ADVERTISEMENT

ಬದುಕಿನ ಸುಖಕರ ಪ್ರಯಾಣದ ಸೂತ್ರ

ಡಾ. ಗುರುರಾಜ ಕರಜಗಿ
Published 3 ಮಾರ್ಚ್ 2014, 19:30 IST
Last Updated 3 ಮಾರ್ಚ್ 2014, 19:30 IST

ನಾನು ಹುಡುಗನಾಗಿದ್ದಾಗ ರೈಲಿನಲ್ಲಿ ಪ್ರವಾಸ ಮಾಡುವಾಗ ಪ್ರತಿಯೊಂದು ಬೋಗಿಯಲ್ಲೂ ದಪ್ಪ ಅಕ್ಷರಗಳಲ್ಲಿ ಕೆಲವೊಂದು ವಾಕ್ಯಗಳನ್ನು ಬರೆದಿರು­ತ್ತಿದ್ದರು. ಈಗ ಅವೆಲ್ಲ ಕಾಣುವುದಿಲ್ಲ. ಇಂಗ್ಲಿಷ್‌ನಲ್ಲಿ less luggage more comfort, makes travel a pleasure ಎಂಬ ವಾಕ್ಯ ಕಾಣುತ್ತಿತ್ತು. ಅದರೊಂದಿಗೆ ಕಳ್ಳರಿ­ದ್ದಾರೆ, ಎಚ್ಚರಿಕೆ ಎಂಬ ಸೂಚನೆಯೂ ಇರುತ್ತಿತ್ತು.

ಇಂಗ್ಲಿಷ್‌ ವಾಕ್ಯದ ಕನ್ನಡ ಅನುವಾದ ನನಗೆ ಬಹಳ ಪ್ರೇರೇಪಣೆ ನೀಡಿದೆ. ‘ಸಾಮಾನುಗಳು ಕಡಿಮೆ ಇದ್ದಷ್ಟೂ ಸುಖ, ನಿಮ್ಮ ಪ್ರಯಾಣ ಸಂತೋಷ­ದಾಯಕವಾಗಿರುತ್ತದೆ’.  –ಹೌದಲ್ಲವೇ? ಪ್ರಯಾಣದಲ್ಲಿ ಸಾಮಾನು-­ ಸರಂಜಾ­ಮುಗಳು ಕಡಿಮೆ ಇದ್ದಷ್ಟು ಯಾತ್ರೆ ಸುಖಕರ, ಆತಂಕರಹಿತ­ವಾಗಿರುತ್ತದೆ. ಈ ಮಾತು ಜೀವನಕ್ಕೂ ಅನ್ವಯಿಸುತ್ತದೆ.

ಅಹಂಕಾರದ, ನನಗೆಲ್ಲ ತಿಳಿದಿದೆ ಎಂಬ ಭ್ರಮೆಯ ಭಾರ ಹೆಚ್ಚಾದಷ್ಟು ಜೀವನ ಯಾತ್ರೆ ದುರ್ಭರ­ವಾಗುತ್ತದೆ. ಹಾಗೆಂದರೆ ಎಲ್ಲವನ್ನೂ ತ್ಯಜಿಸಿ ಸನ್ಯಾಸಿ ಆಗುವುದಕ್ಕಾ­ಗುತ್ತ­ದೆಯೇ? ಎಲ್ಲ ತ್ಯಾಗ ಮಾಡಲಾಗ­ದಿದ್ದರೂ ವಸ್ತುಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ, ತನ್ನ ಅಹಮಿಕೆಯ ಬಗ್ಗೆ ಅತಿಯಾದ ಮೋಹದಿಂದ ಅಂಟಿಕೊ­ಳ್ಳದಿದ್ದರೆ ಸಾಕು, ಜೀವನ ಹಗುರಾ­ಗುತ್ತದೆ ಎನ್ನಿಸುತ್ತದೆ.

ಸಾವಿರ ವರ್ಷಗಳ ಹಿಂದೆ ಗ್ರೀಸ್ ದೇಶದಲ್ಲಿ ಡಯೋಜೆನಿಸ್ ಎಂಬ ಮಹಾನ್ ದಾರ್ಶನಿಕ ಆಗಿ ಹೋದ. ಅವನ ಪ್ರತಿಯೊಂದು ಮಾತು, ನಡೆ ಮಾರ್ಗದರ್ಶಕವಾಗಿದ್ದವು. ಒಂದು ಬಾರಿ ಆತ ಮರುಭೂಮಿಯಲ್ಲಿ ನಡೆದುಕೊಂಡು ಪ್ರಯಾಣ ನಡೆಸಿದ್ದ. ಮೇಲೆ ಸುಡುವ ಸೂರ್ಯ, ಕೆಳಗೆ ಸುಡುವ ಕೆಂಡವಾದ ಮರಳು. ಡಯೋಜೆನಿಸ್ ಸುಸ್ತಾಗಿದ್ದ.

ವಿಪರೀತ ನೀರಡಿಕೆಯಾಗುತ್ತಿತ್ತು. ಎಷ್ಟು ದೂರ ನಡೆದರೂ ನೀರು ಕಾಣಲಿಲ್ಲ. ಕಣ್ಣಿಗೆ ಕತ್ತಲು ಕವಿದಂತಾಯಿತು. ಎಚ್ಚರದಪ್ಪಿ ಬಿದ್ದು ಬಿಟ್ಟ. ಅದೆಷ್ಟು ಹೊತ್ತು ಹಾಗೆಯೇ ಮಲಗಿದ್ದನೋ? ಎಚ್ಚರವಾ­ದಾಗ ತಂಗಾಳಿ ಬೀಸುತ್ತಿತ್ತು. ಅದು ಹತ್ತಿರದಲ್ಲೆಲ್ಲೋ ನೀರು ಇರುವ ಸೂಚನೆ. ಗಾಳಿ ಬೀಸುವ ದಾರಿ ಹಿಡಿದು ಹೊರಟ.  ಸ್ವಲ್ಪ ಮುಂದೆ ನಡೆದರೆ ಒಂದು ಪುಟ್ಟ ನೀರಿನ ಕೊಳ ಕಾಣಿಸಿತು. ಸಂತೋಷದಿಂದ ಕೊಳದ ಕಡೆಗೆ ನಡೆದ. ಕೊಳದ ದಂಡೆಯಲ್ಲಿ ನಿಂತು ಜೋಳಿಗೆ­ಯಿಂದ ತನ್ನ ಭಿಕ್ಷಾಪಾತ್ರೆಯನ್ನು ಹೊರ­ತೆಗೆದ. ಅದರಿಂದ ನೀರು ಕುಡಿಯು­ವುದು ಉದ್ದೇಶ. ಆ ಹೊತ್ತಿಗೆ ಒಂದು ನಾಯಿ ಓಡೋಡಿ ಬಂದಿತು.

ಅದಕ್ಕೂ ತುಂಬ ಬಾಯಾರಿಕೆ­ಯಾಗಿದ್ದೀತು. ಓಡಿ ಬಂದದ್ದೇ ನೀರಿಗೆ ಹಾರಿಕೊಂಡಿತು. ನೀರಿನಲ್ಲಿ ಮುಳುಗೆದ್ದು ಮೈ ತಂಪು ಮಾಡಿಕೊಂಡಿತು. ನಂತರ ತೃಪ್ತಿಯಿಂದ ನೀರು ಕುಡಿದು ಮತ್ತೆ ಓಡಿಹೋಯಿತು. ಡಯೋಜೆನಿಸ್ ಇದನ್ನು ನೋಡುತ್ತಲೇ ನಿಂತಿದ್ದ. ಅವನ ಮನದಲ್ಲಿ ಒಂದು ವಿಚಾರವೆದ್ದಿತು. ಈ ನಾಯಿ ನನಗಿಂತ ಹೆಚ್ಚು ಸ್ವತಂತ್ರವಾಗಿದೆ. ಅದಕ್ಕೆ ನೀರು ಕುಡಿಯಲು ಪಾತ್ರೆ ಬೇಕಿಲ್ಲ, ಯಾವ ವ್ಯವಸ್ಥೆಯೂ ಬೇಕಾಗಿಲ್ಲ. ಒಂದು ನಾಯಿ ಯಾವ ಸರಂಜಾಮೂ ಇಲ್ಲದೇ ನಿರಾಳವಾಗಿ ಬದುಕಬಹುದಾದರೆ ನನಗೇಕೆ ಈ ಪಾತ್ರೆಯ ಗೊಡವೆ. ನನ್ನದಾಗಿ ಇರುವುದು ಇದೊಂದೇ ಪಾತ್ರೆ.

ನಾನು ಅದನ್ನು ಜೋಪಾನವಾಗಿ ಕಾಪಾಡುತ್ತೇನೆ. ಎಲ್ಲಿ ಕಳೆದು­ಹೋದೀತೋ ಎಂದು ಚಿಂತಿಸುತ್ತೇನೆ. ರಾತ್ರಿ ಮಲಗಿದಾಗಲೂ ಒಂದೆರಡು ಬಾರಿ ಕೈ ಚಾಚಿ ಅದನ್ನು ಮುಟ್ಟಿ ಇರುವುದನ್ನು ಖಾತ್ರಿ ಮಾಡಿಕೊಳ್ಳು­ತ್ತೇನೆ. ಎಲ್ಲವನ್ನೂ ಬಿಟ್ಟ ನನಗೆ ಈ ಪಾತ್ರೆಯ ಜಂಜಡವೇಕೆ? ಹೀಗೆಂದು ಪಾತ್ರೆಯನ್ನು ನೀರಿನಲ್ಲಿ ಎಸೆದು ನಿರಾಳವಾದ.

ತನಗೆ ಈ ಜ್ಞಾನ ನೀಡಿದ ನಾಯಿಗೆ ತಲೆಬಾಗಿ ವಂದಿಸಿ ಅದನ್ನು ತನ್ನ ಗುರುವನ್ನಾಗಿ ಮಾಡಿಕೊಂಡ. ನಾವು ಡಯೋಜೆನಿಸ್‌ನಂತಾಗುವುದು ಸಾಧ್ಯವಿಲ್ಲವಾದರೂ ಒಂದಿಷ್ಟು ಮೋಹ ಕಡಿಮೆ ಮಾಡಿ­ಕೊಳ್ಳಬಹುದು. ಯಾಕೆಂದರೆ ನಾವು ಹೊತ್ತಿರುವ, ಹೊಂದಿ­ರುವ ಸಾಮಾನುಗಳು ಹೆಚ್ಚಾ­ದಷ್ಟೂ ನಮ್ಮ ಬದುಕಿನ ಪ್ರಯಾಣ ಕಷ್ಟಕರವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.