ADVERTISEMENT

ಕವಲು ದಾರಿಯಲ್ಲಿ ಬುಡಕಟ್ಟು ಅಭಿವೃದ್ಧಿ ಯೋಜನೆ

ಎಲ್ಲಾ ಬುಡಕಟ್ಟು ಸಮುದಾಯಗಳಿಗೂ ಏಕರೂಪದ ಅಭಿವೃದ್ಧಿ ಯೋಜನೆ ಸೂಕ್ತವಾಗುತ್ತದೆಯೇ ?

ಡಾ.ಡಿ.ಸಿ.ನಂಜುಂಡ
Published 8 ಆಗಸ್ಟ್ 2016, 6:25 IST
Last Updated 8 ಆಗಸ್ಟ್ 2016, 6:25 IST
ಕವಲು ದಾರಿಯಲ್ಲಿ ಬುಡಕಟ್ಟು ಅಭಿವೃದ್ಧಿ ಯೋಜನೆ
ಕವಲು ದಾರಿಯಲ್ಲಿ ಬುಡಕಟ್ಟು ಅಭಿವೃದ್ಧಿ ಯೋಜನೆ   

ಭಾರತದಲ್ಲಿ 2011ರ ಜನಗಣತಿ ಪ್ರಕಾರ ಒಟ್ಟು ಜನಸಂಖ್ಯೆಯಲ್ಲಿ ಶೇ 8.8 ರಷ್ಟು ಬುಡಕಟ್ಟು ಜನರಿದ್ದಾರೆ.   ನಾಗಾಲ್ಯಾಂಡ್, ಮೇಘಾಲಯ, ಅರುಣಾಚಲಪ್ರದೇಶ, ಮಿಜೋರಾಂ, ಅಸ್ಸಾಂ, ಕರ್ನಾಟಕ, ಮಣಿಪುರ, ಲಕ್ಷದ್ವೀಪ ಮುಂತಾದ ಕಡೆ ಇವರು ವಾಸಿಸುತ್ತಿದ್ದಾರೆ. ಆದಿವಾಸಿಗಳು, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಇತರರಿಗಿಂತ ಭಿನ್ನ. ಅವರ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿ ಕೂಡ ಶೋಚನೀಯ.

ದೇಶದಲ್ಲಿರುವ ಒಟ್ಟು ಆದಿವಾಸಿ ಸಮುದಾಯಗಳಲ್ಲಿ ಸುಮಾರು 75  ಸಮುದಾಯಗಳನ್ನು ಪ್ರಾಚೀನ ಆದಿವಾಸಿ ಗುಂಪುಗಳು ಎಂದು ಗುರುತಿಸಲಾಗಿದೆ. ಇವು ಇತರೆ ಆದಿವಾಸಿ ಗುಂಪುಗಳಿಗಿಂತಲೂ ತೀರಾ ಹಿಂದುಳಿದಿದ್ದು ಕನಿಷ್ಠ ಜೀವನ ಸೌಕರ್ಯದಿಂದ ತೀವ್ರವಾಗಿ ವಂಚಿತವಾಗಿವೆ. ಜೊತೆಗೆ  ವಿನಾಶದ ಅಂಚಿನಲ್ಲಿವೆ ಎಂದು ಕೇಂದ್ರ ಸರ್ಕಾರ ಹತ್ತನೇ ಪಂಚವಾರ್ಷಿಕ ಯೋಜನೆಯಲ್ಲಿ ಹೇಳಿದೆ.

ಭಾರತದಲ್ಲಿನ ಒಟ್ಟು ಸಾಕ್ಷರತಾ ಪ್ರಮಾಣ ಶೇ 74.04. ಆದರೆ ಬುಡಕಟ್ಟು ಜನರ ಸಾಕ್ಷರತೆ ಶೇ 59.2ರಷ್ಟಿದೆ. ಬುಡಕಟ್ಟು ಪುರುಷರು - ಮಹಿಳೆಯರ ಸಾಕ್ಷರತೆ ಪ್ರಮಾಣದ ನಡುವೆ ಅಜಗಜಾಂತರ ಇರುವುದನ್ನು ವರದಿಗಳು ಸ್ಪಷ್ಟಪಡಿಸಿವೆ.

ಹಾಗೆಯೇ, 2011ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ವಿವಿಧ ರೀತಿಯ ಸುಮಾರು 43 ಲಕ್ಷ ಬುಡಕಟ್ಟು ಜನರಿದ್ದಾರೆ. ಸೋಲಿಗ, ಜೇನುಕುರುಬ, ಕಾಡುಕುರುಬ, ಬೆಟ್ಟಕುರುಬ, ಮೇದ, ಇರುಳಿಗ, ಗೊಂಡ, ನಾಯಕ, ಮಲೆಕುಡಿಯ  ಮುಂತಾದ  50  ಪ್ರಮುಖ ಆದಿವಾಸಿ ಸಮುದಾಯಗಳನ್ನು ನಮ್ಮ ರಾಜ್ಯದಲ್ಲಿ ಗುರುತಿಸಲಾಗಿದ್ದು ಇವರು ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 6.55ರಷ್ಟಿದ್ದಾರೆ.

ಇದರಲ್ಲಿ ಕೊರಗ ಮತ್ತು ಜೇನುಕುರುಬ ಸಮುದಾಯಗಳನ್ನು ಪ್ರಾಚೀನ ಆದಿವಾಸಿ ಗುಂಪುಗಳು ಎಂಬುದಾಗಿ ಗುರುತಿಸಲಾಗಿದೆ. ಇತರೇ ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಹೆಚ್ಚುತ್ತಿದ್ದರೂ ಈ ಪ್ರಾಚೀನ ಬುಡಕಟ್ಟು ಜನರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ. 

ಬಡತನ, ಮೂಢನಂಬಿಕೆ, ಅನಕ್ಷರತೆ, ಮೂಲ ಸೌಕರ್ಯಗಳ ಕೊರತೆ, ಆಹಾರ ಸಮಸ್ಯೆ, ಸುರಕ್ಷಿತ ಕುಡಿಯುವ ನೀರಿನ ಅಭಾವ, ಸ್ವಚ್ಛತೆಯ ಅಭಾವ, ತಾಯಿ ಮತ್ತು ಮಕ್ಕಳ ಆರೋಗ್ಯ ಕಾಳಜಿಯಲ್ಲಿ ನಿರ್ಲಕ್ಷ್ಯ, ಪ್ರಾಥಮಿಕ ಆರೋಗ್ಯದ ತುರ್ತು ಸೇವೆಗಳ ಅಲಭ್ಯತೆ, ಸಾಮಾಜಿಕ ಹೊರಗುಳಿಯುವಿಕೆ ಮುಂತಾದ ಸಮಸ್ಯೆಗಳು ಈ ಬುಡಕಟ್ಟು ಸಮುದಾಯಗಳನ್ನು ಆವರಿಸಿಕೊಂಡಿವೆ. ಒಂದೆಡೆ ಇಡೀ ವಿಶ್ವ ಆದಿವಾಸಿ ದಿನಾಚರಣೆ ಆಚರಿಸುತ್ತಿದ್ದರೆ, ನಮ್ಮ ಬುಡಕಟ್ಟು ಜನರು ನಿಕೃಷ್ಟ ರೀತಿಯ ಜೀವನ ನಡೆಸುತ್ತಿರುವುದು ವಿಪರ್ಯಾಸ.

ಭಾರತದಲ್ಲಿ ಬುಡಕಟ್ಟು ಜನರ ಅಭಿವೃದ್ಧಿಗಾಗಿ 65 ವರ್ಷಗಳಿಂದ ಸರ್ಕಾರಗಳು ನೂರಾರು ಯೋಜನೆಗಳನ್ನು ಜಾರಿಗೆ ತಂದಿವೆ. ಸ್ವಾತಂತ್ರ್ಯದ ನಂತರದ ಒಂದೆರಡು ದಶಕಗಳಲ್ಲಿ ಸರ್ಕಾರಕ್ಕೆ ಎದುರಾಗಿದ್ದು ಎರಡು ಪ್ರಮುಖ ಪ್ರಶ್ನೆಗಳು.

ಒಂದು ಬುಡಕಟ್ಟು ಸಮುದಾಯಗಳನ್ನು ಪ್ರತ್ಯೇಕ ಎಂದು ಪರಿಗಣಿಸಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕೇ ಅಥವಾ ಸಮಾಜದ ಮುಂದುವರೆದ ಜನರ ಜತೆ  ವಿಲೀನಗೊಳಿಸಬೇಕೇ? ಈ ಪ್ರಶ್ನೆಗಳಿಗೆ ಉತ್ತರ ಇಂದಿಗೂ ಸಿಕ್ಕಿಲ್ಲ.

ಬುಡಕಟ್ಟು ಅಭಿವೃದ್ಧಿಯ ಗುರಿ ಮತ್ತು ಉದ್ದೇಶಗಳು ಏನು? ನಿರ್ದಿಷ್ಟವಾಗಿ ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇವೆ? ಇದರ ಕೊನೆ ಯಾವಾಗ? ಬುಡಕಟ್ಟು ಜನರ ಅಭಿವೃದ್ಧಿಯ  ಮಾನದಂಡ ಯಾವುದು ಎಂಬ ಪ್ರಶ್ನೆಗಳಿಗೆ ಇಂದಿನವರೆಗೂ  ಉತ್ತರ ಸಿಕ್ಕಿಲ್ಲ. ದೇಶದಲ್ಲಿ ಈ ಜನರ  ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೆ ಅವು  ಕಾಗದದ ಮೇಲಷ್ಟೆ ಉಳಿದಿವೆ.

ದಕ್ಷಿಣ ಭಾರತದಲ್ಲಿ  ಅಪರೂಪದ ಬುಡಕಟ್ಟು ಸಮುದಾಯಗಳಿದ್ದರೂ ಅವುಗಳನ್ನು ಸಂವಿಧಾನದ ಐದನೇ  ಪರಿಚ್ಛೇದದಡಿ  ತರಲು ಯಾವ ಸರ್ಕಾರವೂ ಆಸಕ್ತಿ ತೋರಿಲ್ಲ.  ಈ ಸಮುದಾಯಗಳ ಸಬಲೀಕರಣಕ್ಕೆ ಸಾಂವಿಧಾನಿಕ ಅವಕಾಶಗಳು ಇಲ್ಲ ಎಂದಾಗಲಿ,  ಕಾನೂನಿನ ಮೂಲಕ ಪ್ರಯತ್ನ ಮಾಡಿಯೇ ಇಲ್ಲ ಎಂದಾಗಲಿ  ಇದರ ಅರ್ಥವಲ್ಲ.  ಕಾಲಕಾಲಕ್ಕೆ ಪ್ರಯತ್ನಗಳಾಗಿವೆ.  ಆದರೆ ಅನುಷ್ಠಾನದಲ್ಲಿ  ಹೆಚ್ಚಿನ ಪಾಲು  ವಿಫಲಗೊಂಡಿವೆ.

ಸಂವಿಧಾನದ 244ನೇ ವಿಧಿ,  ಐದನೇ ಅನುಸೂಚಿಯು ಪಂಚಾಯತ್ ಎಕ್ಸ್‌ಟೆನ್ಷನ್ ಟು ಷೆಡ್ಯೂಲ್ ಏರಿಯಾಸ್ (ಪೀಸಾ) ಪ್ರದೇಶ ಸ್ಥಾಪನೆಗೆ ಕಾರಣವಾಯಿತು.  ಇದರಿಂದಾಗಿ ಅನುಸೂಚಿತ ಪ್ರದೇಶಗಳ ವಿಸ್ತರಣೆ ಮತ್ತು ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ವಾಸಿಗಳನ್ನು (ಎಫ್‌ಆರ್‌ಎ) ವಿವಿಧ ರೀತಿಯಲ್ಲಿ ಸಬಲೀಕರಣಗೊಳಿಸಿ ತಮ್ಮನ್ನು ನಿರ್ವಹಿಸಿಕೊಳ್ಳಲು ವಿವಿಧ ಹಂತಗಳಲ್ಲಿ ಕೇಂದ್ರವು ಉಪಯುಕ್ತ ಕಾಯಿದೆಗಳನ್ನು ರಚಿಸಿತ್ತು. 

ಆದರೆ ಹೆಚ್ಚಿನ ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ಈ ಕಾಯಿದೆಗಳನ್ನು ಬದಲಾವಣೆ ಮಾಡಿ ಪರಿಣಾಮಕಾರಿಯಾಗಿ ಜಾರಿಗೆ ತರಲು  ಸರಿಯಾದ ಆಸಕ್ತಿ ತೋರಿಲ್ಲ. ಬದಲಾಗಿ ಜನರನ್ನು ಅರಣ್ಯದಿಂದ ಹೊರಹಾಕಲು ಆಸಕ್ತಿ ತೋರುತ್ತಿವೆ! ಇದರೊಂದಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೋರ್ಟಿನಿಂದ ತಡೆಯಾಜ್ಞೆ ತಂದು ಕಾಯಿದೆಗಳನ್ನು ಜಾರಿಗೆ ತರದಂತೆ ಹುನ್ನಾರ ಮಾಡುತ್ತಿವೆ.

ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ವಿಭಿನ್ನವಾಗಿರುವ ದೇಶದ ವಿವಿಧ ಬುಡಕಟ್ಟು ಸಮುದಾಯಗಳಿಗೆ ಒಂದೇ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದು ನಾವು ಮಾಡುತ್ತಿರುವ  ದೊಡ್ಡ ತಪ್ಪು ಎಂಬುದು ತಜ್ಞರ ಅಭಿಪ್ರಾಯ.

ದೇಶದ ಪ್ರತಿಯೊಂದು ಬುಡಕಟ್ಟು ಸಮುದಾಯವೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ವಿಭಿನ್ನ ಸ್ತರಗಳಲ್ಲಿ ಸಾವಿರಾರು ವರ್ಷಗಳಿಂದ ನೆಲೆ ನಿಂತಿರುವುದರಿಂದ ನಮ್ಮ ಯೋಜನೆಗಳು ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ನಿರ್ದಿಷ್ಟವಾಗಿರುವುದು  ಅವಶ್ಯಕ ಎಂಬುದು ಅವರ ಅನಿಸಿಕೆ.

ಉದಾಹರಣೆಗೆ ಉತ್ತರ ಭಾರತದ ಬುಡಕಟ್ಟು ಸಮುದಾಯಗಳ ಸಮಸ್ಯೆಗಳು ದಕ್ಷಿಣ ಭಾರತದ ಬುಡಕಟ್ಟು ಸಮುದಾಯಗಳ  ಸಮಸ್ಯೆಗಳಿಗಿಂತ ಸಂಪೂರ್ಣವಾಗಿ ಭಿನ್ನ. ಸಂತಾಲ, ಮುಂಡ, ನಾಗದಂಥ ಪ್ರಮುಖ ಬುಡಕಟ್ಟು ಸಮುದಾಯಗಳ ಏಳಿಗೆಗೆ ಒಂದು ಕಾರ್ಯಕ್ರಮ ರೂಪಿಸಿದರೆ ಅದು ಆ ರಾಜ್ಯದ ಬುಡಕಟ್ಟು ಸಮುದಾಯಗಳಿಗೆ ಮಾತ್ರ ಅನುಕೂಲವಾದೀತು.

ಅದರಿಂದ ಕರ್ನಾಟಕದ ಕೊರಗ, ಎರವ ಇತ್ಯಾದಿ ಬುಡಕಟ್ಟು ಸಮುದಾಯಗಳಿಗೆ ಆಗುವ ಲಾಭವಾದರೂ ಏನು? ಒಂದು ನಿರ್ದಿಷ್ಟ ಅಭಿವೃದ್ಧಿ ಯೋಜನೆ ದೇಶದ ಎಲ್ಲಾ ಬುಡಕಟ್ಟು ಸಮುುದಾಯಗಳಿಗೂ ಸಮಗ್ರವಾಗಿ ಏಕಕಾಲಕ್ಕೆ ಉಪಯುಕ್ತವಾಗುತ್ತದೆ ಎಂಬ ಕಲ್ಪನೆಯೇ ಅರ್ಥಹೀನ ಎನ್ನುವುದು ಮಾನವಶಾಸ್ತ್ರಜ್ಞರ ಅಭಿಪ್ರಾಯ.

ಇದರಿಂದಾಗಿ ಇತ್ತೀಚಿನ ಹೆಚ್ಚಿನ ಜನಕಲ್ಯಾಣ ಯೋಜನೆಗಳ ಲಾಭವನ್ನು ಬಲಾಢ್ಯ ಬುಡಕಟ್ಟು ಸಮುದಾಯಗಳ  ಗುಂಪುಗಳೇ ಪಡೆದುಕೊಳ್ಳುತ್ತಿದ್ದು, ಇತರೇ ಸಣ್ಣಪುಟ್ಟ   ಗುಂಪುಗಳು ಸಾಮಾಜಿಕ ವಾಗಿ ಮತ್ತು ಆರ್ಥಿಕವಾಗಿ ಹೊರಗುಳಿಯುತ್ತಿವೆ.


ಆಂಧ್ರಪ್ರದೇಶ, ಛತ್ತೀಸಗಡ, ಗುಜರಾತ್, ಹಿಮಾಚಲಪ್ರದೇಶ, ಜಾರ್ಖಂಡ್‌, ಮಹಾರಾಷ್ಟ್ರ, ಮಧ್ಯ ಪ್ರದೇಶ, ಒಡಿಶಾ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ಬುಡಕಟ್ಟು ಜನರು ಹೆಚ್ಚಾಗಿ ವಾಸಿಸುವ  ಪ್ರದೇಶಗಳನ್ನು  ಅನುಸೂಚಿತ ಪ್ರದೇಶಗಳ ಪಟ್ಟಿಯಲ್ಲಿ ಸೇರಿಸುವಂತೆ ಸರ್ಕಾರ ನೇಮಕ ಮಾಡಿದ್ದ ವಿವಿಧ ಸಮಿತಿಗಳು ಶಿಫಾರಸು ಮಾಡಿವೆ.

ಅನುಸೂಚಿತ ಪ್ರದೇಶಗಳ ವಿಸ್ತರಣೆಗೆ ಅನುವಾಗುವಂತೆ  ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ದಿಲೀಪ್ ಸಿಂಗ್ ಭೂರಿಯ ಸಮಿತಿ ಶಿಫಾರಸು ಮಾಡಿದೆ. ಅಲ್ಲದೆ ಐದನೇ ಅನುಸೂಚಿಯಲ್ಲಿ ಬಿಟ್ಟು ಹೋದ ಕೆಲವು ಪ್ರದೇಶಗಳನ್ನು  ಸೇರಿಸುವಂತೆ  ಭಾರತ ಸರ್ಕಾರದ ರಾಷ್ಟ್ರೀಯ ಸಲಹಾ ಸಮಿತಿಯೂ 2012ರಲ್ಲಿ ಶಿಫಾರಸು ಮಾಡಿದೆ. 

ಆದರೆ ಇದರ ಅನುಷ್ಠಾನಕ್ಕೆ ಯಾವುದೇ ಸರ್ಕಾರ ಅಗತ್ಯ ಕ್ರಮ   ಕೈಗೊಂಡಿಲ್ಲ.  ಅನುಸೂಚಿತ ಪ್ರದೇಶಗಳ ಘೋಷಣೆಗೆ ಸಂಬಂಧಿಸಿದಂತೆ ರಾಜ್ಯದ ರಾಜ್ಯಪಾಲರಿಗೆ ನೀಡಿರುವ ಅಧಿಕಾರವನ್ನು ಕೆಲವು ರಾಜ್ಯಪಾಲರು ಸೂಕ್ತವಾಗಿ ಚಲಾಯಿಸುತ್ತಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಸಚಿವ ಸಂಪುಟಗಳೇ ಇದಕ್ಕೆ ತೊಡಕಾಗಿ ಪರಿಣಮಿಸಿವೆ.

ದೇಶದಲ್ಲಿ  ಬೆಳವಣಿಗೆ ದರ ಮತ್ತು ಅಭಿವೃದ್ಧಿ ಅಂಶಗಳನ್ನು ವಿಶ್ಲೇಷಿಸಿದರೆ ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ಹೆಚ್ಚಿನ ಸಾಧನೆ ಮಾಡಲಾಗಿಲ್ಲ.  1991ರಲ್ಲಿ ಹೊಸ ಆರ್ಥಿಕ ನೀತಿಯನ್ನು ನಾವು ಅಳವಡಿಸಿಕೊಂಡ ಬಳಿಕ ಬೆಳವಣಿಗೆ ಪ್ರಕ್ರಿಯೆಯು ವೇಗವನ್ನು ಪಡೆದುಕೊಂಡಿದ್ದರೂ, ರಾಷ್ಟ್ರೀಯ ಅಭಿವೃದ್ಧಿ ಮತ್ತು ಬುಡಕಟ್ಟು ಜನರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ವ್ಯಾಪಕವಾದ ಅಂತರ ಏರ್ಪಟ್ಟಿದೆ. ಇದೇ ಇಲ್ಲಿನ ಮುಖ್ಯ ಸಮಸ್ಯೆ.

ಆರ್ಥಿಕ ಬೆಳವಣಿಗೆ ಹೆಸರಿನಲ್ಲಿ ಬುಡಕಟ್ಟು ಪ್ರದೇಶಗಳ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಆ ಪ್ರದೇಶಗಳ ಮೂಲ ಸೌಕರ್ಯ,  ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಕಡೆಗಣಿಸಲಾಗಿದೆ.  ಸರ್ಕಾರದ ಈ ರೀತಿ-ನೀತಿಗಳೇ ಕೆಲವೊಮ್ಮೆ ಎಡಪಂಥೀಯ ತೀವ್ರಗಾಮಿತ್ವ ಹರಡಲು  ಕಾರಣವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ. 

ADVERTISEMENT

ದೇಶದಲ್ಲಿ ಇನ್ನೂ ಹಲವು ಗುಂಪುಗಳು ಬುಡಕಟ್ಟು ಸಮುದಾಯಗಳ ಪಟ್ಟಿಗೆ ಸೇರುವ ಎಲ್ಲಾ ಅರ್ಹತೆ ಪಡೆದಿದ್ದರೂ ಆ ಸಮುದಾಯಗಳನ್ನು  ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.   ಅನೇಕ ಬುಡಕಟ್ಟು ಸಮುದಾಯಗಳು ಇಂದಿಗೂ ಪರಿಶಿಷ್ಟ ಪಂಗಡದ  ವ್ಯಾಪ್ತಿಗೆ ಬಂದಿಲ್ಲ. 

ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳ ನಿರ್ದಿಷ್ಟ ಗುರಿ ಏನು ಹಾಗೂ ನಾವು ಏನನ್ನು ಸಾಧಿಸಲು ಯತ್ನಿಸುತ್ತಿದ್ದೇವೆ ಎಂಬ ಅರಿವು  ಯೋಜನೆಗಳನ್ನು ರೂಪಿಸುವವರಿಗೆ  ಇದ್ದಂತಿಲ್ಲ. ಸರ್ಕಾರದ ಯೋಜನೆಗಳು ಬುಡಕಟ್ಟು ಸಮುದಾಯಗಳನ್ನು  ತಲುಪುತ್ತಿವೆ ಎಂಬ ಭ್ರಮೆಯಲ್ಲಿ  ಹೊಸ ಹೊಸ ಅಭಿವೃದ್ಧಿ ಯೋಜನೆಗಳನ್ನು ಇನ್ನೂ ಹುಟ್ಟುಹಾಕುತ್ತಿದ್ದೇವೆ. 

ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರದ ಯಾವುದೇ ಹೊಸ ಯೋಜನೆ ಬಂದರೂ ಮೊದಲು ನಿರ್ವಸತಿಗರಾಗುವುದು ಬುಡಕಟ್ಟು ಸಮುದಾಯಗಳೇ. ಈ ಕಾರಣದಿಂದ ಸಾಮಾಜಿಕ ಹೊರಗುಳಿಯುವಿಕೆ ಸೇರಿದಂತೆ ನಾನಾ ಬಗೆಯ ಸಮಸ್ಯೆಗಳಿಗೆ ಈಡಾಗುತ್ತಿವೆ. 

ತಂತ್ರಜ್ಞಾನದಲ್ಲಿ ನಮ್ಮ ದೇಶ ಎಷ್ಟೇ ಮುಂದಿದ್ದರೂ ಬುಡಕಟ್ಟು ಜನರಿಗೆ  ಪರಿಣಾಮಕಾರಿ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವುದಕ್ಕೆ  ನಮಗೆ ಇನ್ನೂ ಸಾಧ್ಯವಾಗಿಲ್ಲ. ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಬಿಡಲೂ ಆಗದೆ,  ಆಧುನಿಕ ಅಭಿವೃದ್ಧಿಯ ಪಥದಲ್ಲಿ ಮುಂದುವರೆಯಲೂ ಆಗದೆ ಇವರು ಕವಲು ದಾರಿಯಲ್ಲಿ ನಿಂತಿದ್ದಾರೆ.

ಈ ಸಮುದಾಯಗಳು ಅಭಿವೃದ್ಧಿ ಯೋಜನೆಗಳ ಲಾಭವನ್ನು ಪಡೆಯಲು ಇಂದಿಗೂ ಸಾಧ್ಯವಾಗಿಲ್ಲ.  ಹಲವಾರು ಗೊಂದಲಗಳ ಮಧ್ಯೆ  ಬುಡಕಟ್ಟೇತರ ಜನರು ರೂಪಿಸುವ  ಬುಡಕಟ್ಟು ಜನರ ಅಭಿವೃದ್ಧಿ ಎಂಬ ಪರಿಕಲ್ಪನೆ ಒಂದು ದುರಂತಮಯ ಅಂತ್ಯದತ್ತ ಸಾಗುತ್ತಿದೆಯೇನೋ ಎಂಬ ಅನುಮಾನ ಮೂಡುತ್ತದೆ.

ಯಾವುದೇ ಸಮುದಾಯದ ಅಭಿವೃದ್ಧಿಯಲ್ಲಿ ಅವರ ಬದಲಾಗುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಅಂಶಗಳು ಹೆಚ್ಚು ಪರಿಣಾಮಕಾರಿ ಪಾತ್ರ ವಹಿಸುತ್ತವೆ. ಈ ದಿಸೆಯಲ್ಲಿ ಆದಿವಾಸಿಗಳಿಗೆ ಅಗತ್ಯವಿರುವ ವಿವಿಧ ಯೋಜನೆಗಳು ಸಕಾಲದಲ್ಲಿ ತಲುಪುವಂತೆ ನೋಡಿಕೊಳ್ಳಬೇಕಿದೆ.

ಅರಣ್ಯ ಆಧಾರಿತ ಆರ್ಥಿಕ ಸ್ವಾವಲಂಬನೆಯಡಿ  ನೆಲೆ ನಿಂತ ವ್ಯವಸಾಯಗಾರರನ್ನಾಗಿ  ಬುಡಕಟ್ಟು ಸಮುದಾಯಗಳನ್ನು  ರೂಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂಬುದು ತಜ್ಞರ ಅಭಿಪ್ರಾಯ.

ಬುಡಕಟ್ಟು ಆರ್ಥಿಕತೆಯನ್ನು ಸಮಗ್ರ ಆರ್ಥಿಕತೆಗೆ ಒಳಪಡಿಸುವ ಬದಲು ತಾಂತ್ರಿಕ - ಪರಿಸರ ಆಧಾರಿತ ಕೌಶಲಗಳನ್ನು ಜನರಲ್ಲಿ ಬೆಳೆಸುವುದು ಉತ್ತಮ ಎನ್ನುವುದು ಕೆಲವರ ವಾದ. ಭಾರತೀಯ ಬುಡಕಟ್ಟು ಸಮುದಾಯಗಳನ್ನು ಮಾನವಶಾಸ್ತ್ರೀಯ ನೆಲೆಯಲ್ಲಿ  ಪುನರ್‌ ವಿಂಗಡಿಸಿ  ಅದಕ್ಕೆ ಅನುಗುಣವಾಗಿ ಯೋಜನೆಗಳನ್ನು ಶ್ರದ್ಧಾಪೂರ್ವಕವಾಗಿ ಜಾರಿಗೆ ತರುವುದು ಅಗತ್ಯ.

ಈ ಪುನರ್‌ ವಿಂಗಡಣೆಯು ತಾಂತ್ರಿಕ ಮತ್ತು ಆರ್ಥಿಕ ಅಂಶಗಳ ಆಧಾರದಲ್ಲಿ ಆಗಬೇಕು. ಬುಡಕಟ್ಟು ಸಮುದಾಯಗಳನ್ನು ಫಲಾನುಭವಿಗಳೆಂದು ಭಾವಿಸದೇ ಅವರನ್ನು ಯೋಜನಾ ಪ್ರಕ್ರಿಯೆಯಲ್ಲಿ ಪಾಲುದಾರರನ್ನಾಗಿ ಮಾಡಿಕೊಂಡರೆ ಒಂದು ಹಂತದ ಯಶಸ್ಸು ಪಡೆದಂತೆ.

* ಲೇಖಕ ಸಾಮಾಜಿಕ ಹೊರಗುಳಿಯುವಿಕೆ ಹಾಗೂ ಒಳಗೊಳ್ಳುವಿಕೆ ನೀತಿ ಕುರಿತ ಅಧ್ಯಯನ ಕೇಂದ್ರದ ಉಪ ನಿರ್ದೇಶಕ, ಮೈಸೂರು ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.