ADVERTISEMENT

ಕರ್ತವ್ಯ

ಡಾ. ಗುರುರಾಜ ಕರಜಗಿ
Published 3 ಜುಲೈ 2012, 19:30 IST
Last Updated 3 ಜುಲೈ 2012, 19:30 IST

ಇತ್ತೀಚಿಗೆ ಒಂದು ಬಹುದೊಡ್ಡ ಅಸ್ಪತ್ರೆಯಲ್ಲಿ ನಡೆದ ಘಟನೆ. ಆ ಆಸ್ಪತ್ರೆಯಲ್ಲಿ ಮೂರು - ನಾಲ್ಕು ಅಪರೇಷನ್ ಥಿಯೇಟರುಗಳಿವೆ, ನೂರಾರು ದಾದಿಯರಿದ್ದಾರೆ. ಅದರಲ್ಲಿ ಕೆಲವು ಹಿರಿಯರು, ಸಾಕಷ್ಟು ಅನುಭವವಿದ್ದವರು ಇದ್ದರು.
 
ಆದರೂ ಆಪರೇಷನ್‌ಥಿಯೇಟರ್‌ನ ಸಕಲ ಜವಾಬ್ದಾರಿಗಳನ್ನು ಹೊರುವವರು ಹೆಡ್‌ನರ್ಸ್. ಈ ಆಸ್ಪತ್ರೆಯಲ್ಲಿ ಹೆಡ್‌ನರ್ಸ್ ಕೆಲಸ ಖಾಲಿಯಾಗಿತ್ತು, ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ಅನೇಕರನ್ನು ಸಂದರ್ಶಿಸಿ ಕೊನೆಗೊಬ್ಬರನ್ನು ಆಯ್ಕೆ ಮಾಡಲಾಯಿತು.
 
ಆಕೆಗೂ ಸಾಕಷ್ಟು ಅನುಭವವಿತ್ತು. ನೇಮಕವಾದ ಮರುದಿನವೇ ಒಂದು ದೊಡ್ಡ ಅಪರೇಷನ್ ಇತ್ತು. ಆಕೆಗೆ ಜವಾಬ್ದಾರಿಯನ್ನು ವಹಿಸಿದರು ಮುಖ್ಯ ಸರ್ಜನ್.     

ದೊಡ್ಡ ಆಪರೇಷನ್‌ಮಾಡಲು ಕೇವಲ ಶಸ್ತ್ರ ಚಿಕಿತ್ಸಕರು ಮಾತ್ರ ಸಾಕಾಗುವುದಿಲ್ಲ. ಅದೊಂದು ಪರಿಣತ ತಂಡದ ಒಟ್ಟು ಪ್ರಯತ್ನ. ಯಾರಾದರೂ ಒಬ್ಬರಿಂದ ತಪ್ಪಾದರೂ ಅದೊಂದು ಅನಾಹುತವೇ ಆಗುತ್ತದೆ.

ಎಲ್ಲ ಪರಿಕರಗಳೂ ಸರಿಯಾಗಿವೆ ಮತ್ತು ಪ್ರತಿಯೊಂದು ಹಂತವೂ ಸರಿಯಾಗಿ ನಡೆಯುತ್ತದೆ ಎಂಬುದನ್ನು ಗಮನಿಸುವುದು ಹೆಡ್‌ನರ್ಸ್ ಕೆಲಸ. ಅದಲ್ಲದೇ ಶಸ್ತ್ರಚಿಕಿತ್ಸಕರಿಗೆ ಬೇಕಾಗುವ ಪ್ರತಿ ಉಪಕರಣವನ್ನು ಸರಿಯಾಗಿ ಜೋಡಿಸಿಟ್ಟುಕೊಂಡು ಅವರ ಸನ್ನೆಯನ್ನೇ ಗಮನಿಸಿ ಅವರ ಕೈಗೆ ಕೊಡಬೇಕಾಗುತ್ತದೆ.

ಒಂದೊಂದು ಕ್ಷಣವೂ ಅಮೂಲ್ಯವಾದ್ದರಿಂದ ಎಲ್ಲ ಸಾಮಗ್ರಿಗಳು ಸರಿಯಾದ ಪ್ರಮಾಣದಲ್ಲಿ ಅಲ್ಲಿರಬೇಕು ಮತ್ತು ಅನವಶ್ಯಕವಾದ ಸಾಮಗ್ರಿಗಳನ್ನು ತೆಗೆಸಿಬಿಡಬೇಕು. ಎಲ್ಲ ನರ್ಸುಗಳು ಸರಿಯಾಗಿ ಕೆಲಸ ಮಾಡುತ್ತಿದ್ದಾರೆಯೇ ಎಂದು ಗಮನಿಸುವುದು ಹೆಡ್‌ನರ್ಸ್ ಕೆಲಸ. ಹೀಗಾಗಿ ಆಪರೇಷನ್ ಮುಗಿಯುವವರೆಗೆ ಹೆಡ್‌ನರ್ಸ್ ಮೈ ಎಲ್ಲ ಕಣ್ಣಾಗಿರಬೇಕಾಗುತ್ತದೆ.

ಮರುದಿನ ಬೆಳಿಗ್ಗೆ ಆಪರೇಷನ್ ಪ್ರಾರಂಭವಾಯಿತು. ಅದು ಸುಮಾರು ಮೂರು ತಾಸು ನಡೆಯುವ ಆಪರೇಷನ್. ಅದು ಮೂರೇ ತಾಸು ಎಂದು ಹೇಳುವಂತಿಲ್ಲವಲ್ಲ. ಆಗಿನ ದೇಹ ಸ್ಥಿತಿಯನ್ನು ಗಮನಿಸಿ ಕಾರ್ಯನಿರ್ವಹಿಸಬೇಕಾದುದರಿಂದ ಹೆಚ್ಚು ಸಮಯ ಬೇಕಾದರೂ ಆಗಬಹುದು.
 
ಆಪರೇಷನ್ನಿನ ಪ್ರತಿಯೊಂದು ಹಂತದಲ್ಲೂ ಹೊಸ ಹೆಡ್‌ನರ್ಸ್ ತಮ್ಮ ಕೆಲಸವನ್ನು ಚೆನ್ನಾಗಿ ನಿಭಾಯಿಸಿದರು. ಎಲ್ಲ ನರ್ಸ್‌ಗಳನ್ನು ತಮ್ಮ ಕಣ್ಸನ್ನೆಯಲ್ಲೆೀ ನಿಯಂತ್ರಣಕ್ಕೆ ತೆಗೆದುಕೊಂಡು ನಡೆಯಿಸಿದರು.

ಈಗ ಆಪರೇಷನ್ ಮುಗಿಯುವ ಹಂತಕ್ಕೆ ಬಂತು. ದೇಹದ ತೆರೆದ ಭಾಗವನ್ನು ಹೊಲಿಗೆ ಹಾಕಿ ಮುಚ್ಚಬೇಕು. ಸರ್ಜನ್ ಹೇಳಿದರು,  ಈಗ ಹೊಲಿಗೆ ಹಾಕಬೇಕು. ಸೂಜಿಯನ್ನು ಕೊಡಿ. ತಕ್ಷಣ ಹೆಡ್‌ನರ್ಸ್ ಹೇಳಿದರು,  ಸರ್, ಒಸರುತ್ತಿದ್ದ ರಕ್ತವನ್ನು ತೆಗೆಯಲು ತಾವು ಹನ್ನೆರಡು ಸ್ಪಂಜ್ ಬಳಸಿದ್ದೀರಿ ಆದರೆ ಹೊರಗೆ ಹನ್ನೊಂದೇ ಬಂದಿವೆ. ಸ್ವಲ್ಪ ಗಮನಿಸಬೇಕು.

ಸರ್ಜನ್,  ಇಲ್ಲ, ಇಲ್ಲ ಬಳಸಿದ್ದೇ ಹನ್ನೊಂದು, ನೀವು ತಪ್ಪಾಗಿ ಎಣಿಸಿದ್ದೀರಿ  ಎಂದರು. ಆಗ ಆಕೆ ದೃಢವಾದ ಧ್ವನಿಯಲ್ಲಿ,  ಸರ್, ನಾನು ಸರಿಯಾಗಿ ಎಣಿಸಿಕೊಟ್ಟಿದ್ದೇನೆ. ಒಂದು ಕಡಿಮೆಯಾಗಿದೆ ಸರ್  ಎಂದರು.
 
ಸರ್ಜನ್ ಮುಖ ಗಂಟಾಯಿತು, ಹುಬ್ಬೇರಿಸಿ,  ಏನ್ರೀ, ನಾನು ಒಂದು ಸ್ಪಂಜನ್ನು ದೇಹದಲ್ಲೆೀ ಬಿಟ್ಟು ಹೊಲಿಗೆ ಹಾಕುವಷ್ಟು ಬೇಜವಾಬ್ದಾರಿ ಎಂದುಕೊಂಡಿದ್ದೀರೇನ್ರೀ  ಎಂದು ಸಿಡುಕಿದರು.
 
ಹೆಡ್‌ನರ್ಸ್ ವಿಚಲಿತರಾಗದೇ,  ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ ಸರ್, ನಾವು ಬಳಸಿದ್ದು ಹನ್ನೆರಡು ಸ್ಪಂಜ್. ದಯವಿಟ್ಟು ರೋಗಿಯ ಬಗ್ಗೆ ಚಿಂತಿಸಿ. ಅಕಸ್ಮಾತ್ ತಪ್ಪಾದರೆ ಅನಾಹುತವಲ್ಲವೇ ಎಂದರು.
 
ಆಗ ಸರ್ಜನ್ ನಕ್ಕು, ತಮ್ಮ ಬಲಗಾಲನ್ನೆತ್ತಿ ಅದರ ಕೆಳಗಿದ್ದ ಸ್ಪಂಜನ್ನು ತೋರಿಸಿ,  ಸಿಸ್ಟರ್, ಇದೇ ಹನ್ನೆರಡನೆಯದು. ನಿಮ್ಮನ್ನು ಪರೀಕ್ಷಿಸಲು ಹೀಗೆ ಮಾಡಿದ್ದೆ  ಎಂದರು. ಎಲ್ಲರೂ ನಕ್ಕರು ಆಪರೇಷನ್ ಮುಗಿಯಿತು.
 
ನನಗೆ ಈ ಘಟನೆ ಮುಖ್ಯವೆನ್ನಿಸಿತು. ಮೇಲಿನವರು ಬೇಜಾರು ಮಾಡಿಕೊಂಡರೂ ತಮ್ಮ ಕರ್ತವ್ಯದಿಂದ ವಿಮುಖರಾಗದೇ ಸರಿಯಾದ ಅಭಿಪ್ರಾಯ  ನೀಡಿದ ಹೆಡ್‌ನರ್ಸ್ ಗುಣ ಮೆಚ್ಚುವಂತಹದ್ದು. ಮೇಲಿನವರು ಬೇಜವಾಬ್ದಾರಿಯಾದರೆ ನಾನೇಕೆ ತಲೆಕೆಡಿಸಿಕೊಳ್ಳಲಿ, ಅದು ಅವರ ಹಣೆಬರಹ ಎಂದು ಸುಮ್ಮನಿರುವವರೇ ಹೆಚ್ಚು.
 
ಆದರೆ, ಮೇಲಿನವರು ತಪ್ಪು ಮಾಡಿದಾಗ ಅದರಿಂದ ಅಗುವ ಅನಾಹುತವನ್ನು ಗಮನಿಸಿ, ಸರಿಯಾದ ದಾರಿ  ತೋರಿಸಿ, ತಿಳಿಸುವುದು ನಮ್ಮೆಲ್ಲರ ಕರ್ತವ್ಯವಲ್ಲವೇ. ಹಾಗಾದಾಗ ಇಡೀ ಸಮಾಜ ಜವಾಬ್ದಾರಿಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.