ADVERTISEMENT

ಧೈರ್ಯಶಾಲಿಗಳ ಕೆಲಸ

ಡಾ. ಗುರುರಾಜ ಕರಜಗಿ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST

ಮಹಾನ್ ದಾರ್ಶನಿಕ, ಕವಿ, ವಿಮರ್ಶಕ, ಸ್ವಾತಂತ್ರ್ಯಪ್ರೇಮಿ, ಕ್ರಾಂತಿಕಾರಿ ಅರವಿಂದರು ಪಾಂಡಿಚೆರಿಯಲ್ಲಿ ತಮ್ಮ ಆಶ್ರಮವನ್ನು ಸ್ಥಾಪಿಸಿದರು. ಶ್ರೀಮಾತೆಯವರು ಅವರೊಂದಿಗೆ ಕೈ ಜೋಡಿಸಿ ಅಹರ್ನಿಶಿ ದುಡಿದರು. ಅರವಿಂದರ ನಂತರ ಆಶ್ರಮವನ್ನು ಸಮರ್ಥವಾಗಿ ನಡೆಸಿ ಅನೇಕರಿಗೆ ದಾರಿದೀಪವಾದರು. ಅವರು ಜನರಿಗೆ ಅದರಲ್ಲೂ ಯುವಕರಿಗೆ ಮಾರ್ಗದರ್ಶನ ಮಾಡುತ್ತಿದ್ದ ರೀತಿ ಅನನ್ಯವಾದದ್ದು.

ಆಶ್ರಮದಲ್ಲಿ ಬೇರೆ ಬೇರೆ ದೇಶಗಳಿಂದ ಬಂದ ಜನ ಜೊತೆ ಜೊತೆಯಾಗಿ ಇರುತ್ತಿದ್ದರು. ಎಲ್ಲರೂ ಬೇರೆ ಬೇರೆ ಹಿನ್ನೆಲೆಯಿಂದ ಬಂದವರಾದ್ದರಿಂದ ಆಗಾಗ ಭಿನ್ನಾಭಿಪ್ರಾಯಗಳು, ವಿರುದ್ಧವಾದ ಚಿಂತನೆಗಳು ಬರುವುದು ಸಾಮಾನ್ಯ. ಬಹಳಷ್ಟು ಜನ ಆಶ್ರಮದ ರೀತಿ ರಿವಾಜುಗಳನ್ನು ಅರಿತು ಜವಾಬ್ದಾರಿಯಿಂದ ನಡೆಯುತ್ತಿದ್ದರು. ಆದರೆ ಕೆಲವು ತರುಣರು ಸ್ವಲ್ಪ ಬೇಜವಾಬ್ದಾರಿಯಿಂದ ನಡೆದು ಕಿರಿಕಿರಿಯನ್ನುಂಟು ಮಾಡುತ್ತಿದ್ದರು.

ಯುರೋಪದಿಂದ ಬಂದ ಒಬ್ಬ ಹುಡುಗನಿಗೆ ಮುಂಗೋಪ ಹೆಚ್ಚು. ಮಾತಿನ ಹಿಂದೆಯೇ ಕೈ ಬರುತ್ತಿತ್ತು. ಕೆಲವೊಮ್ಮೆ ಈ ಹೊಡೆದಾಟ ಅತಿರೇಕಕ್ಕೆ ಹೋದದ್ದೂ ಉಂಟು. ಈ ವಿಷಯದ ಬಗ್ಗೆ ಶ್ರೀಮಾತೆಯವರ ಹತ್ತಿರ ದೂರು ಹೋಯಿತು. ಒಂದು ಸಲ ಅವನನ್ನು ಹತ್ತಿರಕ್ಕೆ ಕರೆದು ತಿಳಿ ಹೇಳಿದರು, ನಂತರ ಸ್ವಲ್ಪ ಗದರಿ ಹೇಳಿದರು, ಕೊನೆಗೆ ಹೆದರಿಸಿದರು. ಹೀಗೆ ಹೇಳಿದ ನಾಲ್ಕಾರು ದಿನ ವಾತಾವರಣ ತಣ್ಣಗಿರುತ್ತಿತ್ತು ಮತ್ತೆ ಅವನಿಗೂ ಅರಿವಿಲ್ಲದಂತೆ ಕೋಪದ ಕಾವು ಏರುತ್ತಿತ್ತು.

ADVERTISEMENT

ಒಂದು ಸಂದರ್ಭ ಸ್ವಲ್ಪ ಅತಿಯೇ ಆದಾಗ ಶ್ರೀಮಾತೆ ಅವನನ್ನು ಕರೆದು ಕೇಳಿದರು, `ಗಾಜನ್ನು ಮಾಡುವುದು ಸುಲಭವೋ ಇಲ್ಲ ಒಡೆಯುವುದು ಸುಲಭವೋ~ ಆ ಹುಡುಗ ನಕ್ಕು ಹೇಳಿದ.  `ಇದೆಂಥ ಪ್ರಶ್ನೆ? ಒಡೆಯುವುದು ತುಂಬ ಸುಲಭವಲ್ಲವೇ? ಗಾಜು ಮಾಡಲು ಎಷ್ಟೊಂದು ಪ್ರಯತ್ನ, ಸಮಯ ಬೇಕು.~

`ಸುಲಭವಾದ ಕೆಲಸವನ್ನು ಯಾರಾದರೂ ಮಾಡಬಹುದು. ಅಶಕ್ತರೂ ಮಾಡಬಹುದು. ಆದರೆ ಬಲಶಾಲಿಗಳು, ತಾಳ್ಮೆಯುಳ್ಳವರು ಮಾತ್ರ ಕಠಿಣವಾದ ಕೆಲಸಗಳನ್ನು ಮಾಡಬಲ್ಲರು, ಅಲ್ಲವೇ?~   `ಹೌದು ಧೈರ್ಯಶಾಲಿಗಳು ಮಾತ್ರ ಕಠಿಣವಾದ ಕೆಲಸಗಳನ್ನು ಮಾಡಬಲ್ಲರು~ ಎಂದ ತರುಣ.

`ಈಗ ಹೇಳು ಸಿಟ್ಟು ಬಂದಾಗ ಕೈ ಎತ್ತಿ ಹೊಡೆಯುವುದು ಸುಲಭವೋ ಅಥವಾ ಕೈಯನ್ನು ಬಿಗಿ ಹಿಡಿದು ತಡೆದುಕೊಳ್ಳುವುದು ಸುಲಭವೋ?~ ಮಾತೆ ಕೇಳಿದರು.

ತರುಣ ಕ್ಷಣಕಾಲ ಚಿಂತಿಸಿದ. ನಂತರ ನಿಧಾನವಾಗಿ ಹೇಳಿದ, `ಸಿಟ್ಟು ಬಂದಾಗ ತಡೆದುಕೊಂಡು ಕೈ ಎತ್ತದಿರುವುದು ಕಷ್ಟದ ಕೆಲಸ.~

`ಹಾಗಾದರೆ, ನೀನು ನಿನ್ನನ್ನು ಧೈರ್ಯಶಾಲಿ ಎಂದು ಭಾವಿಸಿದ್ದೇ ಆದರೆ ಮುಂದಿನ ಬಾರಿ ನಿನಗೆ ಸಿಟ್ಟು ಬಂದಾಗ ಮುಷ್ಟಿ ಬಿಗಿಹಿಡಿದು ತಾಳಿಕೊಳ್ಳಬೇಕು. ಒಂದು ವೇಳೆ ನಿನ್ನ ಕೈ ಮೇಲೆ ಎದ್ದಿದ್ದೇ ಆದರೆ ನೀನು ಬಲಶಾಲಿಯಲ್ಲ, ಕೇವಲ ಹೇಡಿ ಎಂಬುದು ನಿರ್ಧಾರವಾಗುತ್ತದೆ~ ಎಂದು ಮಾತೆ ಅವನ ಮುಖ ನೋಡಿದರು.

ಅವನ ಮುಖದ ಮೇಲೆ ಚಿಂತೆಯ ಮೋಡಗಳು ಕವಿದವು. ನಿಧಾನವಾಗಿ ಹೇಳಿದ, `ನಾನು ಧೈರ್ಯಶಾಲಿ ಎಂಬುದನ್ನು ತೋರಿಸುತ್ತೇನೆ.~

ಮೂರು ದಿನಗಳ ನಂತರ ತರುಣ ಮಾತೆಯವರತ್ತ ಓಡಿ ಬಂದ. ಮತ್ತೆ ಏನು ಕೋಲಾಹಲ ಮಾಡಿ ಬಂದಿದ್ದಾನೋ ಎಂದು ಚಿಂತಿಸುವಷ್ಟರಲ್ಲಿ ಅವನು ಜೋರಾಗಿ ನಕ್ಕು ಹೇಳಿದ, `ಇಂದೊಂದು ತಮಾಷೆಯಾಯಿತು. ನನ್ನ ಸ್ನೇಹಿತನೊಬ್ಬನೊಡನೆ ಭಿನ್ನಾಭಿಪ್ರಾಯ ಬಂದಿತು. ಮಾತಿಗೆ ಮಾತು ಬೆಳೆಯಿತು. ಅವನು ಕೋಪದಿಂದ ನನ್ನ ಹೊಡೆಯಲು ಕೈ ಎತ್ತಿದ. ನಾನು ಧೀರನಲ್ಲವೇ? ಮುಷ್ಟಿ ಬಿಗಿದು ಸುಮ್ಮನೆ ನಿಂತೆ, ನಿಧಾನಕ್ಕೆ ಕೈ ಮುಂದೆ ಚಾಚಿದೆ. ಅವನೂ ನಗುತ್ತ ನನ್ನ ಕೈ ಹಿಡಿದುಕೊಂಡು ಬಾಚಿ ತಬ್ಬಿಕೊಂಡ. ಈಗ ನಾವು ಮೊದಲಿಗಿಂತ ಹೆಚ್ಚು ಆಪ್ತ ಸ್ನೇಹಿತರು.~ ಮಾತೆ ಹೇಳಿದರು,  `ಕ್ರೋಧ ಅಳಿದಾಗಲೇ ಸ್ನೇಹ ಪಕ್ವವಾಗುವುದು. ಕ್ರೋಧವನ್ನು ನಿಗ್ರಹಿಸುವುದು, ಕೇವಲ ಧೀರರ ಕೆಲಸ. ನೀನೀಗ ದೊಡ್ಡ ಧೀರ.~ ಹುಡುಗ ಬೀಗುತ್ತ ನಡೆದ.

ಸ್ನೇಹ, ಬಾಂಧವ್ಯ, ಪ್ರೀತಿಗಳು ಕ್ರೋಧದ ಜ್ವಾಲೆಯಲ್ಲಿ ಅರಳಲಾರವು. ಈ ಕ್ರೋಧದಿಂದ ಆದ ಅನಾಹುತಗಳನ್ನು ನಾವು ಪುರಾಣಗಳಲ್ಲಿ, ಇತಿಹಾಸದಲ್ಲಿ ಕಂಡಿದ್ದೇವೆ, ಆದರೂ ನಿಗ್ರಹಿಸಲು ಸಾಧ್ಯವಾಗಿಲ್ಲ. ಅದಕ್ಕೇ ಹೇಡಿಗಳಾಗಿದ್ದೇವೆ, ಯಾಕೆಂದರೆ ಕ್ರೋಧವನ್ನು ಜಯಿಸುವುದು, ನಿಯಂತ್ರಿಸುವುದು ಕೇವಲ ಧೀರರ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.