ADVERTISEMENT

ನುಡಿ ತಾಯಿ

ಓ.ಎಲ್.ನಾಗಭೂಷಣ ಸ್ವಾಮಿ
Published 2 ಜೂನ್ 2012, 19:30 IST
Last Updated 2 ಜೂನ್ 2012, 19:30 IST
ನುಡಿ ತಾಯಿ
ನುಡಿ ತಾಯಿ   

ತಾಯಿ ನುಡಿಯನ್ನು ಮಾತೃ ಭಾಷೆ ಎಂದು ಕರೆದರೆ `ಅಮ್ಮ~ನನ್ನು `ಮಮ್ಮಿ~ ಅಂದ ಹಾಗಿರುತ್ತದೆ.ತಾಯಿ ನುಡಿಯನ್ನು `ಪ್ರಥಮ ಭಾಷೆ~ ಎಂದು ಕರೆದರೆ `ಗುದ್ದಲಿ~ಗೆ `ಭೂ ಮರುರಚನೆಯ ಉಪಕರಣ~ ಎಂದು ನಾಮಕರಣ ಮಾಡಿದ ಹಾಗಿರುತ್ತದೆ.

ತಾಯಿ ನುಡಿಯನ್ನು `ನುಡಿ ತಾಯಿ~ ಅಂದರೆ ನುಡಿಯೆ ನಮ್ಮತನದ ಹುಟ್ಟಿಗೆ ಕಾರಣವೆಂಬ ಸತ್ಯವನ್ನು ಗೌರವಿಸಿ, ನುಡಿಯನ್ನೂ ಸಜೀವ ವ್ಯಕ್ತಿ ಎಂದು ಒಪ್ಪಿದ ಹಾಗಿರುತ್ತದೆ.
ವಿಚಾರವೇ ಮುಖ್ಯ ಎಂದು ಭಾವಿಸಿದ್ದ ದಿನಗಳಲ್ಲಿ ಮಾತೃಭಾಷೆ, ತಾಯಿನುಡಿ ಇವೆಲ್ಲ ಭಾವುಕತೆಯಿಂದ ಹುಟ್ಟಿದ ರೂಪಕಗಳು, ಭಾಷೆಯ ಅಧ್ಯಯನಕ್ಕೆ ಅಡಚಣೆಗಳು ಎಂದು ತಿಳಿದಿದ್ದೆ.
 
ಅಲ್ಲದೆ ಅನ್ಯ ಭಾಷೆಯನ್ನು ಕಲಿಯುವಾಗ `ತಾಯಿನುಡಿಯ ಅಡಚಣೆ~ ಅನ್ನುವ ತತ್ವವನ್ನು ಇಂಗ್ಲಿಷ್ ಬೋಧನೆಯ ಮುಖ್ಯ ತತ್ವವಾಗಿ ತರಗತಿಗಳಲ್ಲೂ ಕಲಿಸುತ್ತಿದ್ದರು. ಇಂಗ್ಲಿಷನ್ನಾಗಲೀ, ಬೇರೆ ಯಾವ ಭಾಷೆಯನ್ನೇ ಆಗಲಿ ಸರಿಯಾಗಿ ಕಲಿಯಬೇಕೆಂದರೆ ನಮಗೆ ಆಪ್ತವಾಗಿ ಗೊತ್ತಿರುವ ಭಾಷೆಯ ಲಯ, ಉಚ್ಚಾರಣೆ, ನುಡಿಗಟ್ಟು, ವ್ಯಾಕರಣ, ತಾಯಿನುಡಿ ಬೆಳೆಸಿರುವ ಆಲೋಚನೆಯ ವಿಧಾನ ಇವೆಲ್ಲ ಅಡ್ಡಿಮಾಡುತ್ತವೆ; ಅವನ್ನು ಸಾಧ್ಯವಾದಷ್ಟೂ ಮರೆತು ಕಲಿಯಬೇಕಾಗಿರುವ ಭಾಷೆಯಲ್ಲೇ ಪೂರ್ಣವಾಗಿ ಮುಳುಗಬೇಕು ಅನ್ನುವುದು ಆ ದಿನಗಳಲ್ಲಿ ಒಪ್ಪಿತವಾದ ನಿಲುವೇ ಆಗಿತ್ತು.

ಅನೇಕ ಭಾಷಾ ತಜ್ಞರೇ ಆ ನಿಲುವು ಬದಲಾಯಿಸಿಕೊಂಡಿದ್ದಾರೆ. ಆದರೆ ನಮ್ಮ ಇಂಗ್ಲಿಷ್ ಮಾಧ್ಯಮ ಶಾಲೆಗಳೂ, ಬಹುತೇಕ ಅಪ್ಪ ಅಮ್ಮಂದಿರೂ ಇನ್ನೂ ಆ ತತ್ವದ ಮೊಲಕ್ಕೆ ಮೂರು ಕೊಂಬುಗಳಿವೆ ಎಂದೇ ಬಲವಾಗಿ ನಂಬಿಕೊಂಡಿದ್ದಾರೆ.

ತಾಯಿನುಡಿ ಅನ್ನುವುದು ಬರಿಯ ಭಾವುಕ ರೂಪಕವಲ್ಲ, ವಾಸ್ತವ ಸತ್ಯ ಅನ್ನುವುದು ತಿಳಿದದ್ದು ನಿಧಾನವಾಗಿ. ಜಗತ್ತಿನಲ್ಲಿ ಇರುವ ಎಲ್ಲ ಮನುಷ್ಯರಿಗೆ ಒಬ್ಬೊಬ್ಬ ತಾಯಿ ಇರುವುದು ಎಷ್ಟು ಸತ್ಯವೋ ಪ್ರತಿಯೊಂದು ಭಾಷೆಯಲ್ಲೂ ತಾಯಿನುಡಿ ಅನ್ನುವ ರೂಪಕವಿರುವುದೂ ಅಷ್ಟೇ ಸತ್ಯ.
 
ಫ್ರೆಂಚಿನಲ್ಲಿ ಲಾಂಗ್ವಾ ಮೆಟರ್ನಲ್, ಸ್ಪಾನಿಶ್‌ನಲ್ಲಿ ಲೆಂಗುವಾ ಮಟೆರ್ನಾ, ಇತಾಲಿಯನ್‌ನಲ್ಲಿ ಇಡಿಯೋಮಾ ಮಟೆರ್ನಾ, ಜರ್ಮನ್‌ನಲ್ಲಿ ಮಟರ್‌ಸ್ಪಾರ್ಚ್, ಸ್ವಾಹಿಲಿಯಲ್ಲಿ ಲುಘಾ ಯ ಮಮಾ ಅನ್ನುವ ರೂಪಕಗಳಿವೆ. ಕೆಲವು ಆಫ್ರಿಕನ್ ಭಾಷೆಗಳಲ್ಲಿ ನುಡಿತಾಯಿಯನ್ನು ಕುರಿತು ಹಾಲು, ಸ್ತನ, ಹಾಲುಕುಡಿಯುವುದು ಇಂಥ ರೂಪಕಗಳ ಬಳಕೆಯಾಗುತ್ತವಂತೆ.

ಚೀನೀ ಭಾಷೆಯ `ಪೆನ್ ಗುಒ ಯು ಎನ್~ ಎಂಬ ಮಾತಿನ ನುಡಿಗಟ್ಟನ್ನು ಅಕ್ಷರಶಃ ಅನುವಾದ ಮಾಡಿಕೊಂಡರೆ ಅದು `ಬೇರು ಬಿಟ್ಟ ನೆಲದ ಭಾಷೆ~ ಎಂದಾಗುತ್ತದಂತೆ. ಕುತೂಹಲವಿದ್ದವರು ಅಂತರ್ಜಾಲದ ಗೂಗಲ್ ಟ್ರಾನ್ಸ್‌ಲೇಟ್ ತಾಣಕ್ಕೆ ಹೋಗಿ ಇಂಗ್ಲಿಷಿನಲ್ಲಿ `ಮದರ್ ಟಂಗ್~ ಎಂದು ಅಚ್ಚು ಮಾಡಿ ಜಗತ್ತಿನ ಹಲವು ಭಾಷೆಗಳಲ್ಲಿ ಅದಕ್ಕೆ ಸಮನಾದ ನುಡಿಗಳಿರುವುದನ್ನು ಹುಡುಕಿ ನೋಡಬಹುದು.

ಸಂತ ಕಬೀರನ ನುಡಿಯೊಂದು ನೆನಪಾಗುತ್ತಿದೆ. `ಸಂಸ್ಕೃತವು ಬಾವಿಯ ನೀರು, ದೇಸೀ ಭಾಷೆಯು ಹರಿವ ತೊರೆ~ ಅನ್ನುತ್ತಾನೆ. ಇಡೀ ಭಾರತದ ಭಕ್ತಿ ಚಳವಳಿ ಸಂಸ್ಕೃತದಂಥ ದೊಡ್ಡ ಭಾಷೆಯನ್ನು ಲೆಕ್ಕಿಸದೆ ಆಯಾ ಭಕ್ತರ ನುಡಿತಾಯಂದಿರನ್ನೇ ನೆಚ್ಚಿ ಬೆಳೆಯಿತು. ಭಕ್ತಿ ತೋರಲು, ಪ್ರೀತಿ ತೋರಲು ನುಡಿತಾಯಿ ಒಲಿದ ಹಾಗೆ ಕಲಿತ ಭಾಷೆಗಳು ಒದಗಿ ಬರುವುದಿಲ್ಲ. ಪ್ರೀತಿಯ ಪ್ರವಾಹ, ಭಕ್ತಿಯ ಪ್ರವಾಹ ನದಿಯ ನೀರಿನಲ್ಲೇ ಹೊರತು ಬಾವಿಯ ನೀರಿನಲ್ಲಿ ಅಲ್ಲ.

ಆದರೂ ಕಬೀರನ ನುಡಿಯ `ತೊರೆ~ ಅನ್ನುವ ಮಾತು ಕನ್ನಡದಲ್ಲಿ ಎರಡು ವಿರುದ್ಧ ಅರ್ಥಗಳನ್ನು ಹೊಮ್ಮಿಸಿತು ನನ್ನ ಮನಸ್ಸಿಗೆ. ಹೆತ್ತ ತಾಯಿ ಸದಾ ಜೊತೆಯಲ್ಲಿರಬೇಕು ಎಂದು ಹಾತೊರೆಯುವುದೂ ಇರುತ್ತದೆ, ತಾಯಿಯನ್ನು ತೊರೆಯಬೇಕೆನ್ನುವ ಹಂಬಲವೂ ಇರುತ್ತದೆ. ಹಾಗೆಯೇ ನುಡಿತಾಯಿಗಾಗಿ ಹಾತೊರೆಯುವ, ನುಡಿತಾಯಿಯನ್ನು ತೊರೆಯುವ ಎರಡೂ ಹಂಬಲಗಳು ಮನುಷ್ಯರಲ್ಲಿ ತೀವ್ರವಾಗಿ ಇರುತ್ತವೆಂದು ಅನಿಸುತ್ತದೆ. 

ತಾಯಿಗಾಗಿ ಹಾತೊರೆಯುವುದೇನೋ ಸರಿ, ತೊರೆಯುವ ಹಂಬಲವೇಕೆ ಅನ್ನುವ ಪ್ರಶ್ನೆ ಕೆಲವರಲ್ಲಾದರೂ ಮೂಡಬಹುದು. ಸುಮಾರು ಮೂವತ್ತು ವರ್ಷದ ಹಿಂದೆ ಎರಿಕ್ ಫ್ರಾಂ ಅನ್ನುವ ಚಿಂತಕನ ಬರವಣಿಗೆ ಓದುತಿದ್ದಾಗ ಇದು ಅರಿವಾಯಿತು. ಬಸಿರಲ್ಲಿರುವ ಮಗು ಹುಟ್ಟುತಿದ್ದಂತೆ ಹೊಕ್ಕುಳ ಬಳ್ಳಿ ಕತ್ತರಿಸಿ ತಾಯಿಯಿಂದ ದೂರವಾಗುತ್ತದೆ; ಒಡಲೊಳಗಿದ್ದ ಮಗು ಮಡಿಲಿಗೆ ಬರುತ್ತದೆ; ಮಡಿಲಲ್ಲಿದ್ದ ಮಗು ಬೆಳೆಯುತ್ತ ಇನ್ನಷ್ಟು ದೂರವಾಗಿ ತೋಳಿಗೇರುತ್ತದೆ; ತೋಳಿನಿಂದಿಳಿದು ನೆಲದ ಮೇಲೆ ತೆವಳಿ, ನಡೆದು, ಅಮ್ಮನಿಂದ ಮತ್ತೂ ದೂರ ಸಾಗುತ್ತದೆ.

ಅಮ್ಮನಿಂದ ದೂರ ಸಾಗದೆ ಮಗು ತನ್ನದೇ ವ್ಯಕ್ತಿತ್ವ ಬೆಳೆಸಿಕೊಳ್ಳುವುದು, ತಾನೇ ಆಗುವುದು ಸಾಧ್ಯವಿಲ್ಲವಲ್ಲ. ಮಗುವಿಗೆ ಹಾಗೆ ಅಮ್ಮನಿಂದ ದೂರವಾಗುವ ಹಾತೊರೆಯುವಿಕೆ ಹದಿ ಹರೆಯದ ಹೊತ್ತಿಗೆ ಮತ್ತಷ್ಟು ತೀವ್ರವಾಗುತ್ತದೆ.

ಡಿ.ಎಚ್.ಲಾರೆನ್ಸ್‌ನ `ಎಂಡ್ ಆಫ್ ಅನದರ್ ಹೋಮ್ ಹಾಲಿಡೆ~ ಕವಿತೆ ನೆನಪಾಗುತ್ತದೆ. ಅಮ್ಮನಿಂದ ದೂರವಾಗಿ ಮತ್ತೆ ತನ್ನ ಕಾಲೇಜಿಗೆ ಹೊರಟ ಮಗ ತಪ್ಪಿತಸ್ಥ ಭಾವನೆಯಿಂದ ನರಳುವುದನ್ನು, ಸದಾ ಮಗನ ಪ್ರೀತಿಗಾಗಿ ಹಂಬಲಿಸುವ ತಾಯಿ ಬೆನ್ನು ಹತ್ತಿ ಯಾಚಿಸುವ ಭಿಕ್ಷುಕಿಯಂತೆ ಕಾಣುವುದು ಆ ಕವಿತೆಯಲ್ಲಿ ತೀವ್ರವಾಗಿ ಮನಸ್ಸು ಮುಟ್ಟುತ್ತದೆ.
ತಾಯಿಯನ್ನು ತೊರೆಯುವುದು ಬೆಳವಣಿಗೆಯ ಅನಿವಾರ್ಯತೆಯಾದರೆ ನುಡಿತಾಯಿಯನ್ನೂ ತೊರೆಯುವುದು, ನುಡಿತಾಯಿಯಿಂದ ದೂರವಾಗುವುದು ಅನಿವಾರ್ಯವೇ? ಹೌದು ಎಂದೇ ತೋರುತ್ತದೆ.
 
ಲಲ್ಲೆ ಮಾತಿನ ನುಡಿತಾಯಿ, ಮನೆಮಾತಿನ ತಾಯಿ, ಪರಿಸರದ ತಿಳಿವು ಮೂಡಿಸಿ ಸಂಬಂಧಗಳನ್ನೂ ಭಾವ ಭಾವನೆಗಳನ್ನೂ ಮಗುವಿನ ಮನಸ್ಸಿನಲ್ಲಿ ಮೂಡಿಸಿದ ನುಡಿತಾಯಿ ಮಗು ಶಾಲೆಗೆ ಸೇರುತಿದ್ದಂತೆ ದೂರವಾಗುತ್ತಾಳೆ. ಕನ್ನಡ ಮಗು ಕನ್ನಡ ಮಾಧ್ಯಮದಲ್ಲೇ ಓದಿದರೂ ಶಾಲೆಯಲ್ಲಿ ಕಲಿಯುವ ಕನ್ನಡ ನುಡಿತಾಯಿಯಷ್ಟು ಆಪ್ತವಲ್ಲವೇ ಅಲ್ಲ.

ನಿಜವಾಗಿ ನೋಡಿದರೆ ಕನ್ನಡದ ಮಗು ಶಾಲೆಯಲ್ಲಿ ಕಲಿವ ಶಿಷ್ಟ ಕನ್ನಡ `ಎರಡನೆಯ ಭಾಷೆ~. ಜ್ಞಾನ ಅಗತ್ಯವೆಂದಾದರೆ, ವ್ಯಕ್ತಿತ್ವದ ವಿಕಾಸವಾಗುವುದು ಅಗತ್ಯವೆಂದಾದರೆ ಅಮ್ಮ ಕಲಿಸಿದ ನುಡಿಯಿಂದ ದೂರವಾಗಿ, ಎಳವೆಯ ಗೆಳೆಯರು, ಆಟಿಕೆಗಳು, ಮುಕ್ತ ಸಂತೋಷ, ಮುಕ್ತ ಮುನಿಸು ಎಲ್ಲದರ ನುಡಿಯಿಂದ ದೂರವಾಗಿ `ಸಮಾಜಕ್ಕೆ~ ಸಲ್ಲುವ ಭಾಷೆಗೆ ಸೇರುವುದು ಅಗತ್ಯವೇ ಹೌದು. ಶಾಲೆಯಲ್ಲಿ ಕಲಿವ ಕನ್ನಡದ ಬಗೆ ದ್ವಿತೀಯ ಭಾಷೆಯೇ ಆದರೂ ನೆಲದ ಭಾಷೆಯಿಂದ ತೀರ ದೂರವೇನೂ ಅಲ್ಲ.

ಶಾಲೆ-ಕಾಲೇಜುಗಳಲ್ಲಿ ಓದುವ ಮಕ್ಕಳು ತಮ್ಮ `ಊರಿಗೆ~ ಮರಳಿದಾಗ ಬಳಸುವ ಕನ್ನಡಕ್ಕೂ ಅದನ್ನು ಆಡುವ ಪರಿಗೂ, ಕಾಲೇಜಿನಲ್ಲಿ ಶಿಕ್ಷಣದ ವಾತಾವರಣದಲ್ಲಿ ಬಳಸುವ ಭಾಷೆಗೂ ವ್ಯತ್ಯಾಸ ಇರುತ್ತದೆ, ಇರಲೇಬೇಕು. ಊರಿನ ಕನ್ನಡವನ್ನು ಲೇವಡಿ ಮಾಡುವ ನಗರದ ಗೆಳೆಯರಿರುತ್ತಾರೆ.

ನಗರದ ವಾತಾವರಣದಲ್ಲಿ ಸಮಾನರೊಡನೆ ಸಮಾನವಾಗಿ ಇರಲು ಅವರಂಥ ಭಾಷೆಯೇ ಬೇಕು; ಊರಿಗೆ ಮರಳಿದಾಗ ಮನೆಯವರೊಡನೆ, ಗೆಳೆಯರೊಡನೆ ಮಾತು ಮತ್ತೆ ನೆಲದ ಮಾತು ಆಗುತ್ತದೆ. ಒಂದೇ ಭಾಷೆಯಲ್ಲಿರುವ ದ್ವಿಭಾಷಿಕತೆ ಇದು. ನಮ್ಮತನದ ಹಲವು ಚಹರೆಗಳಲ್ಲಿ ಸುಲಭವಾಗಿ ತೊರೆಯಬಹುದಾದುದು ನಮ್ಮ ಭಾಷೆಯೇ ಆಗಿರುತ್ತದೆ ಅನಿಸುತ್ತದೆ.

ಮನೆಯಿಂದ ದೂರವಾಗಿರುವಾಗ ಮನೆಯ ನೆನಪು ಕಾಡುವಂತೆ ನಾವೇ ಹೇರಿಕೊಂಡ ಅನಿವಾರ್ಯತೆಯಿಂದಲೋ, ರಾಜಕೀಯದ ಕಾರಣದಿಂದಲೋ ಪರ-ದೇಶಿಗಳಾಗಿರುವಾಗ, ಅನ್ಯಾಕ್ರಾಂತರಾಗಿ ಸ್ವಂತ ನೆಲದಲ್ಲೇ ಪರ-ದೇಶಿಗಳೂ ಪರ-ಭಾಷಿಕರೂ ಆಗುವ ಬಲವಂತಕ್ಕೆ ಒಳಪಟ್ಟಾಗ ನುಡಿತಾಯಿಗಾಗಿ ಹಾತೊರೆಯುತ್ತದೆ ಮನಸ್ಸು.

ಫ್ರೆಂಚ್ ವಸಾಹತುವಾಗಿ ಪರಿವರ್ತನೆಗೊಂಡ, ಲೋಹಗಳ ಬಳಕೆಯೇ ತಿಳಿಯದಿದ್ದ ತಾಹಿತಿ ಜನಾಂಗದ ಕವಿ ಚಾನ್ಟಾಲ್ ಸ್ಪಿಂಟ್ಸ್ ಹೇಳುತ್ತಾಳೆ: `ಅವರು ನಿನಗೆ ತಮ್ಮ ಭಾಷೆ ಕಲಿಸಿದರು, ತಮ್ಮ ಹಾಗೆ ಯೋಚನೆ ಮಾಡುವುದು ಕಲಿಸಿದರು, ತಮ್ಮ ಮೌಲ್ಯ, ತಮ್ಮ ಅಭಿರುಚಿ ನಿನ್ನದಾಗಿಸಿದರು, ಒಂದಿಷ್ಟೂ ಯೋಗ್ಯತೆ ಇಲ್ಲದೆ ಗೆದ್ದುಬಿಟ್ಟರು. ಅವರು ಗೆಲ್ಲಲು, ನಿನ್ನ ಮಂಗ ಮಾಡಲು ಸಹಾಯಮಾಡಿದ್ದು ನೀನೇ~.

ಕೆನ್ಯಾದ ನ್ಗೂಗಿ ವಾ ಥಿಯಾಂಗೊ ಹೇಳುವುದು ಕೇಳಿ: ಇಡೀ ಜಗತ್ತಿನಲ್ಲಿ ಇಂಗ್ಲಿಷು ಈಗ ಪಡೆದಿರುವಂಥ ಸ್ಥಾನವನ್ನು ಆಕ್ರಮಿಸಲು ಇತರ ಭಾಷೆಗಳನ್ನೂ ಸಂಸ್ಕೃತಿಗಳನ್ನೂ ನಾಶಮಾಡಿದೆ. ಇತರ ಹಲವು ಭಾಷೆಗಳು ಸತ್ತು ಒಂದು ಭಾಷೆ ಮಾತ್ರ ಉಳಿಯುವಂಥದ್ದು ಬದುಕಿನ ಸ್ಥಿತಿಯಾಗಬಾರದು. ಜಗತ್ತಿಗೆಲ್ಲ ಒಂದೇ ಭಾಷೆಯೇ? ಭಾಷೆಗಳ ಜಗತ್ತು ಇದು. ಸ್ವಾತಂತ್ರ್ಯ, ಸಮಾನತೆ, ರಾಷ್ಟ್ರಗಳ ನಡುವೆ ಶಾಂತಿ ಇದ್ದರೆ ಮಾತ್ರ ಭಾಷೆಗಳ ಜಗತ್ತು ಉಳಿದೀತು.

ಎಲ್ಲ ಭಾಷೆಗಳಲ್ಲೂ ನುಡಿತಾಯಿಯನ್ನು ಕುರಿತ ಕವಿತೆಗಳಿಲ್ಲ. ತಮ್ಮದೊಂದೇ ಭಾಷೆ ಬಲ್ಲ ಆದಿವಾಸಿಗಳು ತಮ್ಮ ನುಡಿತಾಯಿಯ ಬಗ್ಗೆ ಆತಂಕಪಡುವುದೂ ಇಲ್ಲ. ಅಥವ ಇದ್ದರೂ ಲಿಪಿ ಇಲ್ಲದ್ದರಿಂದ ಬೇರೆಯವರಿಗೆ ಗೊತ್ತಾಗುವುದಿಲ್ಲ. `ಕಳೆದ ಸುಮಾರು ಒಂದು ಸಾವಿರ ವರ್ಷದಿಂದ ಜಪಾನಿ ಭಾಷೆಯೊಂದೇ ಖಾಸಗೀ ಮತ್ತು ಸಾರ್ವಜನಿಕ ವಲಯಗಳಲ್ಲಿ ಬಳಕೆಯಾಗುತ್ತಿದೆ.
 
ಹಾಗಾಗಿ ಭಾಷೆಗೆ ನೆರವು ನೀಡಬೇಕು ಅನ್ನುವ ಪ್ರಜ್ಞಾಪೂರ್ವಕ ಅರಿವು ಇಲ್ಲ. ನಮ್ಮ ಭಾಷೆಯ ಬಗ್ಗೆ ಇರುವ ಮಮಕಾರದ ಬಗ್ಗೆ ಅಲ್ಲೊಂದು ಇಲ್ಲೊಂದು ಕವಿತೆ ಇದ್ದಾವು~ ಅನ್ನುವುದು ಜಪಾನಿನ ಪ್ರೊಫೆಸರ್ ಕ್ಯೋಕೊ ನಿವಾ ಹೇಳುವ ಮಾತು.
ನೊಬೆಲ್ ಪ್ರಶಸ್ತಿ ಪಡೆದ ಸೆಸ್ಲಾವ್ ಮಿಲ್ಸೋಸ್ (1911-2004) ಬದುಕಿನಲ್ಲಿ ಐವತ್ತು ವರ್ಷಗಳಷ್ಟು ಕಾಲ ನುಡಿತಾಯಿಯಿಂದ ದೂರವಾಗಿದ್ದವನು ಬರೆದ ಕವಿತೆ ನೆನಪಾಗುತ್ತಿದೆ.

ನನ್ನ ನಿಷ್ಠಾವಂತ ತಾಯಿ ನುಡಿಯೇ, ನಿನ್ನ ಸೇವೆ ಮಾಡುತಿದ್ದೇನೆ. ಪ್ರತಿ ರಾತ್ರಿಯೂ ನಿನ್ನೆದುರು ಬಣ್ಣಗಳು ತುಂಬಿದ ಬಟ್ಟಲುಗಳ ಸಾಲು ಇಡುತ್ತೇನೆ- ನಿನ್ನ ಬರ್ಚ್ ಮರ, ನಿನ್ನ ಮಿಡತೆ, ನಿನ್ನ ಫಿಂಚ್ ಹಕ್ಕಿ, ನನ್ನ ನೆನಪಿನಲ್ಲಿ ಉಳಿದಿರುವುದನ್ನೆಲ್ಲ ನೀನು ಬಣ್ಣಿಸಲಿ ಎಂದು. ಹೀಗೇ ವರ್ಷಗಳು ಕಳೆದವು ಎಷ್ಟೋ. ನಾನು ಹುಟ್ಟಿದ ನೆಲ ನೀನು. ನೀನಲ್ಲದೆ ಬೇರೆ ನೆಲೆ ಇಲ್ಲ ನನಗೆ. ನನಗೂ ಹಿಡಿಯಷ್ಟು ಒಳ್ಳೆಯವರಿಗೂ- ನಡುವೆ, ಅವರು ನೂರಿರಲಿ, ಇಪ್ಪತ್ತು ಇರಲಿ, ಇನ್ನೂ ಹುಟ್ಟದಿರುವವರೇ ಇರಲಿ- ಸಂದೇಶವಾಹಕಳಾಗುವೆ ನೀನು ಅನ್ನುವ ವಿಶ್ವಾಸವಿತ್ತು. ಈಗ ಸಂಶಯ ಹುಟ್ಟಿದೆ.

ನನ್ನ ಬದುಕು ದುಂದು ಮಾಡಿದೆನೋ ಅನಿಸುತ್ತದೆ. ಕೀಳುಜನರ ನುಡಿಯಾಗಿರುವೆ, ಅವಿಚಾರಿಗಳ, ಬೇರೆ ದೇಶಗಳಿಗಿಂತ ತಮ್ಮನ್ನೆ ತಾವು ದ್ವೇಷಿಸುವ, ಗುಪ್ತ ಮಾಹಿತಿದಾರರ, ಗೊಂದಲಗೆಟ್ಟವರ, ಮುಗ್ಧತೆಯಲ್ಲಿ ನರಳುವವರ ನುಡಿಯಾಗಿರುವೆ. ಆದರೆ ನೀನಿಲ್ಲದೆ ನಾನು ಯಾರು? ದೂರ ದೇಶದಲ್ಲಿರುವ ಬರಿಯ ವಿದ್ವಾಂಸ ಅಷ್ಟೆ. ಭಯವಿಲ್ಲದೆ, ಅಪಮಾನವಿಲ್ಲದೆ ಬದುಕಿನಲ್ಲಿ ಗೆದ್ದವನು. ಹೌದು, ನೀನಿಲ್ಲದೆ ನಾನು ಯಾರು? ಬರಿಯ ಫಿಲಾಸಫರ್ ಅಷ್ಟೆ.

ಇದೆಲ್ಲ ಭಾವನೆಗಳ ಮಾತು ಅನಿಸೀತು. ಜನ ನುಡಿತಾಯಿಯನ್ನು ತೊರೆಯುವ ಕಾರಣಗಳೇನು, ನುಡಿತಾಯಿಯಂದಿರು ಹಲವರು ಇರಲು ಸಾಧ್ಯವೇ, ಕಲಿಕೆಯಲ್ಲಿ, ಜ್ಞಾನಸಂಪಾದನೆಯಲ್ಲಿ ನುಡಿತಾಯಿಯ ಪಾತ್ರವೇನು, ಮಿತಿಯೇನು, ಶಿಕ್ಷಣ ಮತ್ತು ನುಡಿತಾಯಿಯ ಸಂಬಂಧ, ಭಾಷೆಗಳ ಸಂಬಂಧ, ಭಾವ ಭಾಷೆ ವಿಚಾರಗಳ ಸಂಬಂಧ, ಭಾಷೆಗಳ ಹತ್ಯೆ, ಭಾಷಿಕ ಹಕ್ಕು ಇವೆಲ್ಲ ಮುಖ್ಯವಾದ ಸಾಮಾಜಿಕ ಮತ್ತು ರಾಜಕೀಯ ಪ್ರಶ್ನೆಗಳು.

ಬದುಕಿನಲ್ಲಿ ಎದುರಾಗುವ ಯಾವ ಪ್ರಶ್ನೆಗೂ ಸುಲಭ ಉತ್ತರ ಇಲ್ಲದಿರುವಂತೆಯೇ ಈ ಪ್ರಶ್ನೆಗಳಿಗೂ ಸುಲಭದ ಸರ್ವ ಸಮ್ಮತ ಉತ್ತರಗಳು ಇಲ್ಲ. ಈ ಪ್ರಶ್ನೆಗಳನ್ನು ಕುರಿತು ಮುಂದಿನ ಬರಹಗಳಲ್ಲಿ ವಿಚಾರ ಮಾಡೋಣ.

olnswamy@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.