ADVERTISEMENT

ನೊಂದುಕೊಂಡ ಆ ನನ್ನ ತಾಯಿ

ಶಿವರಾಮ್
Published 3 ಮಾರ್ಚ್ 2012, 19:30 IST
Last Updated 3 ಮಾರ್ಚ್ 2012, 19:30 IST

ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಶ್ರೀನಿವಾಸುಲು ನಮ್ಮ ಪರವಾಗಿ ಮಾತನಾಡಿದಾಗ ನಮಗೆ ಹೆಮ್ಮೆ ಎನ್ನಿಸಿತು. ಹರ್ಲಂಕರ್, ಗರುಡಾಚಾರ್, ರಾಮಲಿಂಗಂ, ಮರಿಸ್ವಾಮಿ,ಕಸ್ತೂರಿರಂಗನ್, ಗೋಪಾಲ್ ಹೊಸೂರ್, ಟಿ.ಜಯಪ್ರಕಾಶ್, ಚೆಬ್ಬಿ, ಚಂದ್ರಶೇಖರ್, ಕೋದಂಡರಾಮಯ್ಯ, ರಾಮಕೃಷ್ಣ ಮೊದಲಾದ ಅಧಿಕಾರಿಗಳು ನಮ್ಮ ಮೇಲೆ ವಿಶ್ವಾಸವಿಟ್ಟಿದ್ದನ್ನು ಕಂಡು ಪದೇಪದೇ ಖುಷಿಪಟ್ಟಿದ್ದೇವೆ.

ಶ್ರೀನಿವಾಸುಲು ಹಾಗೆ ಹೇಳಿದರೂ ಆಮೇಲೆ 19 ವರ್ಷ ಅನುಭವ ಇದ್ದರೂ ಅಂಥವರನ್ನು ವರ್ಗಾವಣೆ ಮಾಡಲೇಬೇಕು ಎಂದು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದರು. ನಾನು, ಬಿ.ಬಿ.ಅಶೋಕ್ ಕುಮಾರ್, ರಮೇಶ್‌ಚಂದ್ರ, ಶಿವಶಂಕರಪ್ಪ, ನಾಗರಾಜ್ ಮೊದಲಾದವರನ್ನು `ಎಕ್ಸಿಕ್ಯೂಟಿವ್~ನಿಂದ `ನಾನ್ ಎಕ್ಸಿಕ್ಯುಟಿವ್ ಪೋಸ್ಟ್~ಗಳಿಗೆ ವರ್ಗಾವಣೆ ಮಾಡಿದರು. ನನಗೆ ಹೈಕೋರ್ಟ್ ಜಾಗೃತದಳಕ್ಕೆ ವರ್ಗಾವಣೆಯಾಯಿತು. ಇನ್ನುಳಿದವರಿಗೆ ಸಿಒಡಿ, ಇಂಟೆಲಿಜೆನ್ಸ್, ಪೊಲೀಸ್ ಟ್ರೈನಿಂಗ್ ಅಕಾಡೆಮಿ ಮೊದಲಾದೆಡೆಗೆ ವರ್ಗಾವಣೆ ಆಯಿತು. ಇದು ಪತ್ರಿಕೆಗಳಲ್ಲಿ ಆಗ ದೊಡ್ಡ ಸುದ್ದಿ.
 
ರಾಜಕಾರಣಿಗಳು, ಪೊಲೀಸರು, ವಕೀಲರು ಎಲ್ಲರೂ ಈ ವಿಷಯವಾಗಿ ಮಾತನಾಡಿಕೊಳ್ಳಲಾರಂಭಿಸಿದರು. ಕೆಲವು ಪ್ರಕರಣಗಳಲ್ಲಿ ಅನುಭವಿ ವಕೀಲರಾದ ಎಂ.ಎನ್. ನೆಹರೂ ಮತ್ತು ಇತ್ತೀಚೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿದ್ದ ದಿವಾಕರ್ ನನ್ನ ಪರವಾಗಿ ವಾದ ಮಾಡಿದ್ದರು. ಅವರು ನಮ್ಮ ಮೇಲೆ ವಿಶ್ವಾಸವಿಟ್ಟು ಒಂದು ರೀತಿಯಲ್ಲಿ ಉಚಿತ ಸೇವೆಯನ್ನೇ ಸಲ್ಲಿಸಿದ್ದರೆನ್ನಬೇಕು.

ಹೈಕೋರ್ಟ್ ಜಾಗೃತದಳಕ್ಕೆ ನೇಮಕ ಮಾಡಿದಾಗ ಅನೇಕರು ಈ ವರ್ಗಾವಣೆಯನ್ನು ರದ್ದು ಪಡಿಸಬೇಕು ಎಂದು ಓಡಾಡಿದರು. ಆಗ ಪತ್ರಿಕೆಗಳಲ್ಲಿ ಕೂಡ ಈ ಕುರಿತು ಸುದ್ದಿಗಳು ಬರತೊಡಗಿದವು.

ನನ್ನ ತಾಯಿ ಗುಣವತಿ. ತುಂಬಾ ಸ್ವಾಭಿಮಾನಿ. ಓದಿದ್ದು ಆರನೇ ತರಗತಿವರೆಗೆ. ಆದರೆ ಪತ್ರಿಕೆಗಳನ್ನು ಓದಿ ಎಲ್ಲಾ ವಿಷಯಗಳನ್ನೂ ತಿಳಿದುಕೊಳ್ಳುವ ಕುತೂಹಲ. ತಂದೆ ಕೆಂಪಯ್ಯ ಓದಿರಲಿಲ್ಲ. ನಾನು ಓದುವುದನ್ನು ಕಲಿತ ಮೇಲೆ ಅವರಿಗೆ `ಪ್ರಜಾವಾಣಿ~ ಪತ್ರಿಕೆಯ ಸುಭಾಷಿತ, ಛೂಬಾಣ ಎಲ್ಲವನ್ನೂ ಓದಿ ಹೇಳುತ್ತಿದ್ದೆ. ನನಗೂ ಪತ್ರಿಕೆಗೂ ಬಾಲ್ಯದಿಂದಲೇ ನಂಟು ಬೆಳೆದದ್ದು ಹೀಗೆ. ನನ್ನ ತಂದೆ ಕೂಡ ಸ್ವಾಭಿಮಾನಕ್ಕಾಗಿ ಏನು ಬೇಕಾದರೂ ಕಳೆದುಕೊಳ್ಳಲು ತಯಾರಿದ್ದರು. ಅನ್ಯಾಯದ ವಿರುದ್ಧ ಅವರಿಗೆ ಕೆಚ್ಚು. ಮೊದಲಿನಿಂದ ನಮಗೂ ಅದನ್ನು ರೂಢಿಸಿದ್ದರು. ನಾನು ಇಲಾಖೆಗೆ ಸೇರುವ ಮೊದಲೇ ಅವರು ತೀರಿಹೋದರು. ತಾಯಿ ನನ್ನ ಪ್ರತಿ ಹಂತದ ಬೆಳವಣಿಗೆ ಕಂಡಿದ್ದರು.

ಹಸುಗಳನ್ನು ಸಾಕಿಕೊಂಡಿದ್ದ ಅವರು ತಮ್ಮ ಮಕ್ಕಳು ಒಳ್ಳೆಯ ವೃತ್ತಿ ಹಿಡಿದು ನೆಲೆನಿಲ್ಲುವುದನ್ನು ಕಂಡು ಖುಷಿಪಟ್ಟಿದ್ದರು. ನನ್ನ ಅಕ್ಕ-ತಂಗಿಯರು, ಅಣ್ಣಂದಿರು ಮಾಡಿದ ಸಾಧನೆಯ ಬಗ್ಗೆ ಅವರಿಗೆ ಹೆಮ್ಮೆ ಇತ್ತು. ನಾವೆಲ್ಲಾ ನೆಲೆಗೊಂಡ ನಂತರ ಹಸುಗಳನ್ನು ಸಾಕುವ ಕಷ್ಟದಿಂದ ಅವರಿಗೆ ಬಿಡುವು ಕೊಟ್ಟಿದ್ದೆವು.

ನಾನು ಹೈಕೋರ್ಟ್ ಜಾಗೃತದಳದಿಂದ ಒಂದು ದಿನ ಕೆಲಸ ಮುಗಿಸಿ ಬಂದಾಗ ಅವರು ಕಾಯುತ್ತಿದ್ದರು. ನನ್ನ ಜೊತೆ ಜರೂರಾಗಿ ಏನೋ ಮಾತನಾಡುವುದು ಅವರ ಉದ್ದೇಶ. ನನ್ನನ್ನು ಕರೆದು ಕೂರಿಸಿದರು. `ನಾನು ಕೆಲವು ದಿನಗಳಿಂದ ಪತ್ರಿಕೆಗಳನ್ನು, ಟ್ಯಾಬ್ಲಾಯ್ಡಗಳನ್ನು ಗಮನಿಸುತ್ತಿದ್ದೇನೆ. ನೀನೂ ಸೇರಿದಂತೆ ಹತ್ತು ಮಂದಿ ಪೊಲೀಸರ ಬಗ್ಗೆ ಏನೇನೋ ಬರೆಯುತ್ತಿದ್ದಾರೆ. ಇವೆಲ್ಲಾ ನಿನಗೆ ಯಾಕೆ ಬೇಕು? ನಿನಗೆ ನೋವಾಗುವುದಿಲ್ಲವೇ?~ ಎಂದು ಕಳಕಳಿಯಿಂದ ಪ್ರಶ್ನಿಸಿದರು.

ಈ ವೃತ್ತಿಯಲ್ಲಿ ಅಂಥದ್ದೆಲ್ಲಾ ಮಾಮೂಲು ಎಂದೆ. ಆದರೆ ಅವರಿಗೆ ಸಮಾಧಾನವಾಗಲಿಲ್ಲ. `ನಿನಗೆ ಇನ್ನೂ ಎಷ್ಟು ಸರ್ವಿಸ್ ಇದೆ?~ ಇನ್ನೊಂದು ಪ್ರಶ್ನೆ ಹಾಕಿದರು. ಸಾಕಷ್ಟಿದೆ ಎಂದೆ. `ಒಂದು ವೇಳೆ ಈಗಲೇ ಸ್ವಯಂ ನಿವೃತ್ತಿ ಪಡೆದುಕೊಂಡರೆ ಎಷ್ಟು ಪೆನ್ಷನ್ ಬರಬಹುದು?~ `ನೀನು ಬಾಡಿಗೆಗೆ ಮನೆ ಕಟ್ಟಿಸಿಕೊಟ್ಟಿದ್ದೀಯಲ್ಲ; ಅದರಿಂದ ಎಷ್ಟು ಬಾಡಿಗೆ ಬರುತ್ತದೆ?~... ಅವರ ಪ್ರಶ್ನೆಗಳು ಮುಗಿಯಲಿಲ್ಲ. ಆಗ ನಾನು ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರೆ ಹತ್ತು ಸಾವಿರ ರೂಪಾಯಿಯಷ್ಟು ಪಿಂಚಣಿ ಸಿಗುತ್ತಿತ್ತು.
 
ಹನ್ನೆರಡು ಸಾವಿರ ರೂಪಾಯಿ ಬಾಡಿಗೆ ಕೂಡ ಬರುತ್ತಿತ್ತು. ಅಷ್ಟು ಹಣದಲ್ಲಿ ನೆಮ್ಮದಿಯಾಗಿ ಬದುಕಬಹುದಲ್ಲ ಎಂಬುದು ನನ್ನ ತಾಯಿಯ ವಾದ. ಅಷ್ಟೆಲ್ಲಾ ಕೆಲಸ ಮಾಡಿಯೂ ನನ್ನ ವರ್ಗಾವಣೆ ಆಗಿದ್ದನ್ನು ಅವರಿಗೆ ಸಹಿಸಲಾಗಿರಲಿಲ್ಲ. `ನನಗೇ ಬೇಜಾರಾಗುತ್ತಿದೆ, ನಿನಗೆ ಆಗುವುದಿಲ್ಲವಾ?~ ಅಂತ ಪದೇಪದೇ ಕೇಳಿದರು.

ತಾಯಿ ನನ್ನ ಕೆಲಸ ಮಾಡುವ ಗುಣಕ್ಕೆ ಮೊದಲಿನಿಂದಲೂ ನೀರೆರೆದವರು. ನಾನು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಯೋ ಅಥವಾ ಯಾವುದೋ ಕೇಸು ಪತ್ತೆಗೆಂದು ಮೂರ‌್ನಾಲ್ಕು ದಿನ ಹೊರಗಿದ್ದೋ ಮನೆಗೆ ಬಂದರೆ ನಾನು ಮಲಗುವ ಕೋಣೆಯನ್ನು ಅಚ್ಚುಕಟ್ಟಾಗಿ ಅಣಿ ಮಾಡಿರುತ್ತಿದ್ದರು. ಕೋಣೆಯಲ್ಲಿ ಬೆಳಕು ಮೂಡದಂತೆ ಎಲ್ಲಾ ಕಿಟಕಿಗಳನ್ನೂ ಕರ್ಟನ್‌ನಿಂದ ಮುಚ್ಚಿರುತ್ತಿದ್ದರು. ಮನೆಯಲ್ಲಿ ರೇಡಿಯೋ, ಟೀವಿ ಹಾಕಕೂಡದೆಂದು ಮೊದಲೇ ಫರ್ಮಾನು ಹೊರಡಿಸಿರುತ್ತಿದ್ದರು.
 
ದಣಿದು ಬಂದಮೇಲೆ ನಾನು ನೆಮ್ಮದಿಯಿಂದ ನಿದ್ದೆ ಮಾಡಬೇಕು ಎಂಬ ತಾಯಿಯ ಸಹಜ ಕಾಳಜಿ ಅದು. ನನ್ನ ಬಗ್ಗೆ ಅಷ್ಟೆಲ್ಲಾ ಕಳಕಳಿ ಇಟ್ಟುಕೊಂಡಿದ್ದ ಅವರು ವರ್ಗಾವಣೆಯಿಂದ ಬೇಸರ ಮಾಡಿಕೊಂಡಿದ್ದರು. `ನಿನ್ನ ಮನಸ್ಸಿಗೆ ಅನ್ನಿಸಿದರೆ ಸ್ವಯಂ ನಿವೃತ್ತಿ ತೆಗೆದುಕೋ~ ಎಂದು ಅನೇಕ ಬಾರಿ ಸಲಹೆ ಕೊಟ್ಟರು. ಅಷ್ಟಕ್ಕೆಲ್ಲಾ ಸ್ವಯಂ ನಿವೃತ್ತಿ ಪಡೆಯುವುದು ಯಾಕೆ ಎಂದು ನಾನು ಅವರನ್ನು ಸಮಾಧಾನ ಪಡಿಸಿದೆ. ಹೀಗೆ ಹೇಳಿದ ಕೆಲವೇ ತಿಂಗಳಲ್ಲಿ ಅವರು ನಮ್ಮನ್ನೆಲ್ಲಾ ಅಗಲಿದರು.

ಇಡೀ ರಾಜ್ಯದ ಕೆಳ ಹಂತದ ನ್ಯಾಯಾಲಯಗಳಲ್ಲಿ ಏನೇನು ಅನ್ಯಾಯ ನಡೆಯುತ್ತದೋ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನೆಲ್ಲಾ ಗುಪ್ತವಾಗಿ ಸಂಗ್ರಹಿಸುವುದು ಹೈಕೋರ್ಟ್ ಜಾಗೃತದಳದ ಕೆಲಸ. ಅದನ್ನೂ ನಾನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಲಾರಂಭಿಸಿದೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ನನ್ನನ್ನು ಅಲ್ಲಿಗೆ ವರ್ಗಾವಣೆ ಮಾಡಿದ್ದರು. ಅದಕ್ಕೆ ಕೆಲವೇ ತಿಂಗಳ ಮುಂಚೆ `ಧ್ವಜ ದಿನಾಚರಣೆ~ ಸಂದರ್ಭದಲ್ಲಿ ನನಗೆ ವಿಶೇಷ ಸರ್ಟಿಫಿಕೇಟ್ ಕೊಟ್ಟಿದ್ದರು. ಅದನ್ನು ಪಡೆಯಲು ನಾನು ವೇದಿಕೆಗೆ ಹೋದಾಗ ಶ್ರೀನಿವಾಸುಲು, ಕಮಿಷನರ್ ರೇವಣಸಿದ್ಧಯ್ಯ, ಗೃಹ ಸಚಿವ ರೋಷನ್ ಬೇಗ್ ಮುಖ್ಯಮಂತ್ರಿ ಜೆ.ಎಚ್.ಪಟೇಲ್, ಗೃಹ ಕಾರ್ಯದರ್ಶಿ ಎಲ್ಲರೂ ಇದ್ದರು.

ನಾನು ವೇದಿಕೆಗೆ ಹೋದದ್ದೇ ಶ್ರೀನಿವಾಸುಲು ಅವರ ಮುಖ ಆನಂದದಿಂದ ಅರಳಿತ್ತು. `ಮಿಸ್ಟರ್ ಬಿ.ಕೆ.ಶಿವರಾಂ, ಒನ್ ಆಫ್ ಅವರ್ ಬೆಸ್ಟ್ ಇನ್ಸ್‌ಪೆಕ್ಟರ್ಸ್‌... ವೆರಿ ಅಪ್‌ರೈಟ್~ ಎಂದು ಹೊಗಳಿದ್ದರು. ನನಗೆ ಆಗ ಮುಖ್ಯಮಂತ್ರಿಗಳ ಪರಿಚಯ ಇರಲಿಲ್ಲ. ಗೃಹ ಮಂತ್ರಿಗಳ ಪರಿಚಯ ಇತ್ತು. ಅವರು ಸಿಎಂಗೆ ಪರಿಚಯ ಮಾಡಿಸುತ್ತಾ ಶ್ರೀನಿವಾಸುಲು ಅವರು ನನ್ನ ಕುರಿತು ಹೇಳಿದ ಮಾತುಗಳನ್ನೇ ಪುನರುಚ್ಚರಿಸಿದ್ದರು. ಅಲ್ಲಿ ನನಗೆ ಹೊಗಳಿ ಸರ್ಟಿಫಿಕೇಟ್ ಕೊಟ್ಟ ಅದೇ ಅಧಿಕಾರಿವರ್ಗವೇ ಕೆಲಸಕ್ಕೆ ಬಾರದ ಜಾಗ ಎಂದೇ ಎನಿಸಿದ್ದ ಹೈಕೋರ್ಟ್ ಜಾಗೃತದಳಕ್ಕೆ ನನ್ನನ್ನು ವರ್ಗಾವಣೆ ಮಾಡಿದ್ದು ಪರಿಸ್ಥಿತಿಯ ವ್ಯಂಗ್ಯ.

ಆಗ ಜನತಾಪಕ್ಷದ ಶಾಸಕಿಯಾಗಿದ್ದ ಹೇಮಾವತಿ ನನ್ನ ವರ್ಗಾವಣೆಯಿಂದ ಬಹಳ ನೊಂದುಕೊಂಡರು. `ಈಗಲೂ ವರ್ಗಾವಣೆ ರದ್ದು ಮಾಡಿಸಲು ನೀವು ಒಪ್ಪುವುದಾದರೆ ನಾನು ಮಿನಟ್ ಹಾಕುತ್ತೇನೆ. ಹೈಕೋರ್ಟ್ ಜಾಗೃತದಳಕ್ಕೆ ನೀವು ಹೋಗುವುದನ್ನು ತಪ್ಪಿಸಬಹುದು. ಏನಂತೀರಿ?~ ಎಂದು ಕೇಳಿದರು. ಎಲ್ಲಾ ಸರ್ಕಾರಿ ರಜೆ ಅನುಭವಿಸಲು ಅವಕಾಶವಿದ್ದ, ಬೇಸಿಗೆ ರಜೆ, ದಸರಾ ರಜೆ ಕೂಡ ಸಿಗುತ್ತಿದ್ದ ಹೈಕೋರ್ಟ್ ಜಾಗೃತದಳದಲ್ಲಿ ಕೆಲಸ ಮಾಡಿ ಒಂದಿಷ್ಟು ವಿರಮಿಸುವ ಬಯಕೆ ನನ್ನದಾಗಿದೆ ಎಂದು ಹೇಳಿ ನಾನು ಅವರನ್ನು ಸುಮ್ಮನಾಗಿಸಿದೆ.

ಆಗ ಅವರೊಂದು ಸತ್ಯ ಹೇಳಿದರು. ನನ್ನನ್ನು ವರ್ಗಾವಣೆ ಮಾಡಿಸುವಂತೆ ಅವರಿಗೇ ಭೂಗತಲೋಕದ ಪಾತಕಿಗಳಿಂದ ಒತ್ತಡ ಬಂದಿತ್ತಂತೆ. ರಾಜಕಾರಣಿಗಳು ಕೂಡ ಅದಕ್ಕೆ ಕುಮ್ಮಕ್ಕು ಕೊಟ್ಟಿದ್ದರಂತೆ. ಅವರು ತಮ್ಮಿಂದ ಆ ಕೆಲಸ ಸಾಧ್ಯವಿಲ್ಲ ಎಂದಾಗ ಮುಖ್ಯಮಂತ್ರಿಯ ಸಮುದಾಯದವರೇ ಆದ ಇನ್ನೊಬ್ಬ ಮಂತ್ರಿಯಿಂದ ಆ ಕೆಲಸ ಮಾಡಿಸಿದರಂತೆ. ಈ ವಿಷಯ ಕೇಳಿ ನನಗೆ ಬೇಸರವಾಯಿತು. ಆದರೂ ನಾನು ಹೈಕೋರ್ಟ್ ಜಾಗೃತದಳದಲ್ಲೇ ಕೆಲಸ ಮಾಡಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.