ADVERTISEMENT

ದೆವ್ವ ಹೋಗಿ ಭೂತ ಬಂದೀತು ಎಂದು ಭಯ ಬೇಡ!

ಪದ್ಮರಾಜ ದಂಡಾವತಿ
Published 13 ಏಪ್ರಿಲ್ 2013, 19:59 IST
Last Updated 13 ಏಪ್ರಿಲ್ 2013, 19:59 IST

ಪ್ರಶ್ನೆಗಳು. ಒಂದೇ, ಎರಡೇ? ಇದೆಲ್ಲ ಏಕೆ? ಟಿಕೆಟ್ ಗಿಟ್ಟಿಸಲು ಇಷ್ಟೇಕೆ ಪೈಪೋಟಿ? ಬಾಡಿಗೆ ಮಂದಿ ಕರೆದುಕೊಂಡು ಬಂದು ಪಕ್ಷದ ಕಚೇರಿ ಮುಂದೆ ಪ್ರತಿಭಟನೆ ಮಾಡಿಸಿದ್ದು ಏಕೆ? ಇಲ್ಲಿ ಟಿಕೆಟ್ ಸಿಗದೇ ಇದ್ದರೆ ಅಲ್ಲಿಗೆ ಹೋಗುವ ಬೆದರಿಕೆ ಏಕೆ? ಈ ಸಾರಿ ಸಿಗದೇ ಇದ್ದರೆ ಏನಾಯಿತು? ಪಕ್ಷದ ಕೆಲಸ ಮಾಡಿದರಾಯಿತಲ್ಲ? ಇದಕ್ಕೆಲ್ಲ ಜನಸೇವೆ ಮಾಡಬೇಕು ಎಂಬ ಒಂದೇ ಉದ್ದೇಶವೇ? ನಿಜಕ್ಕೂ ಅದು ಅಷ್ಟು ಆಸಕ್ತಿಕರವೇ? ಜನರ ಸೇವೆ ಮಾಡಲು ಶಾಸಕನೇ ಆಗಬೇಕೇ? ಹಾಗಾದರೆ ಒಬ್ಬೊಬ್ಬ ಆಭ್ಯರ್ಥಿ ಹತ್ತು ಹದಿನೈದು ಕೋಟಿ ರೂಪಾಯಿ ಏಕೆ ಖರ್ಚು ಮಾಡುತ್ತಾನೆ? ವಿಧಾನಸಭೆಗೆ ಚುನಾವಣೆ ದಿನಾಂಕ ಪ್ರಕಟವಾದ ಮೇಲೆ ಪ್ರಶ್ನೆಗಳು ತಲೆಯಲ್ಲಿ ಧಿಮಿಗುಡುತ್ತಿವೆ.

ರಾಜಕೀಯವೇ ಹಾಗೆ. ಅದು ಒಂದು ಅಮಲು. ತನ್ನ ಮನೆಯಲ್ಲಿ ಅಧಿಕಾರ ಇರಬೇಕು. ತನ್ನ ಜತೆಗೆ ಸಾಧ್ಯವಾದರೆ ತನ್ನ ಮಕ್ಕಳೂ ಅಧಿಕಾರದಲ್ಲಿ ಇರಬೇಕು. ತಾನು ಸತ್ತ ಮೇಲೆ ತನ್ನ ಹೆಂಡತಿಗೆ ಇಲ್ಲವೇ ಮಗನಿಗೆ ಟಿಕೆಟ್ ಸಿಗಬೇಕು. ಮತ್ತೆ ಅಧಿಕಾರ ಮನೆಯಲ್ಲಿಯೇ ಇರಬೇಕು. ಅಧಿಕಾರಕ್ಕೆ ಇಂಥ ಒಂದು ರುಚಿ ಇಲ್ಲದೇ ಇದ್ದರೆ ನಟಿ ಪೂಜಾ ಗಾಂಧಿ ಎಂದೂ ತಲೆ ಹಾಕಿ ಕೂಡ ಮಲಗದ ರಾಯಚೂರಿನ ಬಿಸಿಲಿನಲ್ಲಿ ಏಕೆ ಒಣಗುತ್ತಿದ್ದರು? ರಕ್ಷಿತಾ ಬಿಎಸ್‌ಆರ್ ಪಾರ್ಟಿ ಬಿಟ್ಟು ಬೇರೆ ಪಾರ್ಟಿ ಕಡೆ ಏಕೆ ಕಣ್ಣು ಹಾಕುತ್ತಿದ್ದರು? ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದವರೇ ಇಷ್ಟು ಬೆವರು ಸುರಿಸುತ್ತಿರುವಾಗ ಅದರಲ್ಲಿಯೇ ಮುಳುಗಿ ಏಳುವವರೇನು ಕಡಿಮೆ?

ಕಳೆದ ವರ್ಷ ಅಟ್ಲಾಂಟಾದ ಅಕ್ಕ ಸಮ್ಮೇಳನಕ್ಕೆ ಹೋಗಿದ್ದಾಗ ಅಲ್ಲಿ ಒಬ್ಬ ಶಾಸಕರು ಸಿಕ್ಕಿದ್ದರು. ಅವರೇನು ಮನುಷ್ಯನಾಗಿ ದುಷ್ಟನಲ್ಲ. ದುಡ್ಡು ಕಾಸು ಮಾಡಿರಬಹುದು. ಅವರಿಗೆ ಕೇಳಿದೆ. ಈ ಸಾರಿ ಎಷ್ಟು ಖರ್ಚು ಮಾಡಬೇಕು ಎಂದು. `ಕನಿಷ್ಠ ಹತ್ತು ಕೋಟಿ ಬೇಕು' ಎಂದರು. ಎಲ್ಲಿಂದ ತರುತ್ತೀರಿ ಎಂದರೆ, `ಹೀಗೇ' ಎಂದು ತೇಲಿಸಿದರು. ಅಷ್ಟು ಖರ್ಚು ಮಾಡಿ ಏಕೆ ನಿಲ್ಲಬೇಕು; ಸೋತರೆ ಏನು ಮಾಡುತ್ತೀರಿ ಎಂದೆ. ಅದಕ್ಕೂ ಅವರು `ಹೀಗೇ' ಎಂದು ಮತ್ತೆ ತೇಲಿಸಿದರು.

ನನ್ನ ಮುಂದೆ ಕುಳಿತು ಗುಂಡು ಗುಟಕರಿಸುತ್ತಿದ್ದ ಅವರಿಗೆ ರಾಜಕೀಯ ಒಂದು ಚಟವಾಗಿದೆ ಎಂದು ಅನಿಸಿತು. ಒಂದು ಸಾರಿ ಶಾಸಕನಾಗಿ ಆಯ್ಕೆಯಾದ ಮೇಲೆ ಆ ಅಧಿಕಾರವನ್ನು ಬಿಟ್ಟುಕೊಡುವುದು ಬಹಳ ಕಷ್ಟ ಎಂದೂ ಅನಿಸಿತು. ಅದು ಬರೀ ಅಧಿಕಾರದ ಅಮಲೇ? ಅಲ್ಲ ಅನಿಸುತ್ತದೆ. ಬಳ್ಳಾರಿಯ ರೆಡ್ಡಿ ಸೋದರರಿಗೆ ಅದು ಬರೀ ಅಧಿಕಾರ ಆಗಿರಲಿಲ್ಲ. ಅದರ ಆಚೆ ಮತ್ತೇನೋ ಆಗಿತ್ತು. ಅದು ಮತ್ತೆ ಏನೋ ಆಗಿತ್ತು ಎಂಬುದೂ ಗುಟ್ಟಲ್ಲ. ಅವರಿಗೆ ಅಧಿಕಾರ ಕಾನೂನು ಆಗಿಬಿಟ್ಟಿತು. ಅಂದರೆ ಅವರೇ ಕಾನೂನು ಆಗಿಬಿಟ್ಟರು. ಒಂದು ಸಾರಿ ತಾನೇ ಕಾನೂನು ಆಗಿ ಬಿಟ್ಟ ಮೇಲೆ ಅಧಿಕಾರ ಎಂಬುದು ಕಾಲ ಬುಡಕ್ಕೆ ಬಂದು ಬಿದ್ದು ಬಿಡುತ್ತದೆ. ಅಧಿಕಾರ ಹಣವನ್ನು ತಂದು ಗುಡ್ಡೆ ಹಾಕುತ್ತದೆ. ಹಣದ ಆಸೆಗೆ ಕೊನೆ ಎಂಬುದು ಇರುವುದಿಲ್ಲ. ಅಧಿಕಾರ ತರುವ ಹಣ ನೋಟು ಆಗಿರುತ್ತದೆ. ಎಷ್ಟು ನೋಟು ಕೂಡಿ ಇಡುವುದು ಎಂದು ಅದು ಭೂಮಿ ಆಗಿರುತ್ತದೆ. ಖನಿಜವಾಗಿರುತ್ತದೆ. ಶಾಲೆ ಆಗಿರುತ್ತದೆ. ಕಾರ್ಖಾನೆ ಆಗಿರುತ್ತದೆ. ಜೆ.ಸಿ.ಬಿ ಯಂತ್ರ ಆಗಿರುತ್ತದೆ.

ಕಳೆದ ಹತ್ತು ವರ್ಷಗಳಲ್ಲಿ ಜನಪ್ರತಿನಿಧಿಗಳು ಮಣ್ಣಿನ ಬೆನ್ನು ಹತ್ತಿದ್ದಾರೆ. ಅವರಿಗೆ ಭೂಮಿಯ ಮೇಲೆ ಹಾಕಿದ ಹಣಕ್ಕೆ ಎಂದೂ ಮೋಸವಿಲ್ಲ ಎಂದು ಗೊತ್ತಾಗಿದೆ. ಹಾಗೆಂದು ಅವರೇನು ಕೃಷಿ ಭೂಮಿ ಖರೀದಿಸಿ ಹೊಲ ಉಳಲು ಹೋಗುತ್ತಾರೆ ಎಂದು ಅಂದುಕೊಳ್ಳಬೇಕಿಲ್ಲ. ಅದನ್ನೂ ಒಂದು ನೂರು ಎಕರೆಯಲ್ಲಿ ಮಾಡಬಹುದು. ಅವರ ಕಣ್ಣು ಊರ ಸುತ್ತಲಿನ ಖಾಲಿ ಜಮೀನಿನ ಮೇಲೆ ಬಿದ್ದಿದೆ. ಮಾರೀ ಕಣ್ಣು ಹೋರಿ ಮೇಲೆ ಎನ್ನುವಂತೆ. ಬರದಲ್ಲಿ ಬಸವಳಿದಿರುವ ರೈತನಿಗೆ ಒಂದಕ್ಕೆ ಎರಡರಷ್ಟು ಮೂರರಷ್ಟು ಬೆಲೆ ಕೊಟ್ಟು ಭೂಮಿ ಖರೀದಿಸಿರುವ ಜನಪ್ರತಿನಿಧಿಗಳು ಅದನ್ನು ಒಂದಕ್ಕೆ ನೂರರಷ್ಟು ಬೆಲೆಗೆ ಸರ್ಕಾರಕ್ಕೆ ಮಾರಿದ್ದಾರೆ; ಮಾರಬೇಕು ಎಂದು ತೆಗೆದು ಇರಿಸಿಕೊಂಡಿದ್ದಾರೆ. ನಿವೇಶನ ಮಾಡಿ ಮಾರಿ ಮರಳಿ ಊರ ಜನರಿಗೇ ಟೋಪಿ ಹಾಕಿದ್ದಾರೆ.

ನಾನು ನೀವು ಕೃಷಿ ಜಮೀನು ಖರೀದಿಸಲು ಸಾಧ್ಯವಿಲ್ಲ. ಎರಡು ಲಕ್ಷಕ್ಕಿಂತ ಹೆಚ್ಚು ಆದಾಯ ಇದ್ದರೆ ನಾನು ನೀವು ಕೃಷಿ ಭೂಮಿ ಖರೀದಿಸಲು ಸಾಧ್ಯವಿಲ್ಲ. ಇದೆಲ್ಲ ಶಾಸಕನಿಗೆ ಅನ್ವಯಿಸುವುದಿಲ್ಲ. ಆತನಿಗೆ ಬೇನಾಮಿ ಆಗಲು ನೂರೆಂಟು ಮಂದಿ ಸಿದ್ಧರಿರುತ್ತಾರೆ. ತಾಲ್ಲೂಕಿನ ತಹಶೀಲ್ದಾರ್ ಇಂವ ಹೇಳಿದಂತೆ ಕೇಳುತ್ತಾನೆ. ಎಷ್ಟು ತಾಲ್ಲೂಕುಗಳಲ್ಲಿ ಹೀಗೆ ಶಾಸಕರು ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿ ಎಂದು ಪರಿವರ್ತನೆ ಮಾಡಿಸಿಲ್ಲ? ಬೆಂಗಳೂರಿನಂಥ ಊರಿನಲ್ಲಿ ಮಾತ್ರ ಭೂಮಿಯ ಮೇಲೆ ಗಗನಕ್ಕೆ ಹೋಗಿಲ್ಲ. ಅಲ್ಪಸ್ವಲ್ಪ ನೀರಾವರಿ ಇರುವ ಊರಿನಲ್ಲಿಯೂ ಅದೇ ಆಗಿದೆ. ಅಲ್ಲಿಯೂ ಒಂದು ಚದರ ಅಡಿ ಜಾಗಕ್ಕೆ ಎರಡು ಸಾವಿರ ರೂಪಾಯಿ ದರ ಹೇಗೆ ಇರುತ್ತದೆ?

ರಾಜಕೀಯ ಎಂಬುದು ಒಂದು ವ್ಯಾಪಾರ. ವ್ಯಾಪಾರ ಎಂದರೆ ದುಡ್ಡು ಹಾಕಿ ದುಡ್ಡು ತೆಗೆಯುವುದು. ನೈಜ ವ್ಯಾಪಾರದಲ್ಲಿ ಒಂದು ನ್ಯಾಯಯುತ ಮಾರ್ಜಿನ್ ಎಂದು ಇರುತ್ತದೆ. ರಾಜಕೀಯದಲ್ಲಿ ಅದೇನು ಇಲ್ಲ. ಈಗ ಹತ್ತು ಹದಿನೈದು ಕೋಟಿ ಹೂಡಿದರೆ ಮುಂದಿನ ಐದು ವರ್ಷ ರಾಶಿ ಮಾಡುತ್ತಲೇ ಇರಬಹುದು. ಊರಿನ ರಸ್ತೆಗೂ ತಾನೇ ಗುತ್ತಿಗೆ ಹಿಡಿದು ಡಾಂಬರು ಹಾಕಬಹುದು. ಚರಂಡಿ ಮಾಡಿಸಬಹುದು. ಕಸ ತೆಗೆಸಬಹುದು. ಇದು ಸುಳ್ಳಲ್ಲ. ಎಷ್ಟು ಊರಿನಲ್ಲಿ ಶಾಸಕರ ಸಂಬಂಧಿಗಳು ಗುತ್ತಿಗೆದಾರರಾಗಿಲ್ಲ?

ಜಿಲ್ಲಾ ಪಂಚಾಯಿತಿ ಸದಸ್ಯರ ಸಂಬಂಧಿಕರೇ ಗುತ್ತಿಗೆದಾರರು ಆಗಬಹುದಾದರೆ ಶಾಸಕರ ಸಂಬಂಧಿಗಳು ಏಕೆ ಆಗಲು ಸಾಧ್ಯವಿಲ್ಲ? ಮತ್ತೆ ಹಣ ಬರುತ್ತದೆ. ಅದು ಬರು ಬರುತ್ತ ಕಪ್ಪಗಾಗುತ್ತದೆ. ಅದನ್ನು ಬಿಳಿ ಮಾಡಬೇಕು. ಊರ ಹೊರಗೆ ಖರೀದಿಸಿದ ಬಯಲು ಜಾಗದಲ್ಲಿ ಒಂದು ಸಕ್ಕರೆ ಕಾರ್ಖಾನೆ ಹಾಕಿದರೆ ಹೇಗೆ? ಅದರ ಬಳಿಯೇ ಇಪ್ಪತ್ತು ಕೋಣೆಗಳ ಒಂದು ಮನೆ ಕಟ್ಟಿಸಿಕೊಂಡರೆ ಹೇಗೆ? ಅದರ ಪಕ್ಕದ ಜಾಗದಲ್ಲಿ ಒಂದು ಶಿಕ್ಷಣ ಸಂಸ್ಥೆ ಆರಂಭಿಸಿದರೆ ಹೇಗೆ?

ಊರ ಹೊರಗೆ ಕಲ್ಲು ಭೂಮಿ ಇದೆ. ಪಾಳು ಬಿದ್ದಿದೆ. ಒಂದು ಹುಲ್ಲು ಗರಿಕೆಯೂ ಬೆಳೆಯದ ಖರಾಬು ಭೂಮಿಯನ್ನು ಮಾರಲು ರೈತ ಸಿದ್ಧನಿದ್ದಾನೆ. ಶಾಸಕನ ಹತ್ತಿರ ಹಣ ಇದೆ. ಖರಾಬು ಭೂಮಿಯಲ್ಲಿ ಹೊನ್ನು ಬೆಳೆಯುವುದು ಹೇಗೆ ಎಂದು ರೈತನಿಗೆ ಗೊತ್ತಿಲ್ಲ. ಶಾಸಕನಿಗೆ ಗೊತ್ತಿದೆ. ಆತ ಅಲ್ಲಿ ಕಲ್ಲು ಕತ್ತರಿಸುವ ಒಂದು ಗಣಿ ಶುರು ಮಾಡುತ್ತಾನೆ. ಕಲ್ಲು ಕತ್ತರಿಸಿ ರಸ್ತೆ ಮಾಡಲು ಸರ್ಕಾರಕ್ಕೆ ಮಾರುತ್ತಾನೆ. ಕಲ್ಲು ಗಣಿ ಊರಿಗೆಲ್ಲ ಅಮರಿಸುವ ದೂಳನ್ನು ಕಂಡೂ ಕಾಣದಂತೆ ಇರಲು ಜಿಲ್ಲಾಧಿಕಾರಿಗೆ ಹೇಳುತ್ತಾನೆ.

ಇದನ್ನೆಲ್ಲ ಮಾಡಿ ಮೈ ನೋಯಿಸಿಕೊಳ್ಳುವುದು ಬೇಡ ಎಂದು ಒಬ್ಬ ಐದಾರು ಜೆ.ಸಿ.ಬಿ ಯಂತ್ರ ಖರೀದಿಸಿ ಮನೆಯ ಹತ್ತಿರ ನಿಲ್ಲಿಸುತ್ತಾನೆ. ಬರ ಬಿತ್ತು ಎಂದರೆ ಕೆರೆ ಹೂಳು ತೆಗೆಸಬೇಕು. ತಹಶಿಲ್ದಾರ್‌ನಿಗೆ ತನ್ನ ಜೆ.ಸಿ.ಬಿ ಯಂತ್ರವನ್ನೇ ಬಾಡಿಗೆ ತೆಗೆದುಕೊಳ್ಳಲು ಹೇಳುತ್ತಾನೆ. ಮತ್ತೆ ಹಣ ಬರುತ್ತದೆ. ಇದನ್ನೂ ಮಾಡುವುದು ಬೇಡವೇ? ಬಡ ಶಿಕ್ಷಕರ ವರ್ಗಾವಣೆ ಪಟ್ಟಿ ತಯಾರಿಸಲು ತನ್ನ ಉಪದ್ವ್ಯಾಪಿ ಮಗನಿಗೆ ಹೇಳುತ್ತಾನೆ. ಪಟ್ಟಿ ತಯಾರಿಸಿದ ಸುದ್ದಿ ಎಲ್ಲ ಶಿಕ್ಷಕರಿಗೆ ತಲುಪುವಂತೆ ನೋಡಿಕೊಳ್ಳುತ್ತಾನೆ. ಅವರೆಲ್ಲ ಇವನ ಮನೆಯ ಮುಂದೆ ಬಂದು ನಿಲ್ಲುತ್ತಾರೆ.

ಪಟ್ಟಿ ರದ್ದು ಮಾಡುತ್ತಾನೆ. ಸುಮ್ಮನೆ ಮಾಡುತ್ತಾನೆಯೇ?... ಹಣ ಮಾಡುವ ದಾರಿ ಒಂದೇ ಎರಡೇ?... ಆತನಿಗೆ ಒಂದೇ ಚಿಂತೆ ಕಪ್ಪು ಹಣ ಬಿಳಿ ಮಾಡುವುದು ಹೇಗೆ ಎಂದು. ಚುನಾವಣೆ ಬರಲಿ ಎಂದು ಕಾಯುತ್ತ ಇರುತ್ತಾನೆ. ಉಗ್ರಾಣದ ಗೋಣಿ ಚೀಲದಲ್ಲಿ ಕೊಳೆಯುವ ನೋಟು ನರ್ತಿಸತೊಡಗುತ್ತದೆ.

ಊರಿನಲ್ಲಿ ಗಣಪತಿ ಹಬ್ಬ ಬಂದಿದೆ. ಯುವಕರೆಲ್ಲ ಬಂದು ಶಾಸಕನ ಮುಂದೆ ಹಲ್ಲು ಗಿಂಜುತ್ತಾರೆ. ಐವತ್ತು ಸಾವಿರ ತೆಗೆದು ಕೊಡುತ್ತಾನೆ. ಯುವಕರು ಕುಣಿಯುತ್ತ ಹೋಗುತ್ತಾರೆ. ನಾಗರ ಪಂಚಮಿ ಬರುತ್ತದೆ. ಮನೆ ಮನೆಯ ಹೆಂಗಳೆಯರಿಗೆ ಶಾಸಕನ ಮನೆಯಿಂದ ಬಾಗಿನ ಬರುತ್ತದೆ. ಅದರಲ್ಲಿ ಸೀರೆ ಇರುತ್ತದೆ. ಮೂಗುತಿ ಇರುತ್ತದೆ. ಬೆಂಗಳೂರಿನಲ್ಲಿ ಎರಡು ಬಣ್ಣದ ಕಸದ ಬುಟ್ಟಿಗಳನ್ನು ತೆಗೆದುಕೊಳ್ಳಲು ಬಣ್ಣ ಬಣ್ಣದ ಸೀರೆ ಉಟ್ಟುಕೊಂಡು ಬಂದು ಸಾಲಿನಲ್ಲಿ ನಿಂತು ತೆಗೆದುಕೊಂಡು ಹೋದ ಹೆಂಗಳೆಯರು ಮನೆಗೆ ಬಂದ ಬಾಗಿನವನ್ನು ತಿರಸ್ಕರಿಸುತ್ತಾರೆಯೇ? ಊರಿನಲ್ಲಿ ಜಾತ್ರೆ ಬರುತ್ತದೆ.

ಹುಡುಗರೆಲ್ಲ ಸೇರಿ ನಾಟಕ ಆಡುತ್ತಾರೆ. ಶಾಸಕ ಬಂದು ಇಪ್ಪತ್ತು ಸಾವಿರ ರೂಪಾಯಿ ಆಹೇರಿ ಮಾಡುತ್ತಾನೆ. ತನ್ನ ಪ್ರತಿಸ್ಪರ್ಧಿ ಎಷ್ಟು ಆಹೇರಿ ಮಾಡುತ್ತಾನೆ ಎಂದು ತಿಳಿದುಕೊಂಡೇ ತನ್ನ ಮೊತ್ತವನ್ನು ದುಪ್ಪಟ್ಟು ಮಾಡುತ್ತಾನೆ. ಹಳ್ಳಿಯ ಶಾಲೆಯ ಹುಡುಗರಿಗೆ ಪುಗಸಟ್ಟೆ ನೋಟು ಪುಸ್ತಕ ಕೊಡುತ್ತಾನೆ. ಬಸ್ ಪಾಸು ಮಾಡಿಸುತ್ತಾನೆ. ಹಳ್ಳಿಯ ಹುಡುಗರು, ಹುಡುಗಿಯರು ಆತನನ್ನು ದೈವ ಎಂದು ಆರಾಧಿಸಲು ತೊಡಗುತ್ತಾರೆ. ಕುರುಡ ಕಾಂಚಾಣ ಕುಣಿಯುತ್ತ ಇರುತ್ತದೆ. ಕುರುಡು ಕಾಂಚಾಣ ತಾನು ಮಾತ್ರ ಕುಣಿಯುವುದಿಲ್ಲ. ಕುಣಿಸುತ್ತಲೂ ಇರುತ್ತದೆ. ಇಲ್ಲವಾದರೆ ತನ್ನ ತೋಟದ ಮನೆಯನ್ನೇ ಗಡಂಗು ಮಾಡಲು ಶಾಸಕ ಹೇಗೆ ಪರವಾನಗಿ ತೆಗೆದುಕೊಳ್ಳುತ್ತಾನೆ? ಗಡಂಗಿಗೂ ಮನೆಗೂ ವ್ಯತ್ಯಾಸವೇ ಇಲ್ಲವೇ?

ರಾಜಕಾರಣಿಗಳಲ್ಲಿ ವ್ಯತ್ಯಾಸವೇ ಇಲ್ಲವೇ? ಎಲ್ಲರೂ ಒಂದೇ ಪಡಿಯಚ್ಚೇ? ಇರಲಾರದು. ಅಲ್ಲೊಬ್ಬರು ಇಲ್ಲೊಬ್ಬರು ಒಳ್ಳೆಯವರು ಇದ್ದಾರು. ಅವರು ನಮ್ಮ ಕಣ್ಣಿಗೇ ಕಾಮಾಲೆ ಎಂದಾರು. ವಿಧಾನಸಭೆಯಲ್ಲಿ ಶಾಸಕರ ಸಂಬಳ, ಸಾರಿಗೆ ವೆಚ್ಚ ಹೆಚ್ಚಿಸುವ ಮಸೂದೆ ಮಂಡನೆ ಆಗಿತ್ತು. ಸಂಸದೀಯ ಖಾತೆ ಸಚಿವ ಸುರೇಶಕುಮಾರ್ ಫೋನ್ ಮಾಡಿದರು. ಅವರು ತಮ್ಮ ಕಷ್ಟದ ಬಗ್ಗೆ ಮಾತನಾಡಲಿಲ್ಲ. ದಕ್ಷಿಣ ಕರ್ನಾಟಕದ ಒಬ್ಬ ಕಾಂಗ್ರೆಸ್ ಶಾಸಕನ ಬಗ್ಗೆ ಮಾತನಾಡಿದರು.

`ನೋಡಿ, ಆತ ಬರೀ ಸಂಬಳದ ಮೇಲೆ ಜೀವಿಸುತ್ತಿದ್ದಾನೆ. ಅವನಿಗೆ ಏನು ಮಾಡುವುದು? ಎಲ್ಲ ಶಾಸಕರು ಖದೀಮರು ಎಂದು ನೀವೆಲ್ಲ ಪತ್ರಿಕೆಯವರು ಅಂದುಕೊಂಡರೆ ಹೇಗೆ?' ಅವರು ವಕಾಲತ್ತು ಮಾಡುತ್ತಿದ್ದರು. ಬೇಕೆಂದೇ ಕಾಂಗ್ರೆಸ್ ಶಾಸಕನ ಹೆಸರು ಹೇಳಿರಬಹುದೇ? ಇಲ್ಲ ಅನಿಸುತ್ತದೆ. ಅವರ ಪಕ್ಷದಲ್ಲಿ ಹೆಸರು ಹೇಳಲು ಯಾರೂ ಇರಲಿಲ್ಲವೇ! ಮಸೂದೆ ಪಾಸಾಯಿತು, ಎಂದಿನಂತೆ ಚರ್ಚೆ ಇಲ್ಲದೇ. ನಮ್ಮ ಎಷ್ಟು ಮಂದಿ ಶಾಸಕರು ಸರ್ಕಾರ ಕೊಡುವ ಸಂಬಳದ ಮೇಲೆ ಅವಲಂಬಿತರಾಗಿದ್ದಾರೆ? ಎಷ್ಟು ಮಂದಿ ನಮ್ಮಂಥ ನೌಕರರ ಹಾಗೆ ಒಂದನೇ ತಾರೀಖು ಬಂದ ಕೂಡಲೇ ಬ್ಯಾಂಕಿಗೆ ಓಡಿ ಹೋಗಿ ಸಂಬಳದ ಹಣ ತೆಗೆದು ಕಿರಾಣಿ ತರಲು ಅಂಗಡಿಗೆ ಹೋಗುತ್ತಾರೆ? ಯಾರಾದರೂ ಒಬ್ಬ ಶಾಸಕ ಹಾಲು ಮಾರಿ ಜೀವನ ಮಾಡುತ್ತಿದ್ದಾನೆಯೇ? ಅಧಿವೇಶನ ಇಲ್ಲದ ದಿನದಲ್ಲಿ ತನ್ನ ಹೊಲದಲ್ಲಿ ಹರಗಲು, ಬಿತ್ತಲು, ಉತ್ತಲು ಹೋಗುತ್ತಾನೆಯೇ?

ಹಾಗಾದರೆ ನಾನು ವ್ಯತ್ಯಾಸ ತರುವುದು ಹೇಗೆ? ಎಲ್ಲರ ಹಾಗೆ ನನಗೂ ಒಂದೇ ಮತ ಇದೆ. ಅದನ್ನು ಹಾಕಿದರೆ ನಿಜಕ್ಕೂ ಬದಲಾವಣೆ ಸಾಧ್ಯವೇ? ನಿಂತ ನಾಲ್ವರೂ ಖದೀಮರೇ ಆಗಿದ್ದರೆ ಯಾರಿಗೆ ಮತ ಹಾಕಲಿ? ಹಾಗಾದರೆ ಈಗ ರಾಜ್ಯ ಆಳುತ್ತಿರುವ ದೆವ್ವ ಹೋಗಿ ಭೂತ ಅಧಿಕಾರಕ್ಕೆ ಬರುತ್ತದೆಯೇ? ಬರಬಹುದು. ದೆವ್ವಕ್ಕೆ ಅಧಿಕಾರ ಕಳೆದು ಹೋಗುತ್ತದೆ ಎಂಬ ಭಯವಾದರೂ ಇರಬೇಕು. ನಾಳೆ ಭೂತಕ್ಕೂ ಅದೇ ಗತಿ ಆಗುತ್ತದೆ ಎಂದು ಗೊತ್ತಿರಬೇಕು. ಪ್ರಜಾಪ್ರಭುತ್ವ ಒಂದು ಪರಿಪೂರ್ಣ ವ್ಯವಸ್ಥೆಯಲ್ಲ. ಎಲ್ಲರಲ್ಲಿ ಇರುವ ಹಾಗೆ ಅದರಲ್ಲಿಯೂ ಅರೆ ಕೊರೆಗಳು ಇವೆ. ನನ್ನ ಒಂದು ಮತದಿಂದ ಏನಾಗಬಹುದು ಎಂಬ ನಿರಾಶೆ ಬೇಡ.

ನನ್ನ ಒಂದು ಮತದಿಂದ ಈಗ ಇರುವವನು ಹೋಗಿ ಬೇರೆಯವನು ಬಂದರೆ ಅದೇ ಬೇಕಾದಷ್ಟು ಆದಂತೆ. ಹೊಸಬ ಹಾಳಾಗಲು ಹೊತ್ತು ಹಿಡಿಯುತ್ತದೆ. ಆತ ಬೇರು ಬಿಡುವ ಮೊದಲೇ ಆತನನ್ನೂ ಕಿತ್ತು ಬದಲಿಸೋಣ. ಈಗ ಇರುವವನು ಒಳ್ಳೆಯವನು ಎಂದರೆ ಅವನನ್ನೇ ಆರಿಸೋಣ. ಒಮ್ಮೆ ಆರಿಸಿ ಕಳಿಸಿದ ಮೇಲೆ ಮನೆಯಲ್ಲಿ ಸುಮ್ಮನೆ ಗೊಣಗುವ ಬದಲು ದನಿ ಎತ್ತಲು ಕಲಿಯೋಣ.

ನಮ್ಮ ಊರಿಗೆ ಏನು ಮಾಡಿದಿರಿ? ನಮ್ಮ ರಾಜ್ಯಕ್ಕೆ ಏನು ಮಾಡಿದಿರಿ ಎಂದು ಕೇಳೋಣ. ಈಗಿನ ಸ್ಥಿತಿಯಲ್ಲಿ ನಾವೇ ನಿಂತು ಗೆಲ್ಲುವ ಸ್ಥಿತಿ ಇಲ್ಲ. ಆ ಒಂದು ದಿನವೂ ಬಂದೀತು ಎಂದು ಆಶಿಸೋಣ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.