ಅವನೊಬ್ಬ ಸೂಫೀ ಸಂತ. ಅವನಿಗೆ ಯಾವ ಅಪೇಕ್ಷೆಗಳೂ ಇಲ್ಲ. ಅವನ ಖ್ಯಾತಿ ಹರಡಿದಷ್ಟು ಅವನ ಹತ್ತಿರ ಬರುವ ಜನರ ಸಂಖ್ಯೆ ಹೆಚ್ಚಾಗುತ್ತಿತ್ತು. ಪ್ರಚಾರದಷ್ಟು ಘನವಾದ ವೈರಿ ಮತ್ತಾರೂ ಇಲ್ಲ. ಜನ ಪ್ರಚಾರಕ್ಕೆ ಹಾತೊರೆಯುತ್ತಾರೆ.
ಪ್ರಚಾರ ದೊರೆತು ಪ್ರಖ್ಯಾತರಾದ ಮೇಲೆ ಹೇಗೆ ಜನರಿಂದ ತಪ್ಪಿಸಿಕೊಂಡೇವೋ ಎಂದು ಒದ್ದಾಡುತ್ತಾರೆ. ನೀವು ಪ್ರಸಿದ್ಧರಾಗುವುದಕ್ಕಿಂತ ಮೊದಲು ಎಂಥ ಅರ್ಥಗರ್ಭಿತ ಮಾತನ್ನು ಹೇಳಿದರೂ ಕೇಳಿಸಿಕೊಳ್ಳದ ಜನ ನೀವು ಪ್ರಸಿದ್ಧರಾದ ಮೇಲೆ ಹೇಳಿದ ಅತಿ ಸಾಮಾನ್ಯ ಮಾತನ್ನು ವೈಭವೀಕರಿಸಿ, ವಿಶೇಷವಾಗಿ ಅರ್ಥೈಸಿ ಹೊಗಳುತ್ತಾರೆ, ನಿಮ್ಮನ್ನು ದಾರ್ಶನಿಕ ಎನ್ನುತ್ತಾರೆ.
ಈ ಮಾತನ್ನು ಚೆನ್ನಾಗಿ ತಿಳಿದುಕೊಂಡಿದ್ದ ಸೂಫೀ ಸಂತ ಜನರಿಂದ ದೂರವಾಗಿ ದೂರದಲ್ಲಿ ಆಶ್ರಮವನ್ನು ಕಟ್ಟಿಕೊಂಡಿದ್ದ. ಆದರೂ ಜನ ಹುಡುಕಿಕೊಂಡು ಸಂತನ ಬಳಿಗೆ ಬರುತ್ತಿದ್ದರು. ಒಂದು ದಿನ ಬಗದಾದಿನಿಂದ ಶೇಖ್ ಒಬ್ಬ ಬಂದ. ಅವನೊಬ್ಬನೇ ಬರಲಿಲ್ಲ.
ತನ್ನ ಅಪಾರವಾದ ಪರಿವಾರವನ್ನೂ ಕರೆದುಕೊಂಡು ಬಂದ. ಏನೇನೋ ಕಾಣಿಕೆಗಳ ರಾಶಿಯನ್ನೇ ತಂದು ಸಂತನ ಮುಂದಿಟ್ಟ. ಸಂತನಿಗೆ ಗಾಜಿನ ಚೂರೂ ಒಂದೇ, ವಜ್ರವೂ ಒಂದೇ. ಎಲ್ಲವನ್ನೂ ನಿರಾಕರಿಸಿಬಿಟ್ಟ. ಶೇಖ್‌ನಿಗೆ ನಿರಾಶೆಯಾದರೂ ತೋರಿಸದೇ ಸಂತನ ಶಿಷ್ಯರಿಗೆ ಕೆಲವೊಂದು ವಸ್ತುಗಳನ್ನು ನೀಡಿ ಹೊರಟ.
ಒಂದೆರಡು ದಿನಗಳ ನಂತರ ಸಂತ ಅಲ್ಲಲ್ಲಿ ಶಿಷ್ಯರ ಬಳಿಯಲ್ಲಿದ್ದ ವಸ್ತುಗಳನ್ನು ಗಮನಿಸಿ ಅವುಗಳನ್ನು ಹಾಗೆ ತೆಗೆದುಕೊಳ್ಳಬಾರದಿತ್ತು ಎಂದು ಹೇಳಿ ಅವರನ್ನು ಒಪ್ಪಿಸುತ್ತಿದ್ದ. ಆಗ ತನ್ನ ಕೊಠಡಿಯಲ್ಲಿ ಕಿಟಕಿಯ ಮೇಲೆ ಒಂದು ದೊಡ್ಡ ಗಾಜಿನ ಪಾತ್ರೆ ಕಾಣಿಸಿತು.
ಕುತೂಹಲದಿಂದ ನೋಡಿದ. ಅದರಲ್ಲಿ ನೀರಿದೆ ಮತ್ತು ನೀರಿನಲ್ಲಿ ಸುಂದರವಾದ ಬಣ್ಣಬಣ್ಣದ ಮೀನಿದೆ. ನಿಧಾನವಾಗಿ ಆ ಗಾಜಿನ ಪಾತ್ರೆಯನ್ನು ಕೆಳಗೆ ಇಳಿಸಿಕೊಂಡ. ಎಷ್ಟು ಚೆಂದದ ಮೀನು ಅದು. ಆ ಪಾತ್ರೆಯನ್ನು ಹಿಡಿದುಕೊಂಡು ಹೊರಗೆ ಬಂದ. ಆಶ್ರಮದ ಮುಂದೆ ಒಂದು ಕೊಳ. ಅದರ ಹತ್ತಿರ ಹೋಗಿ ನಿಧಾನವಾಗಿ ಮೀನನ್ನು ಪಾತ್ರೆಯಿಂದೆತ್ತಿ ಕೊಳದೊಳಗೆ ಹಾಕಿಬಿಟ್ಟ.
ಅದು ಸಂತೋಷದಿಂದ ಹೊರಟು ಹೋಯಿತು. ಪಾಪ! ಬಂಧನದಲ್ಲಿದ್ದ ಮೀನಿಗೆ ಸ್ವಾತಂತ್ರ್ಯ ಸಿಕ್ಕಿತಲ್ಲ ಎಂದು ಸಂತನೂ ಸಂತೋಷಪಟ್ಟ. ನಂತರ ಆ ಗಾಜಿನ ಪಾತ್ರೆಯನ್ನು ಕೂಡ ನಿಧಾನವಾಗಿ ಕೊಳದಲ್ಲಿ ಮುಳುಗಿಸಿಬಿಟ್ಟ.
ಬೆಲೆಬಾಳುವ ಗಾಜಿನ ಪಾತ್ರೆಯಿಂದ ಸಂತನಿಗೇನು ಪ್ರಯೋಜನ. ಮರುದಿನ ಆತ ಕೊಳದ ಬಳಿ ಕುಳಿತು ಧ್ಯಾನ ಮಾಡುತ್ತಿದ್ದ. ನಂತರ ಶುದ್ಧವಾದ ಕೊಳದ ನೀರನ್ನು ಗಮನಿಸಿದಾಗ ತಳದಲ್ಲಿದ್ದ ಗಾಜಿನ ಪಾತ್ರೆ ಕಂಡಿತು.
ಅರೇ! ಆ ಬಣ್ಣಬಣ್ಣದ ಮೀನು ಪಾತ್ರೆಯ ಒಳಗೇ ಕುಳಿತಿದೆ! ನೀರಿನಲ್ಲಿ ಕೈ ಹಾಕಿ ಪಾತ್ರೆ ಎತ್ತಿ ಮೀನನ್ನು ಕೊಳದೊಳಗೆ ಹಾಕಿ ಮತ್ತೆ ಪಾತ್ರೆಯನ್ನು ಮುಳುಗಿಸಿದ. ಐದೇ ನಿಮಿಷದಲ್ಲಿ ಮತ್ತೆ ಮೀನು ಬಂದು ಪಾತ್ರೆಯಲ್ಲಿ ಕುಳಿತಿತು! ಸಂತನಿಗೆ ಅರ್ಥವಾಯಿತು.
ಒಂದು ಸಲ ಗುಲಾಮಗಿರಿಗೆ ಒಗ್ಗಿಕೊಂಡರೆ ಅದೇ ಅಭ್ಯಾಸವಾಗಿ ಹೋಗುತ್ತದೆ. ಸ್ವಾತಂತ್ರ್ಯ, ಸ್ವಾತಂತ್ರ್ಯ ಎಂದು ಬಡಬಡಿಸುವುದು ಸುಲಭ. ಸ್ವಾತಂತ್ರ್ಯ ನಿಭಾಯಿಸುವುದು ಬಲುಕಷ್ಟ. ಜೈಲಿನಲ್ಲಿದ್ದಷ್ಟು ಭದ್ರತೆ ಎಲ್ಲಿಯೂ ದೊರೆಯಲಾರದು.
ಸರಿಯಾದ ಸಮಯಕ್ಕೆ ಆಹಾರ, ಸ್ಥಿರವಾದ ಸೂರು, ಅವಶ್ಯವಿದ್ದಾಗ ವೈದ್ಯಕೀಯ ಸಹಾಯ ಎಲ್ಲವೂ ದೊರೆಯುತ್ತದೆ. ಆದರೆ ಸ್ವಾತಂತ್ರ್ಯದ ಸುಖವಿಲ್ಲ. ಸ್ವಾತಂತ್ರ್ಯಕ್ಕೆ ವಿಮೆ ಇಲ್ಲ. ಸ್ವಾತಂತ್ರ್ಯ ಬೇಕೆನ್ನುವವರು ದುಡಿಯಲು ಸಿದ್ಧರಾಗಿರಬೇಕು. ತಮ್ಮ ಅವಶ್ಯಕತೆಗಳನ್ನು ಪ್ರಾಮಾಣಿಕತೆಯಿಂದ ಪಡೆಯುವ ಶಕ್ತಿ ಪಡೆದಿರಬೇಕು, ಜವಾಬ್ದಾರಿಯನ್ನು ಅರಿತಿರಬೇಕು. ಬರಿ ಅಧಿಕಾರಕ್ಕಾಗಿ ಹಪಹಪಿಸುವುದು ಸ್ವಾತಂತ್ರ್ಯವಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.