ADVERTISEMENT

ಅಭ್ಯಾಸವಾದ ಪ್ರತಿಕ್ರಿಯೆ

ಡಾ. ಗುರುರಾಜ ಕರಜಗಿ
Published 1 ಡಿಸೆಂಬರ್ 2013, 19:30 IST
Last Updated 1 ಡಿಸೆಂಬರ್ 2013, 19:30 IST

ಷ್ಯಾದ ಮನಶಾಸ್ತ್ರಜ್ಞ ಪಾವ್‌­ಲೋವ್ ತನ್ನ ಸಂಶೋಧನೆಯಿಂದ ಒಂದು ದೊಡ್ಡ ತತ್ವವನ್ನು ತಿಳಿಸುತ್ತಾನೆ. ಯಾವುದೇ ಕೆಲಸವನ್ನು ನಾವು ಕೆಲದಿನ ತಪ್ಪದೇ ಮಾಡುತ್ತ ಬಂದರೆ ನಮಗರಿಯದಂತೆ ಅದರ ಪ್ರತಿಕ್ರಿಯೆ ಅಭ್ಯಾಸವಾಗಿ ಹೋಗುತ್ತದೆ. ಅವನು ಅನೇಕ ಪ್ರಯೋಗಗಳನ್ನು ಮಾಡಿ ಅದನ್ನು ವ್ಯವಸ್ಥಿತವಾಗಿ ಮಂಡಿಸಿದ್ದ. ಅವನ ಶಿಷ್ಯನೊಬ್ಬ ಇಂಥ ಪ್ರಯೋಗ  ಮಾಡಲು ಬಯಸಿದ.

ಮನೆಗೆ ಒಂದು ಪುಟ್ಟ ನಾಯಿಮರಿಯನ್ನು ತಂದ. ಅದಕ್ಕೆ ಹಾಕಲು ಒಂದಿಷ್ಟು ಬಿಸ್ಕತ್ತು ಗಳನ್ನು ಇಟ್ಟುಕೊಂಡ. ತಾನು ಅದರ ಮುಂದೆ ಸ್ವಲ್ಪ ಎತ್ತರದಲ್ಲಿ ಬಿಸ್ಕತ್ ಹಿಡಿದು­ಕೊಂಡು ನಿಂತ. ಅದು ಅವನ ಮುಖವನ್ನೇ ನೋಡುತ್ತಿತ್ತು. ಅವನ ಅಪೇಕ್ಷೆ ಯೆಂದರೆ ನಾಯಿ ಬಿಸ್ಕತ್ತಿನಾಸೆಗೆ ತನ್ನ ಮುಂದಿನ ಎರಡು ಕಾಲುಗಳನ್ನು ಎತ್ತಿ ಮುಖ ಮೇಲೆ ಮಾಡಿ ಬೊಗಳಿ­ದಾಗ ತಾನು ಬಿಸ್ಕತ್ ಹಾಕಬೇಕು. ಹೀಗೆ ಅದಕ್ಕೆ ಒಂದು ವಾರ ಅಭ್ಯಾಸವಾದರೆ ಆತ ಪ್ರತಿಬಾರಿ ಬಿಸ್ಕತ್ ಹೊರತೆಗೆದಾಗ ಅದು ಎರಡೂ ಕಾಲು ಮೇಲೆತ್ತಿ ಬೊಗಳುತ್ತದೆ. ಇದು ಅದಕ್ಕೆ ಅಭ್ಯಾಸವಾದ ಪ್ರತಿಕ್ರಿಯೆ ಆಗುತ್ತದೆ ಎಂದುಕೊಂಡ.

ಇದನ್ನು ನಾಯಿಗೆ ಕಲಿಸಲು ತಾನು ಕೈಯಲ್ಲಿ ಬಿಸ್ಕತ್ ಹಿಡಿದುಕೊಂಡ ನಾಯಿಯ ಮುಂದೆ ನಿಂತು ತಾನೇ ಎರಡು ಬಾರಿ ನಾಯಿ­ಯಂತೆ ಬೊಗಳಿದ. ಅದಕ್ಕೆ ಏನೂ ತಿಳಿಯಲಿಲ್ಲ. ಪ್ರಯೋಗವನ್ನು ಹದಿನೈದು ದಿನ ಹೀಗೆಯೇ ಮುಂದುವರೆಸಿದ. ಆಮೇಲೆ ಕೂಡ ಅವನು ಅಪೇಕ್ಷಿಸಿದಂತೆ ಕಾಲೆತ್ತಿ ಬೊಗಳಲಿಲ್ಲ. ಛೇ ಇದೊಂದು ದಡ್ಡ ನಾಯಿ ಎಂದು ಬಿಸ್ಕತ್‌ನ್ನು ನೆಲದ ಮೇಲೆ ಹಾಕಿದ. ಆಶ್ಚರ್ಯ! ಅದು ಅದನ್ನು ತಿನ್ನದೇ ಇವನ ಮುಖವನ್ನೇ ನೋಡುತ್ತ ನಿಂತಿತು.

ADVERTISEMENT

ಈತ ಅದನ್ನು ಕೈಗೆತ್ತಿಕೊಂಡು ನಿಂತು ನಾಯಿಯಂತೆ ಬೊಗಳಿದಾಗಲೇ ತಿಂದಿತು! ಇವನಿಗೆ ನಾಯಿ ಬೊಗಳುವುದು ಅಭ್ಯಾಸವಾದ ಪ್ರತಿಕ್ರಿಯೆಯಾಗಲಿ ಎಂದು ಬಯಸಿದರೆ ಇವನೇ ನಿಂತು ಬೊಗಳುವುದು ಅದಕ್ಕೆ ಅಭ್ಯಾಸವಾದ ಪ್ರತಿಕ್ರಿಯೆಯಾಗಿತ್ತು! ಈ ಅಭ್ಯಾಸಬಲವಾದ ಪ್ರತಿಕ್ರಿಯೆ ಬಹಳ ಬಲವಾದದ್ದು.
ಇತ್ತೀಚೆಗೆ ನಾನು ಮಲೆನಾಡಿನ ಒಂದು ಹಳ್ಳಿಗೆ ಹೋಗಿದ್ದೆ. ಹಿರಿಯ­ರೊಬ್ಬರ ಮನೆಯಲ್ಲಿದ್ದೆ. ಅವರ ಮನೆಯ ಮುಂದೆ ಹಸಿರಿನ ವನರಾಶಿ. ತರತರಹದ ಪುಷ್ಟ ಗಳು, ಪಕ್ಷಿಗಳು ಮನೋಹರವಾಗಿದ್ದವು.

ಸಂಜೆ ಅವರೊಂದಿಗೆ ಮಾತನಾಡುತ್ತ ಮನೆಯ ಮುಂದೆ ಕುಳಿತಾಗ ಒಂದು ವಿಶೇಷ ಕಂಡಿತು. ಐವತ್ತರಿಂದ ನೂರರ ಗಿಳಿಗಳ ಗುಂಪೊಂದು  ನಮ್ಮ ಮುಂದೆಯೇ ಬಂದು ಇಳಿಯಿತು. ಕ್ಷಣ ಮಾತ್ರದಲ್ಲಿ ಭರ್ರೆಂದು ಹಾರಿ ಸ್ವಲ್ಪ ದೂರದಲ್ಲಿದ್ದ ಮರಗಳನ್ನು ಸೇರಿತು. ಮತ್ತೆ ಹತ್ತು ನಿಮಿಷಕ್ಕೆ ಅವೆಲ್ಲ ಗುಂಪುಗುಂಪಾಗಿ ಹಾರಿ ಬಂದು ನಮ್ಮ ಮುಂದೆ ಕುಳಿತು ಮರುಕ್ಷಣವೇ ಹಾರಿ ಮರಕ್ಕೆ ಹೋದವು. ಹೀಗೆ ನಾಲ್ಕಾರು ಬಾರಿ ಆದಾಗ ನನಗೆ ಭಾರೀ  ಆಶ್ಚರ್ಯ! ನಾನು ಹೀಗೆ ಗಿಳಿಗಳು ಮಾಡುವುದನ್ನು ಕಂಡಿರಲಿಲ್ಲ. ಇದರ ಬಗ್ಗೆ ಯಜಮಾನರನ್ನು ಕೇಳಿದೆ. ಅವರು ಹೇಳಿದ ವಿಷಯವನ್ನು ಪಾವ್‌ಲೋವ್ ಕೇಳಿದ್ದರೆ ತುಂಬ ಸಂತೋಷಪಡುತ್ತಿದ್ದ ಎನ್ನಿಸಿತು.

ಅವರು ಹೇಳಿದರು, ‘ನಾನು ದಿನಾಲು ಸಂಜೆಗೆ ಗಿಳಿಗಳಿಗೆ ಕಾಳು ಹಾಕುತ್ತೇನೆ. ಅದಕ್ಕೆ ಅವು ತಪ್ಪದೇ ಬರುತ್ತವೆ. ಕಾಳು ಹಾಕಿ ನಾನು ಕೂಗಿದಾಗ ಅವು ಹಾರಿ ಬರುತ್ತಿದ್ದವು. ಪ್ರತಿದಿನ ನನ್ನ ಕೂಗು ಮುಟ್ಟಿದ ತಕ್ಷಣ ಈ ಗಿಳಿಗಳ ಗುಂಪು ಬರುತ್ತಿತ್ತು. ನಾಲ್ಕು ತಿಂಗಳಿನ ಹಿಂದೆ ನನ್ನ ಗಂಟಲಿನ ತೊಂದರೆಗೆ ಆಪರೇಶನ್ ಆಯಿತು. ನನಗೆ ಕೂಗುವುದು ಆಗುತ್ತಿರ ಲಿಲ್ಲ. ಅದಕ್ಕೆ ಒಂದು ಕೋಲಿನಿಂದ ಮನೆಯ ಮುಂದಿನ ಮರಕ್ಕೆ ಟಪಟಪನೇ ಹೊಡೆಯುತ್ತಿದ್ದೆ. ಗಿಳಿಗಳಿಗೆ ಶಬ್ದವೇ ಅಭ್ಯಾಸವಾಗಿ ಬಿಟ್ಟಿದೆ.

ಆದರೆ ಈಗ ನಮ್ಮ ಮನೆಯ ಮುಂದಿನ ಮರದಲ್ಲಿ ಒಂದು ಮರಕುಟಿಕ ಪಕ್ಷಿ ಸೇರಿಕೊಂಡಿದೆ. ಅದು ಪಟಪಟನೇ ಮರವನ್ನು ಕುಕ್ಕಿದಾಗ ಗಿಳಿಗಳು ತಮಗೆ ಆಹಾರ ಬಂದಿತು ಎಂದುಕೊಂಡು ಹಾರಿಬರುತ್ತವೆ. ಅದಿಲ್ಲವೆಂದು ತಿಳಿದಾಗ ಹಾರಿ ಮರಳುತ್ತವೆ. ಪ್ರತಿಬಾರಿ ಮರಕುಟಿಕ ಶಬ್ದ ಮಾಡಿದಾಗಲೂ ಆಹಾರ ಬಂತೆಂದು ಬರುವುದು ಅವುಗಳಿಗೆ ಅಭ್ಯಾಸವಾದ ಪ್ರತಿಕ್ರಿಯೆಯಾಗಿದೆ.

ಅದಕ್ಕೇ ಅವು ಮರಳಿ ಮರಳಿ ಹಾರಿ ಬಂದು ಹೋಗುವುದು. ಈ ಅಭ್ಯಾಸ­ವಾದ ಪ್ರತಿಕ್ರಿಯೆ ಮನುಷ್ಯರಲ್ಲಿ ಬಹಳ ಪ್ರಭಾವವನ್ನು ಬೀರುತ್ತದೆ. ಯಾವುದೋ ವಿಷಯದಲ್ಲಿ ಅಭ್ಯಾಸ­ವಾದ ದ್ದನ್ನು ಬಿಡುವುದು ಕಷ್ಟ. ನಮ್ಮ ಆಲಸ್ಯ, ಹೇಡಿತನ, ಒರಟುತನ, ಚಟ, ಅಹಂಕಾರಗಳು ಅಭ್ಯಾಸವಾಗಿ ಹೋಗಿ ಬದುಕಿನಲ್ಲಿ ಹೊಸತು ಬರುವುದಕ್ಕೆ ತಡೆಯಾಗುತ್ತವೆ. ಪ್ರಯತ್ನ­ಪೂರ್ವಕ­ವಾಗಿ ಈ ಅನವಶ್ಯಕವಾದ ಅಭ್ಯಾಸ­ವಾದ ಪ್ರತಿಕ್ರಿಯೆಗಳನ್ನು ತೊರೆಯದ ಹೊರತು ಬಾಳು ಅರಳುವುದು ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.