈಟಾನಿಯಂನ ಬೆಲೆ ಸುಮಾರು 12 ಸಾವಿರ ರೂ. ಈ ಬೆಲೆಗೆ ಇದು ಉತ್ತಮ ಗ್ಯಾಜೆಟ್ ಏನೋ ಹೌದು. ಕಾರ್ಬನ್ ಕಂಪೆನಿಯದೇ ಇನ್ನೊಂದು ಫೋನ್ ಎ30ಕ್ಕಿಂತ ಇದು ಚೆನ್ನಾಗಿದೆ.

ಗ್ಯಾಜೆಟ್ ಸಲಹೆ
ಪ್ರ: ನಾನು ಒಂದು ಹೊಸ ಅಲ್ಟ್ರಾಬುಕ್ ಲ್ಯಾಪ್‌ಟಾಪ್ ಕೊಂಡುಕೊಳ್ಳಬೇಕು ಅಂದುಕೊಂಡಿದ್ದೇನೆ. ಕೆಲವು ಟ್ಯಾಬ್ಲೆಟ್‌ಗಳಿಗೆ 3ಜಿ ಸಿಮ್ ಕಾರ್ಡ್ ಹಾಕಬಹುದು. ಹಾಗೂ ಅದರ ಮೂಲಕ ಅಂತರಜಾಲ ಸಂಪರ್ಕ ಪಡೆಯಬಹುದು. ಅಲ್ಟ್ರಾಬುಕ್‌ಗಳಿಗೆ ಈ ಸೌಲಭ್ಯ ಇದೆಯೇ?
ಉ: ಕೆಲವು ಮಾದರಿಗಳಲ್ಲಿದೆ. ಉದಾಹರಣೆಗೆ ಕಳೆದ ವಾರ ವಿಮರ್ಶಿಸಿದ ಲೆನೊವೊ ಟ್ವಿಸ್ಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.