ADVERTISEMENT

ಮತ್ತೊಬ್ಬರಿಗೆ ಕೈಯಾಗುವ, ಕಾಲಾಗುವ ಅವಕಾಶ

ಡಾ. ಗುರುರಾಜ ಕರಜಗಿ
Published 10 ಜೂನ್ 2013, 19:59 IST
Last Updated 10 ಜೂನ್ 2013, 19:59 IST

ಬಾಬ್ ಬಟ್ಲರ್, ಅಮೆರಿಕದ ಒಬ್ಬ ಪ್ರಜೆ. ಅವನು ವಿಯೆಟ್ನಾಂ ಯುದ್ಧದಲ್ಲಿ ಭಾಗಿಯಾಗಿದ್ದ. ಯುದ್ಧ ಮುಗಿಯುವ ಸಮಯದಲ್ಲಿ ಒಂದು ಪ್ರದೇಶದಲ್ಲಿ ಹೋಗುತ್ತಿರುವಾಗ ನೆಲಬಾಂಬಿನ ಮೇಲೆ ಕಾಲಿಟ್ಟ. ಬಾಂಬ್ ಹಾರಿದ ತೀವ್ರತೆಗೆ ಅವನ ಎರಡೂ ಕಾಲು ಬಲಿಯಾದವು ಆದರೆ ಜೀವ ಉಳಿಯಿತು. ಮರಳಿ ಅಮೆರಿಕೆಗೆ ಬಂದ ಬಾಬ್, ಅರಿಝೋನಾ ಪ್ರದೇಶದಲ್ಲಿ ಒಂದು ಕಾರ್ ಗ್ಯಾರೇಜ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ. ಅವನ ಬಗ್ಗೆ ಸುತ್ತಮುತ್ತಲಿನ ಜನಕ್ಕೆ ಬಹಳ ಗೌರವ, ಆದರ. ಅವನ ಯುದ್ಧ ಸಾಹಸಗಳು ಮನೆಮಾತಾಗಿದ್ದವು.

ಅವನು ತನ್ನ ಗಾಲಿಕುರ್ಚಿಯ ಮೇಲೆ ಕುಳಿತೇ ಹೇಳುತ್ತಿದ್ದ ಯುದ್ಧ ಕಥೆಗಳು ರೋಮಾಂಚನವನ್ನುಂಟು ಮಾಡುತ್ತಿದ್ದವು. ಅವನಿಗೆ ಮತ್ತೊಂದು ಬಾರಿ ನಾಯಕನಾಗುವ ಅವಕಾಶ ಬಂತು. ಗ್ಯಾರೇಜಿನ ಕೆಲಸ ಮಾಡುತ್ತಿದ್ದಾಗ ಯಾರೋ ಮಹಿಳೆಯೊಬ್ಬರು ಜೋರಾಗಿ ಕೂಗಿಕೊಂಡಂತೆ ಕೇಳಿಸಿತು. ತಕ್ಷಣ ಬಾಬ್ ತನ್ನ ಗಾಲಿಕುರ್ಚಿಯನ್ನು ರಭಸದಿಂದ ತಳ್ಳುತ್ತ ಧ್ವನಿ ಬಂದ ಕಡೆಗೆ ಹೊರಟ. ಮುಂದೆ ಮಣ್ಣಿನ ದಾರಿ, ಹಾದಿಯಲ್ಲಿ ಕುರುಚಲು ಮರಗಳು ಮತ್ತು ಕೆಸರು. ಬಾಬ್ ತನ್ನ ಕುರ್ಚಿಯಿಂದ ಕೆಳಗೆ ಹಾರಿದ. ತನ್ನ ಮೊಳಕೈಗಳನ್ನು ಗಟ್ಟಿಯಾಗಿ ಊರಿ ತೆವಳುತ್ತ ಮುಂದೆ ನಡೆದ. ಅಲ್ಲಿಗೆ ಹೋಗಲೇಬೇಕು,  ಯಾರಿಗೆ ಏನು ಅಪಾಯವಾಗಿದೆಯೋ  ಎನ್ನುತ್ತಲೇ ಅವಸರದಿಂದ ತೆವಳಿದ. ಮೈಗೆ ತರಚಿದ ಗಾಯಗಳಾಗಿದ್ದು, ಬಟ್ಟೆಗಳೆಲ್ಲ ಕೆಸರಾದದ್ದು ತಿಳಿಯಲೇ ಇಲ್ಲ ಅವನಿಗೆ. ಮುಂದೆ ಅವನಿಗೆ ಕಂಡದ್ದು ಒಂದು ಬಾವಿ. ಬಾವಿಯ ದಂಡೆಯಲ್ಲಿ ನಿಂತು ಮಹಿಳೆಯೊಬ್ಬಳು ಆರ್ತವಾಗಿ ಕಿರುಚಿಕೊಳ್ಳುತ್ತಿದ್ದಾಳೆ. ಇವನನ್ನು ನೋಡಿದೊಡನೆ, `ಅಯ್ಯೋ, ನನ್ನ ಮಗು ನೀರಿಗೆ ಬಿದ್ದಿದೆ ಕಾಪಾಡಿ'  ಎಂದಳು.

ಈತ ಹಿಂದೆ ಮುಂದೆ ನೋಡದೆ ಬಾವಿಗೆ ಹಾರಿದ. ತನಗೆ ಎರಡು ಕಾಲೂ ಇಲ್ಲ ಎಂಬ ಆಲೋಚನೆಯೂ ಬರಲಿಲ್ಲ. ನೀರಿನ ಆಳಕ್ಕೆ ಮುಳುಗಿದ. ಮಗು ತಳಮುಟ್ಟಿತ್ತು. ಆಕೆಯನ್ನು ಎತ್ತಿಕೊಂಡು ಮೇಲಕ್ಕೆ ಈಜಿ ಬಂದ. ತಾಯಿಗೆ ಮಗುವನ್ನು ಕೊಟ್ಟು ಕಟ್ಟೆಯ ಮೇಲೆ ಹಾರಿ ಬಂದ. ಆಗ ಬಾಬ್ ಗಮನಿಸಿದ, ಮಗುವಿಗೆ ಎರಡೂ ಕೈಗಳೇ ಇಲ್ಲ! ಮಗು ನಿಶ್ಚೇಷ್ಟಿತವಾಗಿತ್ತು. ಮೈಬಣ್ಣ ನೀಲಿಯಾಗುತ್ತಲಿತ್ತು. ಬಾಬ್ ಮಗುವನ್ನು ಬೋರಲಾಗಿ ಹಾಕಿ ನಿಧಾನವಾಗಿ ಬೆನ್ನು ಒತ್ತಿ, ನೀರು ತೆಗೆಯತೊಡಗಿದ. ತನಗೆ ಸೈನ್ಯದಲ್ಲಿದ್ದಾಗ ಕಲಿಸಿದ ಪ್ರಾಣ ಉಳಿಸುವ ತಂತ್ರಗಳನ್ನೆಲ್ಲ ಬಳಸಿದ. ತಾಯಿ ಗಾಬರಿಯಿಂದ ಬಿಳಿಚಿಕೊಂಡಿದ್ದಳು.  `ಏನೂ ಆಗುವುದಿಲ್ಲ ಸುಮ್ಮನಿರು'  ಎಂದು ಆಕೆಗೆ ಹೇಳಿ ಮಗುವಿಗೆ, ಮಗೂ ನಿನಗೇನೂ ಆಗುವುದಿಲ್ಲ  ಎಂದು ಜೋರಾಗಿ ಕೂಗುತ್ತಲೇ ತನ್ನ ಕಾರ್ಯ ಮುಂದುವರೆಸಿದ. ನಾಲ್ಕಾರು ಕ್ಷಣಗಳ ನಂತರ ಮಗು ಚೀರಿತು. ತಾಯಿಗೆ ಸಂತೋಷದ ಅಳು ನುಗ್ಗಿ ಬಂತು. ಮಗುವನ್ನೆತ್ತಿ ಸಂತೈಸಿದಳು. ನಂತರ ಮಗು ಸಾಮನ್ಯ ಸ್ಥಿತಿಗೆ ಬಂದಾಗ ತಾಯಿ ಕೇಳಿದಳು,  `ಮಗುವಿಗೆ ಏನೂ ಆಗುವುದಿಲ್ಲವೆಂದು ನಿನಗೆ ಹೇಗೆ ತಿಳಿದಿತ್ತು' ಬಾಬ್ ಹೇಳಿದ,  `ನನಗೆ ಗೊತ್ತಿರಲಿಲ್ಲ ಆದರೆ ನಂಬಿಕೆ ಇತ್ತು. ನನಗೆ ವಿಯಟ್ನಾಂದಲ್ಲಿ ಬಾಂಬ್ ಸಿಡಿದಾಗ ನಾನೂ ಎರಡೂ ಕಾಲು ಕತ್ತರಿಸಿಕೊಂಡು ಅಸಹಾಯಕನಾಗಿ ಬಿದ್ದಿದ್ದೆ. ಆಗ ಒಬ್ಬ ವಿಯೆಟ್ನಾಂ ಹುಡುಗಿ ಬಂದು ತನ್ನ ಶಕ್ತಿ ಮೀರಿ ನನ್ನನ್ನು ದರದರನೇ ಎಳೆಯುತ್ತ ಸುರಕ್ಷಿತ ಸ್ಥಳಕ್ಕೆ ಸಾಗಿಸಿದಳು. ದಾರಿಯಲ್ಲಿ ತನಗೆ ಬಂದ ಹರುಕು ಮುರುಕು ಇಂಗ್ಲೀಷಿನಲ್ಲೇ,  ನಿನಗೇನೂ ಆಗುವುದಿಲ್ಲ, ನೀನು ಬದುಕುತ್ತೀ, ಚಿಂತಿಸಬೇಡ, ನಾನೇ ನಿನ್ನ ಕಾಲಾಗುತ್ತೇನೆ  ಎನ್ನುತ್ತಿದ್ದಳು. ಅವಳ ಮಾತೇ ನನಗೆ ಸಂಜೀವಿನಿಯಾಯಿತು. ನಾನೂ ಈ ಮಗುವಿಗೆ ಅದನ್ನೇ ಮಾಡಬಯಸಿದೆ. ನನಗೆ ಆ ಹುಡುಗಿ ಕಾಲಾದಂತೆ ನಾನು ಈ ಮಗುವಿಗೆ ಕೈಯಾದೆ'. ನಮ್ಮ ಜೀವನ ಯಾತ್ರೆಯಲ್ಲಿ ಅನೇಕ ಬಾರಿ ನಾವು ಯಾರಿಗೋ ಕೈಯಾಗಬೇಕು, ಕಾಲಾಗಬೇಕು, ಹೃದಯವಾಗಬೇಕು, ಜೀವ ಚೈತನ್ಯವಾಗಬೇಕು, ಆತ್ಮೀಯರಾಗಬೇಕು. ಆಗಲೇ ಬಾಳಿಗೊಂದು ಸೊಗಸು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.