ADVERTISEMENT

ಕೆಸರೆರಚಾಟದ ಕೊಳಕು ರಾಜಕೀಯ

ಶೇಖರ್ ಗುಪ್ತ
Published 4 ಜೂನ್ 2016, 19:30 IST
Last Updated 4 ಜೂನ್ 2016, 19:30 IST

ದೇಶದಲ್ಲಿ ಸದ್ಯಕ್ಕೆ ಕಂಡು ಬರುತ್ತಿರುವ, ಗಬ್ಬೆದ್ದು ನಾರುವ ರಾಜಕೀಯ ಕಾರ್ಯತಂತ್ರ ಕಂಡು ನನಗೆ ತುಂಬ ಕಸಿವಿಸಿಯಾಗುತ್ತಿದೆ. ಕಳ್ಳಕೊರಮರು ಕದ್ದ ಮಾಲಿನ ಜತೆ ಓಡಿ ಹೋಗುತ್ತಿದ್ದರೆ, ರಾಜಕಾರಣಿಗಳ ಕೆಸರೆರಚಾಟ ಮತ್ತು ಹೊಲಸು ಕಾರ್ಯತಂತ್ರಗಳು ಸ್ವಯಂ ನಾಶದ ಶಸ್ತ್ರಾಸ್ತ್ರಗಳಾಗಿ ಬಳಕೆಯಾಗುತ್ತಿವೆ.

ದಿವಂಗತ ರಾಷ್ಟ್ರಪತಿ ಗ್ಯಾನಿ ಜೇಲ್‌ ಸಿಂಗ್‌ ಅವರು ಪಂಜಾಬ್‌ನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ ತಮಾಷೆಯ ಪ್ರಸಂಗವೊಂದನ್ನು ನಮ್ಮೊಂದಿಗೆ ಖುಷಿಯಿಂದಲೇ ಹಂಚಿಕೊಂಡಿದ್ದನ್ನು ಇಲ್ಲಿ ಉಲ್ಲೇಖಿಸ ಬಯಸುತ್ತೇನೆ. ಪಟಿಯಾಲದ ಉದ್ಯಮ ಸಮುದಾಯವೊಂದು ಕಾಂಗ್ರೆಸ್‌ ಪಕ್ಷಕ್ಕೆ ದೇಣಿಗೆ ನೀಡಲು ಹಿಂದೇಟು ಹಾಕಿತ್ತು. ಆಗ ಜೇಲ್‌ ಸಿಂಗ್ ಅವರು ತಮ್ಮ ನಂಬಿಕೆಯ, ಕಿಡಿಗೇಡಿ ಸ್ವಭಾವದ ಪೊಲೀಸ್‌ ಅಧಿಕಾರಿಯನ್ನು ಕರೆದು ಬನಿಯಾಗಳಿಗೆ ‘ಪಾಠ’ ಕಲಿಸಬೇಕು ಎಂದು ಸೂಚ್ಯವಾಗಿ ತಿಳಿಸಿದ್ದರು.

ವಿಧೇಯ ಡಿವೈಎಸ್‌ಪಿಯು ಹೆಚ್ಚು ಶ್ರಮ ವಹಿಸದೆ, ಯಾರಿಗೂ ಅನುಮಾನ ಬರದಂತೆ ಹಣ ವಸೂಲಿ ಮಾಡಿ ತಂದು ಜೇಲ್‌ ಸಿಂಗ್‌ ಅವರಿಗೆ ತಲುಪಿಸಿದ್ದರು. ಇದಕ್ಕಾಗಿ ಆ ಪೊಲೀಸ್‌ ಅಧಿಕಾರಿ ವಿಶಿಷ್ಟ ಕಾರ್ಯತಂತ್ರ ರೂಪಿಸಿ ತಮ್ಮ ಉದ್ದೇಶ ಸಾಧನೆಯಲ್ಲಿ ಯಶಸ್ವಿಯಾಗಿದ್ದರು.

ತಮ್ಮ ಜೀಪ್‌ನ ಜತೆ ವ್ಯಾನೊಂದನ್ನು  ಮಂಡಿಗೆ ತೆಗೆದುಕೊಂಡು ಹೋಗಿದ್ದ ಅಧಿಕಾರಿ, ‘ಕಳೆದ ರಾತ್ರಿ ನಡೆದ ಪೊಲೀಸ್‌ ದಾಳಿಯಲ್ಲಿ ವಶಕ್ಕೆ ಪಡೆದುಕೊಂಡಿರುವ ಘರವಾಲಿ ವಾಹನದಲ್ಲಿದ್ದು, ಯುವತಿಯರಿಂದ ‘ಸೇವೆ’ ಪಡೆದುಕೊಂಡ ಪ್ರತಿ ವ್ಯಾಪಾರಿಯನ್ನೂ ಗುರುತಿಸಲಿದ್ದಾಳೆ’ ಎಂದು ಧ್ವನಿವರ್ಧಕದಲ್ಲಿ ಘೋಷಿಸಿದ್ದೇ ತಡ, ವ್ಯಾಪಾರಿಗಳು ಕಪ್ಪಕಾಣಿಕೆ ಸಲ್ಲಿಸಿ, ತಮ್ಮನ್ನು ಈ ವಿವಾದದಲ್ಲಿ ಎಳೆದು ತರಬೇಡಿ ಎಂದು ಗೋಗರೆದಿದ್ದರು. ಇದನ್ನು ಕೇಳಿದ ನಮ್ಮಲ್ಲೊಬ್ಬ, ‘ಗ್ಯಾನೀಜಿ, ಪೊಲೀಸರು ವೇಶ್ಯಾವಾಟಿಕೆ ಕೇಂದ್ರದ ಮೇಲೆ ದಾಳಿ ನಡೆಸಿದ್ದರಷ್ಟೆ, ಅದರಲ್ಲೇನು ವಿಶೇಷ’ ಎಂದು ಪ್ರಶ್ನಿಸಿದ್ದ.

‘ಅಯ್ಯೋ ಮಹಾನುಭಾವನೆ, ನಾವು ಇಲ್ಲಿರುವುದು ತೀರ್ಥಯಾತ್ರೆ ಮಾಡಲಿಕ್ಕೆ ಅಲ್ಲಯ್ಯ, ರಾಜಕಾರಣ ಮಾಡುತ್ತಿದ್ದೇವೆ’ ಎಂದು ಅರ್ಥಗರ್ಭಿತವಾಗಿ ಪ್ರತಿಕ್ರಿಯಿಸಿದ್ದರು. ವಾಸ್ತವದಲ್ಲಿ ಪೊಲೀಸರು ಹಿಂದಿನ ರಾತ್ರಿ ಯಾವುದೇ ವೇಶ್ಯಾಗೃಹದ ಮೇಲೆ ದಾಳಿಯನ್ನೇ ಮಾಡಿರಲಿಲ್ಲ. ಅದೆಲ್ಲ ಬರೀ ನಾಟಕ. ವಾಹನದಲ್ಲಿ ಘರವಾಲಿಯೂ ಇದ್ದಿರಲಿಲ್ಲ.

ಒಂದು ವೇಳೆ ಘರವಾಲಿಯು ಒಬ್ಬನೇ ಒಬ್ಬ ವ್ಯಾಪಾರಿಯ ಹೆಸರು ಹೇಳಿದ್ದರೆ, ಗೌರವಾನ್ವಿತ ವ್ಯಾಪಾರಿಯ ಕುಟುಂಬ, ಸಮುದಾಯ, ಸ್ನೇಹಿತರು ಆತನ ಮುಖಕ್ಕೆ ಉಗಿಯುತ್ತಿದ್ದರು. ಇಂತಹ ಕಳಂಕದಿಂದ ಪಾರಾಗಲು ಆತ ಏನೆಲ್ಲ ಕಸರತ್ತು ಮಾಡಬೇಕಾಗಿ ಬರುತ್ತಿತ್ತು. ಪೊಲೀಸರು ದೂರು ದಾಖಲಿಸದಿದ್ದರೂ ಆತನ ಮುಖಕ್ಕೆ ಸಾಕಷ್ಟು ಮಸಿ ಬಳಿದಂತಾಗುತ್ತಿತ್ತು.

ಹೀಗಾಗಿ ಆತ ಪೊಲೀಸರಿಗೆ ಕಪ್ಪ ಕಾಣಿಕೆ ಸಲ್ಲಿಸಿ ಅದಕ್ಕೆ ಪ್ರತಿಯಾಗಿ ಗೌರವ ಮತ್ತು ಶಾಂತಿಯಿಂದ ಬದುಕಲು ಇಷ್ಟಪಡುತ್ತಿದ್ದ’ ಎಂದು ಜೇಲ್‌ ಸಿಂಗ್‌ ಹಾಸ್ಯದ ಧಾಟಿಯಲ್ಲಿಯೇ ವಿಶ್ಲೇಷಿಸಿದ್ದರು. ಅದೇ ಕ್ಷಣಕ್ಕೆ ಗಂಭೀರವಾಗಿ, ‘ಯಾವುದೇ ಗೌರವಾನ್ವಿತ ವ್ಯಕ್ತಿಯು ತನ್ನ ಮರ್ಯಾದೆಗೆ ಯಾವುದೇ ಬಗೆಯಲ್ಲಿ  ಧಕ್ಕೆಯಾಗುವುದಕ್ಕೆ ಹೆದರುತ್ತಾನೆ’ ಎಂದೂ ಹೇಳಿದ್ದರು.

ಇದೇ ಬಗೆಯ ಆಟವನ್ನು ಇಂದಿನ ರಾಜಕಾರಣದಲ್ಲಿ ನಾವೀಗ ಕಾಣುತ್ತಿದ್ದೇವೆ. ಜನರೂ ಇಂತಹದ್ದನ್ನು ನೋಡಿ  ಆನಂದಿಸುತ್ತಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಕಂಡು ಬರುತ್ತಿರುವ, ಇನ್ನೊಬ್ಬರ ವ್ಯಕ್ತಿತ್ವಕ್ಕೆ ವೃಥಾ ಮಸಿ ಬಳಿದು ರಂಜನೆ ಪಡೆಯುವ ದುಷ್ಟ ಪ್ರವೃತ್ತಿ ರಾಷ್ಟ್ರ ರಾಜಕಾರಣದಲ್ಲಿಯೂ ಕಂಡು ಬರುತ್ತಿದ್ದು, ರಾಜಕಾರಣಿಗಳ ಜತೆ ಮಾಧ್ಯಮದವರಾದ ನಾವೂ ಅದಕ್ಕೆ ಸಾಥ್‌ ನೀಡುತ್ತಿದ್ದೇವೆ. ಎಲ್ಲರೂ ಕುಚೋದ್ಯದಿಂದ ನಗುತ್ತಲೇ ವಿಕೃತ ಆನಂದ ಪಡೆಯುತ್ತಿದ್ದಾರೆ. ದೇಶದ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಆ ದೇವರೇ ಬಲ್ಲ.

ಅಸ್ತಿತ್ವದಲ್ಲಿಯೇ ಇಲ್ಲದ ‘ಪಟಿಯಾಲ ಘರವಾಲಿ’ಯ ಕತೆ ಇತ್ತೀಚೆಗೆ ರಾಷ್ಟ್ರ ರಾಜಕಾರಣದಲ್ಲಿ  ಎರಡು ಬಾರಿ  ಪುನರಾವರ್ತನೆಗೊಂಡಿದೆ. ಮೊದಲನೆಯದು ಆಗಸ್ಟಾ ಒಪ್ಪಂದ ಹಗರಣ. ಗಣ್ಯರ ಬಳಕೆಗಾಗಿ ಹೆಲಿಕಾಪ್ಟರ್‌ ಖರೀದಿ ವಿಷಯದಲ್ಲಿ ಭ್ರಷ್ಟಾಚಾರ ನಡೆದಿದ್ದು ಇಟಲಿಯ ಕೋರ್ಟ್‌ನಲ್ಲಿ ಸಾಬೀತಾಗಿ, ಲಂಚ ನೀಡಿದವರು ಶಿಕ್ಷೆಗೆ ಗುರಿಯಾಗಿದ್ದಾರೆ.

2013ರಲ್ಲಿ ದಾಖಲಿಸಿದ ಎಫ್‌ಐಆರ್‌ನಲ್ಲಿ ವಾಯುಪಡೆ ಮುಖ್ಯಸ್ಥ ತ್ಯಾಗಿ ಅವರ ಹೆಸರು ಉಲ್ಲೇಖಿಸಿರುವುದನ್ನು ಹೊರತುಪಡಿಸಿದರೆ ಲಂಚ ಪಡೆದವರು ಇಂತಹವರೇ ಎಂದು ಬೊಟ್ಟು ಮಾಡಿ ತೋರಿಸಲು ಇದುವರೆಗೂ ಸಾಧ್ಯವಾಗಿಲ್ಲ.

ಪ್ರತಿಪಕ್ಷ ಮುಖಂಡರು, ಭಾರತೀಯ ವಾಯುಪಡೆಯ ಅರ್ಧ ಡಜನ್‌ನಷ್ಟು ಉನ್ನತ ಅಧಿಕಾರಿಗಳು, ಸಂವಿಧಾನಾತ್ಮಕ ಹುದ್ದೆಗಳಾದ ಮಹಾಲೇಖಪಾಲ, ಮುಖ್ಯ ವಿಚಕ್ಷಣಾ ಆಯುಕ್ತರು  ಮತ್ತು ಲೋಕಸೇವಾ ಆಯೋಗದ ಸದಸ್ಯರ ಹೆಸರುಗಳನ್ನೂ ಗಾಳಿಯಲ್ಲಿ ತೇಲಿಬಿಡಲಾಗಿತ್ತು.  ಯಾರೊಬ್ಬರ ವಿರುದ್ಧವೂ ಆರೋಪ ದಾಖಲಿಸಿಲ್ಲ. ಇಂತಹವರೇ ಲಂಚ ಪಡೆದಿದ್ದಾರೆ ಎಂದು ಅಧಿಕೃತವಾಗಿಯೂ ಹೇಳಿಲ್ಲ. ದೆಹಲಿಯ ಪ್ರತಿಷ್ಠಿತ ರಸ್ತೆಗಳ ಗಾಳಿಯಲ್ಲಿ ಬರೀ ಮಾಹಿತಿ ಸೋರಿಕೆಯ ರಂಪಾಟ ಮತ್ತು ವ್ಯಂಗ್ಯೋಕ್ತಿಗಳದ್ದೇ ಕಾರುಬಾರು ನಡೆದಿದೆ.

ಆಗಸ್ಟಾ ಹಗರಣದಲ್ಲಿ ಲಂಚ ಸ್ವೀಕರಿಸಿದ ಪತ್ರಕರ್ತರ ಪಟ್ಟಿಯೂ ಇದೆ ಎನ್ನುವ ಗಾಳಿ ಸುದ್ದಿಗಳನ್ನೂ ತೇಲಿ ಬಿಡಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ‘#ಆಗಸ್ಟಾ ಪತ್ರಕರ್ತರು’ ಎನ್ನುವ ಹ್ಯಾಷ್‌ಟ್ಯಾಗ್‌, ಚಲಾವಣೆಯಲ್ಲಿತ್ತು. ನಿರ್ದಿಷ್ಟ ಹೆಸರಿಲ್ಲ, ಆರೋಪಗಳಿಲ್ಲ, ದಾಖಲೆಗಳಿಲ್ಲ, ಬರೀ ಅಂತೆ ಕಂತೆಗಳು. ಕೆಸರೆರಚಾಟದ ಆಘಾತ ಮತ್ತು ಭಯಾಶ್ಚರ್ಯ ಮೂಡಿಸುವ ಈ ಕಾರ್ಯತಂತ್ರದ ದುರುದ್ದೇಶ ಏನೆಂಬುದು ಸ್ಪಷ್ಟವಾಗಿತ್ತು. ಇದೊಂದು ಸಮೂಹ ಸ್ವಯಂ ನಾಶದ ಅಸ್ತ್ರವಾಗಿದೆ ಎನ್ನುವುದೂ ಬಹುತೇಕರಿಗೆ ಗೊತ್ತಿಲ್ಲ.

ಜೇಲ್‌ ಸಿಂಗ್‌ ಅವರ ಕಾಲ್ಪನಿಕ ಕಥಾನಾಯಕಿ ಘರವಾಲಿ ಪ್ರಕರಣದಲ್ಲಿ ಘಟಿಸಿದಂತೆ ಯಾರಾದರೂ ಕಪ್ಪಕಾಣಿಕೆ ಸಲ್ಲಿಸಿರುವರೇ ಎನ್ನುವುದು ನಮಗೆ ಗೊತ್ತಿಲ್ಲ. ಆದರೆ, ವ್ಯವಸ್ಥೆಯ ಮತ್ತು ಪ್ರಾಮಾಣಿಕ, ನಿಷ್ಕಪಟ ವ್ಯಕ್ತಿತ್ವದ ಅಸಂಖ್ಯ ಜನರ ವಿಶ್ವಾಸಾರ್ಹತೆಗೆ ಇದು ಸಾಕಷ್ಟು ಧಕ್ಕೆ ಉಂಟು ಮಾಡಿರುವುದಂತೂ ನಿಜ. ಇಂತಹ ಸುಳ್ಳು ಆರೋಪಗಳು ತಮ್ಮ ವೃತ್ತಿಗೆ ಮತ್ತು ಸಂಸ್ಥೆಗಳ ಘನತೆಗೆ ಸುಲಭವಾಗಿ ಸರಿಪಡಿಸಲಾಗದ ಕಳಂಕ ಅಂಟಿಸಿವೆ ಎಂದು ಭಾರತೀಯ ವಾಯುಪಡೆಯ ಅಧಿಕಾರಿಗಳು ಭಾವಿಸುತ್ತಾರೆ.

ಕೆಲ ದಿನಗಳಿಂದ ಭಾರತದ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ   ವರದಿಗಳ ಬಗ್ಗೆ ಆಗಸ್ಟಾ ವೆಸ್ಟ್‌ಲ್ಯಾಂಡ್‌ನ ಮಧ್ಯವರ್ತಿ ಕ್ರಿಸ್ತಿಯನ್‌ ಮೈಕಲ್‌ ದುಬೈನಲ್ಲಿದ್ದುಕೊಂಡು ತಮ್ಮದೇ ಆದ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಕಳೆದ 35 ವರ್ಷಗಳಿಂದ ಇದೇ ಬಗೆಯ ಚಲನಚಿತ್ರವನ್ನು (ವಿದ್ಯಮಾನಗಳನ್ನು) ನಾವು ನೋಡುತ್ತಿದ್ದೇವೆ. ಬೊಫೋರ್ಸ್‌ ಪ್ರಕರಣದಲ್ಲಿಯೂ ಹೀಗೆಯೇ ಆಗಿತ್ತು.  ಬೊಫೋರ್ಸ್‌ ಪ್ರಕರಣ ಅಂತ್ಯ ಕಂಡ ಬಗೆಯಲ್ಲಿಯೇ ಆಗಸ್ಟಾ ಪ್ರಕರಣವೂ ಅಂತ್ಯಗೊಳ್ಳಲಿದೆ’ ಎಂದು ಅವರು ವಿಶ್ಲೇಷಿಸಿದ್ದಾರೆ.

ಆಗಸ್ಟಾ ಬಲೂನಿನಲ್ಲಿನ ಗಾಳಿ ಖಾಲಿಯಾಗುತ್ತಿದ್ದಂತೆ ಸಂಜಯ್‌ ಭಂಡಾರಿ ಹೊಸ ಕಳಂಕದ ಹೆಸರಿನಲ್ಲಿ ಪ್ರಚಾರಕ್ಕೆ ಬಂದಿದ್ದಾರೆ. ಇಲ್ಲಿಯೂ ಅವರನ್ನು ಹೊರತುಪಡಿಸಿ ಬೇರೆ ಯಾರೊಬ್ಬರ ಹೆಸರೂ ಕೇಳಿ ಬಂದಿಲ್ಲ. ಇವರು ಯಾವ ಒಪ್ಪಂದ ಕುದುರಿಸಿದ್ದರು, ಅವರಿಗೆ ಎಷ್ಟು ಲಂಚ ಸಂದಾಯವಾಗಿದೆ, ಆ ಹಣವನ್ನು ಯಾರೊಂದಿಗೆ ಹಂಚಿಕೊಂಡಿದ್ದಾರೆ ಎನ್ನುವ ಮಾಹಿತಿಗಳೇನೂ ಬಹಿರಂಗಗೊಂಡಿಲ್ಲ.

ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾಧ್ರಾ, ಬಿಜೆಪಿಯ ಸುಸಂಸ್ಕೃತ ವಕ್ತಾರ ಮತ್ತು ಖ್ಯಾತ ಪತ್ರಕರ್ತರೊಬ್ಬರು ಇವರ ಫಲಾನುಭವಿಗಳಾಗಿದ್ದಾರೆ ಎನ್ನುವ ಗಾಳಿಸುದ್ದಿಗಳಿವೆ. ಇಲ್ಲಿಯೂ ನಿರ್ದಿಷ್ಟ ಆರೋಪಗಳಿಲ್ಲ, ಖಚಿತ ಹೆಸರುಗಳಿಲ್ಲ, ಬರೀ ಕೆಸರೆರಚಾಟ. ಭಂಡಾರಿ ಅವರ ಮೊಬೈಲ್‌ ಕರೆ ದರಗಳ ಮಾಹಿತಿ ವಿವರ ಬಿಳಿ ಹಾಳೆಯಲ್ಲಿದ್ದು, ಅದಕ್ಕೆ ಯಾರದ್ದೂ ರುಜು ಇಲ್ಲ.


‘ಸಮಾಜದ ಗಣ್ಯರು, ಮರ್ಯಾದೆಗೆ ಅಂಜುತ್ತಾರೆ’ ಎನ್ನುವ ಜೇಲ್‌ ಸಿಂಗ್‌ ಅವರ ಮಾತು ನನಗೆ ಇಲ್ಲಿ ಮತ್ತೊಮ್ಮೆ ನೆನಪಾಗುತ್ತದೆ. ಯಾರಾದರೂ ಆರೋಪ ಮಾಡಿದರೆ, ಅದು ಸುಳ್ಳೆಂದು ಸಾಬೀತುಪಡಿಸಲು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಮರ್ಯಾದಸ್ಥರು ತುಂಬಾ ಸಮಯದವರೆಗೆ ಕಾಯಬೇಕಾಗುತ್ತದೆ.

ಎದುರಾಳಿಗಳ ಮುಖಕ್ಕೆ ಮಸಿ ಬಳಿಯಲು ರಾಜಕಾರಣದಲ್ಲಿ ಹೊಲಸು ಕಾರ್ಯತಂತ್ರವು ಪ್ರಮುಖ ಅಸ್ತ್ರವಾಗಿ ಬಳಕೆಗೆ ಬರುತ್ತಿದ್ದಂತೆ, ಅದು ರಾಷ್ಟ್ರೀಯ ಹಿತಾಸಕ್ತಿ ಮೇಲೆ ತೀವ್ರ ಸ್ವರೂಪದ ದುಷ್ಪರಿಣಾಮ ಬೀರುತ್ತದೆ. ಎಲ್ಲ ರಾಜಕೀಯ ಪಕ್ಷಗಳೂ ಒಂದೇ ಬಗೆಯ ಆಟ ಆಡುತ್ತಿವೆ. ಗುಜರಾತ್‌ ರಾಜ್ಯ ಪೆಟ್ರೋಲಿಯಂ ನಿಗಮದ (ಜಿಎಸ್‌ಪಿಸಿ) ಹಗರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಲುಕಿಸಲು ಕಾಂಗ್ರೆಸ್‌ ಹವಣಿಸುತ್ತಿದೆ.

ರಾಜಕಾರಣದಲ್ಲಿನ ವೈರಿಗಳು ಪ್ರತಿಪಕ್ಷದಲ್ಲಿಯೇ ಇರಬೇಕೆಂಬ  ನಿಯಮ ಏನಿಲ್ಲ. ಪಕ್ಷದ ಒಳಗೂ ಸಾಕಷ್ಟು ಶತ್ರುಗಳು ಇರುತ್ತಾರೆ. ಕಬಳಿಸಲು ಎಲ್ಲರಿಗೂ ಮುಕ್ತ ಅವಕಾಶ ಇರುವಾಗ, ಪ್ರತಿಯೊಬ್ಬರೂ ತಮ್ಮ ತಮ್ಮ ಶಕ್ತ್ಯಾನುಸಾರ ಕಿಸೆ ಭರ್ತಿ ಮಾಡಿಕೊಳ್ಳುತ್ತಾರೆ. ಕಳಂಕದ ಕೊಳೆ ಅಂಟಿಸಲು ಗುರಿ ಬದಲಾಗುತ್ತಲೇ ಇರುತ್ತದೆ. ಒಂದು ದಿನ ವಸುಂಧರಾ ರಾಜೆ, ಇನ್ನೊಂದು ದಿನ ಸುಷ್ಮಾ ಸ್ವರಾಜ್‌ ಮತ್ತೀಗ ಅರುಣ್‌ ಜೇಟ್ಲಿ ಗುರಿಯಾಗಿದ್ದಾರೆ.

ಲಂಡನ್‌ನಲ್ಲಿ ಆರಾಮವಾಗಿ ಕುಳಿತಿರುವ ಲಲಿತ್ ಮೋದಿ ಮತ್ತು ವಿಜಯ್‌ ಮಲ್ಯ ಅವರು ನಮ್ಮನ್ನೆಲ್ಲ ಕಂಡು ಗಹಗಹಿಸಿ ನಗುತ್ತಿರಬಹುದು. ಕೆಲ ತಿಂಗಳ ಹಿಂದೆ ಲಲಿತ್‌ ಮೋದಿ ವಿರುದ್ಧ ದೇಶದಲ್ಲಿ ಆರೋಪಗಳ ಸುರಿಮಳೆಯೇ ಕಂಡು ಬಂದಿತ್ತು. ಲಲಿತ್‌ ಮೋದಿ ಅವರು ಯಾರನ್ನು ಗುರಿಯಾಗಿರಿಸಿಕೊಂಡು ಗೋಳು ಹೊಯ್ದುಕೊಂಡಿದ್ದರೊ (ಅರುಣ್‌ ಜೇಟ್ಲಿ) ಅವರು ಜಪಾನ್‌ಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿಯೇ ತಾವೂ ಟೋಕಿಯೊಗೆ ತೆರಳಿ ಉದ್ಧಟತನ ಮೆರೆದಿದ್ದಾರೆ. ಟೋಕಿಯೊದಲ್ಲಿ ತೆಗೆದ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವರು ಹರಿಬಿಟ್ಟಿರುವುದು ಭಾರತದ ಸಾರ್ವಭೌಮತ್ವಕ್ಕೆ ಸವಾಲು ಹಾಕುತ್ತಿರುವಂತಿದೆ.

ಇಲ್ಲಿ ನಾವು (ಭಾರತೀಯರು) ‘ಭಾರತ್‌ ಮಾತಾ ಕೀ ಜೈ’ ಎಂದು ಘೋಷಿಸುವುದರಲ್ಲಿ ಮೈಮರೆತಿದ್ದೇವೆ. ಮೋದಿ (ಲಲಿತ್‌), ಮಲ್ಯ ಮತ್ತು ಮೈಕಲ್‌– ಮೂರು ‘ಎಂ’ಗಳು ನಾವು (ಭಾರತೀಯರು) ಅದೆಷ್ಟು ಅಸಮರ್ಥರಾಗಿದ್ದೇವೆ, ಭ್ರಷ್ಟರಾಗಿದ್ದೇವೆ, ರಾಜಿಯಾಗುತ್ತೇವೆ, ತಪ್ಪುಗಳನ್ನು ಪುನರಾವರ್ತನೆ ಮಾಡುತ್ತಲೇ ಇರುತ್ತೇವೆ ಎನ್ನುವುದನ್ನು ಪ್ರತಿ ದಿನ ನಮಗೆ ನೆನಪಿಸುತ್ತಿವೆ.

ಕುಟಿಲ ಕಾರಸ್ತಾನದ ರಾಜಕೀಯ ತಂತ್ರವು ನಮ್ಮಷ್ಟಕ್ಕೆ ನಮ್ಮನ್ನು ಸೋಲಿಸುತ್ತದೆ ಎನ್ನುವುದಕ್ಕೆ ಟಟ್ರಾ ಟ್ರಕ್‌ ಖರೀದಿ ಹಗರಣವು ಉತ್ತಮ ನಿದರ್ಶನವಾಗಿದೆ. ಕ್ಷಿಪಣಿಗಳನ್ನು ಸಾಗಿಸುವ ವಾಹನಗಳನ್ನು ತಯಾರಿಸುವ ಜೆಕ್‌ನ ಟಟ್ರಾ ಸಂಸ್ಥೆಯು ಖರೀದಿ ವಹಿವಾಟು ಪೂರ್ಣಗೊಳಿಸಲು ಲಂಚ ಪಾವತಿಸಿದ ಹಗರಣ ಇದಾಗಿತ್ತು. 2012ರಲ್ಲಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಖರೀದಿ ಒಪ್ಪಂದ ರದ್ದುಪಡಿಸಲಾಗಿತ್ತು.

ಒಪ್ಪಂದದ ಅನ್ವಯ, ಸರ್ಕಾರಿ ಸ್ವಾಮ್ಯದ ರಕ್ಷಣಾ ಉದ್ದಿಮೆ ಭಾರತ್‌ ಅರ್ಥ್‌ ಮೂವರ್ಸ್‌ (ಬಿಇಎಂಎಲ್‌) ಟ್ರಕ್‌ಗಳನ್ನು ತಯಾರಿಸಬೇಕಾಗಿತ್ತು. ಹಗರಣಕ್ಕೆ ಸಂಬಂಧಿಸಿದಂತೆ  ಸಂಸ್ಥೆಯ ಸಿಇಒ ನಟರಾಜನ್‌ ಅವರನ್ನು ಅಮಾನತು ಮಾಡಲಾಗಿತ್ತು. ಆನಂತರ ಈ ಪ್ರಕರಣವನ್ನು ಸಾಕ್ಷ್ಯಾಧಾರಗಳ ಕೊರತೆ ಕಾರಣಕ್ಕೆ ಕೈಬಿಡಲಾಯಿತು.

ಪ್ರತಿಯೊಬ್ಬರನ್ನೂ ಆರೋಪ ಮುಕ್ತಗೊಳಿಸಲಾಯಿತು. ಟಟ್ರಾ ಟ್ರಕ್‌ ಖರೀದಿಗೆ ಈಗ ಖಾಸಗಿ ವಲಯದ ಅನಿಲ್‌ ಅಂಬಾನಿ ಅವರ ಒಡೆತನದ ರಿಲಯನ್ಸ್‌ ಡಿಫೆನ್ಸ್‌ ಸಂಸ್ಥೆಯ ಮೂಲಕ ಮತ್ತೆ ಚಾಲನೆ ದೊರೆತಿದೆ. ತಮ್ಮ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ನಟರಾಜನ್‌ ಅವರು ಕೋರ್ಟ್‌ನಲ್ಲಿ ಹೋರಾಡುತ್ತಿದ್ದಾರೆ.

ಈ ಹಗರಣವು, ನಮ್ಮಲ್ಲಿ ‘ಕಳ್ಳರ ಸೇನೆ’ಯೇ ಇದೆ ಎಂಬ ಭಾವನೆಯನ್ನು ದೇಶದಾದ್ಯಂತ ಮೂಡಿಸಿತ್ತು. ನಮ್ಮ ಸೇನಾಪಡೆಗಳೂ ಮೂರು ವರ್ಷಗಳ ಕಾಲ ಅಗತ್ಯ ವಾಹನಗಳಿಲ್ಲದೆ ತೊಂದರೆ ಅನುಭವಿಸಿದವು. ದಗಾಕೋರರು, ಘಾತುಕರು ಮತ್ತು ಲಾಬಿ ಮಾಡುವವರ ವಿರುದ್ಧ ಕಾನೂನಿನ ಕುಣಿಕೆ ಬಿಗಿ ಮಾಡುವುದರ ಬದಲಿಗೆ ಇವರೆಲ್ಲರ ಮರ್ಜಿಯಲ್ಲಿ ಇರುವಂತಾಗಿದೆ. ಎಲ್ಲರೂ ಕಳ್ಳರೆ ಎಂದು ಪ್ರತಿಯೊಬ್ಬರೂ ನಂಬುವ ಪರಿಸ್ಥಿತಿ ಉದ್ಭವಿಸಿದೆ.

ನಮ್ಮ ಅಸಮರ್ಥ ಮತ್ತು ರಾಜಿ ಮಾಡಿಕೊಳ್ಳುವ ಸ್ವಭಾವದ ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಯಾವುದೇ ಹಗರಣಕ್ಕೆ ತಾತ್ವಿಕ ಅಂತ್ಯ ಕಾಣಿಸುವಲ್ಲಿ ವಿಫಲವಾಗಿರುವುದು ನಮ್ಮ ದುರ್ದೈವವಾಗಿದೆ. ಮಾಲೆಗಾಂವ್‌ ಮತ್ತು ಸಂಜೋತಾ ಎಕ್ಸ್‌ಪ್ರೆಸ್‌ ಬಾಂಬ್‌ ಸ್ಫೋಟ ಪ್ರಕರಣಗಳಲ್ಲಿ ನಿಲುವು ಬದಲಿಸಿರುವ ‘ಎನ್‌ಐಎ’ಯ ಧೋರಣೆಯು ರಾಷ್ಟ್ರೀಯ ನಾಚಿಕೆಯಾಗಿದೆ. ಇದಕ್ಕೆ ಪ್ರತಿಯಾಗಿ ‘ಎನ್‌ಐಎ’ ಮುಖ್ಯಸ್ಥರನ್ನು ಉನ್ನತ ಹುದ್ದೆಗೆ ನೇಮಿಸುವ ಮೂಲಕ ಅವರಿಗೆ ಮತ್ತೊಂದು ಜೀವದಾನ ಸಿಗಬಹುದು.

ಸರ್ಕಾರಿ ವಿರೋಧಿ ಚಳವಳಿ ಹತ್ತಿಕ್ಕಿದ್ದಕ್ಕೆ ಪ್ರತಿಯಾಗಿ, ದೆಹಲಿ ಪೊಲೀಸ್‌ ಮುಖಸ್ಥರಾಗಿದ್ದ ಬಿ.ಎಸ್‌.ಬಸ್ಸಿ ಅವರನ್ನು ಯುಪಿಎಸ್‌ಸಿ ಸದಸ್ಯರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಅವರ ಋಣ ತೀರಿಸಿದೆ. ಎದುರಾಳಿಗಳನ್ನು ಬಗ್ಗುಬಡಿಯುವ, ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ವಿಷಯದಲ್ಲಿ ಯಾರೂ ಹೊರತಾಗಿಲ್ಲ. ರಾಜಕೀಯ ಮುಖಂಡರು, ನ್ಯಾಯಾಧೀಶರು, ಸಾಂವಿಧಾನಿಕ ಸಂಸ್ಥೆಗಳ ಮುಖ್ಯಸ್ಥರು, ಆರ್‌ಬಿಐ ಗವರ್ನರ್‌ ಮತ್ತು ಪತ್ರಕರ್ತರನ್ನೂ ಗುರಿಮಾಡಿಕೊಂಡು ಕೆಸರೆರಚಾಟ ನಡೆಸಲಾಗುತ್ತಿದೆ. ದೆಹಲಿ ತುಂಬೆಲ್ಲ ಇಂತಹದ್ದೇ ಹೊಲಸಿನ ದುರ್ವಾಸನೆ ಆವರಿಸಿಕೊಂಡಿದೆ.

ಸಾರ್ವಜನಿಕ ಸಭೆ, ಚುನಾವಣಾ ಕಣ ಮತ್ತು ಸಂಸತ್‌ನಲ್ಲಿ ರಾಜಕೀಯ ಸಮರ ನಡೆಸಲು ಧೈರ್ಯವಿಲ್ಲದ ರಾಜಕಾರಣಿಗಳು ಕೆಟ್ಟ ಕಾರ್ಯತಂತ್ರಗಳಿಗೆ ಮೊರೆ ಹೋಗುತ್ತಿರುವುದನ್ನು, ಎದುರಾಳಿಗಳ ಮನೆಗಳ ಎದುರು ದುರುದ್ದೇಶದಿಂದ ಬಹಿರ್ದೆಸೆಗೆ ಕುಳಿತುಕೊಳ್ಳುವುದಕ್ಕೆ ಹೋಲಿಸಬಹುದಾಗಿದೆ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT