ADVERTISEMENT

ಕೂಲಿ ಅರಸುವವರ ಕಣ್ಣೀರು ಒರೆಸದ ನರೇಗಾ

ಎಂ.ನಾಗರಾಜ
Published 15 ಜೂನ್ 2014, 19:30 IST
Last Updated 15 ಜೂನ್ 2014, 19:30 IST
ಹುಬ್ಬಳ್ಳಿ ರೈಲು ನಿಲ್ದಾಣದ ಬಳಿ ಜಮಾಯಿಸಿರುವ ಜನ   – ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಹುಬ್ಬಳ್ಳಿ ರೈಲು ನಿಲ್ದಾಣದ ಬಳಿ ಜಮಾಯಿಸಿರುವ ಜನ – ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌   

ಬೆಳಿಗ್ಗೆ ಹೊತ್ತು ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿಗೆ ಹೋದರೆ ಅಲ್ಲಿ ಜಮಾಯಿಸಿರುವ ಜನರನ್ನು ನೋಡಿದಾಗ ಎಂತಹವರ ಕಣ್ಣಾಲಿ­ಗಳೂ ತೇವಗೊಳ್ಳುತ್ತವೆ. ದೂರದ ಹಳ್ಳಿಗಳಿಂದ ಕೂಲಿ ಅರಸಿ ಹುಬ್ಬಳ್ಳಿಗೆ ಬರುವ ಈ ಜನರು ಕೂಲಿಗೆ ಕರೆಯುವ ಧಣಿಗಳ ನಿರೀಕ್ಷೆಯಲ್ಲಿ ಕಾದು ಕಾದು ಸುಣ್ಣವಾಗಿರುತ್ತಾರೆ.

ಪೇಲವ ಮುಖ ಹೊತ್ತ ಈ ಜನರನ್ನು ಮಾತನಾಡಿಸಲು ಯಾರಾ­ದರೂ ಮುಂದಾದರೆ ಸಾಕು, ಸುತ್ತುವರಿದು ‘ಎಲ್ಲಿ ಕೆಲಸ? ಎಷ್ಟು ಮಂದಿ ಬೇಕು?’ ಎಂದು ದುಂಬಾಲು ಬೀಳುತ್ತಾರೆ. ಇವರನ್ನು ನೋಡಿ­ದಾಗ, ಇಂತಹವರನ್ನೇ ದೃಷ್ಟಿಯಲ್ಲಿ ಇಟ್ಟು­ಕೊಂಡು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಳ್ಳ ಹಿಡಿದಿರುವುದು ಎದ್ದು ಕಾಣುತ್ತದೆ.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ­ಯನ್ನು ಸರ್ಕಾರ ಜಾರಿಗೊಳಿಸಿದಾಗ ಕೂಲಿ ಕಾರ್ಮಿ­ಕರು ಮತ್ತವರ ಕುಟುಂಬದವರಲ್ಲಿ ಆಶಾ­ಭಾವನೆ ಮೂಡಿದ್ದಂತೂ  ನಿಜ. ಇನ್ನು ಮುಂದೆ ಒಂದಷ್ಟು ದಿನ ಖಚಿತವಾಗಿ ಕೂಲಿ ಸಿಗುತ್ತದೆ ಎಂಬ ಭರವಸೆಯೇ ಆ ವರ್ಗದ ಜನರಲ್ಲಿ ಭರವಸೆ ಹುಟ್ಟಿಸಿತ್ತು. ಹೊಟ್ಟೆ ತುಂಬಿಸಿಕೊಳ್ಳಲು ದಾರಿ­ಯಾಯಿತು ಎಂದು ಆ ವರ್ಗ ನಂಬಿತ್ತು. ಈ ವರ್ಗದ ನಂಬಿಕೆ ಹುಸಿ ಹೋಗಲು ಬಹಳ ದಿನ­ಗಳು ಹಿಡಿಯಲಿಲ್ಲ. ಸರ್ಕಾರದ ಯಾವುದೇ ಯೋಜ­ನೆಯೂ ಪೂರ್ಣ ಪ್ರಮಾಣದಲ್ಲಿ ಜನ­ಸಾಮಾನ್ಯರಿಗೆ ತಲುಪುವುದಿಲ್ಲ ಎಂಬುದನ್ನು ಈ ಯೋಜನೆಯೂ ‘ಖಾತ್ರಿ’ ಮಾಡಿತು ಎನ್ನಲು ಅಡ್ಡಿ ಇಲ್ಲ. 

ಧಾರವಾಡ, ಹಾವೇರಿ ಗದಗ ಜಿಲ್ಲೆಗಳ ವಿವಿಧ ಹಳ್ಳಿಗಳಿಂದ ಬುತ್ತಿಯೊಂದಿಗೆ ಸುಮಾರು 1500ಕ್ಕೂ ಹೆಚ್ಚು ಮಂದಿ ಪ್ರತಿ ನಿತ್ಯ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿಗೆ ಬಂದು ಗುಂಪು–ಗುಂಪಾಗಿ ಜಮಾಯಿಸಿರುತ್ತಾರೆ.  ತಮ್ಮನ್ನು ನಂಬಿರುವ ಕುಟುಂಬದ ಸದಸ್ಯರ ತುತ್ತಿನ ಚೀಲ ತುಂಬಿಸುವ ಸಲುವಾಗಿ ಈ ಶ್ರಮಜೀವಿಗಳು ಪ್ರತಿನಿತ್ಯವೂ ಕೂಲಿ ಕೆಲಸಕ್ಕಾಗಿ ಹೋರಾಟ ನಡೆಸಿದ್ದಾರೆ. ಕೂಲಿ ಸಿಗದ ದಿನವಂತೂ ಅವರ ತೊಳಲಾಟವನ್ನು ನೋಡಲಾಗದು.

ಉದ್ಯೋಗವಿಲ್ಲದ ಕೈಗಳಿಗೆ ಆಯಾ ಗ್ರಾಮಗಳಲ್ಲಿಯೇ ಕೆಲಸ ಕೊಡುವ ಜವಾಬ್ದಾರಿಯನ್ನು ಸರ್ಕಾರವೇನೋ ಗ್ರಾಮ ಪಂಚಾಯ್ತಿಗಳಿಗೆ ಒಪ್ಪಿಸಿದೆ. ಕೇಂದ್ರದಿಂದ ಸಾಕಷ್ಟು ಹಣವೂ ಹರಿದು ಬರುತ್ತಿದೆ. ಆದರೆ ಗ್ರಾಮ ಪಂಚಾಯ್ತಿಗಳ ಚುನಾಯಿತ ಪ್ರತಿನಿಧಿಗಳು, ಅಲ್ಲಿನ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕೂಟದ ಕಪಿಮುಷ್ಟಿಗೆ ಸಿಲುಕಿರುವ ಈ ಯೋಜನೆಯಿಂದ ನಿಜವಾದ ಕೂಲಿ ಕಾರ್ಮಿಕರಿಗೆ ಅನುಕೂಲವಾಗಿಲ್ಲ ಎಂಬುದು ಹತ್ತಾರು ಹಳ್ಳಿಗಳ ಜನರು ದೊಡ್ಡ ನಗರಗಳಿಗೆ ಕೂಲಿಗೆ ಬರುತ್ತಿರುವುದನ್ನು ನೋಡಿದವರಿಗೆ ಅನಿಸದಿರದು.
ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ­ಗಳನ್ನು ಯಂತ್ರ ಬಳಸದೇ, ಕಾರ್ಮಿಕರ ಕೈಗ­ಳಿಂದಲೇ ಮಾಡಬೇಕು ಎಂಬ ನಿಯಮವಿದೆ.

ಆದರೆ ಪಟ್ಟಭದ್ರ ಹಿತಾಸಕ್ತಿಗಳು ಗುತ್ತಿಗೆದಾರರ ಮೂಲಕ, ಜೆಸಿಬಿ ಯಂತ್ರ ಬಳಸಿ, ಕೆಲಸ ಪೂರ್ಣ­ಗೊಳಿಸಿ, ಬ್ಯಾಂಕ್‌ ಖಾತೆಗೆ ಹಣ ಹಾಕಿಕೊಂಡು, ಅಲ್ಲಿಂದ ಡ್ರಾ ಮಾಡಿಕೊಳ್ಳುತ್ತಿವೆ. ಇದು ಗೊತ್ತಿ­ದ್ದರೂ ತಡೆಯುವ ಮನಸ್ಸು, ಇಚ್ಛಾಶಕ್ತಿ ಯಾರಿಗೂ ಇಲ್ಲ. ಹುಬ್ಬಳ್ಳಿ ರೈಲು ನಿಲ್ದಾಣದ ಬಳಿ ಸಾವಿರ ಸಂಖ್ಯೆಯಲ್ಲಿ ಕೆಲಸಕ್ಕಾಗಿ ಕೂಲಿ­ಕಾರ್ಮಿ­ಕರು ಕಾದು ನಿಲ್ಲುವುದು ಚುನಾಯಿತ ಪ್ರತಿನಿಧಿ­ಗಳು, ಅಧಿಕಾರಿಗಳಿಗೆ ಇದುವರೆಗೂ ಕಂಡಿಲ್ಲವೇ? ಅಥವಾ ಅವರಿಗೆ ಈ ಕೂಲಿ ಕಾರ್ಮಿ­ಕರ ಬವಣೆ ನೀಗಿಸುವುದಕ್ಕಿಂತ ಗುತ್ತಿಗೆದಾರರ ಹಿತವೇ ಮುಖ್ಯವಾಗಿದಿಯೇ ಎಂಬ ಶಂಕೆ ಮೂಡುತ್ತದೆ. ಇಂಥ ಒಳ್ಳೆಯ, ಜನ ಉಪಯೋಗಿ ಯೋಜನೆ­ಯನ್ನು ಕಾಯ್ದೆ ಮೂಲಕ ಅನುಷ್ಠಾನ ಮಾಡಿ­ದ್ದರೂ ಅದರ ಜಾರಿ ಸಮರ್ಪಕವಾಗಿಲ್ಲ ಎಂದರೆ ಇದಕ್ಕೆ ಯಾರನ್ನು ಗುರಿ ಮಾಡುವುದು?

ಹಿಂದೆ ಕೂಲಿಗಾಗಿ ಕಾಳು ಯೋಜನೆ ಅನುಷ್ಠಾನದಲ್ಲೂ ಇದೇ ರೀತಿ ಆಗಿತ್ತು. ರಂಗೋಲಿ ಕೆಳಗೆ ತೂರುವುದನ್ನು ರೂಢಿಸಿ­ಕೊಂಡಿರುವ ಪ್ರಭಾವಿ ರಾಜಕಾರಣಿಗಳು ತಮ್ಮವ­ರಿಗೇ ಕೆಲಸದ ಗುತ್ತಿಗೆ ಸಿಗುವಂತೆ ಮಾಡಿ, ಹಣ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿ­ದ್ದರು. ಈಗಲೂ ಉದ್ಯೋಗ ಖಾತ್ರಿ ಯೋಜನೆ­ಯಿಂದ ಗುತ್ತಿಗೆದಾರರಿಗೆ ಹಬ್ಬವಾದರೆ, ಕೂಲಿ ಕಾರ್ಮಿಕರಿಗೆ ಸಿಕ್ಕಿರುವುದು ಮಾತ್ರ ಕಣ್ಣೀರು.

ಕಾಯ್ದೆ ಜಾರಿ ಸಂದರ್ಭದಲ್ಲಿಯೇ ಹಣ ಮಧ್ಯವರ್ತಿಗಳ ಪಾಲಾಗಬಹುದು ಎಂಬ ಭೀತಿ ಇತ್ತು. ಅದು ನಿಜವಾಗಿದೆ. ಅದಕ್ಕೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಜಿನ್ನೂರು ಗ್ರಾಮ ಪಂಚಾಯ್ತಿಯೇ ಸಾಕ್ಷಿ. ಕೆಲಸಕ್ಕೆ ಹೆಸರು ನೋಂದಾಯಿಸದ ಜನರ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಖಾತೆ ತೆರೆದು, ಯೋಜನೆಯ ಹಣವನ್ನು ಅಲ್ಲಿಗೆ ಜಮಾ ಮಾಡಿಸಿ, ಬೇರೆ ಯಾರೋ ಎಟಿಎಂ ಕಾರ್ಡ್‌ ಮೂಲಕ ಹಣ ಪಡೆದು­ಕೊಳ್ಳುತ್ತಿದ್ದಾರೆ ಎಂದರೆ ರಾಜಕಾರಣಿ­ಗಳು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತಾರೆ ಎಂಬುದು ಗೊತ್ತಾಗುತ್ತದೆ.

ಕೆಲಸಕ್ಕೆ ಹೆಸರು ನೋಂದಾಯಿಸಿಕೊಂಡವರ ಬಳಿ ಜಾಬ್‌ ಕಾರ್ಡ್‌­ಗಳಿರಬೇಕು. ಕಾಯ್ದೆ ಹೇಳುವುದೂ ಅದನ್ನೇ. ಆದರೆ ಇಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿ­ಗಳ ಬಳಿ ಜಾಬ್‌ ಕಾರ್ಡ್‌ಗಳಿರುತ್ತವೆ! ಜೆಸಿಬಿಯಲ್ಲಿ ಕೆಲಸ ಮಾಡಿಸಿ, ಬಲವಂತದಿಂದ ಸಹಿ ಮಾಡಿಸಿಕೊಂಡು ಎಟಿಎಂ ಕಾರ್ಡ್‌ ಬಳಸಿ ಹಣ ಪಡೆಯುತ್ತಿರುವುದು ಯೋಜನೆ ಜಾರಿ ಸಂದರ್ಭದಲ್ಲಿ ಇದ್ದ ಭೀತಿಯನ್ನು ನಿಜ ಮಾಡಿದೆ.

ಮಧ್ಯವರ್ತಿಗಳು ಸುಲಭವಾಗಿ ಹಣ ಮಾಡಿಕೊಳ್ಳುವಂತಾಗಿದೆ. ಜಿನ್ನೂರು ಗ್ರಾಮ ಪಂಚಾಯ್ತಿ ಅವ್ಯವಹಾರ ತನಿಖೆ ನಡೆಸಿದ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ದಂಡ ವಿಧಿಸಿದ್ದಾರೆ. ಆದರೆ ಉಳಿದ ಗ್ರಾಮ ಪಂಚಾಯ್ತಿಗಳ ಅಕ್ರಮ–ಅವ್ಯವಹಾರ ಬಯಲಾಗಿಲ್ಲ. ಅಂದ ಮಾತ್ರಕ್ಕೆ ಅಲ್ಲಿ ಎಲ್ಲವೂ ಸರಿಯಾಗಿದೆ ಎಂದೇನೂ ಇಲ್ಲ.

ಯೋಜನೆಯ ಅನುಷ್ಠಾನ ಈ ರೀತಿ ಇದ್ದರೆ, ಇನ್ನು ಕೂಲಿ ಮಾಡಿದರಷ್ಟೇ ಮನೆಯಲ್ಲಿ ಒಲೆ ಹಚ್ಚುವ ಸ್ಥಿತಿಯಲ್ಲಿರುವವರು ದೊಡ್ಡ ನಗರಗಳಿಗೆ ವಲಸೆ ಹೋಗದೆ ಏನು ಮಾಡಲು ಸಾಧ್ಯ? ಹಾಗಾಗಿಯೇ ನಸುಕಿನಲ್ಲಿ ಎದ್ದು ಎರಡು ಬುತ್ತಿಗಳನ್ನು (ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಊಟ) ಕಟ್ಟಿಕೊಂಡು ಹುಬ್ಬಳ್ಳಿ ಕಡೆಗೆ ಜನ ಮುಖ ಮಾಡುತ್ತಾರೆ. ಕೆಲಸಕ್ಕೆ ಕರೆಯುವವರು ಸಿಗುವವರೆಗೂ ಒಂದು ಕ್ಷಣವೂ ಆ ಕಡೆ, ಈ ಕಡೆ ಹೋಗುವುದಿಲ್ಲ.

ಅಲ್ಲದೇ ಯಾರಾದರೊಬ್ಬರು ಕೆಲಸಕ್ಕೆ ಕರೆಯಲು ಬಂದರೆ ಸಾಕು ಎಲ್ಲರೂ ಸುತ್ತಿಕೊಳ್ಳುವುದಿರಿಂದ ಕೂಲಿಯೂ ಕಡಿಮೆಯಾಗುತ್ತದೆ. ಆದರೆ ಅಂದು ಕೂಲಿಯೇ ಸಿಗದಿದ್ದರೆ ಏನು ಮಾಡುವುದು ಎಂಬ ದುಗುಡದಲ್ಲಿ ತಾ ಮುಂದು, ನಾ ಮುಂದು ಎಂದು ಎಲ್ಲರೂ ಮುಗಿ ಬೀಳುತ್ತಾರೆ. ಈ ದೃಶ್ಯ ಎಂತಹ ಕಠಿಣ ಹೃದಯದವರ ಕರುಳನ್ನೂ ಹಿಂಡುತ್ತದೆ. ಕೆಲಸಕ್ಕಾಗಿ ಪರಿತಪಿಸುವ ಈ ಜನರನ್ನು ಕಂಡಾಗ ಕಣ್ಣುಗಳು ಮಂಜಾಗುತ್ತವೆ.

ಈ ಬಡವರ ಬಗ್ಗೆ ಸರ್ಕಾರಕ್ಕಾಗಲಿ ಅಥವಾ ಪಾಲಿಕೆಗಾಗಲಿ ಒಂದಿಷ್ಟೂ ಕಾಳಜಿ ಇಲ್ಲ. ಬಿಸಿಲು, ಮಳೆ, ಚಳಿ–ಗಾಳಿ ಎನ್ನದೆ ಎಲ್ಲಕ್ಕೂ ಮೈಯೊಡ್ಡಿ ಅವರು ನಿಂತೇ ಇರಬೇಕು. ಕೂರಲು ಕನಿಷ್ಠ ಒಂದು ಕಲ್ಲು ಬೆಂಚು, ಬಿಸಿಲು–ಮಳೆಯಿಂದ ರಕ್ಷಣೆ ಪಡೆಯಲು ಒಂದು ತಂಗುದಾಣದ ವ್ಯವಸ್ಥೆಯೂ ಇಷ್ಟು ವರ್ಷಗಳಲ್ಲಿ ಆಗಿಲ್ಲ.

ಕುಳಿತುಕೊಳ್ಳಲು, ಬುತ್ತಿ ಉಣ್ಣಲು ನೆರಳು ಬೇಕು; ಕುಡಿಯಲು ನೀರು ಬೇಕು ಎಂಬ ಅವರ ಬೇಡಿಕೆಗೆ ಸ್ಪಂದಿಸುವ ಹೃದಯವಂತ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಇನ್ನೂ ಸಿಕ್ಕಿಲ್ಲ. ರೈಲ್ವೆ ನಿಲ್ದಾಣದ ಬಳಿಯೇ ಅವರಿಗೆ ವ್ಯವಸ್ಥೆ ಮಾಡಿಕೊಡಬೇಕು ಎಂದೇನೂ ಇಲ್ಲ. ಪಾಲಿಕೆಯ ಸ್ಥಳದಲ್ಲಿ ಸಮೀಪದಲ್ಲಿ ಎಲ್ಲಾದರೂ ಒಂದಿಷ್ಟು ವ್ಯವಸ್ಥೆ ಮಾಡಿಕೊಟ್ಟರೆ ಅವರಿಗೊಂದಿಷ್ಟು ಅನುಕೂಲವಾಗುತ್ತದೆ. ಶಾಸಕರ ನಿಧಿ ಅಥವಾ ಸಂಸದರ ನಿಧಿಯ ಹಣದಿಂದಲೂ ಈ ಕೆಲಸ ಮಾಡಬಹುದು. ಆದರೆ ಮನಸ್ಸು ಬೇಕಲ್ಲ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.