ADVERTISEMENT

ನಮಗೇ ಮಾಡಿಕೊಂಡ ಅನ್ಯಾಯ

ಡಾ. ಗುರುರಾಜ ಕರಜಗಿ
Published 1 ಏಪ್ರಿಲ್ 2012, 19:30 IST
Last Updated 1 ಏಪ್ರಿಲ್ 2012, 19:30 IST

ಅವನೊಬ್ಬ ಕಳ್ಳ. ಭಾರೀ ಕಳ್ಳನೇನಲ್ಲ. ಸಣ್ಣಪುಟ್ಟ ಕಳ್ಳತನ ಮಾಡಿ ಜೀವನ ಸಾಗಿಸುತ್ತಿದ್ದ. ಅವನ ಹೆಂಡತಿ ಸತ್ತು ಹೋಗಿದ್ದಳು. ಉಳಿದವಳು ಅವನ ಮಗಳು ಮಾತ್ರ. ಆಕೆ ಪುಟ್ಟ ಹುಡುಗಿಯಾಗಿದ್ದಾಗ ಅಪ್ಪನ ಕೆಲಸವೇನೆಂಬುದು ತಿಳಿದಿರಲಿಲ್ಲ. ಬೆಳೆದಂತೆ ಆಕೆಗೆ ಅನುಮಾನ ಬಂದಿತು. ನಂತರ ಆಕೆ ಕಾಲೇಜಿಗೆ ಹೋಗುವ ವಯಸ್ಸು ಬಂದಾಗ ಅನುಮಾನ ಬಲವಾಗಿ ನಂಬಿಕೆಯಾಯಿತು.

ಆಕೆ ಅಪ್ಪನಿಗೆ ಹೇಳಿದಳು,  ಅಪ್ಪಾ ಈ ಕಳ್ಳತನದ ಕೆಲಸ ಬೇಡ. ನೀವು ಕೂಲಿ ಕೆಲಸ ಮಾಡಿದರೂ ಯಾವ ತೊಂದರೆಯೂ ಇಲ್ಲ. ಯಾವ ಕೆಲಸವೂ ಕನಿಷ್ಠವಲ್ಲ. ಆದರೆ ಈ ಅನ್ಯಾಯದ ದುಡ್ಡು ನಮಗೆ ಒಳ್ಳೆಯದನ್ನು ಮಾಡಲಾರದು. ಇದನ್ನು ಬಿಟ್ಟು ಬಿಡಿ .

ಅಪ್ಪನಿಗೂ ಇದೇ ರೀತಿ ಅನ್ನಿಸತೊಡಗಿತ್ತು. ಆತನೂ ನಿರ್ಧಾರಮಾಡಿ ಹಾಗೆಯೇ ಮಾಡುವುದೆಂದು ಚಿಂತಿಸುತ್ತಿದ್ದ. ಆದರೆ ವಿಧಿಯ ಯೋಜನೆಯೇ ಬೇರೆಯಾಗಿತ್ತು. ಅವನ ಮಗಳಿಗೆ ತಲೆನೋವಿನ ರೂಪದಲ್ಲಿ ಪ್ರಾರಂಭವಾದ ತೊಂದರೆ ದಿನಕಳೆದಂತೆ ದೊಡ್ಡದಾಗತೊಡಗಿತು. ಮೇಲಿಂದ ಮೇಲೆ ವೈದ್ಯರ ಬಳಿಗೆ ಎಡತಾಕಬೇಕಾಯಿತು.

ಅದಕ್ಕೆಲ್ಲ ಹಣಬೇಕಲ್ಲವೇ? ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಮಾರಿದ್ದಾಯಿತು.
ಕೊನೆಗೆ ವೈದ್ಯರು ಆಕೆಗೆ ಶಸ್ತ್ರಚಿಕಿತ್ಸೆಯಾಗದೆ ಗುಣವಾಗದೆಂದು ಹೇಳಿ ಒಂದು ದಿನವನ್ನು ಗೊತ್ತುಮಾಡಿದರು. ಈ ಚಿಕಿತ್ಸೆಗೆ ಸುಮಾರು ಒಂದು ಲಕ್ಷ ರೂಪಾಯಿ ಖರ್ಚಾಗಬಹುದೆಂದು ಅಂದಾಜು ನೀಡಿದರು.

ಈತನ ಎದೆ ಒಡೆದುಹೋಯಿತು. ಆದರೆ ಮಗಳಿಗೆ ಇದನ್ನು ಹೇಳದೇ ಹಣದ ವ್ಯವಸ್ಥೆಯಾಗಿದೆ ಎಂದು ಸುಳ್ಳು ಹೇಳಿದ. ಮನಸ್ಸಿನಲ್ಲೇ ಒಂದು ತೀರ್ಮಾನ ಮಾಡಿದ. ಈ ಬಾರಿ ಮಾತ್ರ ಕಳ್ಳತನ ಮಾಡಿಬಿಡುತ್ತೇನೆ. ಅದರಲ್ಲಿ ಬಂದ ಹಣದಲ್ಲಿ ಮಗಳಿಗೆ ಚಿಕಿತ್ಸೆ ಮಾಡಿಸಿ ನಂತರ ಈ ವೃತ್ತಿಯನ್ನು ಬಿಟ್ಟು ಪ್ರಾಮಾಣಿಕನಾಗಿ ಬದುಕುತ್ತೇನೆ.

ಎಲ್ಲಿ ಕಳ್ಳತನ ಮಾಡುವುದು ಎಂದು ಹೊಂಚು ಹಾಕಿ ನೋಡುತ್ತಿದ್ದ. ಮಗಳನ್ನು ಆಸ್ಪತ್ರೆಯಲ್ಲಿ ಸೇರಿಸಿದ್ದಾಗಿತ್ತು. ತಾನು ಮನೆಯಲ್ಲಿ ಒಬ್ಬನೇ. ತಾನಿರುವ ಸ್ಥಳದಿಂದ ಒಂದು ಕಿಲೋ ಮೀಟರ್ ದೂರದಲ್ಲಿದ್ದ ಮನೆಯ ಮೇಲೆ ಆತನ ಕಣ್ಣು ಬಿದ್ದಿತು. ಆ ಮನೆಯಲ್ಲಿ ಇಬ್ಬರೇ ಹೆಣ್ಣು ಮಕ್ಕಳು ಇರುತ್ತಿದ್ದರು. ಅದೇನು ಕೆಲಸಮಾಡುತ್ತಿದ್ದರೋ ತಿಳಿಯದು.

ಆದರೆ ಇಬ್ಬರೂ ಬೆಳಿಗ್ಗೆ ಒಂಭತ್ತು ಗಂಟೆಗೆ ಮನೆಯಿಂದ ಹೊರಟರೆ ಮತ್ತೆ ಬಂದು ಸೇರುವುದು ರಾತ್ರಿಯಾಗುವ ಹೊತ್ತಿಗೇ. ಅವರಿರುವ ಮನೆ ನೋಡಿದರೆ ಶ್ರಿಮಂತಿಕೆ ಕಾಣುತ್ತದೆ. ಮನೆಯ ಮುಂದೆ ನಿಂತಿರುವ ಕಾವಲುಗಾರನ ಮೈಮರೆಸುವುದು ಕಷ್ಟದ ಕೆಲಸವೇನಲ್ಲ.

ಅಂದೇ ಮಧ್ಯಾನ್ಹ ಮೂರು ಗಂಟೆಗೆ ಮಗಳ ಅಪರೇಶನ್. ಈತ ಬೆಳಿಗ್ಗೆ ಒಂಭತ್ತಕ್ಕಿಂತ ಮೊದಲೇ ಹೋಗಿ ಮನೆಯ ಮುಂದೆ ಹೋಗಿ ಯಾರಿಗೂ ಕಾಣದಂತೆ ನಿಂತ. ಒಬ್ಬ ಮಹಿಳೆ ತಮ್ಮ ಕಾರು ತೆಗೆದುಕೊಂಡು ಹೊರಗೆ ನಡೆದರು. ಇನ್ನೊಬ್ಬರು ಮೊದಲೇ ಹೋಗಿರಬೇಕೆಂದುಕೊಂಡು ಹಿಂದಿನ ಕಾಂಪೌಂಡ್‌ಹಾರಿ ಮನೆಯಲ್ಲಿ ಸೇರಿಕೊಂಡ.

ನಿಧಾನವಾಗಿ ಹಾಲಿನಲ್ಲಿ ಕಾಲಿಟ್ಟಾಗ ಇನ್ನೊಬ್ಬ ಮಹಿಳೆ ಎದುರಿಗೇ ಬಂದರು. ಈತ ತಕ್ಷಣ ಆಕೆಯ ಬಾಯಿಗೆ ವಸ್ತ್ರ ತುರುಕಿ ಕಟ್ಟಿ ಹಾಕಿದ. ಆಕೆ ಒದ್ದಾಡುತ್ತಿದ್ದರು. ಕಳ್ಳ ಮನೆಯಲ್ಲಿದ್ದ ಹಣ, ಬಂಗಾರವನ್ನು ಎತ್ತಿಕೊಂಡು ಹೊರಬಂದು, ಬಂಗಾರ ಮಾರಿ ದುಡ್ಡು ತಂದು ಆಸ್ಪತ್ರೆಗೆ ಕಟ್ಟಿದ.

ಮಗಳ ಅಪರೇಷನ್ನಿಗೆ ಕೇವಲ ಅರ್ಧಗಂಟೆ ಇದೆ. ಆಸ್ಪತ್ರೆಯ ವೈದ್ಯರಿಗೆ ಆತಂಕವಾಯಿತು. ಶಸ್ತ್ರಚಿಕಿತ್ಸೆ ಮಾಡುವ ವೈದ್ಯರು ಬಂದೇ ಇಲ್ಲ. ಮತ್ತೊಬ್ಬ ಡಾಕ್ಟರು ವೈದ್ಯರ ಮನೆಗೆ ಫೋನ್ ಮಾಡಿದರೆ ಯಾವ ಪ್ರತಿಕ್ರಿಯೆಯೂ ಇಲ್ಲ. ಸಮಯ ಮೀರುತ್ತಿದೆ.
 
ಈಗ ಶಸ್ತ್ರಚಿಕಿತ್ಸೆ ಆಗದಿದ್ದರೆ ಆಕೆಗೆ ಪ್ರಾಣಕ್ಕೆ ಅಪಾಯ. ಪ್ರಾಣ ಉಳಿದರೂ ಕಣ್ಣುಗಳು ಉಳಿಯುವುದು ಸಾಧ್ಯವಿಲ್ಲ. ಈ ವೈದ್ಯರಷ್ಟು ನಿಷ್ಣಾತರಾದವರು ನಗರದಲ್ಲಿ ಬೇರಾರೂ ಇಲ್ಲ. ವೈದ್ಯರು ಬರಲೇ ಇಲ್ಲ. ಹುಡುಗಿಗೆ ಎಚ್ಚರ ತಪ್ಪಿತು, ಸಂಜೆಯ ಹೊತ್ತಿಗೆ ಕಣ್ಣುಗಳ ಬೆಳಕು ಹೋಯಿತು. ಮರುದಿನ ಶಸ್ತ್ರಚಿಕಿತ್ಸೆ ಮಾಡಬೇಕಿದ್ದ ವೈದ್ಯರು ಬಂದರು.

ಹುಡುಗಿಯ ತಂದೆಯನ್ನು ಅಲ್ಲಿ ನೋಡಿ ಗಾಬರಿಯಾದರು. ಈತನೇ ತಮ್ಮನ್ನು ಕಟ್ಟಿ ಹಾಕಿ ಮನೆಯನ್ನು ಲೂಟಿಮಾಡಿದ್ದು ಎಂದು ದೂರುಕೊಟ್ಟರು. ಆಗ ಕಳ್ಳನಿಗೆ ಅರ್ಥವಾಯಿತು, ಆತ ಅವರ ಮನೆಯನ್ನು ಲೂಟಿ ಮಾಡಿರಲಿಲ್ಲ, ತನ್ನ ಭಾಗ್ಯವನ್ನು ತಾನೇ ಲೂಟಿ ಮಾಡಿಕೊಂಡಿದ್ದ.

ನಾವು ಅನ್ಯಾಯದ ದಾರಿಯನ್ನು ಹಿಡಿದಾಗ ನಮಗೆ ನಾವೇ ಅನ್ಯಾಯ ಮಾಡಿಕೊಳ್ಳುತ್ತೇವೆ. ಅದು ಆ ಕ್ಷಣ ಗೊತ್ತಾಗದೇ ಹೋಗಬಹುದು. ಆದರೆ ಆ ಶಿಕ್ಷೆ ನಮ್ಮನ್ನು ತಟ್ಟದೇ ಹೋಗುವುದಿಲ್ಲ. ಈ ಮಾತು ಅನ್ಯಾಯಮಾಡುವ ಮೊದಲೇ ಹೊಳೆದರೆ ಎಷ್ಟು ಒಳ್ಳೆಯದಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.