ADVERTISEMENT

ಕುಗ್ಗಿದ ಆತ್ಮವಿಶ್ವಾಸ

ಡಾ. ಗುರುರಾಜ ಕರಜಗಿ
Published 22 ಆಗಸ್ಟ್ 2012, 19:30 IST
Last Updated 22 ಆಗಸ್ಟ್ 2012, 19:30 IST

ಅ ವನೊಬ್ಬ ಹುಟ್ಟು ಕುರುಡ. ಅವನಿಗೆ ಈ ಜಗತ್ತು ಅಭ್ಯಾಸವಾಗಿ  ಹೋಗಿದೆ.  ತನ್ನ ಪರಿಸರದಲ್ಲಿ  ಆತ ತಿರುಗಾಡುತ್ತಿದ್ದರೆ ಆತ ಕುರುಡ ಎಂದು ಹೇಳುವುದೇ ಕಷ್ಟ. ಎಲ್ಲಿ  ಯಾವ ಬಾಗಿಲಿದೆ, ಎಷ್ಟು ಮೆಟ್ಟಿಲುಗಳಿವೆ, ಎಲ್ಲಿ  ಮರಗಳಿವೆ. ಎಲ್ಲ ಚೆನ್ನಾಗಿ ಗೊತ್ತು.
 
ಮನೆಯಿಂದ ದೂರ ಎಲ್ಲಿಯಾದರೂ ಹೋದರೆ ಅವನ ಬಿಳಿಯ ಕೋಲು ಅವನ ಸಂಗಾತಿ. ಅದನ್ನು ಮುಂದೆ ಚಾಚಿ, ನೆಲವನ್ನು ತಟ್ಟುತ್ತ ಆತ್ಮವಿಶ್ವಾಸದಿಂದ ಹೊರಟೇಬಿಡುತ್ತಿದ್ದ. ಒಂದು ಬಾರಿ ತಮ್ಮ ದೂರದ ಸಂಬಂಧಿಯಾದ ಹಿರಿಯರನ್ನು ನೋಡಲು ಹೋದ.

ಅಲ್ಲಿಯೇ ಅವರು ಊಟಮಾಡಿ ಹೋಗಲು ಒತ್ತಾಯ ಮಾಡಿದರು. ಅಲ್ಲಿಂದ ಹೊರಡುವಾಗ ಕತ್ತಲೆಯಾಯಿತು.  ಹೊರಟು ನಿಂತ ಈತನಿಗೆ ಹಿರಿಯರು `ಒಂದು ನಿಮಿಷ ಇರು, ನಿನಗೊಂದು ಲಾಟೀನು ಕೊಡುತ್ತೇನೆ. ರಸ್ತೆಯಲ್ಲಿ  ಕತ್ತಲೆ ಇದೆ~ ಎಂದರು. ಆಗ ಆತ  `ನನಗೆ ಲಾಟೀನೇಕೆ. ಹುಟ್ಟು ಕುರುಡನಾದ ನನಗೆ ಈ ಲಾಟೀನಿನಿಂದ ಏನು ಪ್ರಯೋಜನ~  ಎಂದ. ಅವರು ನಕ್ಕು,  `ಅದು ನನಗೆ ಗೊತ್ತಿಲ್ಲವೇ. ನಿನ್ನ ಕೈಯಲ್ಲಿ  ಲಾಟೀನಿದ್ದರೆ ಕತ್ತಲೆಯಲ್ಲಿ ಎದುರು ಬರುವವರಿಗೆ ಗೊತ್ತಾಗುತ್ತದೆ. ಯಾರೊಬ್ಬರೂ ಬಂದು ನಿನಗೆ ಹಾಯುವುದಿಲ್ಲ~  ಎಂದರು. ಈತನಿಗೂ ಸರಿ ಎನ್ನಿಸಿತು. ಲಾಟೀನನ್ನು ಎಡಕೈಯಲ್ಲಿ  ಹಿಡಿದು, ಬಲಗೈಯಲ್ಲಿ  ಬಿಳಿ  ಕೋಲನ್ನು ಹಿಡಿದು ಮನೆಯ ಕಡೆಗೆ ನಡೆದ.

ಅವನಿನ್ನೂ ಅರ್ಧ ಫರ್ಲಾಂಗ್ ಕೂಡ ಹೋಗಿರಲಿಲ್ಲ. ಯಾವನೋ ಒಬ್ಬ ಸೈಕಲ್ ಮೇಲೆ ಬರುತ್ತಿದ್ದವನು ಇವನಿಗೇ ನೇರವಾಗಿ ಬಂದು ಹಾಯ್ದು ಬಿಟ್ಟ. ಸೈಕಲ್ ಸವಾರನೂ ಕೆಳಗೆ ಬಿದ್ದ, ಕುರುಡನೂ ಲಾಟೀನಿನ ಜೊತೆಗೆ ಬಿದ್ದ. ಸೈಕಲ್ಲಿ ನವನು ಎದ್ದು ಸೈಕಲ್ಲನ್ನು ನೇರವಾಗಿ ನಿಲ್ಲಿ ಸಿ, ಈತನ ಲಾಟೀನನ್ನು ಎತ್ತಿ ಇವನ ಕೈಗೆ ಕೊಟ್ಟ. ಅಷ್ಟರಲ್ಲಿ  ಕುರುಡನಿಗೆ ಭಾರಿ ಸಿಟ್ಟು ಬಂದಿತ್ತು.  `ಏನಪ್ಪಾ, ನೀನೂ ಕುರುಡನೇ. ನಾನಂತೂ ಕುರುಡ.
ಎದುರು ಬರುವವರಾದರೂ ಲಾಟೀನನ್ನು ನೋಡಿ ನನಗೆ ಹಾಯಬಾರದೆಂದು ಇದನ್ನು ತಂದರೆ ಅದನ್ನು ಗಮನಿಸಲಿಲ್ಲವೇ~  ಎಂದು ಧ್ವನಿ ಏರಿಸಿದ. ಆಗ ಸೈಕಲ್ಲಿನವ, `ಸ್ವಾಮಿ, ನೀವು ಲಾಟೀನೇನೋ ತಂದಿರಿ ಸರಿ. ಆದರೆ ಅದರೊಳಗೆ ದೀಪವಿರಬೇಡವೇ. ದೀಪವಿಲ್ಲದ ಲಾಟೀನು ಅದು ಹೇಗೆ ಕಂಡೀತು~  ಎಂದು ಪ್ರಶ್ನಿಸಿದ.

ಈತ ಮುಖ ತಗ್ಗಿಸಿಕೊಂಡು ಮರಳಿ ಮನೆಯ ಯಜಮಾನ ಬಳಿಗೆ ಹೋದ.  ಸ್ವಾಮಿ, `ಇನ್ನು ಮೇಲೆ ಯಾವ ಕುರುಡನ ಕೈಯಲ್ಲೂ ಲಾಟೀನು ಕೊಡಬೇಡಿ. ಯಾಕೆಂದರೆ ಅದರೊಳಗೆ ದೀಪವಿದೆಯೋ, ಇಲ್ಲವೋ ಎಂದು ತಿಳಿಯುವುದು ಹೇಗೆ. ನಾನು ಲಾಟೀನಿಲ್ಲದಾಗ ಊರುಗೋಲಿನ ಆಸರೆಯೊಂದಿಗೆ ಆತ್ಮವಿಶ್ವಾಸದಿಂದ ನಡೆಯುತ್ತಿದ್ದೆ.

ಈ ಲಾಟೀನು ಕೈಗೆ ಬಂದೊಡನೆ ನನಗೆ ಊರುಗೋಲಿನ ಮೇಲಿನ ವಿಶ್ವಾಸ ಕಡಿಮೆಯಾಗಿ ಲಾಟೀನಿನ ಮೇಲೆ ನಂಬಿಕೆ ಹೆಚ್ಚಾಯಿತು. ನನಗೆ ಗೊತ್ತಿಲ್ಲದ ವಿಷಯದಲ್ಲಿ  ನಂಬಿಕೆ ಹೆಚ್ಚಾಗಿ, ಗೊತ್ತಿರುವ ವಿಷಯದಲ್ಲಿ  ನಂಬಿಕೆ ಕಡಿಮೆಯಾದಾಗ ಇಂತಹ ಅನಾಹುತಗಳಾಗುತ್ತವೆ~  ಎಂದು ಲಾಟೀನನ್ನು ಅಲ್ಲಿಯೇ ಇಟ್ಟು ಮನೆಗೆ ಬಂದ. ಎಷ್ಟೋ ಬಾರಿ ನಾವು ಒಳ್ಳೆಯದನ್ನೇ ಮಾಡಲು ಹೋದಾಗ ಪ್ರತಿಕೂಲವೇ ಆಗುತ್ತದೆ. ಸಹಾಯ ಮಾಡುವಾಗ, ನಮ್ಮ ಸಹಾಯದಿಂದ ನಿಜವಾಗಿಯೂ ಪಡೆದವರಿಗೆ ಒಳ್ಳೆಯದಾದೀತೇ ಎಂದು ಹತ್ತು ಬಾರಿ ಚಿಂತಿಸಬೇಕು. ನಮ್ಮ ಸಹಾಯ ಅವರ ಸ್ವಾಭಾವಿಕ ಆತ್ಮವಿಶ್ವಾಸ ಕುಗ್ಗಿಸಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.