ADVERTISEMENT

ನಮ್ಮ ಸಂವಿಧಾನದ ಸೌಂದರ್ಯವೇ ಸಮಾನತೆ

ನಮ್ಮ ಜೀವನದಲ್ಲಿ ನಾವು ಅಳವಡಿಸಿಕೊಳ್ಳುವ ಮೂಲ, ಉದಾತ್ತ ಆಶಯಗಳೇ ನಮ್ಮ ಸಂವಿಧಾನದ ಮೌಲ್ಯಗಳೂ ಹೌದು

ಕೆ.ಎಂ.ನಟರಾಜ್
Published 23 ನವೆಂಬರ್ 2018, 20:00 IST
Last Updated 23 ನವೆಂಬರ್ 2018, 20:00 IST
ಕೆ.ಎಂ. ನಟರಾಜ್
ಕೆ.ಎಂ. ನಟರಾಜ್   

ದೇಶದ ಸಂವಿಧಾನ ರಚನಾ ಸಭೆ, ಸಂವಿಧಾನವನ್ನು ಒಪ್ಪಿಕೊಂಡಿದ್ದು 1949ರ ನವೆಂಬರ್ 26ರಂದು. ಈ ದಿನವನ್ನು ಮೊದಲು ‘ರಾಷ್ಟ್ರೀಯ ಕಾನೂನು ದಿವಸ’ ಎಂದು ಆಚರಿಸಲಾಗುತ್ತಿತ್ತು. ಆದರೆ, 2015ರ ನಂತರ ಇದನ್ನು ‘ಸಂವಿಧಾನ ದಿವಸ’ ಎಂದು ಆಚರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿತು.

ಭಾರತದಂತಹ ವೈವಿಧ್ಯಗಳ ರಾಷ್ಟ್ರ ಲಿಖಿತ ಸಂವಿಧಾನವನ್ನು ಅಳವಡಿಸಿಕೊಂಡಿದ್ದು, ಒಪ್ಪಿಕೊಂಡಿದ್ದು ಒಂದು ಸೋಜಿಗ. ಅದರ ಬಗ್ಗೆ ಒಂದೆರಡು ಮಾತು ಬರೆಯಬೇಕು. ‘ಭಾರತೀಯತೆ, ನಾವು ಭಾರತೀಯರು’ ಎನ್ನುವ ಅಭಿಮಾನ ಎಲ್ಲರಲ್ಲೂ ಇದೆಯಲ್ಲ?! ಅದೇ ಅಭಿಮಾನ, ಅದೇ ಭಾವ ನಮ್ಮನ್ನೆಲ್ಲ ಒಟ್ಟು ಸೇರಿಸುವಂಥದ್ದು. ಅದೊಂದು ಶಕ್ತಿ. ಭಾರತವೆಂಬ ದೇಶ ಮೊದಲು ಬಹಳ ವಿಸ್ತಾರವಾಗಿತ್ತು. ಆದರೆ ಕಾಲಾನಂತರದಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಬೇರೆ ಬೇರೆ ಭಾಗಗಳಾಗಿ ಹಂಚಿಹೋಯಿತು. ಈಗ ಉಳಿದಿರುವ ಭಾರತವನ್ನು ಅವರಿವರು ಆಳುತ್ತಿದ್ದರು. ಆದರೆ ಭಾರತೀಯತೆಯ ಭಾವದ ಆಧಾರದಲ್ಲಿ ಹೋರಾಟ ಆರಂಭವಾಯಿತು, ನಾವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದೆವು.

ದೇಶವೊಂದು ಹೇಗೆ ಇರಬೇಕು ಎಂಬುದಕ್ಕೆ ಒಂದು ಚೌಕಟ್ಟು ಬೇಕು. ಸಂವಿಧಾನ ಆ ಚೌಕಟ್ಟು. ಆಯಾ ದೇಶಗಳ ಅಗತ್ಯಗಳಿಗೆ ಅನುಗುಣವಾಗಿ ಸಂವಿಧಾನ ಇರುತ್ತದೆ. ನಮಗೆ ಯಾವ ರೀತಿಯ ಸಂವಿಧಾನ ಬೇಕು ಎಂಬುದನ್ನು ತೀರ್ಮಾನಿಸಲು ಶ್ರೇಷ್ಠ ನ್ಯಾಯಶಾಸ್ತ್ರಜ್ಞರು, ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದವರು ಒಂದೆಡೆ ಸೇರಿದರು, ಸಂವಿಧಾನ ರಚನಾ ಸಭೆ ಜನ್ಮ ತಳೆಯಿತು. ಅಲ್ಲಿ ನಡೆದ ಚರ್ಚೆಗಳ ಆಧಾರದಲ್ಲಿ ಲಿಖಿತ ಸಂವಿಧಾನ ರೂಪಿಸಿ, ಒಪ್ಪಿಕೊಳ್ಳಲಾಯಿತು.

ADVERTISEMENT

ಇಷ್ಟು ವೈವಿಧ್ಯ ಹೊಂದಿರುವ ದೇಶ ಒಂದು ಲಿಖಿತ ಸಂವಿಧಾನದ ಅಡಿಯಲ್ಲಿ ಬಂದಿದ್ದು ಹೇಗೆ ಎಂಬ ಪ್ರಶ್ನೆ ಎದುರಾಗಬಹುದು. ಸಂವಿಧಾನ ರಚನಾ ಸಭೆಯಲ್ಲಿ ಎಲ್ಲ ರೀತಿಯ ಜನರ ಪ್ರಾತಿನಿಧ್ಯ ಇತ್ತು. ಹಾಗೆಯೇ, ಸಂವಿಧಾನದಲ್ಲಿ ಇರುವ ಮೂಲ ಅಂಶಗಳು ಎಲ್ಲರಿಗೂ ಸಮಾನವಾಗಿ ಅನ್ವಯ ಆಗುವಂಥವು. ಆ ಮೂಲ ಅಂಶಗಳು ಯಾರಿಗೂ – ಅಂದರೆ ಯಾವ ವರ್ಗದ ಜನರಿಗೂ– ತೊಂದರೆ ಕೊಡದಂತೆ ಇವೆ. ಹಾಗಾಗಿಯೇ ಈ ಸಂವಿಧಾನವನ್ನು ಎಲ್ಲ ವರ್ಗಗಳ ಜನ ಒಪ್ಪಿಕೊಂಡಿದ್ದಾರೆ. ಉದಾಹರಣೆಗೆ ನಮ್ಮದು ಜಾತ್ಯತೀತ ದೇಶ ಎಂಬುದು ಸಂವಿಧಾನದ ಮೂಲ ತತ್ವಗಳಲ್ಲಿ ಒಂದು. ಜಾತ್ಯತೀತ ಅಂದಮಾತ್ರಕ್ಕೆ ಧಾರ್ಮಿಕ ಹಕ್ಕುಗಳು ಇಲ್ಲವೆಂದಲ್ಲ. ಭಾರತ ಜಾತ್ಯತೀತ ದೇಶವಾಗಿ ಇದ್ದುಕೊಂಡೇ ತನ್ನ ಪ್ರಜೆಗಳಿಗೆ ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯವನ್ನೂ ನೀಡಿದೆ. ಯಾವ ಧರ್ಮೀಯರಿಗೂ ಹೆಚ್ಚುವರಿ ಸೌಲಭ್ಯ ನೀಡಿಲ್ಲ. ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದ ವಿಧಿಗಳು, ಅಲ್ಪಸಂಖ್ಯಾತರ ಸುರಕ್ಷತೆಗೆ ಕಲ್ಪಿಸಿರುವ ವಿಧಿಗಳು ಇವ್ಯಾವುವೂ ಹೆಚ್ಚುವರಿ ಹಕ್ಕುಗಳನ್ನು ಕೊಡುವುದಿಲ್ಲ. ಪ್ರಜೆಗಳಿಗೆ ಇರುವ ಹಕ್ಕುಗಳನ್ನೇ ರಕ್ಷಿಸುತ್ತವೆ.

ಅಲ್ಪಸಂಖ್ಯಾತರು ಬಹುಸಂಖ್ಯಾತರಿಗೆ ಸಮಾನರಾಗಿ ಬಾಳಲಿ ಎಂದು ಹೇಳುತ್ತವೆ. ಅಲ್ಪಸಂಖ್ಯಾತರಿಗೆ ದೇಶದಲ್ಲಿ ವಿಶೇಷ ಹಕ್ಕುಗಳನ್ನು ನೀಡಲಾಗಿದೆ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ. ನಮ್ಮ ಯಾವ ವ್ಯಕ್ತಿಯೂ ಅವನ ಧಾರ್ಮಿಕ ಅಸ್ಮಿತೆಯ ಕಾರಣದಿಂದಾಗಿ ಹೆಚ್ಚುವರಿ ಸೌಲಭ್ಯ ಪಡೆದುಕೊಳ್ಳುವುದಿಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಬಹುಸಂಖ್ಯಾತರಿಗೆ ಇಲ್ಲದ ಹಕ್ಕುಗಳು ಅಲ್ಪಸಂಖ್ಯಾತರಿಗೆ ಸಂವಿಧಾನದ ಅಡಿಯಲ್ಲಿ ಎಂದೂ ಸ್ಥಾಪಿತವಾಗಿಲ್ಲ.

ವಿಶ್ವದ ಅತ್ಯಂತ ದೀರ್ಘ ಸಂವಿಧಾನ ನಮ್ಮದು. ಇದರಲ್ಲಿ ಇರುವ ಒಂದು ಸೌಂದರ್ಯವನ್ನು ಗುರುತಿಸಬೇಕು. ಆ ಸೌಂದರ್ಯವನ್ನು ‘ಸಮಾನತೆ’ ಎಂದು ಕರೆಯಬಹುದು. ಅದು ನಮ್ಮ ಪರಂ‍ಪರೆಯಲ್ಲೂ ಇತ್ತು. ಆ ಸಂದೇಶವೇ ನಮ್ಮ ಸಂವಿಧಾನದ ಆತ್ಮ ಕೂಡ ಹೌದು. ಭಾರತೀಯರ ಜೀವನ ವಿಧಾನವೇ ಸಂವಿಧಾನ. ನಮ್ಮ ಜೀವನದ ಪದ್ಧತಿಯಲ್ಲಿ ನಾವು ಅಳವಡಿಸಿಕೊಳ್ಳುವ ಮೂಲ, ಉದಾತ್ತ ಆಶಯಗಳೇ ನಮ್ಮ ಸಂವಿಧಾನದ ಮೌಲ್ಯಗಳೂ ಹೌದು.

ಇಂತಹ ಸಂವಿಧಾನದ ಮೂಲ ತತ್ವಗಳನ್ನು ಯಾವ ಕಾರಣಕ್ಕೂ ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು. ಆ ತೀರ್ಪಿನ ಬಗ್ಗೆ ಕೆಲವು ವಿಮರ್ಶಾತ್ಮಕ ಟಿಪ್ಪಣಿಗಳು ಇವೆ. ಅವುಗಳ ಚರ್ಚೆಗೆ ಇಲ್ಲಿ ಮುಂದಾಗುವುದಿಲ್ಲ. ಆದರೆ, ಸಂವಿಧಾನದ ಮೂಲ ಸ್ವರೂಪ, ಮೂಲ ತತ್ವಗಳನ್ನು ಬದಲಿಸಲಾಗದು ಎಂಬುದನ್ನು ಹೇಳಿದ್ದು ಈ ತೀರ್ಪು ಎನ್ನುವುದರಲ್ಲಿ ಅನುಮಾನ ಇಲ್ಲ.

ಸಂವಿಧಾನದ ಎಲ್ಲ ಅಂಗಗಳಿಗೆ (ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ) ಇರುವ ಇತಿಮಿತಿಗಳನ್ನು ಸಂವಿಧಾನ ನಿರ್ಧಾರ ಮಾಡಿದೆ. ಸಂಸತ್ತು ಕೂಡ ಏನನ್ನು ಮಾಡಬಾರದು ಎಂಬುದನ್ನು ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನಲ್ಲಿ ಹೇಳಲಾಗಿದೆ. ಸಂವಿಧಾನದ ಮೂಲ ತತ್ವಗಳ ರಕ್ಷಣೆಯ ವಿಚಾರದಲ್ಲಿ ಬಂದಿರುವ ಅತಿ ಮಹತ್ವದ ತೀರ್ಪು ಇದು.

ದೇಶದ ‍ಪಾಲಿನ ಮಿದುಳು ಎಂದರೆ ಶಾಸನಸಭೆಗಳು (ಸಂಸತ್ತು ಹಾಗೂ ವಿಧಾನ ಮಂಡಲಗಳು). ಅಂದರೆ ಶಾಸನಗಳನ್ನು ರೂಪಿಸುವುದು ಅವುಗಳ ಕರ್ತವ್ಯ. ದೇಶಕ್ಕೆ ಯಾವ ಸಂದರ್ಭದಲ್ಲಿ ಯಾವ ಕಾನೂನು ಬೇಕು ಎಂಬುದನ್ನು ತೀರ್ಮಾನಿಸುವ ವಿಚಾರದಲ್ಲಿ ಆತ್ಯಂತಿಕ ಅಧಿಕಾರ ಇರುವುದು ಶಾಸಕಾಂಗಕ್ಕೆ ಮಾತ್ರ. ಮಿದುಳು ಕೈಗೊಂಡ ತೀರ್ಮಾನವನ್ನು ಕಾರ್ಯರೂಪಕ್ಕೆ ತರಲು ಕೈಕಾಲುಗಳು ಬೇಕು. ದೇಶವನ್ನು ದೇಹಕ್ಕೆ ಹೋಲಿಸುವುದಾದರೆ, ಕಾರ್ಯಾಂಗವನ್ನು ದೇಶದ ಕೈಕಾಲುಗಳು ಎನ್ನಬಹುದು. ಕೆಲವು ಸಂದರ್ಭಗಳಲ್ಲಿ ಮಿದುಳು ತಪ್ಪು ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇರುತ್ತದೆ – ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ನಮ್ಮ ಬುದ್ಧಿ ತಪ್ಪು ನಿರ್ಧಾರ ಕೈಗೊಂಡಾಗ, ಸರಿ ದಾರಿ ಯಾವುದು ಎಂಬುದನ್ನು ಹೇಳುವ ಕೆಲಸವನ್ನು ಆತ್ಮಸಾಕ್ಷಿ ಮಾಡುತ್ತದೆ. ದೇಶದ ವಿಚಾರದಲ್ಲಿ ಆತ್ಮಸಾಕ್ಷಿ ನಮ್ಮ ನ್ಯಾಯಾಂಗ.

ಸಂವಿಧಾನಬದ್ಧವಾಗಿ ರೂಪುಗೊಂಡ ವ್ಯವಸ್ಥೆಗಳನ್ನು ಬದಲಾಯಿಸಿಬಿಡಬೇಕು ಎಂಬ ಬೇಡಿಕೆಗಳು ನಮ್ಮಲ್ಲಿ ಕೇಳಿಬಂದಿದ್ದು ಇದೆ. ಆದರೆ, ಮೂಲ ತತ್ವಗಳು ಯಾವ ಕಾಲಕ್ಕೂ ಬದಲಾಗುವಂತಿಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಯಾವುದೇ ಗುಂಪಿನಿಂದ ಯಾವುದೇ ಬೇಡಿಕೆ ಬಂದರೂ, ಅದನ್ನು ಪರಿಶೀಲಿಸಿ ತೀರ್ಮಾನಿಸುವುದು ಸಂಸತ್ತು. ಹಾಗಂತ, ಒಂದು ಬೇಡಿಕೆ ಬಂತು ಅಂದಮಾತ್ರಕ್ಕೆ ಅದನ್ನು ಸಂವಿಧಾನಕ್ಕೆ ಬೆದರಿಕೆ ಎನ್ನಲು ಆಗದು– ಆ ಬೇಡಿಕೆ ದೇಶದ ಒಟ್ಟು ಹಿತಕ್ಕೆ ಪೂರಕ ಆಗಿರುವವರೆಗೆ ಅದು ಸಮಸ್ಯೆ ಅಲ್ಲ.

ದೇಶದ ಮೌಲ್ಯಗಳ ಜೊತೆ ಯಾವ ಕಾರಣಕ್ಕೂ ರಾಜಿ ಮಾಡಿಕೊಳ್ಳದಿರುವುದೇ ಸಂವಿಧಾನದ ಮೌಲ್ಯಗಳನ್ನು ರಕ್ಷಿಸಲು ಇರುವ ದೊಡ್ಡ ಅಸ್ತ್ರ. ದೇಶ ಮೊದಲು, ಧರ್ಮ ಆಮೇಲೆ ಎಂಬ ಭಾವ ಎಲ್ಲರಲ್ಲೂ ಮೂಡಬೇಕು. ದೇಶಕ್ಕೊಂದು ಸಂವಿಧಾನ ರೂಪಿಸಿದ ಉದ್ದೇಶವೇ ದೇಶವನ್ನು ಒಟ್ಟಾಗಿ ಇರಿಸುವುದು. ರಾಷ್ಟ್ರೀಯತೆಯೇ ನಮ್ಮ ಜೀವಾಳ.

ನ್ಯಾಯಾಂಗ ಸ್ವತಂತ್ರ ಎಂಬುದು ನಮ್ಮ ಸಂವಿಧಾನದ ಮೂಲ ಸ್ವರೂಪಗಳಲ್ಲಿ ಒಂದು. ನ್ಯಾಯಾಂಗ ಎಂದೆಂದಿಗೂ ಸ್ವತಂತ್ರವಾಗಿಯೇ ಇರಬೇಕು. ಎಲ್ಲರ ಹಕ್ಕುಗಳನ್ನೂ ರಕ್ಷಿಸಬೇಕು. ನ್ಯಾಯಾಂಗವೇ ಕಾನೂನುಗಳನ್ನು ರೂಪಿಸುವುದು ವ್ಯಾಪ್ತಿ ಮೀರಿದ ಕೆಲಸ. ಅದು ನ್ಯಾಯಾಂಗ ಮತ್ತು ಸಂಸತ್ತಿನ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಅದು ಮೂಲ ತತ್ವಗಳಿಗೆ ವಿರುದ್ಧ. ನ್ಯಾಯಾಂಗ ಯಾವ ಸಂದರ್ಭದಲ್ಲೂ ಕಾನೂನು ನಿರ್ಮಾತೃವಿನ ಕೆಲಸ ಮಾಡಬಾರದು. ಹಾಗೆ ಮಾಡುವುದು ಸಾಂವಿಧಾನಿಕ ವ್ಯವಸ್ಥೆಗೆ ಧಕ್ಕೆ ತರುವಂಥ ಕೆಲಸ. ಆತ್ಮಸಾಕ್ಷಿ ಅರ್ಥಪೂರ್ಣವಾಗಿ ಇರಬೇಕು.

ಲೇಖಕ: ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.