ADVERTISEMENT

ನಮ್ಮದಾದ ವಸ್ತು

ಡಾ. ಗುರುರಾಜ ಕರಜಗಿ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ಅವನೊಬ್ಬ ಕುರುಡ. ಅವನಿಗೆ ಸುಮಾರು ಎಪ್ಪತ್ತು ವರ್ಷ ವಯಸ್ಸು. ಆತ ಹುಡುಗನಾಗಿದ್ದಾಗ ಚೆನ್ನಾಗಿಯೇ ಇದ್ದನಂತೆ. ತಾರುಣ್ಯದಲ್ಲಿ ಸೈನ್ಯ ಸೇರಿದ. ಉತ್ಸಾಹದಿಂದ ಹೋರಾಡಿದ.

ವೈರಿಗಳ ನಾಡಿನಲ್ಲಿ ಹೋಗುತ್ತಿದ್ದಾಗ ನೆಲದಲ್ಲಿ ಅವಿತಿಟ್ಟಿದ್ದ ಬಾಂಬಿನ ಮೇಲೆ ಕಾಲಿಟ್ಟಾಗ ಅದು ಸಿಡಿದು ಹಾರಿಬಿದ್ದ. ಜೀವ ಉಳಿದರೂ ಎರಡೂ ಕಣ್ಣಿನ ದೃಷ್ಟಿ ಹೋಗಿಬಿಟ್ಟಿತ್ತು. ಸ್ವಲ್ಪ ದಿನ ಕೊರಗಿದ. ನಂತರ ಸಾವರಿಸಿಕೊಂಡು ಮೇಲೆದ್ದು ಅನಿವಾರ್ಯವಾದದ್ದನ್ನು ಒಪ್ಪಿಕೊಂಡು ಜೀವನವನ್ನು ನಡೆಸಿದ.

ಅವನು ಪ್ರತಿ ತಿಂಗಳು ಮೊದಲ ವಾರದಲ್ಲಿ ತಪ್ಪದೇ ಬ್ಯಾಂಕಿಗೆ ಬಂದು ಹಣವನ್ನು ಪಡೆದುಕೊಂಡು ಹೋಗುತ್ತಿದ್ದ. ಅವನೊಂದಿಗೆ ಅವನ ಸೋದರಳಿಯನೂ ಜೊತೆಗೆ ಸಹಾಯಕನಾಗಿ ಇರುತ್ತಿದ್ದ. ಕುರುಡ ಕ್ಯಾಶಿಯರ್ ಮುಂದೆ ಕುಳಿತು ಚೆಕ್‌ಗೆ ಸಹಿ ಮಾಡಿ ಕೊಡುತ್ತಿದ್ದ.

ಕ್ಯಾಶಿಯರ್ ಹಣವನ್ನು ಕೊಟ್ಟಾಗ ತಾನೇ ಆ ನೋಟುಗಳನ್ನು ಎಣಿಸಿ ನಂತರ ಮತ್ತೊಮ್ಮೆ ಸರಿಯಾಗಿ ಪರೀಕ್ಷಿಸಲು ಅಳಿಯನ ಕೈಗೆ ನೀಡುತ್ತಿದ್ದ. ಆ ಹುಡುಗನೂ ಇನ್ನೊಮ್ಮೆ ನೋಟುಗಳನ್ನು ಎಣಿಸಿ ಸರಿಯಾಗಿದೆ ಎನ್ನುತ್ತಿದ್ದ.
 
ಆದರೆ ನೋಟುಗಳನ್ನು ಮರಳಿ ಕೊಡುವಾಗ ಒಂದಷ್ಟು ನೋಟುಗಳನ್ನು ತೆಗೆದು ತನ್ನ ಜೇಬಿನಲ್ಲಿಟ್ಟುಕೊಳ್ಳುತ್ತಿದ್ದ. ಇದು ಪಾಪ ಕುರುಡನಿಗೆ ಹೇಗೆ ಗೊತ್ತಾಗಬೇಕು? ಪ್ರತಿ ತಿಂಗಳೂ ಹೀಗೆ ನಡೆಯುತ್ತಿತ್ತು.

ಇದನ್ನು ಕಂಡ ಕ್ಯಾಶಿಯರ್‌ನಿಗೆ ಬಹಳ ಬೇಜಾರಾಗುತ್ತಿತ್ತು. ಈ ಹುಡುಗ ತನ್ನ ಸೋದರ ಮಾವನಿಗೇ ಮೋಸಮಾಡುತ್ತಾನಲ್ಲ ಎಂದು ಸಿಟ್ಟೂ ಬರುತ್ತಿತ್ತು. ಒಂದು ಬಾರಿ ಇದನ್ನು ಮತ್ತೆ ಕಂಡಾಗ ಅವನಿಂದ ತಡೆಯಲಾಗದೇ ಈ ಕುರುಡನನ್ನು ಪ್ರತ್ಯೇಕವಾಗಿ ತನ್ನ ಕೊಠಡಿಗೆ ಕರೆದುಕೊಂಡು ಹೋಗಿ ಅ ಹುಡುಗ ಮಾಡುವ ಮೋಸವನ್ನು ವಿವರಿಸಿ, ಮುಂದೆ ಹುಷಾರಾಗಿರಬೇಕು ಎಂದು ಹೇಳಿದ.
 
ಆಗ ಕುರುಡ ಹೇಳಿದ, `ಹೌದು, ಇದು ನನಗೆ ಗೊತ್ತಿದೆ. ಪ್ರತಿ ತಿಂಗಳೂ ಆತ ಒಂದಷ್ಟು ಹಣವನ್ನು ತೆಗೆದುಕೊಳ್ಳುತ್ತಾನೆ. ನಾನು ಮನೆಗೆ ಹೋದಮೇಲೆ ಮತ್ತೊಮ್ಮೆ ಎಣಿಸಿ ನೊಡುತ್ತೇನಲ್ಲ.

ಆಗ ಗೊತ್ತಾಗುತ್ತದೆ. ಅದಕ್ಕೇ ನಾನು ಪ್ರತಿ ತಿಂಗಳು ನಿಮ್ಮಿಂದ ಒಂದೇ ಬೆಲೆಯ ನೋಟುಗಳನ್ನು ನೀಡಲು ಕೇಳಿಕೊಳ್ಳುತ್ತಿದ್ದೆ. ಹಾಗಾದಾಗ ನನಗೆ ಎಣಿಸುವುದು ಸುಲಭ.~ ಕ್ಯಾಶಿಯರ್ ಆಶ್ಚರ್ಯದಿಂದ ಕೇಳಿದ, `ನಿಮಗೆ ಗೊತ್ತಿದ್ದರೆ ಅದನ್ನು ಏಕೆ ತಡೆಯಲಿಲ್ಲ?~
ಕುರುಡ ಹೇಳಿದ,  `ಆತ ನನ್ನ ಸೋದರಳಿಯ.

ಆ ಹುಡುಗನಿಗೂ ಖರ್ಚು ಇರುತ್ತದಲ್ಲ? ನನಗೆ ಮಾಡಿದ ಸಹಾಯಕ್ಕೆ ನಾನು ಹಣ ಕೊಟ್ಟರೆ ಆತ ತೆಗೆದುಕೊಳ್ಳುವುದಿಲ್ಲ.ಆದ್ದರಿಂದ ಅತ ಹಣ ತೆಗೆದುಕೊಂಡಿದ್ದು ಗೊತ್ತಿದ್ದರೂ ಸುಮ್ಮನಿದ್ದು ಬಿಡುತ್ತೇನೆ.~  ಈ ಉತ್ತರ ಕ್ಯಾಶಿಯರ್‌ನಿಗೆ ಸಮಾಧಾನ ತರಲಿಲ್ಲ.

ಮುಂದೆ ಒಂದು ವರ್ಷ ಕಳೆದ ಮೇಲೆ ಕ್ಯಾಶಿಯರ್‌ನಿಗೆ ಕುರುಡ ತೀರಿಹೋದ ಸುದ್ದಿ ತಲುಪಿತು. ನಂತರ ಎಂಟು ದಿನಗಳ ಮೇಲೆ ಆ ಹುಡುಗ ಬಂದು ಮ್ಯೋನೇಜರ್‌ಗೆ ಕಾಗದ ಪತ್ರಗಳನ್ನು ತಂದು ಒಪ್ಪಿಸಿದ.

ಅವುಗಳ ಪ್ರಕಾರ ಕುರುಡ ತನ್ನ ಎಲ್ಲ ಆಸ್ತಿಗಳಿಗೂ ಇವನನ್ನೇ ವಾರಸುದಾರನನ್ನಾಗಿ ಮಾಡಿದ್ದಾನೆ! ಬದುಕಿದ್ದಾಗಲೇ ಸೋದರ ಮಾವನಿಗೆ ಮೋಸ ಮಾಡುತ್ತಿದ್ದ ಈತ ಅವನ ಸಕಲ ಆಸ್ತಿಯನ್ನು ಹಾಳು ಮಾಡಿಯೇ ಬಿಡುತ್ತಾನೆಂಬುದು ಕ್ಯಾಶಿಯರ್‌ನಿಗೆ ಖಾತ್ರಿಯಾಯಿತು.

ಎರಡು ವರ್ಷಗಳ ನಂತರ ಕ್ಯಾಶಿಯರ್ ಕೆಲಸದಿಂದ ನಿವೃತ್ತಿ ಹೊಂದಿದ. ಈಗ ಆತನಿಗೆ ಬೇಕಾದಷ್ಟು ಸಮಯವಿತ್ತು. ಒಂದು ದಿನ ಆ ಹುಡುಗ ಏನು ಮಾಡುತ್ತಿದ್ದಾನೆ ನೋಡಬೇಕೆಂದು ಹುಡುಕಿಕೊಂಡು ಹೋದ. ಅವನ ನಂಬಿಕೆಯನ್ನು ಸಂಪೂರ್ಣ ಹುಸಿ ಮಾಡುವಂತೆ ಹುಡುಗ ಬದಲಾಯಿಸಿದ್ದಾನೆ.

ಒಂದು ಶಾಲೆಯನ್ನು ತೆಗೆದು ಹಗಲು ರಾತ್ರಿ ಅದಕ್ಕೇ ಶ್ರಮಿಸುತ್ತಿದ್ದಾನೆ. ಮಾವನ ಹಣವನ್ನು ಪೋಲು ಮಾಡಿಲ್ಲ. ಕ್ಯಾಶಿಯರ್ ಕುತೂಹಲದಿಂದ ವಿಷಯ ಕೇಳಿದಾಗ ಹುಡುಗ ಹೇಳಿದ, `ನನ್ನ ಮಾವ ತನ್ನ ಆಸ್ತಿಯನ್ನು ನನಗೆ ಬರೆಸುವಾಗ ವಕೀಲರಿಂದ ಪತ್ರವನ್ನು ಬರೆಸಿದ್ದರು. ಅದರಲ್ಲಿ, ಮಗೂ ನೀನು ಪ್ರತಿ ತಿಂಗಳು ನನ್ನ ಹಣ ಕದಿಯುವುದು ತಿಳಿದಿತ್ತು.
 
ಆ ಹಣ ನಿನ್ನದೇ, ಅಷ್ಟೇಕೆ ನನ್ನ ಎಲ್ಲ ಆಸ್ತಿಯೂ ನಿನ್ನದೇ. ಮತ್ತೊಬ್ಬರ ಹಣ ಎಂದಾಗ ಪೋಲು ಮಾಡುವ ಮನಸ್ಸಾಗುತ್ತದೆ. ನಮ್ಮದೇ ಎಂದಾಗ ಜವಾಬ್ದಾರಿ ಹೆಚ್ಚುತ್ತದೆ. ನಾನು ಕಷ್ಟಪಟ್ಟು ಗಳಿಸಿದ ಹಣವನ್ನು ನಿನ್ನದಾಗಿಸಿಕೊಂಡು ಬೆಳೆಸು~ ಎಂದು ಬರೆದಿದ್ದರು. ಅದು ನನ್ನನ್ನು ಸಂಪೂರ್ಣ ಬದಲಾಯಿಸಿತು.

ಕಷ್ಟಪಡದೇ ಬಂದ ಯಾವುದೇ ವಸ್ತುವಿನ ಬೆಲೆ ಅರ್ಥವಾಗುವುದಿಲ್ಲ, ಪೋಲು ಮಾಡಿದಾಗ ದುಃಖವೂ ಆಗುವುದಿಲ್ಲ. ಅದು ನಮ್ಮದಾದಾಗ ಎಚ್ಚರಿಕೆಯಿಂದ ಬಳಸುತ್ತೇವೆ.
 
ಈ ಮಾತು ನಮ್ಮ ಜೀವನದ ಪ್ರತಿ ಕ್ಷಣಕ್ಕೂ ಅನ್ವಯಿಸುತ್ತದೆ. ನಮಗೆ ದೊರೆತ ಪ್ರತಿ ವಸ್ತುವನ್ನು ಚಿಂತನೆಯನ್ನು, ಸಮಯವನ್ನು ನಮ್ಮದೆಂದೇ ಎಚ್ಚರಿಕೆಯಿಂದ ಬಳಸಿದರೆ ಅಸಾಮಾನ್ಯ ಸಾಧನೆ ಕೈಗೂಡುತ್ತದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.