ಅವನೊಬ್ಬ ರಾಜ. ತಿಳುವಳಿಕೆ ಉಳ್ಳವನು. ರಾಜ್ಯ ಸಣ್ಣದಾದ್ದರಿಂದ ತನ್ನ ಮಿತಿಯಲ್ಲಿಯೇ ಸಾಕಷ್ಟು ಬೆಳವಣಿಗೆ ಮಾಡಿಕೊಂಡು ರಾಜ್ಯಭಾರ ಮಾಡುತ್ತಿದ್ದ. ಅವನ ಪಕ್ಕದಲ್ಲಿ ಮತ್ತೊಂದು ರಾಜ್ಯ. ಅಲ್ಲೊಬ್ಬ ರಾಜ. ಆತ ಸಣ್ಣ ವಯಸ್ಸಿಗೆ ರಾಜನಾಗಿಬಿಟ್ಟಿದ್ದಾನೆ. ಇನ್ನೂ ಬಿಸಿ ರಕ್ತ, ಆವೇಶ ಹೆಚ್ಚು. ಅದರೊಂದಿಗೆ ಮಹತ್ವಾಕಾಂಕ್ಷೆ ಬಲವಾಗಿತ್ತು. ತನ್ನ ರಾಜ್ಯವನ್ನು ವಿಸ್ತರಿಸಿ ಇನ್ನಷ್ಟು ಬಲಶಾಲಿಯಾಗಬೇಕು ಎಂಬುದು ಅವನಾಸೆ. ಅವನ ಕಣ್ಣು ಪಕ್ಕದ ರಾಜ್ಯದ ಮೇಲೆ ಬಿತ್ತು. ಅದನ್ನು ವಶಪಡಿಸಿಕೊಂಡೇ ತೀರಬೇಕೆಂದು ಅವನ ಹಟ.
ಹಿರಿಯ ರಾಜನಿಗೆ ಹೇಳಿ ಕಳುಹಿಸಿದ. ಅದೊಂದು ಯುದ್ದಕ್ಕೆ ಆಮಂತ್ರಣದಂತೆಯೇ ಇತ್ತು. ಇಬ್ಬರೂ ಬೆಟ್ಟಿಯಾದರು. ಹಿರಿಯ ಹೇಳಿದ. ಯಾಕೆ ನಮಗೆ ಈ ಯುದ್ಧ? ನಿಮಗೆ ನಿಮ್ಮ ರಾಜ್ಯವಿದೆ, ನಮಗೆ ನಮ್ಮದಿದೆ. ಶಾಂತಿಯಿಂದ ಇರಬಾರದೇ? ಯುದ್ಧವೆಂದರೆ ಎಷ್ಟು ಆಸ್ತಿಹಾನಿ, ಜೀವಹಾನಿ, ಸಮಯ ಹಾನಿಯಾಗುತ್ತದೆ. ಅದು ಬೇಕೇ? ನಮ್ಮ ನಮ್ಮ ರಾಜ್ಯಗಳಲ್ಲಿ ಸಂತೋಷವಾಗಿರೋಣ. ಕಿರಿಯನಿಗೆ ಈ ವಾದ ಹಿಡಿಸಲಿಲ್ಲ. ಕ್ಷತ್ರಿಯರ ಧರ್ಮವೇ ಹೋರಾಟ. ನಿಷ್ಕಾರಣವಾಗಿ ಮುಗ್ಧ ಸೈನಿಕರ, ಸಾರ್ವಜನಿಕರ ಪ್ರಾಣಹಾನಿ ಆಗುವುದು ಬೇಡವೆನ್ನಿಸಿದ್ದರೆ ನಾವಿಬ್ಬರೇ ಹೋರಾಡೋಣ. ಯಾರು ಗೆಲ್ಲುತ್ತಾರೋ ಅವರು ಸೋತವರ ರಾಜ್ಯವನ್ನು ವಶಪಡಿಸಿಕೊಳ್ಳುತ್ತಾರೆ. ಅಗಬಹುದೇ? ಎಂದು ಪ್ರಶ್ನಿಸಿದ. ಹಿರಿಯ ರಾಜ ಕಿರಿಯನೊಂದಿಗೆ ಹೇಗೆ ಹೋರಾಟ ಮಾಡಿಯಾನು? ಈತನಿಗೆ ವಯಸ್ಸಾಗಿದೆ, ಮೊದಲಿನ ಶಕ್ತಿ ಇಲ್ಲ. ಆತನೋ ನವತರುಣ. ಸ್ವಲ್ಪ ಚಿಂತಿಸಿ ಹೇಳಿದ, ನನಗೆ ಒಂದು ತಿಂಗಳು ಅವಕಾಶ ಕೊಡಿ, ಮಂತ್ರಿಗಳೊಡನೆ ವಿಚಾರ ಮಾಡಿ ತಿಳಿಸುತ್ತೇವೆ ಹೀಗೆ ಹೋಗಿ ತನ್ನ ರಾಜ್ಯಕ್ಕೆ ಬಂದ.
ಮುಂದೆ ಕೆಲವು ದಿನಗಳಲ್ಲಿ ಕಿರಿಯರಾಜ ಬೇಟೆಗೆಂದು ಕಾಡಿಗೆ ಹೋದ. ಪರಿವಾರದೊಂದಿಗೆ ಕಾಡಿನಲ್ಲಿ ನುಗ್ಗಿದಾಗ ಹುಲಿಗಳ ಗುಂಪೊಂದು ಇವರ ಮೇಲೆ ದಾಳಿ ಮಾಡಿತು. ರಾಜನ ಸಹಚರರೆಲ್ಲ ಚಲ್ಲಾಪಿಲ್ಲಿಯಾಗಿ ಓಡಿಹೋದರು. ರಾಜನನ್ನು ಹೊತ್ತ ಕುದುರೆ ಮತ್ತಷ್ಟು ದಟ್ಟವಾದ ಕಾಡಿನ ಭಾಗವನ್ನು ಸೇರಿತು. ಒಂದು ಹುಲಿ ಇದನ್ನು ಹಿಂಬಾಲಿಸುತ್ತಲೇ ಇದೆ. ಒಂದೆಡೆಗೆ ರಾಜನನ್ನು ಕೆಳಗೆ ಬೀಳಿಸಿ ಕುದುರೆ ಓಡಿ ಹೋಯಿತು. ಈತ ಗಾಬರಿಯಿಂದ ಸರಸರನೇ ದೊಡ್ಡ ಮರವನ್ನೇರಿ ಕುಳಿತುಕೊಂಡ. ಕೆಳಗೆ ಹುಲಿ ಬಂದು ನಿಂತು ಇವನನ್ನೇ ನೋಡುತ್ತಿತ್ತು.
ಇವನು ಪಾರಾದೆ ಎಂದು ಬೆವರು ಒರೆಸಿಕೊಳ್ಳುವಷ್ಟರಲ್ಲಿ ಪಕ್ಕದಲ್ಲಿ ಸರಸರ ಸದ್ದಾಯಿತು. ತಿರುಗಿ ನೋಡಿದರೆ ಒಂದು ಭಾರೀ ಸರ್ಪ. ಅದು ಇವನಡೆಗೆ ಬರುತ್ತಿದೆ. ಆಶ್ಚರ್ಯವೆಂದರೆ ಅದು ಮನುಷ್ಯರ ರೀತಿ ಮಾತಡಿತು. ಬಹುದಿನಗಳ ನಂತರ ನನಗೆ ಒಳ್ಳೆಯ ಆಹಾರ ಸಿಕ್ಕಿದೆ. ಈಗ ನಿನ್ನನ್ನು ನುಂಗಿ ಹಸಿವನ್ನು ನೀಗಿಸಿಕೊಳ್ಳುತ್ತೇನೆ ಎಂದಿತು. ಈ ಮಾತು ಕೆಳಗಿದ್ದ ಹುಲಿಗೂ ಕೇಳಿಸಿರಬೇಕು, ಅದೂ ಕೂಗಿತು, ಎಚ್ಚರ, ಈ ಮನುಷ್ಯ ಪ್ರಾಣಿಯನ್ನು ನೀನು ಮುಟ್ಟಿದರೆ ನಾನು ಸುಮ್ಮನಿರುವುದಿಲ್ಲ. ಅದು ನನಗೆ ಮೀಸಲು. ಅಷ್ಟು ದೂರದಿಂದ ಅಟ್ಟಿಸಿಕೊಂಡು ಬಂದು ಕಾದಿದ್ದೇನೆ ಸರ್ಪ ಮಾರುತ್ತರ ಕೊಟ್ಟಿತು, ನೀನು ಬೆನ್ನು ಹತ್ತಿ ಬಂದಿರಬೇಕು, ಆದರೆ ಈ ಪ್ರಾಣಿ ನಾನಿದ್ದಲ್ಲಿಗೇ ಹುಡುಕಿಕೊಂಡು ಬಂದಿದೆಯಲ್ಲ. ಅದನ್ನು ಹೇಗೆ ಬಿಡಲಿ? ಬೇಕಿದ್ದರೆ ಅರ್ಧ ದೇಹ ನುಂಗಿ ಉಳಿದದ್ದನ್ನು ಕೆಳಗೆ ತಳ್ಳಿಬಿಡುತ್ತೇನೆ ಅದನ್ನು ನೀನು ತಿನ್ನು ಎಂದಿತು. ಓಹೋ, ನೀನು ತಿಂದು ಬಿಟ್ಟ ವಿಷದ ಆಹಾರವನ್ನು ನಾನು ತಿಂದು ಸಾಯಬೇಕೇ? ನೀನು ಪರಮಹೇಡಿ ಮೇಲೆ ಕುಳಿತೇ ಮಾತನಾಡುತ್ತೀ. ಧೈರ್ಯವಿದ್ದರೆ ಕೆಳಗಿಳಿದು ಬಂದು ಹೋರಾಡು. ಯಾರು ಗೆಲ್ಲುತ್ತಾರೋ ಅವರು ಅವನನ್ನು ತಿನ್ನಲಿ ಎಂದಿತು ಹುಲಿ. ಸರ್ಪಕ್ಕೇನು ಸಿಟ್ಟು ಕಡಿಮೆಯೇ? ನೆಲಕ್ಕೆ ಹಾರಿತು, ಹುಲಿಯ ಮೇಲೆ ಎರಗಿ ಸಿಕ್ಕಸಿಕ್ಕಲ್ಲಿ ಕಚ್ಚಿತು. ಮೊದಲೇ ಹುಲಿ, ಅದು ಬಿಟ್ಟೀತೇ? ಹಾವನ್ನು ಸಿಗಿದುಹಾಕಿಬಿಟ್ಟಿತು. ಹಾವು ಸತ್ತ ಕೆಲವೇ ಕ್ಷಣಗಳಲ್ಲಿ ಅದಕ್ಕೂ ವಿಷವೇರಿ ಸತ್ತುಬಿದ್ದಿತು.
ಕಿರಿಯರಾಜ ಇದನ್ನು ನೋಡಿ ನಿಧಾನವಾಗಿ ಮರದಿಂದಿಳಿದು ನೇರವಾಗಿ ಹಿರಿಯರಾಜನ ಬಳಿಗೆ ಹೋದ. ಅನುಭವಿಸಿದ್ದನ್ನು ಹೇಳಿದ. ಹಾವು, ಹುಲಿಗಳು ತಮ್ಮ ಪಾಡಿಗೆ ತಾವು ಇದ್ದಲ್ಲಿಯೇ ಇದ್ದಿದ್ದರೆ ಎರಡೂ ಸಂತೋಷವಾಗಿ ಇರಬಹುದಿತ್ತು. ಸುಮ್ಮನೇ ರೋಷದಿಂದ ಹೋರಾಡಿ ಕೈಗೆ ಸಿಕ್ಕ ಆಹಾರವನ್ನು ಕಳೆದುಕೊಂಡಿದ್ದಲ್ಲದೆ ಪ್ರಾಣಗಳನ್ನು ಕಳೆದುಕೊಂಡವು. ಆದ್ದರಿಂದ ನಮ್ಮ ನಮ್ಮ ರಾಜ್ಯಗಳಲ್ಲಿ ನಾವು ಸುಖವಾಗಿದ್ದು ಮಿತ್ರರಂತೆ ಇರೋಣ ಎಂದು ಹೇಳಿ ಹೋದ. ಪರರು ಹೇಳಿದ ಮಾತಿಗಿಂತ ಸ್ವಂತ ಅನುಭವವೇ ಲೇಸು ಎಂದು ಹಿರಿಯರಾಜನಿಗೆ ಎನ್ನಿಸಿತು.
ನಾವು ನಮ್ಮ ನಮ್ಮ ಕ್ಷೇತ್ರಗಳಲ್ಲಿ ಚೆನ್ನಾಗಿಯೇ ಇರಬಹುದು. ಆಸೆ ಇರಬೇಕು. ಸಾಧನೆಯ ಛಲ ಇರಬೇಕು, ಮಹತ್ವಾಕಾಂಕ್ಷೆ ಇರಬೇಕು. ಆದರೆ ಅದು ಮಿತಿಗಳನ್ನು ಮೀರಬಾರದು. ನಿಲುಕಲಸಾಧ್ಯವಾದದ್ದಕ್ಕೆ ಬೆನ್ನು ಹತ್ತಿದರೆ ಆಗಬಾರದ್ದು ಆಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.