ADVERTISEMENT

ಅಪರೂಪದ ಆದರ್ಶ

ಡಾ. ಗುರುರಾಜ ಕರಜಗಿ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ನಮ್ಮಲ್ಲಿ ಅಂತರ್ಗತವಾಗಿರುವ ಮೌಲ್ಯಗಳ ಪರೀಕ್ಷೆಯಾಗುವುದು ಅತ್ಯಂತ ಕಷ್ಟದ ಪರಿಸ್ಥಿತಿಗಳಲ್ಲಿ. ಎಲ್ಲವೂ ಚೆನ್ನಾಗಿರುವಾಗ ಮೌಲ್ಯಗಳು ಕೇವಲ ಮಾತಿನಲ್ಲಿ ಬರುತ್ತವೆ. ದುರ್ಭರ ಸನ್ನಿವೇಶಗಳಲ್ಲಿಯೇ ನಾವು ಮಾತನಾಡಿದ ಮೌಲ್ಯಗಳು ಕೃತಿಯಲ್ಲಿ ಮೂಡಿಬರುತ್ತವೆಯೇ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ.

ಅಂಥ ಸಂದರ್ಭದಲ್ಲಿ ಮೌಲ್ಯ ಪ್ರತಿಪಾದನೆಯಾದರೆ, ಅದೊಂದು ಮೌಲಿಕ ಜೀವನದ ದರ್ಶನ. ಆ ಪರಿಯ ದರ್ಶನದ ಅಪರೂಪ ಘಟನೆಯೊಂದು ಎರಡನೇ ಮಹಾಯುದ್ಧದ ಕಾಲದಲ್ಲಿ ನಡೆದದ್ದು ನೆನಪಾಯಿತು.

ಫ್ರಾನ್ಸ ದೇಶದ ನೆಲದಲ್ಲಿ ಘನಘೋರ ಯುದ್ಧ ನಡೆಯುತ್ತಿತ್ತು. ಮಿತ್ರರಾಷ್ಟ್ರಗಳ ಪರವಾಗಿದ್ದ ಇಂಗ್ಲೆಂಡಿನ ಯೋಧರು ಜರ್ಮನಿಯ ಸೈನಿಕರ ಮೇಲೆ ದಾಳಿ ನಡೆಸಿದರು. ಆ ಸಂದರ್ಭದಲ್ಲಿ ಜರ್ಮನಿಯ ಮೇಜರ್ ಒಬ್ಬ ಎಲ್ಲರ ಕಣ್ಣು ತಪ್ಪಿಸಿ ಹಿಂದಿನಿಂದ ಬಂದು, ಹೊಂಚು ಹಾಕಿ ಕುಳಿತಿದ್ದ ಇಂಗ್ಲೆಂಡಿನ ಸೈನಿಕರ ತುಕಡಿಯ ಮೇಲೆ ಬಾಂಬ್ ಹಾಕಲು ಧಾವಿಸಿದ.

ಅವನು ತುಂಬ ಹತ್ತಿರವೇ ಬಂದದ್ದರಿಂದ ಗುಂಡು ಹಾರಿಸುವುದೂ ಸಾಧ್ಯವಿರಲಿಲ್ಲ. ಆಗ ಇಂಗ್ಲೆಂಡಿನ ತರುಣ ಸೈನಿಕನೊಬ್ಬ ಥಟ್ಟನೇ ಹಾರಿ ಅವನ ಎದೆಯಲ್ಲಿ ತನ್ನ ಬಂದೂಕಿನ ಬಯೊನೆಟ್ ತೂರಿಸಿಬಿಟ್ಟ. ಕೆಳಗೆ ಬಿದ್ದ ಜರ್ಮನ್ ಮೇಜರ್‌ನ ಮೇಲೆ ಗುಂಡು ಹಾರಿಸಿ ಕೊಂದು ಹಾಕಿದ.

ADVERTISEMENT

ಸ್ವಲ್ಪ ಹೊತ್ತಿನ ಮೇಲೆ ಸತ್ತ ವೈರಿ ಸೈನಿಕನ ಮುಖ ನೋಡಿದ. ಆ ಮೇಜರ್ ಸುಂದರವಾದ, ಮುಗ್ಧಮುಖದ ತರುಣ. ಯಾಕೋ ಇಂಗ್ಲೆಂಡಿನ ಸೈನಿಕನ ಕರುಳು ಚುರ‌್ರೆಂದಿತು. ಸತ್ತ ಸೈನಿಕನ ಜೇಬುಗಳನ್ನು ತಡಕಾಡಿದ. ಅಲ್ಲಿ ಆತನ ಮನೆಯ ವಿಳಾಸ, ಅವನ ತಾಯಿಯ ಭಾವಚಿತ್ರ ಕಂಡಿತು.

ಆ ಚಿತ್ರದ ಹಿಂದೆ `ಸದಾ ನಿನ್ನನ್ನೇ ನೆನಸುತ್ತೇನೆ ಅಮ್ಮ~  ಎಂದು ಬರೆದಿತ್ತು. ತನ್ನ ಮಗ ಈಗ ಬದುಕಿಲ್ಲ ಎಂದು ತಿಳಿದಾಗ ಆ ತಾಯಿಗೆ ಎಷ್ಟು ದುಃಖವಾದೀತು ಎಂದು ನೆನೆದಾಗ ಈ ಸೈನಿಕನ ಕಣ್ಣಲ್ಲಿ ನೀರು ಬಂದಿತು.

ಮರುದಿನ ಜರ್ಮನ್ ಮೇಜರ್‌ನ ತಾಯಿಗೊಂದು ಪತ್ರ ಬರೆದ. ` ತಾಯಿ, ನಾನು ಹೃದಯಪೂರ್ವಕವಾಗಿ ತಮ್ಮ ಕ್ಷಮೆ ಕೋರುತ್ತಿದ್ದೇನೆ. ನಾನೊಬ್ಬ ಇಂಗ್ಲೆಂಡಿನ ಸೈನಿಕ. ನಿನ್ನೆಯ ಯುದ್ಧದಲ್ಲಿ ನಿಮ್ಮ ಮಗನ ಹತ್ಯೆ ನನ್ನಿಂದಾಯಿತು. ಅದು ವೈಯಕ್ತಿಕ ದ್ವೇಷದಿಂದಾದದ್ದಲ್ಲ, ಅದು ನನ್ನ ಕರ್ತವ್ಯವಾಗಿತ್ತು.

ಆದರೂ ನಿಮ್ಮ ಹೃದಯಕ್ಕೆ ದುಃಖವನ್ನು, ಆಘಾತವನ್ನು ನೀಡಿದ್ದಕ್ಕೆ ಕ್ಷಮೆಯನ್ನು ಕೋರುತ್ತೇನೆ. ಯುದ್ಧ ಮುಗಿದ ಬಳಿಕ ಸಾಧ್ಯವಾದರೆ ತಮ್ಮನ್ನು ಮುಖತಃ ಬಂದು ಕಾಣುತ್ತೇನೆ `. ಪತ್ರದ ಕೆಳಗೆ ತನ್ನ ವಿಳಾಸವನ್ನೂ ಬರೆದ. ಈ ಪತ್ರ ಎಷ್ಟೋ ತಿಂಗಳುಗಳ ನಂತರ ಆ ತಾಯಿಯ ಕೈ ಸೇರಿತು. ಅದಾಗಲೇ ಆಕೆಗೆ ತನ್ನ ಮಗ ತೀರಿಹೋದ ವಿಷಯ ತಿಳಿದಿತ್ತು.

ಯುದ್ಧ ಮುಗಿದು ಇಂಗ್ಲೆಂಡಿನ ಸೈನಿಕ ಮನೆ ತಲುಪುವುದರಲ್ಲಿ ಜರ್ಮನಿಯಿಂದ ಬಂದ ಪತ್ರ ಅವನಿಗಾಗಿ ಕಾಯುತ್ತಿತ್ತು. ಆ ಮೇಜರ್‌ನ ತಾಯಿ ಬರೆದಿದ್ದರು,  `ನಾನು ಭಗವಂತನಲ್ಲಿ ತುಂಬ ನಂಬಿಕೆ ಇಟ್ಟವಳು. ನೀನು ನನ್ನ ಮಗನನ್ನು ಕೊಂದಿದ್ದರೂ ಅದು ನಿನ್ನ ಕರ್ತವ್ಯವಾಗಿತ್ತೆಂಬುದು ನನಗೆ ತಿಳಿದಿದ್ದರಿಂದ ನಿನ್ನನ್ನು ಕ್ಷಮಿಸಲು ಭಗವಂತ ಪ್ರೇರೇಪಿಸಿದ್ದಾನೆ.

ನೀನು ಯುದ್ಧ ಮುಗಿದ ಮೇಲೆ ನನ್ನ ಮನೆಗೆ ಬರಲು ಸ್ವಾಗತವಿದೆ. ದಯವಿಟ್ಟು ಬಾ ಮಗೂ, ಕಳೆದು ಹೋದ ಮಗನ ಸ್ಥಾನದಲ್ಲಿ ನಿನ್ನನ್ನೇ ಕಂಡು ಮಗನೇ ಎಂದು ಕರೆದು ಸಂತೋಷಪಡುತ್ತೇನೆ ಬಾ~ . ಈ ಪತ್ರವನ್ನು ಓದಿ ಇಂಗ್ಲೆಂಡಿನ ಯೋಧ, ಅವನ ಮನೆಯವರೆಲ್ಲ ಕರಗಿಹೋದರು.

ತಾನು ಕೊಂದ ಯೋಧನ ಬಗ್ಗೆ ಅನುಕಂಪದಿಂದ ಆತನ ತಾಯಿಗೆ ಕ್ಷಮಾಪತ್ರ ಬರೆದ ಇಂಗ್ಲೆಂಡಿನ ಸೈನಿಕನ ಹೃದಯವೈಶಾಲ್ಯ ದೊಡ್ಡದೋ, ಇಲ್ಲವೇ ತನ್ನ ಮಗನನ್ನು ಕಳೆದುಕೊಂಡು ಅವನನ್ನು ಕೊಂದವನನ್ನೇ ಮಗನನ್ನಾಗಿ ಸ್ವೀಕರಿಸಲು ಸಿದ್ಧವಿರುವ ತಾಯಿಯ ಮನೋವೈಶಾಲ್ಯ ದೊಡ್ಡದೋ ಹೇಳುವುದು ಕಷ್ಟ. ಇಬ್ಬರೂ ಅತ್ಯಂತ ದುರ್ಭರ ಸ್ಥಿತಿಯಲ್ಲಿ ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಮೆರೆದರು. ಇದು ಅಪರೂಪದ ಆದರ್ಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.