ಇದು ಶ್ರೀ ಆದಿಶಂಕರಾಚಾರ್ಯರ ಬಗ್ಗೆ ಕೆಲವರು ಹೇಳುವ ಕಥೆ. ಬಹುಶಃ ಇದು ಕಾಲ್ಪನಿಕವಾದದ್ದು. ಕಥೆ ಏನಿದ್ದರೂ ಅದರ ಸಂದೇಶ ನಮಗೆ ಪ್ರಯೋಜನಕಾರಿಯಾದದ್ದು.
ಒಂದು ಬಾರಿ ಶಂಕರಾಚಾರ್ಯರು ಶಿಷ್ಯರೊಂದಿಗೆ ಪ್ರವಾಸ ಮಾಡುತ್ತಿದ್ದರು. ಅದು ತುಂಬ ಬಿಸಿಲಿನ ಕಾಲ. ಮಧ್ಯಾಹ್ನ ಸೂರ್ಯ ರಣಗುಡುತ್ತಿದ್ದಾಗ ಎಲ್ಲರಿಗೂ ತುಂಬ ನೀರಡಿಕೆಯಾಯಿತು. ಇನ್ನೂ ನೀರು ಸಿಗದಿದ್ದರೆ ಬದುಕುವುದೇ ಕಷ್ಟ ಎನ್ನಿಸಿತು. ಆಗ ಶಂಕರಾಚಾರ್ಯರಿಗೆ ಅಲ್ಲಿ ಒಂದಷ್ಟು ನೀರು ನಿಂತದ್ದು ಕಾಣಿಸಿತು. ಅವರು ಸರಸರನೇ ಅಲ್ಲಿಗೆ ಹೋದರು. ಅದು ನಿಂತ ನೀರು! ಅದೆಷ್ಟು ದಿನಗಳಿಂದ ನಿಂತು ಕೊಳಕಾಗಿದೆಯೊ ತಿಳಿಯದು. ಶಂಕರಾಚಾರ್ಯರು ಹಿಂದೆ ಮುಂದೆ ನೋಡಲಿಲ್ಲ. ಬೊಗಸೆಯಲ್ಲಿ ನೀರು ಎತ್ತಿಕೊಂಡು ಕುಡಿದೇಬಿಟ್ಟರು. ಶಿಷ್ಯರೂ ಅವರನ್ನು ಅನುಸರಿಸಿದರು.
ಮುಂದಿನ ತಿಂಗಳೂ ಹೀಗೆಯೇ ಆಯಿತು. ಮತ್ತೆ ಕುಡಿಯಲು ನೀರಿಲ್ಲದೇ ಎಲ್ಲರೂ ಚಡಪಡಿಸುವಂತಾಯಿತು. ಎಲ್ಲಿ ಸುತ್ತಮುತ್ತ ಹುಡುಕಿದರೂ ನೀರಿನ ಲಕ್ಷಣವೇ ಇಲ್ಲ. ಶಿಷ್ಯರಿಗೆ ತುಂಬ ಆತಂಕವಾಯಿತು. ಕೆಲವು ಶಿಷ್ಯರು ಶಂಕರಾಚಾರ್ಯರಿಗೆ ಇದನ್ನು ಅರಿಕೆ ಮಾಡಿಕೊಂಡರು. ಗುರುಗಳು ಆಯಿತೆಂದು ಅವರನ್ನೆಲ್ಲ ಕರೆದುಕೊಂಡು ಊರಹೊರಗೆ ನಡೆದರು. ಅಲ್ಲೊಬ್ಬ ಮನುಷ್ಯ ನಾಟಿ ಸೆರೆಯನ್ನು ಮಾರುತ್ತಿದ್ದ.
ಆಚಾರ್ಯರು ಏನನ್ನೂ ತೋರ್ಪಡಿಸದೇ ಸರಸರನೆ ಹೋಗಿ ಎರಡು ಕುಡಿಕೆ ಸೆರೆಯನ್ನು ಕುಡಿದುಬಿಟ್ಟರು! ಶಿಷ್ಯರಿಗೆ ಮಹದಾಶ್ಚರ್ಯವಾಯಿತು. ಇದೇನು ಗುರುಗಳು ಹೀಗೆ ಸೆರೆಯನ್ನು ಕುಡಿದರಲ್ಲ ಎಂದು ಅವರೂ ಅವರಂತೆಯೇ ಹೋಗಿ ತಮಗೆ ಬೇಕಾದಷ್ಟನ್ನು ಕುಡಿದರು. ಕೆಲವರು ಗುರುಗಳು ಹೀಗೆ ಮಾಡಿದ್ದಕ್ಕೆ ಕುಹಕವನ್ನೂ ಮಾಡಿದರು. ಮತ್ತೆ ಕೆಲವರು ಇದನ್ನೇ ಕುಡಿಯುವುದಕ್ಕೆ ಪರವಾನಿಗೆ ಎಂದು ಭಾವಿಸಿದರು.
ಶಿಷ್ಯರ ಈ ಬದಲಾವಣೆಯನ್ನು ಶ್ರೀ ಶಂಕರಾಚಾರ್ಯರು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅದಕ್ಕೂ ಒಂದು ಕಾಲ ಬರಲೆಂದು ಕಾಯುತ್ತಿದ್ದರು. ಮರುದಿನ ಮತ್ತೆ ಶಿಷ್ಯರೊಡನೆ ಹೋಗುತ್ತಿದ್ದಾಗ ಅದೇ ಸಮಸ್ಯೆ ಬಂದಿತು. ಕುಡಿಯಲು ನೀರು ಎಲ್ಲಿಯೂ ಸಿಗುವಂತಿಲ್ಲ. ಆಗ ಒಂದು ಊರನ್ನು ಪ್ರವೇಶ ಮಾಡುವಾಗ ಅಲ್ಲೊಬ್ಬ ಕಮ್ಮೋರನ ಕಮ್ಮಟ ಕಾಣಿಸಿತು.
ಆಚಾರ್ಯರು ಅಲ್ಲಿಗೆ ನಡೆದರು. ಶಿಷ್ಯರು ಅವರನ್ನೇ ಹಿಂಬಾಲಿಸಿದರು. ಅಲ್ಲಿ ಕಮ್ಮೋರ ಒಂದು ದೊಡ್ಡ ಮೂಸೆಯಲ್ಲಿ ಕಬ್ಬಿಣವನ್ನು ಕಾಯಿಸಿ ಕರಗಿಸಿದ್ದಾನೆ. ಕರಗಿದ ಕಬ್ಬಿಣದ ರಸ ಕೊತಕೊತನೆ ಕುದಿಯುತ್ತಿದೆ, ಅದ ಝಳ ಅಷ್ಟು ದೂರ ತಾಕುತ್ತಿದೆ. ಬೆಳಕು ಉಗ್ಗುತ್ತಿದೆ. ಆಚಾರ್ಯರು ಅದರ ಹತ್ತಿರ ಹೋದವರೇ ತಮ್ಮ ಬೊಗಸೆಯನ್ನು ಕಬ್ಬಿಣದ ರಸದಲ್ಲದ್ದಿ ತುಂಬಿಕೊಂಡು ಗಟಗಟನೇ ಕುಡಿದು ನಂತರ ತಿರುಗಿ ಶಿಷ್ಯರ ಮುಖ ನೋಡಿದರು! ಒಬ್ಬರಾದರೂ ಅವರನ್ನು ಹಿಂಬಾಲಿಸುವ ಧೈರ್ಯ ಮಾಡಲಿಲ್ಲ!.
ಮಹಾತ್ಮರಿಗೆ ಎಲ್ಲವೂ ಒಂದೇ. ಶಿಷ್ಯರು ತಮಗೆ ಅನುಕೂಲವಾದಾಗ ಅವರನ್ನು ಅನುಸರಿಸಿ, ಅದನ್ನು ಸುಲಭವೆಂದು ಭಾವಿಸಿದರು. ಅನುಕರಣೆ ಮಾಡುವುದಕ್ಕೂ, ಅದರಲ್ಲೂ ಮಹಾನ್ ವ್ಯಕ್ತಿಗಳ ಅನುಕರಣೆ ಮಾಡುವಾಗ ತುಂಬ ಶಕ್ತಿ ಬೇಕಾಗುತ್ತದೆ. ಅದು ತುಂಬ ಸುಲಭದ ತುತ್ತಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.