ಬೇಸಿಗೆಯಲ್ಲಿ ಮನೆಗಳಲ್ಲಿ ಫಂಕಗಳು ತಿರುಗುತ್ತಿರುವುದು, ಬಂಗಲೆಗಳಲ್ಲಿ ಹವಾನಿಯಂತ್ರಕ ಯಂತ್ರ ಸದಾ ಚಾಲೂ ಇರುವುದು ಸಾಮಾನ್ಯ. ಆದರೆ ಮೈಸೂರಿನ ವಾಣಿ ವಿಲಾಸ ಮೊಹಲ್ಲದ ಪರಿಸರ ಸ್ನೇಹಿ ಮನೆಯೊಂದರಲ್ಲಿ ಇವಾವುವೂ ಇಲ್ಲದೇ ವಾತಾವರಣದಲ್ಲಿ ಇರುವುದಕ್ಕಿಂತ 4ರಿಂದ 6 ಡಿಗ್ರಿ ಸೆಲ್ಸಿಯಸ್ ಕಡಿಮೆ ಉಷ್ಣಾಂಶ ಇರುತ್ತದೆ.
ಬಹುಮಹಡಿ ಕಟ್ಟಡಗಳ ನಡುವೆ ಇಂತಹದ್ದೊಂದು `ಹಸಿರು ಮನೆ~ಯನ್ನು ವೈದ್ಯ ಡಾ. ಸಿ.ಶರತ್ ಕುಮಾರ್ ನಿರ್ಮಿಸಿದ್ದಾರೆ. ಏರುತ್ತಿರುವ ತಾಪಮಾನಕ್ಕೆ 12 ವರ್ಷಗಳ ಹಿಂದೆಯೇ ಅವರು ಕ2ಂಡುಕೊಂಡ ಪರಿಹಾರವಿದು. 100*80 ವಿಸ್ತೀರ್ಣದ ಜಾಗದಲ್ಲಿ 30*40 ವಿಸ್ತೀರ್ಣದಲ್ಲಿ ಮನೆ ನಿರ್ಮಿಸಿದ್ದಾರೆ. ಎರಡು ಮಹಡಿಯ ಈ ಕಟ್ಟಡದಲ್ಲಿ 4 ಮಲಗುವ ಕೊಠಡಿ, ಒಂದು ಹಜಾರ ಹಾಗೂ ಅಡುಗೆ ಕೋಣೆ ಇದೆ. ಉಳಿದಂತೆ ಮನೆಯ ಸುತ್ತ ಕೈತೋಟವಿದೆ.
ಉತ್ತರ- ದಕ್ಷಿಣಕ್ಕೆ ಅಭಿಮುಖವಾಗಿ ನಿರ್ಮಿಸಿರುವ ನಿವಾಸದ ಸುತ್ತ ಹಚ್ಚ ಹಸಿರಿನ ವಾತಾವರಣವಿದೆ. ಮನೆಯ ಮೇಲೆ ಬೀಳುವ ಸೂರ್ಯನ ಬಿಸಿಲಿನ ಪ್ರಖರತೆಯನ್ನು ತಡೆಗಟ್ಟಲು ಎರಡು ದಿಕ್ಕಿಗೂ 200ಕ್ಕೂ ಹೆಚ್ಚು ಪಾಮ್ ಗಿಡ ಸಮೂಹವಿದೆ. ಪಶ್ಚಿಮ ದಿಕ್ಕಿನಲ್ಲಿ 10 ಅಶೋಕ ಮರಗಳನ್ನು ಬೆಳೆಸಲಾಗಿದೆ. ಮತ್ತೊಂದೆಡೆ ಬೊಗನ್‌ವಿಲ್ಲ, ದಾಸವಾಳದ ಹೂ ಗಿಡ, ಗೃಹ ಬಳಕೆಗೆ ಅಗತ್ಯವಾದ ಬಾಳೆ ಗಿಡಗಳನ್ನು ಪೋಷಣೆ ಮಾಡಲಾಗಿದೆ. ಕಾಂಪೌಂಡ್, ಮಹಡಿ ಸೇರಿದಂತೆ ಮನೆಯ ಸುತ್ತಲ ಗೋಡೆಗೆ ಬಳ್ಳಿಗಳನ್ನು ಹಬ್ಬಿಸಲಾಗಿದ್ದು, ಇವು ಗೋಡೆಗಳನ್ನು ಸದಾ ತಂಪಾಗಿಡುತ್ತವೆ. ಉಳಿದಂತೆ ಹಸಿರು ಹುಲ್ಲು, ಹೂ ಕುಂಡಗಳೂ ಮನೆ ಸುತ್ತ ಅಲ್ಲಲ್ಲಿ ನೆಲೆಗೊಂಡಿವೆ. ಪರಿಣಾಮ ಇಡೀ ಮನೆ ಒಳ-ಹೊರಗೆ ಸದಾ ತಂಪು.. ತಂಪು...
ಹೀಗಾಗಿ ಗೃಹ ಪ್ರವೇಶಿಸಿದ ತಕ್ಷಣ ಫ್ಯಾನ್ ಹಾಕುವ ಅಗತ್ಯವಿಲ್ಲ. ಉಷ್ಣಾಂಶವನ್ನು ತಡೆಗಟ್ಟಿ, ಮನೆಯನ್ನೂ ಸದಾ ತಂಪಾಗಿ ಇಡುತ್ತದೆ. ರಸ್ತೆ ಮೇಲಿನ ದೂಳು ಇತ್ತ ಸುಳಿಯುವುದಿಲ್ಲ. ಚಿಕ್ಕದಾಗಿ, ಚೊಕ್ಕದಾಗಿ ಉದ್ಯಾನ ನಿರ್ಮಿಸಿಕೊಂಡಿರುವುದರಿಂದ ಸೊಳ್ಳೆ, ಕೀಟಗಳ ಕಾಟವಿಲ್ಲ. ಅವುಗಳಿಂದ ರಕ್ಷಣೆ ಪಡೆಯಲು ಅಗತ್ಯವಾದ ಮುನ್ನೆಚ್ಚರಿಕೆಗಳು ಈ ಪರಿಸರ ಸ್ನೇಹಿ ಮನೆಯಲ್ಲಿವೆ.
ಮಳೆ ನೀರು ಕೂಯ್ಲು
ಮನೆ, ಉದ್ಯಾನಕ್ಕೆ ಅಗತ್ಯವಾದ ನೀರನ್ನು ಮಳೆ ನೀರು ಕೊಯ್ಲು ಮೂಲಕ ಸಂಗ್ರಹಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ 20 ಸಾವಿರ ಲೀಟರ್ ಸಾಮರ್ಥ್ಯದ ತೊಟ್ಟಿ ಕೂಡ ಇದೆ. ಮಳೆಗಾಲದಲ್ಲಿ ಮಹಡಿ ಮೇಲೆ ಬಿದ್ದ ಮಳೆ ನೀರು ಆ ಟ್ಯಾಂಕ್ ಸೇರುತ್ತದೆ. ಗೃಹ ಬಳಕೆ, ಬೇಸಿಗೆಯಲ್ಲಿ ಉದ್ಯಾನಕ್ಕೆ ಇದೇ ನೀರು ಬಳಕೆಯಾಗುತ್ತದೆ. ಅಲ್ಲದೇ ಮನೆಯ ಎಲ್ಲ ದಿಕ್ಕಿಗೂ 10 ಪ್ಲಾಸ್ಟಿಕ್ ಡ್ರಮ್‌ಗಳನ್ನಿಟ್ಟು ನೀರು ಸಂಗ್ರಹಿಸಲಾಗುತ್ತದೆ.
`ಟ್ಯಾಂಕ್ ತುಂಬಿದ ನೀರನ್ನು ಮನೆ ಸುತ್ತ ಇಂಗಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಭೂಮಿ ಮರುಪೂರಣಗೊಳ್ಳುತ್ತದೆ. ಇದರಿಂದ ಗಿಡಗಳಿಗೆ, ಹೂ ಬಳ್ಳಿಗಳಿಗೆ ನೀರಿನ ಸಮಸ್ಯೆ ಎದುರಾಗಿಲ್ಲ. ನೀರನ್ನು ಸರಿಯಾಗಿ ಬಳಸಿಕೊಂಡರೆ ಮನೆಯನ್ನು ಸದಾ ಹಸಿರಾಗಿ ಇಡಬಹುದು~ ಎನ್ನುತ್ತಾರೆ ಮಾಲೀಕ ಡಾ. ಶರತ್ ಕುಮಾರ್.
ಮರದಿಂದ ಬೀಳುವ ಎಲೆ ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನೂ ಪ್ರತ್ಯೇಕವಾಗಿ ಒಂದು ಡ್ರಮ್‌ನಲ್ಲಿ ಸಂಗ್ರಹಿಸಿ ಕೊಳೆಸಿ ಗೊಬ್ಬರ ತಯಾರಿಸಿಕೊಳ್ಳತ್ತಾರೆ. ಅದೇ ಗೊಬ್ಬರವನ್ನು ಉದ್ಯಾನಕ್ಕೆ ಬಳಸಲಾಗುತ್ತದೆ. ಹೀಗಾಗಿ ಗಿಡ, ಮರ, ಹೂ ಬಳ್ಳಿಗಳು ನಳನಳಿಸುತ್ತಿವೆ.
12 ವರ್ಷದ ಹಿಂದೆ ರೂ. 30 ಲಕ್ಷದಲ್ಲಿ ನಿರ್ಮಾಣವಾದ ಮನೆ ಪರಿಸರ ಸ್ನೇಹಿಯಾಗಿ ರೂಪುಗೊಂಡಿದೆ. ಸಾಕಷ್ಟು ಗಾಳಿ, ಬೆಳಕು ಬರುತ್ತದೆ. ಸೋಲಾರ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದ, ಬಾಹ್ಯ ಅವಲಂಬನೆ ತೀರಾ ಕಡಿಮೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.