ADVERTISEMENT

ಮುತ್ಸದ್ದಿತನದಿಂದ ವರ್ತಿಸಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2015, 19:30 IST
Last Updated 10 ಮಾರ್ಚ್ 2015, 19:30 IST

ಜಮ್ಮು- ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ನಾಯಕ ಮಸರತ್‌ ಆಲಂ ಬಿಡುಗಡೆಗೆ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಮುಫ್ತಿ ಮೊಹ­ಮ್ಮದ್‌ ಸಯೀದ್‌ ಅವರು ಕೈಗೊಂಡಿರುವ ಕ್ರಮ ವಿವಾದಕ್ಕೆ ಎಡೆ ಮಾಡಿದೆ. ಪ್ರತ್ಯೇಕತಾವಾದಿ ನಾಯಕನ ಬಿಡುಗಡೆ ರಾಷ್ಟ್ರೀಯ ಭದ್ರತೆಗೆ ಅಪಾಯ ಉಂಟು ಮಾಡುವ ಕ್ರಮ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಜಮ್ಮು-ಕಾಶ್ಮೀರದ ಸಮ್ಮಿಶ್ರ ಸರ್ಕಾರದಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕರಿಗೂ ಈ ಕ್ರಮ ಇರಿಸುಮುರಿಸು ಉಂಟು ಮಾಡಿದೆ. ‘ಮಸರತ್‌ ಆಲಂ ಬಿಡುಗಡೆ ಆಗುತ್ತದೆಂಬ ವಿಷಯ ನಮಗೆ ಗೊತ್ತೇ ಇರಲಿಲ್ಲ’ ಎಂದು ಸಂಸತ್ತಿನಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಹೇಳಿರುವುದೂ ಇದನ್ನೇ ಸೂಚಿಸುತ್ತದೆ.

ಎರಡು ವಿಭಿನ್ನ ವಿಚಾರಧಾರೆಗಳನ್ನು ಹೊಂದಿದ್ದು, ಚುನಾವಣೆಯಲ್ಲೂ ಮುಖ್ಯ ಎದುರಾಳಿಗಳಾಗಿದ್ದ ಪಿಡಿಪಿ ಮತ್ತು ಬಿಜೆಪಿ ಜತೆಗೂಡಿ ಅಧಿಕಾರ ಹಂಚಿಕೊಳ್ಳಲು ನಿರ್ಧರಿಸಿದಾಗಲೇ ಇಂತಹ ವಿಷಯಗಳ ಬಗ್ಗೆ ತಮ್ಮ ನಿಲುವು­ಗಳನ್ನು ಪರಸ್ಪರ ಸ್ಪಷ್ಟಪಡಿಸಿಕೊಳ್ಳಬೇಕಿತ್ತು. ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ತಿಂಗಳು ಕಳೆಯುವ ಮೊದಲೇ ಹೀಗೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಎರಡೂ ಪಕ್ಷಗಳು ಚಲಿಸುವುದನ್ನು ಗಮನಿಸಿದರೆ, ಆಡಳಿತ ಸಮ­ರ್ಪಕ ಹಾದಿಯಲ್ಲಿ ಸಾಗುವುದು ಸಾಧ್ಯವಿಲ್ಲ ಎಂಬಂತೆ ಕಾಣುತ್ತಿದೆ. ಮಸರತ್‌ ಆಲಂ ಬಿಡುಗಡೆಯೇ ಜಮ್ಮು-ಕಾಶ್ಮೀರದ ಮುಂದೆ ಸದ್ಯಕ್ಕೆ ಇರುವ ಜ್ವಲಂತ ಸಮಸ್ಯೆ ಎಂಬಂತೆ ಪಿಡಿಪಿ ಮತ್ತು ಬಿಜೆಪಿ ಪಕ್ಷಗಳು ವರ್ತಿ­ಸುತ್ತಿ­ರುವುದು ಸರಿಯಿಲ್ಲ. ಹಲವಾರು ವರ್ಷಗಳಿಂದ ರಾಜ್ಯದಲ್ಲಿ ಮುಕ್ತ ಚುನಾವಣೆಯ ಬಗ್ಗೆ ನಂಬಿಕೆ ಕಳೆದುಕೊಂಡಿದ್ದ ಜನರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ. ಜನರು ಹಿಂಸಾತ್ಮಕ ರಾಜಕೀಯ ಅಸ್ಥಿರತೆ ಮತ್ತು ಕ್ಷೋಭೆಯ ವಿರುದ್ಧವಾಗಿ ಮತ ಚಲಾಯಿಸಿರುವುದು ಸ್ಪಷ್ಟ.

ರಾಷ್ಟ್ರೀಯವಾದಿ ಎಂದು ಹೇಳಿಕೊಳ್ಳುವ ಬಿಜೆಪಿ ಕೂಡಾ ಚುನಾವಣೆಯಲ್ಲಿ ಕೆಲವು ಪ್ರತ್ಯೇಕತಾವಾದಿ ನಾಯಕರ ಜತೆಗೆ ಮೈತ್ರಿ ಮಾಡಿಕೊಂಡಿದೆ. ಇಷ್ಟೆಲ್ಲ ಇರುವಾಗ ಬಿಜೆಪಿ ಈಗ ಮೈತ್ರಿ ಸರ್ಕಾರದ ಅಂಗ­ಪಕ್ಷದ ವಿರುದ್ಧವೇ ತೋಳೇರಿಸುವುದರಲ್ಲಿ ಅರ್ಥವಿಲ್ಲ. ಬಿಜೆಪಿ ಮತ್ತು ಪಿಡಿಪಿ ಪರಸ್ಪರ ಕೆಸರು ಎರಚಾಟದಲ್ಲಿ ನಿರತವಾಗುವ ಬದಲು, ರಾಜ್ಯದ ಸರ್ವ­ತೋಮುಖ ಅಭಿವೃದ್ಧಿಗೆ ಸ್ಪಷ್ಟ ಕಾರ್ಯಯೋಜನೆಗಳನ್ನು ರೂಪಿಸಿ ಜಾರಿಗೆ ತರುವತ್ತ ಗಮನ ಹರಿಸಲಿ.

ಶಾಂತಿಗೆ ಭಂಗ ತರುವ ಪ್ರತ್ಯೇಕತಾವಾದಿಗಳನ್ನು ಬಂಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದ್ದಂತೆಯೇ ಬಿಡುಗಡೆ ಮಾಡುವ ಅಧಿಕಾರವೂ ಇದೆ. ಆಲಂ ವಿರುದ್ಧ ರಾಜ್ಯ ಸರ್ಕಾರವು ಹೂಡಿರುವ ಎಲ್ಲ ಪ್ರಕರಣಗಳಲ್ಲೂ ನ್ಯಾಯಾಲಯವು ಜಾಮೀನು ನೀಡಿರುವುದರಿಂದ ಬಿಡುಗಡೆ ಸಹಜ ಪ್ರಕ್ರಿ­ಯೆಯೇ ಆಗಿರಬಹುದು. ಆ ಬಗ್ಗೆ ಮುಖ್ಯಮಂತ್ರಿ ಮುಫ್ತಿಯವರು ಮೈತ್ರಿ ಪಕ್ಷದ ನಾಯಕರ ಜತೆ ಚರ್ಚಿಸಿಯೇ ನಿರ್ಧಾರ ಕೈಗೊಳ್ಳಬೇಕಿತ್ತು. ಅದನ್ನು ಬಿಟ್ಟು ಏಕಪಕ್ಷೀಯ ತೀರ್ಮಾನಗಳನ್ನು ತರಾತುರಿಯಿಂದ ಕೈಗೊಂಡರೆ ಮೈತ್ರಿ ಎನ್ನುವುದು ಪ್ರಹಸನವಾದೀತು.

ಜಮ್ಮು-ಕಾಶ್ಮೀರದಲ್ಲಿ ರಾಜಕೀಯ ಕೈದಿಗಳ ಸುದೀರ್ಘ ಬಂಧನದಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಕೂಡಾ ಹಿಂದೆ ಆಕ್ಷೇಪ ವ್ಯಕ್ತ­ಪಡಿಸಿ­ದ್ದಿದೆ. ಇಂತಹ ಸೂಕ್ಷ್ಮ ರಾಜಕೀಯ ಪರಿಸ್ಥಿತಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಡಿ ಇಡುವುದೇ ಮುತ್ಸದ್ದಿತನದ ಕ್ರಮವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT