ADVERTISEMENT

ಬುಕ್‌ ಅಡ್ಜೆಸ್ಟ್‌ಮೆಂಟ್‌ ವ್ಯವಹಾರ: ಅಧಿಕಾರಿಗಳಿಗೆ ಹಬ್ಬ!

ಮಂಜುನಾಥ್ ಹೆಬ್ಬಾರ್‌
Published 5 ಜನವರಿ 2019, 19:39 IST
Last Updated 5 ಜನವರಿ 2019, 19:39 IST
   

ಬೆಂಗಳೂರು: ಬರ ಹಾಗೂ ಪ್ರವಾಹದಂತೆ ಸಾಲಮನ್ನಾವು ಅಧಿಕಾರಿಗಳು ಮತ್ತು ರಾಜಕಾರಣಿಗಳ ಪಾಲಿಗೆ ಹಬ್ಬ. ಬೆಳೆ ಸಾಲ ಮನ್ನಾದ ಘೋಷಣೆ ಮಾಡಿದಾಗ ರೈತರಿಗಿಂತ ಹೆಚ್ಚು ಸಂಭ್ರಮಿಸುವವರು ಇವರೇ. ‘ಬುಕ್‌ ಅಡ್ಜೆಸ್ಟ್‌ಮೆಂಟ್‌’ ವ್ಯವಹಾರಕ್ಕೆ ಮತ್ತಷ್ಟು ಅನುಕೂಲವಾಗುತ್ತದೆ ಎಂಬುದು ಇವರ ಆಲೋಚನೆ.

ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿ ನಿರ್ದೇಶಕರ ಪೈಕಿ ಬಹುತೇಕರು ರಾಜಕೀಯ ಹಿನ್ನೆಲೆಯವರು. ಇವರಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಎಂಬ ಭೇದವೂ ಇಲ್ಲ. ಯಾರ ಹೆಸರಿನಲ್ಲಿ ಹೇಗೆ ಸಾಲ ಪ‍ಡೆದು, ಅದನ್ನು ಮರು ಹೂಡಿಕೆ ಮಾಡಿ ಸಂಪಾದಿಸುವ ಕಲೆ ಇವರಿಗೆ ಕರತಲಾಮಲಕ. ಇದಕ್ಕೆ ಅಧಿಕಾರಿಗಳ ಶಾಮೀಲುದಾರಿಕೆಯೂ ಇದೆ.

ಮಣ್ಣಿನ ಮಕ್ಕಳಿಗೆ ನೆರವಾಗಲು ಬ್ಯಾಂಕ್‌ಗಳ ಮೂಲಕ ಶೂನ್ಯ ಬಡ್ಡಿದರದಿಂದ ಶೇ 4ರ ಬಡ್ಡಿದರದಲ್ಲಿ ಸಾಲ ನೀಡುವ ವ್ಯವಸ್ಥೆ ಇದೆ. ಈ ಕ್ರಮಗಳಿಂದ ರೈತರ ಬದುಕು ಹಸನಾಗುತ್ತದೆ ಎಂದು ಭಾವಿಸಿರುವವರು ಸಾಕಷ್ಟು ಮಂದಿ. ಆ ಪ್ರಕ್ರಿಯೆಯ ಒಳಹೊಕ್ಕು ಆಳವಾಗಿ ನೋಡಿದರೆ ‘ಬುಕ್‌ ಅಡ್ಜೆಸ್ಟ್‌ಮೆಂಟ್‌’ನ ಕರಾಳ ರೂಪ ಗೋಚರಿಸುತ್ತದೆ.

ADVERTISEMENT

ರೈತರು ಸಾಲ ಪಡೆಯಲು ಅಧಿಕಾರಿಗಳ ಕೈ ಬಿಸಿ ಮಾಡಬೇಕು. ಇಷ್ಟೆಲ್ಲ ಮಾಡಿದರೂ ಸಾಲದ ಪೂರ್ಣ ಮೊತ್ತ ಸಿಗುವುದಿಲ್ಲ. ಹಲವು ಸಲ ಹಳೆಯ ಸಾಲ ತೀರಿಸಿದಂತೆ ಮಾಡಿ, ಅದೇ ರೈತನಿಗೆ ಹೊಸ ಸಾಲವನ್ನು ಕೊಡುವ ತಂತ್ರವೂ ಜಾರಿಯಲ್ಲಿದೆ. ಅದರಲ್ಲೂ ಅಧಿಕಾರಿಗಳಿಗೆ ಪಾಲು ನೀಡಬೇಕು. ಕೆಲವು ಸಂದರ್ಭಗಳಲ್ಲಿ ತಮ್ಮ ಹೆಸರಿನಲ್ಲಿ ಸಾಲ ಇರುವುದು ರೈತರಿಗೆ ಗೊತ್ತೇ ಇರುವುದಿಲ್ಲ. ಅವರ ದಾಖಲೆಪತ್ರಗಳ ಹೆಸರಿನಲ್ಲಿ ಯಾರೋ ಸಾಲ ಪಡೆದಿರುತ್ತಾರೆ. ಅದನ್ನು ಬೇರೆ ಕಡೆಯಲ್ಲಿ ಹೂಡಿಕೆ ಮಾಡಿರುತ್ತಾರೆ. ಇಲ್ಲಿ ಶೂನ್ಯ ಬಡ್ಡಿಗೆ ಸಾಲ ಪಡೆದು ತಿಂಗಳಿಗೆ ಶೇ 2ರ ಬಡ್ಡಿದರದಲ್ಲಿ ಅಂದರೆ ವರ್ಷಕ್ಕೆ ಶೇ 24ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುವ ಶೂರರೂ ಇದ್ದಾರೆ.

ಸಾಲ ಮನ್ನಾದ ಫಲಾನುಭವಿಗಳ ಆಯ್ಕೆಯಲ್ಲೂ ಗೋಲ್‌ಮಾಲ್‌ಗಳು ನಡೆಯುತ್ತವೆ. ಕೆಲವು ಬ್ಯಾಂಕ್‌ಗಳು ಸಾಲಗಾರರ ದೊಡ್ಡ ಪಟ್ಟಿಯನ್ನು ರಾತ್ರೋರಾತ್ರಿ ಅಥವಾ ಸಾಕಷ್ಟು ಮುಂಚಿತವಾಗಿ ಸಿದ್ಧಪಡಿಸುತ್ತವೆ. ಸಾಲ ಮನ್ನಾ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಲಪಟಾಯಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಅದರಲ್ಲಿ ಒಂದು ಪಾಲು ರೈತರ ಕೈ ಸೇರುತ್ತದೆ. ಯಾರಿಗೂ ಸಂಶಯ ಬರದಂತೆ ಮಾಡಲು, ನಕಲಿ ರೈತ ಸಾಲಗಾರರ ಹಣವನ್ನು ಮೊದಲೇ ಹಲವರು ಪಾವತಿಸುತ್ತಾರೆ. ಮನ್ನಾ ಆದ ಹಣದ ಬಾಬ್ತು ಹಣ ಬಂದಾಗ ಅದನ್ನು ಪಡೆಯಲಾಗುತ್ತದೆ. ಲೆಕ್ಕ ಪತ್ರ ಸರಿಯಾಗಿರುವುದರಿಂದ ಅವ್ಯವಹಾರದ ಸುಳಿವೇ ಸಿಗುವುದಿಲ್ಲ.

ಶಿವಮೊಗ್ಗದ ಕಾರ್ಪೊರೇಷನ್‌ ಬ್ಯಾಂಕ್‌ನಲ್ಲಿ ಕಳೆದ ವರ್ಷ ನಡೆದ ಹಗರಣ ಹಸಿರಾಗಿಯೇ ಇದೆ. ರೈತರ ಹೆಸರಿನಲ್ಲಿ ₹ 10 ಕೋಟಿ ಮಂಜೂರು ಮಾಡಿ, ಅವರ ಗಮನಕ್ಕೆ ತಾರದೇ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿತ್ತು. ರೈತರು ಕೃಷಿ ಸಾಲ ಪಡೆಯಲು ಕಾರ್ಪೊರೇಷನ್ ಬ್ಯಾಂಕ್‌ಗೆ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದ್ದರು. ಹಲವು ಬಾರಿ ಅಲೆದಾಡಿದರೂ ಸಾಲ ಮಂಜೂರಾಗಿರಲಿಲ್ಲ. ಬ್ಯಾಂಕ್‌ ಅಧಿಕಾರಿಗಳ ವರ್ತನೆಯಿಂದ ಅನುಮಾನಗೊಂಡ ಕೆಲವು ರೈತರು ತಮ್ಮ ವಹಿವಾಟಿನ ದಾಖಲೆ ಪುಸ್ತಕ ಪಡೆದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ರೈತರ ದಾಖಲೆಗಳ ಆಧಾರದ ಮೇಲೆ ಅಡಮಾನ ಸಾಲ, ಕೃಷಿ ಸಾಲ ಹಾಗೂ ಜಮೀನು ಅಭಿವೃದ್ಧಿ ಸಾಲ ಮಂಜೂರು ಮಾಡಲಾಗಿತ್ತು. ಕನಿಷ್ಠ ₹ 5 ಲಕ್ಷದಿಂದ ಗರಿಷ್ಠ ₹ 28 ಲಕ್ಷವರೆಗೂ ಸಾಲ ಮಂಜೂರಾಗಿತ್ತು. ಇಂತಹುದೇ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಸಹಕಾರ ಸಂಘವೊಂದರಲ್ಲಿ ಮೂರು ವರ್ಷಗಳ ಹಿಂದೆ ನಡೆದಿತ್ತು.

ನಕಲಿ ತಡೆಗೆ ತಂತ್ರಾಂಶ

ರೈತರ ಸಾಲ ಮನ್ನಾದ ಹಣ ದುರುಪಯೋಗವಾಗದಂತೆ ತಡೆಯಲು ರಾಜ್ಯ ಸರ್ಕಾರ ಈ ಸಲ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶದಲ್ಲಿ ಎಲ್ಲ ಫಲಾನುಭವಿ ರೈತರ ಹೆಸರುಗಳು, ಸಾಲ ‍ಪ್ರಮಾಣ, ದಾಖಲೆ ಸಲ್ಲಿಕೆಯ ವಿವರಗಳು ಇವೆ. ರಾಜ್ಯದ ಯಾವುದೇ ವ್ಯಕ್ತಿ ಜಿಲ್ಲೆ, ಊರು ಹಾಗೂ ಬ್ಯಾಂಕಿನ ಹೆಸರನ್ನು ನಮೂದಿಸಿ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.