ಇವರು ನಾಲ್ಕು ಜನ ಸ್ನೇಹಿತರು. ಬಾಲ್ಯದಿಂದ ಒಂದೇ ಊರಿನಲ್ಲಿ ಜೊತೆಗೇ ಬೆಳೆದವರು. ನಾಲ್ಕೂ ಜನರ ತಂದೆಯಂದಿರು ಕೃಷಿ ಮಾಡಿಕೊಂಡಿದ್ದವರು. ಹಳ್ಳಿಯಲ್ಲಿ ಶಾಲೆ ಕಲಿತ ಮೇಲೆ ನಾಲ್ವರೂ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಹೋದರು.
ಪಟ್ಟಣದಲ್ಲಿ ವಿದ್ಯೆ ಮುಗಿಸಿದ ಮೇಲೆ ಅಲ್ಲಿನ ಆಕರ್ಷಣೆಗಳು ಅವರನ್ನು ಸೆರೆಹಿಡಿದು ನಿಲ್ಲಿಸಿದವು. ನಾಲ್ಕಾರು ವರ್ಷ ಅಲ್ಲಿಯೇ ಕೆಲಸ ಮಾಡಿದರು. ಹಳ್ಳಿಯಲ್ಲಿ ಪಕ್ಷಿಗಳಂತೆ ಹಾಯಾಗಿ ಇದ್ದವರಿಗೆ ಪಟ್ಟಣದ ಏಕತಾನತೆಯ ಜೀವನ ಬೇಸರ ತರಿಸಿತು. ಇಲ್ಲಿಯ ಅವಸರ, ಧಾವಂತ, ಉಸಿರುಕಟ್ಟಿ ಓಡುವಿಕೆ ಅಲ್ಲದೇ ನಿಸರ್ಗದಿಂದ ದೂರವಾದ ಜೀವನ ಅವರಿಗೆ ಸಾಕಾಯಿತು.
ಇವರ ತಂದೆ-ತಾಯಂದಿರೂ ಮಕ್ಕಳು ಹಳ್ಳಿಗೆ ಮರಳಲೆಂದು ಅಪೇಕ್ಷೆ ತೋರಿದರು. ಆಗ ಈ ತರುಣರು ಮರಳಿ ತಮ್ಮಂದಿಗೆ ಬಂದು ಮನೆ ಸೇರಿದರು. ಹಳ್ಳಿಯಲ್ಲೇ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದಾಗ ಹಿರಿಯರೊಬ್ಬರು ಬುದ್ಧಿ ಹೇಳಿದರು. `ನೋಡಿ, ನೀವು ಪಟ್ಟಣದಲ್ಲಿ ಮತ್ತೊಬ್ಬರ ಸಂಸ್ಥೆಯಲ್ಲಿ ದುಡಿದು ನೌಕರರಾಗಿ ಒಂದಿಷ್ಟು ಸಂಬಳ ಪಡೆದು ಜೀವನ ನಡೆಸುವುದಕ್ಕಿಂತ ನಿಮ್ಮ ನಿಮ್ಮ ಹೊಲಗಳಲ್ಲೇ ದುಡಿದರೆ ಅದಕ್ಕಿಂತ ಹೆಚ್ಚಾಗಿ ಗಳಿಸುವುದಲ್ಲದೇ ಸ್ವತಂತ್ರರಾಗಿ ಬದುಕುತ್ತೀರಿ.
ನಿಮಗೆ ಯಾರ ಹಂಗೂ ಇಲ್ಲ. ನೀವು ದುಡಿದಷ್ಟು ಹಣ ನೀಡುತ್ತಾಳೆ ಭೂತಾಯಿ.~ ಇವರಿಗೂ ಅದು ಸರಿ ಎನ್ನಿಸಿತು. ಮರುದಿನದಿಂದಲೇ ಹೊಲಗಳಿಗೆ ನಡೆದರು.ಇದೊಂದು ಹೊಸ ಕೆಲಸ ಅವರಿಗೆ. ಉತ್ಸಾಹದಿಂದಲೇ ಪ್ರಾರಂಭಿಸಿದರು. ತಾವು ಮರುವರ್ಷವೇ ಶ್ರೇಷ್ಠ ಕೃಷಿಕರಾಗಿ ಬಂಗಾರದ ಬೆಳೆ ತೆಗೆಯುವ ಕನಸು ಕಂಡರು. ಇವರ ದುರ್ದೈವವೋ ಅಥವಾ ಪರೀಕ್ಷೆಯ ಕಾಲವೋ ಆ ವರ್ಷ ಮಳೆ ಸರಿಯಾಗಿ ಆಗಲಿಲ್ಲ. ತಲೆ ಎತ್ತಿ ನಿಂತಿದ್ದ ಸಸಿಗಳು ಮೋರೆಚೆಲ್ಲಿ ಒಣಗುವ ಸೂಚನೆ ತೋರಿದವು.
ಒಬ್ಬ ನದೀ ದಂಡೆಯಲ್ಲಿ ಕುಳಿತು ಯೋಚಿಸಿದ. ನದಿಯಲ್ಲಿ ನೀರು ತುಂಬಿ ಹರಿಯದಿದ್ದರೂ ನೀರು ಸಾಕಷ್ಟಿತ್ತು. ಆದರೆ ಈತನ ಹೊಲ ನದಿ ದಂಡೆಯಲ್ಲಿಯೇ ಇದ್ದರೂ ಎತ್ತರದಲ್ಲಿದೆ. ಈತ ಹರಿಯುವ ನೀರನ್ನೇ ನೋಡುತ್ತ ಕೊರಗುತ್ತ ಕುಳಿತ.
ಇನ್ನೊಬ್ಬನ ಹೊಲವೂ ನದಿ ದಂಡೆಯಲ್ಲಿಯೇ ಇದೆ. ಆತನೂ ದುಃಖಿತನಾಗಿಯೇ ಇದ್ದ. ಆದರೆ ಸುಮ್ಮನೇ ಕುಳಿತುಕೊಳ್ಳದೇ ಎರಡೆರಡು ಬಕೆಟ್ಟುಗಳನ್ನು ತೆಗೆದುಕೊಂಡು ಸ್ವಲ್ಪ ಕೆಳಮಟ್ಟದಲ್ಲಿದ್ದ ನದಿಗೆ ಹೋಗಿ ಅವುಗಳನ್ನು ತುಂಬಿಕೊಂಡು ತಂದು ಸಾಧ್ಯವಿದ್ದಷ್ಟು ಮಟ್ಟಿಗೆ ಬೆಳೆಯುತ್ತಿದ್ದ ಸಸಿಗಳಿಗೆ ಹಾಕಿದ. ಸುಮಾರು ಅರ್ಧ ಎಕರೆಯಷ್ಟು ಜಮೀನಿನಲ್ಲಿ ಬೆಳೆಯನ್ನು ಉಳಿಸಿಕೊಂಡ.
ಮೂರನೆಯವನೂ ಚಿಂತಿಸಿದ. ಪಟ್ಟಣಕ್ಕೆ ಹೋಗಿ ಎರಡು ಆಶ್ವ ಶಕ್ತಿಯ ಪಂಪನ್ನು ತಂದು ಕೂಡ್ರಿಸಿದ, ದೂರದಿಂದ ವಿದ್ಯುತ್ ಶಕ್ತಿಯನ್ನು ತಂತಿಯ ಮೂಲಕ ಎಳೆದು ತಂದ. ನಂತರ ಅದನ್ನು ನದಿ ದಂಡೆಗೆ ಭದ್ರವಾಗಿ ನಿಲ್ಲಿಸಿ, ಪಂಪು ಹಚ್ಚಿ ಹೊಲಕ್ಕೆ ನೀರು ಸಾಗಿಸಿದ. ಸುಮಾರು ಐದು ಎಕರೆಯಷ್ಟು ಜಮೀನಿಗೆ ನೀರು ಪೂರೈಕೆಯಾಗಿ ಬೆಳೆ ಚಿಗುರಿತು.
ನಾಲ್ಕನೆಯವನು ಹತ್ತು ಅಶ್ವಶಕ್ತಿಯ ಪಂಪು ತಂದು ಕೂಡ್ರಿಸಿ ತನ್ನ ಹೊಲದಲ್ಲಿಯೇ ಎತ್ತರದ ಸ್ಥಳದಲ್ಲಿ ಒಂದು ದೊಡ್ಡ ಕಟ್ಟೆಯನ್ನು ಕಟ್ಟಿಸಿ ನದಿಯ ನೀರನ್ನು ಅದರಲ್ಲಿ ತುಂಬಿಸಿದ. ಕರೆಂಟ್ ಇದ್ದಾಗಲೆಲ್ಲ ಅದನ್ನು ತುಂಬಿಸಿಕೊಂಡು, ಕರೆಂಟ್ ಇಲ್ಲದಿದ್ದಾಗ ಕಟ್ಟೆಯ ನೀರನ್ನು ಹರಿಸಿ ತನ್ನ ಹದಿನೈದು ಎಕರೆಯ ಜಮೀನಿನ ಬೆಳೆ ನಗುನಗುವಂತೆ ಮಾಡಿದ. ನಂತರ ಭಾರೀ ಬೆಳೆ ಬೆಳೆದು ಶ್ರಿಮಂತನಾದ.
ನದಿ ಯಾರಿಗೂ ತನ್ನನ್ನು ಬಳಸಿಕೊಳ್ಳಬೇಡಿ ಎಂದು ಹೇಳಿರಲಿಲ್ಲ. ಆದರೆ ಎಲ್ಲರಿಗೂ ಅದನ್ನು ಚೆನ್ನಾಗಿ ಬಳಸುವ ಯೋಚನೆ ಬಂದಿರಲಿಲ್ಲ. ಎಲ್ಲರೂ ತಮ್ಮ ತಮ್ಮ ಶಕ್ತಿಗೆ ಅನುಸಾರವಾಗಿ, ನೀರನ್ನು ಪಡೆದುಕೊಂಡರು. ನಮ್ಮ ಜೀವನವೂ ನದಿ ತೀರದ ಹೊಲಗಳಂತೆ. ಬುದ್ಧಿ ಉಪಯೋಗಿಸಿ,. ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಜೀವನ ಸಮೃದ್ಧಿಯಾಗುತ್ತದೆ.
ಅವಕಾಶಗಳೇ ಬರಲಿಲ್ಲ ಎಂದು ಕಣ್ಣು ಮುಚ್ಚಿ ಕೊರಗುತ್ತ ಕುಳಿತರೆ ಕೊರಗು ಮಾತ್ರ ಉಳಿಯುತ್ತದೆ. ಯಾರೂ ನಮಗೆ ಅವಕಾಶಗಳನ್ನು ತಟ್ಟೆಯಲ್ಲಿಟ್ಟು ಕೊಡುವುದಿಲ್ಲ, ನಾವೇ ಅವುಗಳನ್ನು ಆರಿಸಿಕೊಂಡು ಹೋಗಿ ಪ್ರಯೋಜನ ಪಡೆದುಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.