ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ಇತ್ತೀಚಿನ ವರದಿಯಂತೆ, ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಕರ್ನಾಟಕವು ಗುಜರಾತ್ ನಂತರದ ಎರಡನೇ ಸ್ಥಾನದಲ್ಲಿ ಇದೆ. ಸದ್ಯ ಗುಜರಾತ್‌ನಲ್ಲಿ ₨13 ಲಕ್ಷ ಕೋಟಿ ಮೊತ್ತದ 1,455 ಯೋಜನೆಗಳು ಜಾರಿಯಲ್ಲಿದ್ದರೆ, ಕರ್ನಾಟಕದಲ್ಲಿ ₨9 ಲಕ್ಷ ಕೋಟಿ ಮೊತ್ತದ 1,528 ಯೋಜನೆಗಳು ಜಾರಿ ಹಂತದಲ್ಲಿವೆ. ಇದರಲ್ಲಿ ರಾಜ್ಯದಲ್ಲಿ ಜಾರಿಯಲ್ಲಿರುವ ಶೇ 14ರಷ್ಟು ಯೋಜನೆಗಳು ರಿಯಲ್ ಎಸ್ಟೇಟ್ ವಲಯಕ್ಕೆ ಸಂಬಂಧಿಸಿದವು ಎನ್ನುವುದು ವಿಶೇಷ.
‘ಕರ್ನಾಟಕ ಅದರಲ್ಲೂ ಬೆಂಗಳೂರು ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಮಾರುಕಟ್ಟೆಯಾಗಿ ಬೆಳೆಯುತ್ತಿದೆ. ಅದರಲ್ಲೂ ನಿರ್ಮಾಣ ಕ್ಷೇತ್ರದಲ್ಲಿ ಅನಿವಾಸಿ ಭಾರತೀಯರ ಬಂಡವಾಳ ಹೂಡಿಕೆ (ಎನ್ಆರ್ಐ) ಆಕರ್ಷಣೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ’ ಎನ್ನುತ್ತಾರೆ ದೇಶದ ಪ್ರಮುಖ ರಿಯಲ್ ಎಸ್ಟೇಟ್ ಕಂಪೆನಿ ‘ಶಾರ್ಪೊಜಿ ಪಲ್ಲೋಂಜಿ ರಿಯಲ್ ಎಸ್ಟೇಟ್’ನ (ಎಸ್‌ಪಿಆರ್‌ಇ) ‘ಸಿಇಒ’ ಕೆಕೂ ಕೊಲಹ್.
‘ವೆಸ್ಟ್‌ಪಾರ್ಕ್’
ದೇಶದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಸುಮಾರು 148 ವರ್ಷಗಳಷ್ಟು ಇತಿಹಾಸ ಹೊಂದಿರುವ ‘ಎಸ್‌ಪಿಆರ್‌ಇ’ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ವಸತಿ ಯೋಜನೆ ಪ್ರಾರಂಭಿಸಿದೆ. ‘ವೆಸ್ಟ್‌ಪಾರ್ಕ್’ ಹೆಸರಿನ ಈ ಯೋಜನೆ ಬೆಂಗಳೂರಿನ ಮೈಸೂರು ರಸ್ತೆಗೆ ಸಮೀಪದಲ್ಲಿರುವ ಬಿನ್ನಿಪೇಟೆಯಲ್ಲಿ ಅಸ್ತಿತ್ವಕ್ಕೆ ಬರಲಿದೆ. ‘ಉದ್ಯಾನ ನಗರಿ’ ಕಲ್ಪನೆಯನ್ನು ಮತ್ತೆ ಮರಳಿ ತರುವ ಆಶಯದೊಂದಿಗೆ ಈ ಯೋಜನೆ ಕೈಗೆತ್ತಿಕೊಂಡಿದ್ದೇವೆ.
ಹೀಗಾಗಿ ನಿರ್ಮಾಣ ಕ್ಷೇತ್ರದ ಶೇ 80ರಷ್ಟು ಸ್ಥಳವನ್ನು ಖಾಲಿಯಾಗಿ ಬಿಡಲಾಗಿದೆ. ಇದರಿಂದ ನೈಸರ್ಗಿಕ ಗಾಳಿ, ಬೆಳಕಿನ ಜತೆಗೆ ಹಸಿರು ಪರಿಸರದ ಅನುಭವ ಸಹ ಲಭಿಸಲಿದೆ. ಮಳೆ ನೀರು ಇಂಗಿಸುವುದು, ಸೌರಶಕ್ತಿ ಬಳಕೆ ಸೇರಿದಂತೆ ಇಲ್ಲಿ ಜಾರಿಗೊಳಿಸಿರುವ ಪರಿಸರ ಸ್ನೇಹಿ ಕ್ರಮಗಳಿಗೆ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನ (ಐಜಿಬಿಸಿ) ಮಾನ್ಯತೆ ಸಹ ಲಭಿಸಿದೆ’ ಎನ್ನುತ್ತಾರೆ ಕೆಕೂ.
‘ವೆಸ್ಟ್‌ಪಾರ್ಕ್’ ಯೋಜನೆ 47 ಏಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ. 2, 3, 4 ಬೆಡ್‌ರೂಂ ಮನೆಗಳ ಜತೆಗೆ ಡ್ಯೂಪ್ಲೆಕ್ಸ್ ಮನೆಗಳೂ ಲಭ್ಯವಿದೆ. ಆರಂಭ ಕೊಡುಗೆಯಾಗಿ ಕಂಪೆನಿ ಪ್ರತಿ ಚದರ ಅಡಿಗೆ ₨6000 ಮೂಲ ಬೆಲೆ ನಿಗದಿಪಡಿಸಿತ್ತು. ಮೇ 9ರಿಂದ ಬುಕ್ಕಿಂಗ್ ಪ್ರಾರಂಭವಾಗಿದ್ದು, ದರದಲ್ಲಿ ಅಲ್ಪ ವ್ಯತ್ಯಾಸವಾಗಿದೆ. 700 ಅಪಾರ್ಟ್ಮೆಂಟ್ಗಳು ಮೊದಲ ಹಂತದ ಯೋಜನೆಯಲ್ಲಿ ಸೇರಿವೆ. ಒಂದೇ ಸೂರಿನಡಿ ಎಲ್ಲ ವರ್ಗದ ಗ್ರಾಹಕರಿಗೆ, ಅವರವರ ಜೇಬಿಗೆ ಹೊಂದುವಂತೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಐ.ಟಿ ಪಾರ್ಕ್, ಕಾರ್ಪೊರೇಟ್ ಕಚೇರಿಗಳು, ಕ್ರೀಡಾಂಗಣಗಳು, ಭಾರತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ಕಚೇರಿ ಸೇರಿದಂತೆ ಮುಂಬೈ, ಪುಣೆ, ನವದೆಹಲಿ ಹಾಗೂ ದುಬೈನಲ್ಲೂ ‘ಎಸ್‌ಪಿಆರ್‌ಇ’ ನಿರ್ಮಾಣ ಕ್ಷೇತ್ರದಲ್ಲಿ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಇದೀಗ ಮೊದಲ ಬಾರಿಗೆ ಬೆಂಗಳೂರಿಗೆ ಪ್ರವೇಶಿಸಿದ್ದೇವೆ. ಮೈಸೂರಿನಲ್ಲೂ ಕಂಪೆನಿ ಒಡೆತನಕ್ಕೆ ಸೇರಿದ ಭೂಮಿ (ಭೂ ಬ್ಯಾಂಕ್) ಇದೆ. ಕೋಲ್ಕತ್ತದಲ್ಲಿ ‘ಸುಖೋಬೃಷ್ಟಿ’ ಹೆಸರಿನಲ್ಲಿ ಪ್ರಾರಂಭಿಸಿದ್ದ ಅಗ್ಗದ ದರದ ‘ಸಮೂಹ ಮನೆಗಳು’ ಸಾಕಷ್ಟು ಜನಪ್ರಿಯತೆ ಗಳಿಸಿವೆ. 150 ಏಕರೆ ವಿಸ್ತೀರ್ಣದ ಟೌನ್‌ಶಿಪ್ ಯೋಜನೆಯಲ್ಲಿ ಸುಮಾರು 20 ಸಾವಿರ ಕುಟುಂಬಗಳಿಗೆ ಸೂರು ಒದಗಿಸಲಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ನಿಧಾನವಾಗಿ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಹೂಡಿಕೆ ವಿಸ್ತರಿಸುವ ಯೋಜನೆ ಇದೆ ಎಂದು ಕೆಕೂ ಹೇಳಿದರು.
ಬೆಂಗಳೂರು ಹೂಡಿಕೆ ತಾಣ
ಬೆಂಗಳೂರಿನಲ್ಲಿ ಹೆಚ್ಚುತ್ತಲೇ ಇರುವ ಉದ್ಯೋಗಾವಕಾಶ, ಉತ್ತಮ ಹವಾಮಾನ, ವೈವಿಧ್ಯಮಯ ಜೀವನಶೈಲಿ ಮೊದಲಾದ ಕಾರಣಗಳಿಂದಾಗಿ ಜನರ ವಲಸೆ ಹೆಚ್ಚುತ್ತಲೇ ಇದೆ. ಇದು ಇಲ್ಲಿನ ‘ರಿಯಲ್ ಎಸ್ಟೇಟ್’ ಉದ್ಯಮಕ್ಕೆ ಉತ್ತೇಜನಕಾರಿಯಾಗಿದೆ. ಆದರೆ, ಕಳೆದ 2ವರ್ಷಗಳಲ್ಲಿ ಇಲ್ಲಿನ ವಸತಿ ನಿರ್ಮಾಣ ಭೂಮಿ ಬೆಲೆಯಲ್ಲಿ ಶೇ 26.1ರಷ್ಟು ಏರಿಕೆ ಕಂಡುಬಂದಿದೆ. ಇನ್ನೊಂದೆಡೆ ಐ.ಟಿ ಕ್ಷೇತ್ರದ ಪ್ರಗತಿ ವಾಣಿಜ್ಯ ಬಳಕೆ ಕಟ್ಟಡಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡಿದೆ. ಈ ಎಲ್ಲ ಅಂಶಗಳು ಬೆಂಗಳೂರನ್ನು ಹೂಡಿಕೆ ತಾಣವಾಗಿ ಆಯ್ದುಕೊಳ್ಳಲು ಪ್ರಮುಖ ಕಾರಣ ಎನ್ನುತ್ತಾರೆ ಕೆಕೊ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.