ADVERTISEMENT

19-01-1968, ಶುಕ್ರವಾರ

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 19:30 IST
Last Updated 18 ಜನವರಿ 2018, 19:30 IST

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ: ಐವರು ಹೊಸಬರಿಗೆ ಅವಕಾಶ

ನವದೆಹಲಿ, ಜ. 18– ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ 13 ನಾಮಕರಣ ಸ್ಥಾನಗಳಲ್ಲಿ ಪಕ್ಷದ ಅಧ್ಯಕ್ಷ ಶ್ರೀ ನಿಜಲಿಂಗಪ್ಪನವರು ಕೆಲವರು ಹಿರಿಯರನ್ನು ಉಳಿಸಿಕೊಂಡಿರುವುದರ ಜೊತೆಗೆ ಐವರು ಹೊಸಬರಿಗೆ ಅವಕಾಶ ಒದಗಿಸಿದ್ದಾರೆ.

ಈ ಐವರು ಹೊಸಬರಲ್ಲಿ ಮೈಸೂರಿನ ಗೃಹಸಚಿವ ಶ್ರೀ ಎಂ.ವಿ. ರಾಮರಾವ್‌ ಅವರೂ ಒಬ್ಬರು.

ADVERTISEMENT

ಇನ್ನಿತರ ನಾಲ್ವರೆಂದರೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಶ್ರೀ ಬ್ರಹ್ಮಾನಂದ ರೆಡ್ಡಿ, ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಶ್ರೀ ಕೆ.ಸಿ. ಏಬ್ರಹಾಂ, ಮಧ್ಯಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಾ. ಎಸ್‌.ಡಿ. ಶರ್ಮಾ ಮತ್ತು ರಾಜ್ಯ ಸಭೆಯ ಹಿರಿಯ ಸದಸ್ಯ ಶ್ರೀ ಉಮಾಶಂಕರ ದೀಕ್ಷಿತ್‌.

ಸಮಿತಿಯಲ್ಲಿ ಉಳಿಸಿಕೊಂಡಿರುವ ಸದಸ್ಯರೆಂದರೆ ಶ್ರೀಮತಿ ಇಂದಿರಾ ಗಾಂಧಿ, ಸರ್ವಶ್ರೀ ಕಾಮರಾಜ್‌, ಮುರಾರ್ಜಿ ದೇಸಾಯಿ, ವೈ.ಬಿ. ಚವಾಣ್‌, ಫಕ್ರುದ್ದೀನ್‌ ಆಲಿ ಅಹಮದ್‌, ಜಗಜೀವನ ರಾಂ, ಎಸ್‌.ಕೆ. ಪಾಟೀಲ್‌ ಮತ್ತು ಅತುಲ್ಯ ಘೋಷ್‌.

ಸೀಮಿತ ರಸಿಕತೆ

ನವದೆಹಲಿ, ಜ. 18– ‘ಎ.ಐ.ಸಿ.ಸಿ.ಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಮಹಿಳೆಯೇ ಇಲ್ಲವಲ್ಲ?’

‘ನಾನೊಬ್ಬ ರಸಿಕ’ ಎಂದು ನಿನ್ನೆತಾನೆ ಹೇಳಿದ ಮಾತನ್ನು ಅರವತ್ತೈದು ವರ್ಷ ವಯಸ್ಸಿನ ಕಾಂಗ್ರೆಸ್‌ ಅಧ್ಯಕ್ಷರಿಗೆ ಜ್ಞಾಪಿಸುತ್ತಾ ವರದಿಗಾರರೊಬ್ಬರು ಕೇಳಿದ ಪ್ರಶ್ನೆ ಇದು.

‘ಹೌದು. ಆದರೆ ನಿಮಗೊಂದು ವಿಷಯ ಹೇಳುವುದನ್ನು ಮರೆತೆ.

ನನ್ನ ರಸಿಕತೆ ಒಂದೇ ಒಂದು ವ್ಯಕ್ತಿಗೆ. ನನ್ನ ಪತ್ನಿಗೆ ಮಾತ್ರ ಸೀಮಿತ’ ಎಂದು ನಗು ಉತ್ತರವಿತ್ತರು ಶ್ರೀ ನಿಜಲಿಂಗಪ್ಪ.

‘ನಾನಿದನ್ನು ವರದಿ ಮಾಡಬಹುದೆ?’ಎಂದು ಮತ್ತೊಬ್ಬ ವರದಿಗಾರರು ಪ್ರಶ್ನಿಸಿದಾಗ, ‘ಅಗತ್ಯವಾಗಿ ಮಾಡಿ, ಯಾರಿಗೂ ಅದರಿಂದ ಅಸಂತೋಷವಾಗಲಿ ಅಸಮಾಧಾನವಾಗಲಿ ಆಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.