ADVERTISEMENT

ಭರವಸೆ ತಂದ ಆಕಸ್ಮಿಕ

ಡಾ. ಗುರುರಾಜ ಕರಜಗಿ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ಅದು ಎರಡನೆ ಮಹಾಯುದ್ಧದ ಕಾಲ. ಮಧ್ಯ ಚೀನಾದ ಹೋನನ್ ಪ್ರಾಂತ್ಯದ ಶೆನ್‌ಕಿಯಾ ಎಂಬ ಗ್ರಾಮದ ಜನರೆಲ್ಲ ತಲ್ಲಣಿಸಿ ಹೋಗಿದ್ದರು. ಕ್ರೂರಿಗಳಾಗಿದ್ದ ಜಪಾನಿ  ಸೈನಿಕರು ಈ ಹಳ್ಳಿಯ ಕಡೆಗೆ ಧಾವಿಸುತ್ತಿದ್ದಾರೆ ಎಂಬ ವಾರ್ತೆ ಬಂದು ಬಡಿದಿತ್ತು. ಬಹುಶಃ ಇನ್ನೆರಡು ದಿನಗಳಲ್ಲಿ ಆ ಸೈನಿಕರು ಗ್ರಾಮವನ್ನು ಭಗ್ನಗೊಳಿಸಿ ಸಾಗಲಿದ್ದಾರೆಂದು ಸುದ್ದಿ ಬಂದಿತು. ಈ ಊರ ಪ್ರಾರಂಭದಲ್ಲೇ ಒಂದು ಚರ್ಚು. ಚರ್ಚಿನ ಪಾದ್ರಿ ಆರೋಗ್ಯ ಸರಿ ಇಲ್ಲದ್ದರಿಂದ ನೂರು ಮೈಲಿ ದೂರದಲ್ಲಿದ್ದ ನಗರದ ಆಸ್ಪತ್ರೆಗೆ ದಾಖಲಾಗಿದ್ದ. ಅವನು ತಕ್ಷಣ ಮರಳಿ ಬರುವುದು ಸಾಧ್ಯವಿರಲಿಲ್ಲ. ಚರ್ಚಿನ ಆವರಣದಲ್ಲಿ ಅವನ ಅಮೆರಿಕ ಪತ್ನಿ ತನ್ನ ಎರಡು ವರ್ಷದ ಮಗ ಮತ್ತು ಎರಡು ತಿಂಗಳ ಪುಟ್ಟ ಹೆಣ್ಣು ಮಗುವಿನೊಂದಿಗೆ ಉಳಿದ್ದ್ದಿದಳು. ಚೀನಾ ಸೈನ್ಯದ ನಾಯಕ ಕರ್ನಲ್, ಚರ್ಚಿಗೆ ಬಂದು, ಇಡೀ ಗ್ರಾಮದ ಜನ ವಲಸೆ ಹೋಗುತ್ತಿರುವುದಾಗಿಯೂ, ಆಕೆ ಕೂಡ ತಕ್ಷಣ ಅಲ್ಲಿಂದ ಹೊರಟುಬಿಡಬೇಕೆಂದು ಸೂಚನೆ ಕೊಟ್ಟು ಹೋದ. ಆಕೆ ಎದೆಗೆಟ್ಟು ಹೋದಳು. ಹೋಗು ಎಂದರೆ ಎಲ್ಲಿಗೆ ಹೋಗುವುದು. ಈ ಮಕ್ಕಳನ್ನು ಕಟ್ಟಿಕೊಂಡು ಅಪರಿಚಿತವಾದ ಸ್ಥಳಕ್ಕೆ ಕರೆದುಕೊಂಡು ಹೋಗುವುದು ಅಪಾಯ. ಆದ್ದರಿಂದ ಚರ್ಚ್‌ನ್ನು ಬಿಟ್ಟು ಹೋಗದಿರಲು ತೀರ್ಮಾನಿಸಿದಳು. ಇಡೀ ಊರಿಗೆ ಊರೇ ಹೊರಟಿತು. ಅನೇಕ ಜನ ಇವಳನ್ನು ಬಂದು ತಮ್ಮಡನೆ ನಡೆಯಲು ಕರೆದರು, ಆಕೆಗೆ ಇನ್ನೊಂದು ಹೆದರಿಕೆಯೆಂದರೆ ಈ ಮಹಾಯುದ್ಧದ ಕಾಲದಲ್ಲಿ ಕಾಲರಾ ರೋಗ ಹಬ್ಬಿಕೊಂಡಿತ್ತು, ಅನೇಕ ಮಕ್ಕಳು ಸಾವನ್ನಪ್ಪಿದ್ದವು.

ಈಕೆಯ ಮಕ್ಕಳಿಗೆ ಚೀನಾದ ಹಳ್ಳಿಯ ಮಕ್ಕಳಿಗಿರುವ ರೋಗ ನಿರೋಧಕ ಶಕ್ತಿ ಇಲ್ಲದಿದ್ದುದರಿಂದ ರೋಗ ತಗುಲೀತೋ ಎಂಬ ಭಯ. ಆಕೆ ಧೈರ್ಯ ಮಾಡಿ ಅಲ್ಲಿಯೇ ಉಳಿದಳು. ಸಂಜೆಯ ಹೊತ್ತಿಗೆ ಊರು ಖಾಲಿಯಾಯಿತು. ಜನವರಿ ತಿಂಗಳಿನ ಚಳಿ ಮರಗಟ್ಟಿಸತೊಡಗಿತು. ಭಯದಿಂದ, ಚಳಿಯಿಂದ ಆಕೆಯ ಕೈ ಎಷ್ಟು ನಡುಗುತ್ತಿತ್ತೆಂದರೆ ಬಾಟಲಿಯಲ್ಲಿ ಹಾಲು ಹಾಕುವುದು ಕಷ್ಟವಾಯಿತು.


ರಾತ್ರಿಯ ವೇಳೆ ಜಪಾನಿ ಸೈನಿಕರು ಹಳ್ಳಿಗೆ ನುಗ್ಗಿ, ಚರ್ಚಿನ ಒಳಗೆ ಬಂದು ತನ್ನನ್ನು ನೋಡಿದರೆ ತನ್ನ ಪರಿಸ್ಥಿತಿ ಏನಾದೀತು ಎಂದು ಊಹಿಸಲೂ ಕಷ್ಟವಾಗಿ ನಡುಕ ಹೆಚ್ಚಿತು. ಮಕ್ಕಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಮಲಗಲು ಪ್ರಯತ್ನಿಸಿದಳು. ರಾತ್ರಿ ಹೇಗೋ ಕಳೆಯಿತು. ಬೆಳಗಾಗುತ್ತಲೇ ಆಕೆಗೆ ಅಂದು ಮಕ್ಕಳ ಆಹಾರದ ಚಿಂತೆ ಶುರುವಾಯಿತು. ಮಕ್ಕಳಿಗೆ ಹಾಲನ್ನು ಎಲ್ಲಿಂದ ತರುವುದು? ತನ್ನ ಹಸಿವಿಗೆ ದಾರಿ ಏನು. ಊರಿನಲ್ಲಿ ಒಂದು ಪಿಳ್ಳೆಯೂ ಇಲ್ಲ. ತನ್ನ ಗಂಡ ನಿತ್ಯ ಕೂಡ್ರುತ್ತಿದ್ದ ಮೇಜಿನ ಮುಂದೆ ಕುಸಿದು ಕುಳಿತಳು. ಮೇಜಿನ ಮೇಲೆ ಒಂದು ಕ್ಯಾಲೆಂಡರ್. ಅದರ ಪ್ರತಿಯೊಂದು ಹಾಳೆಯಲ್ಲೂ ಒಂದು ಸುಂದರವಾದ ಮಾತು. ಅಂದಿನ ದಿನದ ಮಾತನ್ನು ನೋಡಿದಳು. ಅದರಲ್ಲಿ ಬರೆದಿತ್ತು  `ಭಯಬೇಡ, ಜಗತ್ತಿನಲ್ಲಿರುವುದು ನೀನೊಬ್ಬನೇ ಅಲ್ಲ'. ಅದು ತನಗೇ ಬರೆದಂತೆ ಕಂಡಿತು. ಸ್ವಲ್ಪ ಹೊತ್ತಿನಲ್ಲಿ ಒಬ್ಬ ಚೀನಿ ಹಿರಿಯ ಬಂದ,  `ಸಹೋದರಿ, ನೀನು ಮೊಂಡುತನ ಮಾಡಿ ಇಲ್ಲಿಯೇ ಉಳಿದೆ. ಮಕ್ಕಳ, ನಿನ್ನ ಆಹಾರದ ಗತಿ ಏನು. ಅದಕ್ಕೇ ನಾನು ದೂರದಿಂದ ಓಡಿ ಬಂದೆ. ಇಗೋ ಇದರಲ್ಲಿ ಹಾಲಿದೆ, ಇಲ್ಲಿ ನಿನಗಾಗಿ ಬ್ರೆಡ್, ತರಕಾರಿ ಮತ್ತು ಮೊಟ್ಟೆಗಳಿವೆ. ಜಪಾನಿ  ಸೈನಿಕರು ಊರು ದಾಟಿ ಹೋದ ಮೇಲೆ ಮತ್ತೆ ಬರುತ್ತೇನೆ. ದೇವರು ಒಳ್ಳೆಯದು ಮಾಡಲಿ'  ಎಂದು ಓಡಿಹೋದ. ಆಕೆಗೆ ಜೀವ ಬಂದಂತಾಯಿತು.

ಕ್ಯಾಲೆಂಡರ್ ಮಾತು ಸತ್ಯವಾಗಿತ್ತು!

ಅಂದು ಸಂಜೆಯ ಹೊತ್ತಿಗೆ ಗುಂಡಿನ ಸಪ್ಪಳ ಹತ್ತಿರವೇ ಕೇಳತೊಡಗಿತು. ಯಾವ ಕ್ಷಣದಲ್ಲಾದರೂ ಸೈನ್ಯ ಊರಲ್ಲಿ ಬರಬಹುದು ಎನ್ನಿಸಿತು. ಭಯ ವಿಪರೀತವಾಯಿತು. ರಾತ್ರಿಯೆಲ್ಲಾ ಗುಂಡಿನ, ತೋಪುಗಳ ಹಾರುವಿಕೆಯ ಸದ್ದು. ಬೆಳಗಾದ ತಕ್ಷಣ ಕ್ಯಾಲೆಂಡರ್ ಮುಂದೆ ನಿಂತು ನಿನ್ನೆಯ ಹಾಳೆ  ಹರಿದಳು. ಇಂದಿನ ದಿನದ ಬರಹ ಹೀಗಿತ್ತು,  `ನನ್ನಲ್ಲಿ (ದೇವರಲ್ಲಿ) ನಂಬಿಕೆ ಇದ್ದರೆ ಜಗತ್ತಿನ ಯಾವ ಸೈನ್ಯವೂ ನಿನ್ನನ್ನು ಅಲುಗಿಸಲಾರದು'. ಆಕೆಯಲ್ಲಿ ಮತ್ತೆ ಧೈರ್ಯ ಚಿಗುರಿತು. ಇಡೀ ದಿನ ಕಳೆಯಿತು, ಸೈನ್ಯ ಊರು ಸೇರಲಿಲ್ಲ.

ಮತ್ತೊಮ್ಮೆ ಕ್ಯಾಲೆಂಡರ್ ಮಾತು ಸತ್ಯವಾಗಿತ್ತು! ರಾತ್ರಿಯೂ ಸರಿಯಿತು. ಎಲ್ಲೆಲ್ಲಿಯೂ ಆತಂಕದ ವಾತಾವರಣವಿತ್ತು. ಇಂದೇನೋ ಎನ್ನುತ್ತ ಕ್ಯಾಲೆಂಡರಿನ ನಿನ್ನೆಯ ಹಾಳೆಯನ್ನು ತೆಗೆದಾಗ ಇಂದಿನ ಹೊಸ ಮಾತು ಕಂಡಿತು,  `ಆತಂಕ ನೆರಳಿನ ಹಾಗೆ ಕ್ಷಣಕಾಲದ್ದು, ಮರುಕ್ಷಣವೇ ಭಗವಂತನ ಕೃಪೆಯ ಹೂಬಿಸಿಲು ನಗುತ್ತದೆ'. ಆಕೆಯ ಮುಖದಲ್ಲೂ ನಗು ಮೂಡಿತು.

ಒಂದು ತಾಸಿನಲ್ಲೇ ಜನ ಗುಂಪಾಗಿ ಬರುತ್ತಿರುವುದು ಕಾಣಿಸಿತು. ಅವರು ಜಪಾನಿ ಸೈನಿಕರಲ್ಲ, ಊರಿನ ಚೀನೀಯರು. ಒಬ್ಬ ಹಿರಿಯ ಹೇಳುತ್ತಿದ್ದ,  `ಅದೇನಾಯಿತೋ. ಸೈನ್ಯ ಹಿಂತಿರುಗಿ ಹೊರಟು ಹೋಯಿತು. ನಮ್ಮ ಗ್ರಾಮ ಉಳಿಯಿತು' . ಮಗುದೊಮ್ಮೆ ಕ್ಯಾಲೆಂಡರ್ ಮಾತು ಸತ್ಯವಾಗಿತ್ತು! ಹೀಗಾದದ್ದು ಒಂದು ಆಕಸ್ಮಿಕವೇ ಆದರೂ ಅದು ನಿರಾಸೆಯಲ್ಲಿ, ಆತಂಕದಲ್ಲಿ ಧೈರ್ಯ ತುಂಬಿದ್ದೂ ಸುಳ್ಳಲ್ಲ.

ಕ್ಯಾಲೆಂಡರಿನ ಮಾತಿನಂತೆಯೇ ಸಮಾಜದ ಹಿರಿಯರು ಸದಾಕಾಲ ಶುಭವಾದ, ಆಶಾಜನಕವಾದ, ಆತ್ಮವಿಶ್ವಾಸ ತುಂಬುವ ಮಾತುಗಳನ್ನು ಹೇಳುತ್ತ ಅಂಥ ಕೃತಿಗಳನ್ನೇ ರಚಿಸುತ್ತಿದ್ದರೆ ಜೀವನದ ಬೆಂಗಾಡಿನಲ್ಲಿ ಬಸವಳಿದಿದ್ದ ಜೀವಕ್ಕೆ ಬಹುದೊಡ್ಡ ಆಸರೆ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.