ADVERTISEMENT

ಪ್ರಾಚೀನ-ತಮ

ಓ.ಎಲ್.ನಾಗಭೂಷಣ ಸ್ವಾಮಿ
Published 28 ಜುಲೈ 2012, 19:30 IST
Last Updated 28 ಜುಲೈ 2012, 19:30 IST
ಪ್ರಾಚೀನ-ತಮ
ಪ್ರಾಚೀನ-ತಮ   

ಜಗತ್ತಿನ ಪ್ರಾಚೀನತಮ ಭಾಷೆಗಳ ಬಗ್ಗೆ ಬರೆಯಬೇಕೆಂದು ಓದುತಿದ್ದೇನೆ. ಓದಿದಷ್ಟೂ ತಬ್ಬಿಬ್ಬಾಗುತ್ತಿದೆ. ಪ್ರಾಚೀನತಮ ಭಾಷೆಗಳು ಬರವಣಿಗೆ ಕಂಡು ಹಿಡಿದು ಏನೇನನ್ನು ಬರೆದಿಟ್ಟವು? ಕೆಲವು ಪ್ರಾಚೀನತಮ ಬರವಣಿಗೆಯ ಇಂಗ್ಲಿಷ್ ಅನುವಾದದ ಕನ್ನಡ ರೂಪ ನೋಡಿ.

ಗುಲಾಮಾ?
ಇಲ್ಲೇ ಇದೇನೆ ದಣೀ, ಇಲ್ಲೇ ಇದೇನೆ.
ಗಾಡಿ ಹೂಡುವುದಕ್ಕೆ ಹೇಳು, ಅರಮನೆಗೆ ಹೋಗತೇನೆ.
ಹೋಗಿ ದಣೀ, ಹೋಗಿ. ನಿಮಗೇ ಲಾಭ. ನಿಮ್ಮನ್ನು ಕಂಡರೆ ರಾಜ ಬಹುಮಾನ ಕೊಡತಾನೆ.
ಇಲ್ಲಯ್ಯಾ, ಅರಮನೆಗೆ ಹೋಗಲ್ಲ.
ಬೇಡ ದಣೀ, ಬೇಡ. ರಾಜ ನಿಮ್ಮನ್ನ ಕಂಡರೆ ಎಲ್ಲಿಗೆ ಕಳಿಸುತಾನೋ ದೇವರಿಗೇ ಗೊತ್ತು. ಗೊತ್ತಿಲ್ಲದ ದಾರಿ, ಗೊತ್ತಿಲ್ಲದ ಊರಿಗೆ ಹೋಗಿ ಹಗಲೂ ರಾತ್ರಿ ಕಷ್ಟಪಡಬೇಕು.

ಗುಲಾಮಾ?
ಇಲ್ಲೇ ಇದೇನೆ ದಣೀ, ಇಲ್ಲೇ ಇದೇನೆ.
ರಥ ಬರಲಿ, ಬೇಟೆಗೆ ಹೋಗತೇನೆ.
ಒಳ್ಳೆಯದು ದಣೀ, ಬೇಟೆಗೆ ಹೋಗಿ. ಬೇಟೆಗಾರನ ಹೊಟ್ಟೆ ತುಂಬುತ್ತೆ, ಬೇಟೆ ನಾಯಿ ಮಿಕದ ಎಲುಬು ಮುರಿಯುತ್ತೆ, ಊರೂರೆಲ್ಲ ಅಲೆಯುವ ಕಾಗೆ ಮರಿಗಳ ಹೊಟ್ಟೆ ತುಂಬಿಸತ್ತೆ, ಹೇಸರಗತ್ತೆಗೆ ದೂರ ದೂರದ ಹೊಸ ಹುಲ್ಲುಗಾವಲು ಸಿಗತ್ತೆ.
ಇಲ್ಲ ಬೇಟೆಗೆ ಹೋಗಲ್ಲ.
ಬೇಡ ದಣೀ, ಹೋಗಬೇಡಿ. ಬೇಟೆಗಾರನ ಅದೃಷ್ಟ ಇವತ್ತಿದ್ದ ಹಾಗೆ ನಾಳೆ ಇರಲ್ಲ. ಬೇಟೆ ನಾಯಿಯ ಹಲ್ಲು ಮುರಿಯುತ್ತೆ. ಊರೆಲ್ಲ ಅನ್ನ ಹುಡುಕುವ ಕಾಗೆಯ ಗೂಡು ಗಲೀಜು. ಹೇಸರಗತ್ತೆ ಮರುಭೂಮಿಯೆ ಮನೆಯಾಗತ್ತೆ.

ADVERTISEMENT

ಗುಲಾಮಾ?
ಇಲ್ಲೇ ಇದೇನೆ ದಣೀ, ಇಲ್ಲೇ ಇದೇನೆ.
ಕ್ರಾಂತಿಯ ನಾಯಕ ಆಗಬೇಕು ನಾನು.
ನಾಯಕರಾಗಿ ದಣೀ. ಕ್ರಾಂತಿ ಮಾಡದಿದ್ದರೆ ಮೈಗೆ ಬಟ್ಟೆ, ಹೊಟ್ಟೆಗೆ ಹಿಟ್ಟು ಎಲ್ಲಿ ಸಿಗುತದೆ ದಣೀ, ಕ್ರಾಂತಿ ಮಾಡಿ.
ಇಲ್ಲಯ್ಯಾ, ಕ್ರಾಂತಿ ಮಾಡಲ್ಲ.
ಬೇಡ ದಣೀ. ಕ್ರಾಂತಿಯ ನಾಯಕ ಕೊಲೆಯಾಗತಾನೆ ಅಥವ ಅವನ ಕಣ್ಣು ಕೀಳುತಾರೆ, ಇಲ್ಲ ಜೈಲಿಗೆ ಹಾಕತಾರೆ.

ಗುಲಾಮಾ?
ಇಲ್ಲೇ ಇದೇನೆ ದಣೀ, ಇಲ್ಲೇ ಇದೇನೆ.
ದಾನ ಧರ್ಮ ಮಾಡಬೇಕು ಅಂತಿದೇನೆ.
ಮಾಡಿ ದಣೀ, ಒಳ್ಳೆಯದು. ನೀವು ಮಾರ್ಡುಕ್ ದೇವತೆಗೆ ಸಮಾನರಾದವರು ಆಗತೀರಿ.
ಇಲ್ಲ ಕಣಯ್ಯ, ದಾನ ಧರ್ಮ ಮಾಡಲ್ಲ.
ಬೇಡ ದಣೀ. ಹಿರಿಯರ ಬೆಟ್ಟದ ಹತ್ತಿರ ಹೋಗಿ ನೋಡಿ. ತಲೆಬುರುಡೆಗಳ ರಾಶಿ ಬಿದ್ದಿದೆ. ಯಾವುದು ಧರ್ಮಿಷ್ಠರದು, ಯಾವುದು ದಾನಿಗಳದು, ಯಾವುದು ದುಷ್ಟರದು ಅಂತೇನಾದರೂ ತಿಳಿಯುತದಾ?

ಗುಲಾಮಾ?
ಇಲ್ಲೇ ಇದೇನೆ ದಣೀ, ಇಲ್ಲೇ ಇದೇನೆ.
ನನ್ನ ಕತ್ತು ಮುರಿಯುವುದು ಒಳ್ಳೆಯದಾ, ನಿನ್ನ ಕತ್ತು ಮುರಿಯುವುದು ಒಳ್ಳೆಯದಾ, ಅಥವ ನದಿಗೆ ಎಸೆಯುವುದು ಒಳ್ಳೆಯದಾ?
ಸ್ವರ್ಗ ಮುಟ್ಟುವಷ್ಟು ಎತ್ತರದವರು ಯಾರಿದಾರೆ? ಇಡೀ ಜಗತ್ತನ್ನ ಆವರಿಸಿಕೊಳ್ಳುವಂಥವರು ಯಾರಿದಾರೆ ಬದುಕಿರುವವರಲ್ಲಿ?
ಸರಿ, ನಿನ್ನ ಮೊದಲು ಸಾಯಿಸಿ ಕಳಿಸುತೇನೆ.
ಸರಿ ದಣೀ, ನಾನು ಇರದಿದ್ದರೆ ನೀವು ಮೂರು ದಿನ ಕೂಡ ಬದುಕುವುದಿಲ್ಲ.

ಇದು ಕ್ರಿ.ಪೂ. 1000ದ ಕಾಲದಲ್ಲಿ ಒಡೆಯ ಮತ್ತು ದಣಿಯ ನಡುವೆ ನಡೆದ ಮಾತುಕಥೆಯ ತುಣುಕು. ಇದನ್ನು ನಿರಾಶಾವಾದದ ಸಂಭಾಷಣೆ, ಡಯಲಾಗ್ ಆಫ್ ಪೆಸಿಮಿಸಂ ಅನ್ನುತ್ತಾರೆ ಇಂಗ್ಲಿಷಿನಲ್ಲಿ. ಅಸ್ಸೀರಿಯ ಮತ್ತು ಬ್ಯಾಬಿಲೋನಿಯದಲ್ಲಿ ಇದರ ಹಲವು ಹಸ್ತಪ್ರತಿಗಳು ಅಕ್ಕಾಡಿಯನ್ ಭಾಷೆಯಲ್ಲಿ ಸಿಕ್ಕಿವೆಯಂತೆ. ಈ ಬಿಡಿ ಪದ್ಯಗಳಲ್ಲಿ ಒಡೆಯನ ಚಪಲ ಚಿತ್ತವಿದೆ. ಒಡೆಯನನ್ನು ಒಡೆಯನ ಇಚ್ಛೆಗೆ ಅನುಗುಣವಾಗಿ ಸಮರ್ಥನೆ ನೀಡುವ ಗುಲಾಮನ ಜಾಣತನವಿದೆ. ಹೀಗೆ ಮಾಡಿದರೂ, ಮಾಡದಿದ್ದರೂ ಕೊನೆಗೆ ಏನೂ ಆಗುವುದಿಲ್ಲ, ತನ್ನ ಸ್ಥಿತಿ ಬದಲಾಗುವುದಿಲ್ಲ, ಬದುಕು ಬದಲಾಗುವುದಿಲ್ಲ ಅನ್ನುವ ನಿರಾಶಾವಾದವಿದೆ. ಅಲ್ಲ, ಇದು ಆ ಕಾಲದ ಹಾಸ್ಯ ನಾಟಕದ ಒಂದು ತುಣುಕು ಇರಬಹುದು. ಹೀಗೆ ಚರ್ಚೆ ಸಾಗಿಯೇ ಇದೆ. ಈ ಸಂಭಾಷಣೆಯ ಒಂದೊಂದು ಸ್ಟಾಂಜಾ ಒಬ್ಬೊಬ್ಬ ದೇವತೆಯ ನೆನಪಿಗೆ ಬರೆದದ್ದು, ಹೀಗೆ ಚರ್ಚೆ ನಡೆದಿದೆ.

ಮುಂದಿನ ಉದಾಹರಣೆ ಇನ್ನೂ ಹಳೆಯದು, ಅಕ್ಕಾಡಿಯದ ತಂದೆಯೊಬ್ಬ ಮಗನಿಗೆ ಹೇಳಿದ ಮಾತು ಕ್ರಿ.ಪೂ. 2200ದ ಸುಮಾರಿನದು:

ಜಗಳ ನಡೆಯುತಿರುವಾಗ ಹತ್ತಿರ ಹೋಗಬೇಡ. ನೀನು ಸಾಕ್ಷಿಯಾಗಬೇಕಾದೀತು. ನಿನಗೆ ಸಂಬಂಧವಿಲ್ಲದ ವ್ಯಾಜ್ಯದಲ್ಲಿ ಸಿಕ್ಕಿಬೀಳತೀಯ. ನಿನಗೇ ಸಂಬಂಧ ಪಟ್ಟ ವ್ಯಾಜ್ಯ ಹುಟ್ಟಿಕೊಂಡರೆ ತಕ್ಷಣ ಆರಿಸಿಬಿಡು. ವ್ಯಾಜ್ಯ ಅನ್ನುವುದು ಹುಲ್ಲು ಹರಡಿ ಮರೆ ಮಾಡಿದ ಹಳ್ಳ. ಶತ್ರುಗಳನ್ನೂ ನಿನ್ನನ್ನೂ ಆವರಿಸಿಕೊಳ್ಳುವ ಕಲ್ಲಿನ ಕೋಟೆ. ಶತ್ರುವಿಗೆ ಕೆಡುಕು ಮಾಡಬೇಡ. ಕೆಟ್ಟದ್ದು ಮಾಡಿದವರಿಗೂ ಕರುಣೆ ತೋರು. ಶತ್ರುವಿನೊಡನೆ ನ್ಯಾಯವಾಗಿರು. ಸ್ನೇಹದಿಂದಿರು. ಮಗನೇ, ರಾಜ ನಿನ್ನ ಸೇವೆಯನ್ನು ಬಯಸಿದರೆ, ಅವನ ಖಜಾನೆಯ ಜವಾಬ್ದಾರಿ ಕೊಟ್ಟರೆ ನಿನ್ನ ಬಿಟ್ಟು ಬೇರೆ ಯಾರೂ ಅಲ್ಲಿ ಕಾಲಿಡದಂತೆ ನೋಡಿಕೋ. ಒಳಗೆ ಎಣಿಸಲಾಗದಷ್ಟು ಸಂಪತ್ತು ಇರುತ್ತದೆ, ಅದಕ್ಕೆ ಆಸೆಪಡಬೇಡ. ಗುಟ್ಟಾಗಿ ಅಪರಾಧ ಮಾಡುವುದಕ್ಕೆ ಮನಸ್ಸು ಮಾಡಬೇಡ. ಎಂಥ ಗುಟ್ಟಾದ ಅಪರಾಧವೂ ಬಯಲಾಗುತ್ತದೆ.

ನಮ್ಮ ಪಾಡಿಗೆ ನಾವು ಅನ್ನುವ ಮರ್ಯಾದಸ್ಥ ಮಧ್ಯಮವರ್ಗದವರು ಇವತ್ತೂ ಆದರ್ಶವೆಂದು ಭಾವಿಸುವ, ಆದರೆ ವಾಸ್ತವವಲ್ಲದ ಸ್ಥಿತಿ ಇದು ಅನ್ನಿಸುತ್ತದೆಯೇ.
ಕ್ರಿ.ಪೂ. 1000ದ ಸುಮಾರಿನಲ್ಲಿ ಬ್ಯಾಬಿಲೋನಿಯದ ಅರಸು ಕುಮಾರರಿಗೆ ನೀಡುತ್ತಿದ್ದ ಸುದೀರ್ಘ ಹಿತವಚನದ ಕೆಲವು ಮಾತು ಹೀಗಿವೆ:

1. ಅರಸ ನ್ಯಾಯಪರವಾಗಿಲ್ಲದಿದ್ದರೆ ಅವನ ಜನರ ಬದುಕು ಅಸ್ತವ್ಯಸ್ತವಾಗಿ ಅವನ ನಾಡು ಧ್ವಂಸವಾಗುತ್ತದೆ.

2. ನ್ಯಾಯವನ್ನು ಧಿಕ್ಕರಿಸಿದರೆ ವಿಧಿಯ ದೇವರು ಇಯಾನ ದ್ವೇಷ ಕಟ್ಟಿಕೊಳ್ಳಬೇಕಾಗುತ್ತದೆ.

3. ಸಮಾಜದ ಘನವಂತರಿಗೆ ಬೆಲೆಕೊಡದಿದ್ದರೆ ಅರಸನ ಬದುಕು ಮೊಟಕಾಗುತ್ತದೆ.

4. ಸಚಿವರ ಸಲಹೆಗೆ ಬೆಲೆ ಕೊಡದಿದ್ದರೆ ದೇಶ ಅರಸನ ವಿರುದ್ಧ ದಂಗೆಯೇಳುತ್ತದೆ.

5. ಕಪಟಿಗಳ ಮಾತಿಗೆ ಕಿವಿಕೊಟ್ಟರೆ ನಾಡಿನ ಸ್ಥಿತಿ ಕದಡುತ್ತದೆ.

ಆಳುವವರಿಗೆ ಹಿತವಚನ ನೀಡುವ ಎಷ್ಟೊಂದು `ನೀತಿ~ಗಳು ಜಗತ್ತಿನ ಎಷ್ಟೊಂದು ಭಾಷೆಗಳಲ್ಲಿವೆ. ಎಂದಿನಂತೆ ಆ ಹೊತ್ತಿನ ಆಳುವವರಿಗೂ ತುಳಿಯುವ ಕಾಲು, ದೋಚುವ ಕೈ, ಸುಖದಲ್ಲಿ ಮೈಯನ್ನೂ ಮನಸ್ಸನ್ನೂ ಮರೆಯುವ ಬುದ್ಧಿ ಬದಲಾಗಿಲ್ಲವೇನೋ.

ಅಶ್ಶೂರ್ ನಾಶಿರ್ ಅಪ್‌ಲಿ ಅನ್ನುವ ಅಸ್ಸೀರಿಯದ ರಾಜ, ಕ್ರಿ.ಪೂ. 883ರ ಸುಮಾರಿನವನು ಹೊಸ ಅರಮನೆ ಕಟ್ಟಿಸಿ ಔತಣ ಕೊಟ್ಟ. ಅದರ ವಿವರಗಳನ್ನು ಹೀಗೆ ದಾಖಲು ಮಾಡಿಸಿದ್ದಾನೆ.

`ಹತ್ತು ದಿನಗಳ ಔತಣ ನೀಡಿದೆ. ನಲವತ್ತೇಳು ಸಾವಿರದ ಎಪ್ಪತ್ತನಾಲ್ಕು ಜನರಿಗೆ ಆತಿಥ್ಯ ನೀಡಿದೆ. ನನ್ನ ಇಡೀ ಸಾಮ್ರಾಜ್ಯದ ಐದು ಸಾವಿರ ಪ್ರಮುಖರು ಬಂದಿದ್ದರು. `ಹತ್ತು ರಾಜ್ಯಗಳ~ ಪ್ರತಿನಿಧಿಗಳು, ನನ್ನ ರಾಜಧಾನಿಯ ಹದಿನಾರು ಸಾವಿರ ಜನ, ಒಂದು ಸಾವಿರದ ಐದು ನೂರು ಅಧಿಕಾರಿಗಳು, ಎಲ್ಲರಿಗೂ ಔತಣ ಕೊಟ್ಟು, ಉಡುಗೊರೆ ಕೊಟ್ಟು, ಕಳಿಸಿಕೊಟ್ಟೆ. `ಔತಣ ವಿವರ~ ಒಂದು ಸಾವಿರ ಕೊಬ್ಬಿದ ಎತ್ತು, ಒಂದು ಸಾವಿರ ಕರುಗಳು, ಹತ್ತು ಸಾವಿರ ಸಾಕಿದ ಕುರಿಗಳು, ಹದಿನೈದು ಸಾವಿರ ಮೇಕೆ ಮರಿಗಳು, ಒಂದು ಸಾವಿರ ಬಾತುಕೋಳಿ, ಹತ್ತು ಸಾವಿರ ಪಾರಿವಾಳ, ಹತ್ತು ಸಾವಿರ ಚರ್ಮದ ಚೀಲದಷ್ಟು ಮದ್ಯ, ಒಂದು ಸಾವಿರ ಪೆಟ್ಟಿಗೆಗಳಷ್ಟು ತರಕಾರಿ, ಮುನ್ನೂರು ಪೀಪಾಯಿ ಎಣ್ಣೆ, ...ಹೀಗೇ ಮುಂದುವರೆಯುತ್ತದೆ.

ಇವೆಲ್ಲ ಮೆಸೊಪಟೋಮಿಯ ಎಂದು ಗುರುತಿಸಲಾಗುವ ಪ್ರದೇಶದ ಪಠ್ಯಗಳಿಂದ ಆಯ್ದ ಭಾಗಗಳು. ಮೆಸಪೊಟೋಮಿಯ ಅಂದರೆ ನದಿಗಳ ನಡುವಿನ ನಾಡು ಅನ್ನುವ ಅರ್ಥ. ಇಲ್ಲಿ ಸುಮಾರು 35 ನಾಗರಿಕತೆಗಳು ಬೆಳೆದು, ಬೆಳಗಿ, ಕುಗ್ಗಿ, ಕರಗಿ ನಾಶವಾದವು.

ಕೊನೆಯ ಪಕ್ಷ ಹತ್ತು ಹದಿನೈದು ಭಾಷೆಗಳು ಸಮೃದ್ಧವಾದ ವಿವರಗಳನ್ನು ಉಳಿಸಿಕೊಟ್ಟಿವೆ. ಪ್ರಾಚೀನ-ತಮದ ನಕ್ಷತ್ರಗಳ ಬೆಳಕಿನ ಹಾಗೆ. ಕ್ರಿ.ಪೂ. 3500ರ ಸುಮಾರಿನಿಂದ ಕ್ರಿ.ಪೂ. 300ರಲ್ಲಿ ಅಲ್ಲಿಗೆ ಅಲೆಕ್ಸಾಂಡರ್ ದಾಳಿ ಮಾಡುವವರೆಗಿನ ಅವಧಿಗೆ ಅನ್ವಯಿಸುವಂತೆ ಈ ಪ್ರದೇಶವನ್ನು ಸುಮಾರಾಗಿ ಎಲ್ಲ ಚರಿತ್ರೆಕಾರರೂ ನಾಗರಿಕತೆಯ ತೊಟ್ಟಿಲು ಅಂತಲೇ ಹೇಳುತ್ತಾರೆ. ಆದರೆ ನೋಡಿ, ಈ `ತೊಟ್ಟಿಲ ಶಿಶುಗಳು~ ಉಳಿಸಿರುವ ದಾಖಲೆಗಳನ್ನು ನೋಡಿದರೆ ಅವರು ಎಷ್ಟು ನಾಗರಿಕರೋ ಅಷ್ಟೇ ರಾಕ್ಷಸರೂ ಆಗಿದ್ದರು ಅನ್ನಿಸುತ್ತದೆ. ಉರುಕ್ ಉತ್ಖನನದಲ್ಲಿ ದೊರೆತ ಕ್ರಿ.ಪೂ. 1000ದ ಸುಮಾರಿನ ಚಿತ್ರ ಹೀಗಿದೆ: ಸೆರೆಯಾಳೊಬ್ಬ ನೆಲದ ಮೇಲೆ ಬಿದ್ದಿದ್ದಾನೆ. ಸರಪಳಿ ಬಿಗಿದಿದ್ದಾರೆ. ಸುತ್ತ ನಾಲ್ಕಾರು ಜನ ನಿಂತು ಭರ್ಜಿಗಳಿಂದ ಅವನನ್ನು ತಿವಿಯುತಿದ್ದಾರೆ. ಕ್ರಿ.ಪೂ. 3000ದ ಸುಮಾರಿನಲ್ಲೇ ಈಜಿಪ್ತಿನಲ್ಲಿ ಇನ್ನೊಂದು ನಾಗರಿಕತೆಯ ತೊಟ್ಟಿಲು, ಸಿಂಧೂ ಕಣಿವೆಯಲ್ಲಿ ಮತ್ತೊಂದು ತೊಟ್ಟಿಲು ತೂಗುತಿದ್ದವು.

ಯೂಫ್ರಟಿಸ್ ಮತ್ತು ಟೈಗ್ರಿಸ್ ನದಿಗಳ ದಡಗಳ ಆಚೆ ಈಚೆ, ಕೆಳಗೆ ಇರಾಕ್‌ನ ಬಾಗ್ದಾದ್‌ನಿಂದ ಪಶ್ಚಿಮೋತ್ತರವಾಗಿ, ಮ್ಯಾಪನ್ನು ನಮ್ಮೆದುರಿಗೆ ಇಟ್ಟುಕೊಂಡರೆ ಆಫ್ರಿಕ ಖಂಡದ ಮೇಲಿನ ಬಲ ತುದಿಯವರೆಗೆ ಅರ್ಧ ಚಂದ್ರಾಕೃತಿಯಲ್ಲಿ ಹರಡಿರುವ ಈ ಪ್ರದೇಶ ಮೆಸೊಪಟೋಮಿಯ. ಇದರ ಬಲ ಬದಿಗೆ ಮತ್ತು ಉತ್ತರದಲ್ಲಿ ಪರ್ವತ ಶ್ರೇಣಿ, ದಕ್ಷಿಣದಲ್ಲಿ ಸಮುದ್ರ ಮತ್ತು ಜೌಗು, ಮಿಕ್ಕಂತೆ ಮರುಭೂಮಿ. ಇಲ್ಲಿನ ಸುಮರ್ ಪಟ್ಟಣದವರು, ಅಕ್ಕಾಡಿಯದವರು, ಬ್ಯಾಬಿಲೋನಿಯದವರು, ಅಸ್ಸಿರಿಯದವರು, ಸ್ವಲ್ಪ ಮಟ್ಟಿಗೆ ಹಿಟೈಟ್ ಜನ, ಮತ್ತೆ ಫೊನೀಸಿಯದವರು ಭಾಷೆಯನ್ನು, ಲಿಪಿಯನ್ನು, ವಿಜ್ಞಾನವನ್ನು, ಗಣಿತವನ್ನು ಬೆಳೆಸಿದ ಪ್ರಾಚೀನರು. ಜಗತ್ತಿನ ಮೊದಲ ಸಾಮ್ರಾಜ್ಯಶಾಹಿ ಹುಟ್ಟಿದ್ದು ಇಲ್ಲಿ; ಸುಮಾರು ಒಂದು ಸಾವಿರಕ್ಕಿಂತ ಹೆಚ್ಚಿನ ದೇವತೆಗಳ ಆರಾಧನೆ, ಹತ್ತು ಹದಿನೈದು ರಾಜವಂಶಗಳು, ಆಡಳಿತಕ್ಕೊಂದು ಭಾಷೆ, ವ್ಯಾಪಾರಕ್ಕೆ ಇನ್ನೊಂದು ಭಾಷೆ, ಮತ್ತೆ ಆಯಾ ಪ್ರದೇಶದ ಒಂದೊಂದು ಆಡು ಭಾಷೆ ಇವುಗಳ ಘರ್ಷಣೆ; ಇವೆಲ್ಲ ನಾಗರಿಕತೆಯ ಶಿಶುಗಳ ಬದುಕಿನಲ್ಲಿ ನಡೆದೇ ಇದ್ದವು. ಪ್ರಾಚೀನ-ತಮ ಆಧುನಿಕ ವರ್ತಮಾನದ `ತಮ~ವೂ ಹೌದು ಅನಿಸಿಬಿಡುತ್ತದೆ.

ಈ ಅವಧಿಯ ಕಥೆಯನ್ನು ಹೇಳುವುದು ಬಲು ತೊಡಕಿನ ಕೆಲಸ. ಅದಕ್ಕೆ ಬ್ಯಾಬಿಲೋನ್ ಎಂಬ ಒಂದು ಹೆಸರೇ ದೊಡ್ಡ ನಿದರ್ಶನ. ಆ ಮಾತಿನ ಅರ್ಥ, ಬ್ಯಾಬಿಲೋನ್ ಜನರ ಭಾಷೆಯಲ್ಲಿ `ದೇವತೆಗಳು ಬರುವ ಬಾಗಿಲು~ ಎಂದು. ಸುಸಂಸ್ಕೃತವಾಗಿ ಬೇಕಾದರೆ ಅದನ್ನು `ದೇವದ್ವಾರ~ ಅನ್ನೋಣ. ಅದೇ ಮಾತಿಗೆ ಹಳೆಯ ಒಡಂಬಡಿಕೆಯ ಹೀಬ್ರೂ ಭಾಷೆಯಲ್ಲಿ ಕೊಟ್ಟಿದ್ದ ಅರ್ಥ `ಅಸ್ತವ್ಯಸ್ತತೆಯ ನಾಡು~ ಎಂದು! ಹಲವು ದೇವರುಗಳಿರುವ, ಹಲವು ಭಾಷೆಗಳಿರುವ ಗೊಂದಲಪುರವಾಗಿ ಬ್ಯಾಬಿಲೋನಿಯಾ ಅನ್ಯರ ಕಣ್ಣಿಗೆ ಕಂಡಿತ್ತು. ಅದಕ್ಕೆಂದೇ ಬಹುಭಾಷೆಗಳ ಗೊಂದಲವನ್ನು ಚಿತ್ರಿಸುವ `ಟವರ್ ಆಫ್ ಬ್ಯಾಬೆಲ್~ ಎಂದು ಪ್ರಸಿದ್ಧವಾಗಿರುವ ಕಥೆ ಹುಟ್ಟಿರುವುದು. ಮುಖ್ಯವಾಗಿ ಸುಮೇರಿಯ, ಅಕ್ಕಾಡಿಯ, ಮತ್ತು ಬ್ಯಾಬಿಲೋನಿಯ ಭಾಷೆಗಳ ಕೊಡು-ಕೊಳೆ, ಜಗಳ-ಸಾಧನೆಗಳನ್ನು ಸಾಧ್ಯವಾದಷ್ಟೂ ಸರಳವಾಗಿ ಮುಂದಿನವಾರ ನೋಡೋಣ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.