ADVERTISEMENT

ಮೈತ್ರಿಯ ಒಲವುಗಳು: ಕೆಲವು ಪ್ರಶ್ನೆಗಳು

ಎ.ಆರ್‌.ವಾಸವಿ
Published 5 ಜುಲೈ 2018, 20:16 IST
Last Updated 5 ಜುಲೈ 2018, 20:16 IST
ಎ.ಆರ್‌. ವಾಸವಿ, ಸಾಮಾಜಿಕ ಮಾನವಶಾಸ್ತ್ರಜ್ಞೆ
ಎ.ಆರ್‌. ವಾಸವಿ, ಸಾಮಾಜಿಕ ಮಾನವಶಾಸ್ತ್ರಜ್ಞೆ   

ಈ ಬಾರಿಯ ಬಜೆಟ್ ಮೈತ್ರಿ ಸರ್ಕಾರದ ಒಲವುಗಳು ಮತ್ತು ಆಸಕ್ತಿಯನ್ನು ಪ್ರತಿಬಿಂಬಿಸುತ್ತಿದೆ.

ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನಿರ್ಮಾಣ ಕಾಮಗಾರಿಗಳ ಗುತ್ತಿಗೆದಾರರ ಲಾಬಿ, ರೈತರು ಮತ್ತು ಜಾತಿ ಸಂಘಟನೆಗಳ ಜನಪ್ರಿಯ ಬೇಡಿಕೆಗಳಿಗೆ ಪ್ರಾಥಮಿಕವಾಗಿ ಸ್ಪಂದಿಸುತ್ತಿದೆ ಪರಿಣಾಮವಾಗಿ ಮೇಲ್ಸೇತುವೆಗಳು, ಸಿನಿಮಾ ನಗರಿಯಂಥ ಭಾರೀ ಕಾಮಗಾರಿಗಳು, ರೈತರ ಸಾಲ ಮನ್ನಾ ಹಾಗೂ ಆ ಬಗೆಯ ತಥಾಕಥಿತ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಹಣ ದೊರೆತಿದೆ.

ಬಜೆಟ್‌ನ ಒಟ್ಟಾರೆ ಒಲವನ್ನು ಗಮನದಲ್ಲಿಟ್ಟುಕೊಂಡು ಕೆಲವು ಮುಖ್ಯ ಪ್ರಶ್ನೆಗಳನ್ನು ಎತ್ತಲೇ ಬೇಕಾದ ಅನಿವಾರ್ಯತೆ ಇದೆ. ನಿರ್ದಿಷ್ಟ ಕ್ಷೇತ್ರಗಳಿಗಷ್ಟೇ ಹೆಚ್ಚಿನ ಹಣ ಹರಿದಿರುವುದರ ತರ್ಕವನ್ನು ಪ್ರಶ್ನಿಸುವಾಗಲೇ ಕೆಲ ಕ್ಷೇತ್ರಗಳನ್ನು ಸಂಪೂರ್ಣವಾಗಿ ಮರೆತಿರುವುದರ ಅರ್ಥವೇನು ಎಂದು ಕೇಳಬೇಕಿದೆ.

ADVERTISEMENT

1.ಸಣ್ಣ ರೈತರು ಮತ್ತು ಭೂರಹಿತ ಕೃಷಿ ಕಾರ್ಮಿಕರಿಗೆ ಸಾಂಸ್ಥಿಕ ಸಾಲ ಸೌಲಭ್ಯ ಪಡೆಯುವ ಅವಕಾಶವೇ ಇಲ್ಲ. ಅವರು ಹೇಗೆ ಬದುಕುತ್ತಿದ್ದಾರೆ ಎಂಬುದನ್ನು ನೋಡಬೇಡವೇ? ಅವರು ಈ ಮೈತ್ರಿ ಸರ್ಕಾರದ ಮಟ್ಟಿಗೆ ‘ರೈತ ಬಾಂಧವ’ರೇ ಅಲ್ಲವೇ?

2.ವರ್ಷದಿಂದ ವರ್ಷಕ್ಕೆ ಪಾಳು ಬಿಟ್ಟಿರುವ ಕೃಷಿ ಭೂಮಿಯ ಪ್ರಮಾಣ ಹೆಚ್ಚಾಗುತ್ತಿದೆ. ಅಂದರೆ ಭೂಮಿ ಇರುವ ರೈತರೂ ಬೇಸಾಯ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಅವರು ಮತ್ತೆ ಸಾಗುವಳಿಗೆ ಮುಂದಾಗುವಂತೆ ಮಾಡಲು ಏನು ಮಾಡಲಾಗಿದೆ?

3. ಸಾಲ ಮನ್ನಾದಿಂದ ಯಾರಿಗೆ ಪ್ರಯೋಜನವಾಗುತ್ತಿದೆ? ಇದು ಅವರ ಬದುಕನ್ನು ಹಸನುಗೊಳಿಸಲು ಅಥವಾ ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಗೆ ಕಾರಣವಾಗುತ್ತದೆಯೇ?

4. ಸದ್ಯದ ಮಟ್ಟಿಗೆ ಕೃಷಿ ಕ್ಷೇತ್ರದ ಮುಖ್ಯ ಲಕ್ಷಣದಂತೆ ಕಾಣಿಸುತ್ತಿರುವ ಮಣ್ಣಿನ ಸವಕಳಿ, ಬೆಳೆಗೆ ಬಾಧಿಸುವ ರೋಗಗಳು ಮತ್ತು ಕೃಷಿ ಉತ್ಪನ್ನಗಳ ಬೆಲೆ ಕುಸಿತವನ್ನು ನಿಯಂತ್ರಿಸುವುದಕ್ಕೆ ಎಷ್ಟು ಹಣ ನೀಡಲಾಗಿದೆ?

5.ಪ್ರವಾಹ, ಬರ, ದೂಳಿನ ಪ್ರಳಯ, ಮಳೆಯ ಪ್ರಮಾಣ ಮತ್ತು ಕಾಲಮಾನಗಳೆರಡರಲ್ಲೂ ಆಗಿರುವ ಬದಲಾವಣೆ ಹಾಗೂ ಹೆಚ್ಚುತ್ತಿರುವ ತಾಪಮಾನದ ಪರಿಣಾಮ ರಾಜ್ಯವ್ಯಾಪಿಯಾಗಿ ಕಾಣಿಸಿಕೊಂಡಿದೆ. ಈ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸುವುದಕ್ಕೆ ಬಜೆಟ್‌ನಲ್ಲಿ ಏನಾದರೂ ಇದೆಯೇ?

6.ಇನ್ನಷ್ಟು ಮೇಲ್ಸೇತುವೆಗಳನ್ನು ನಿರ್ಮಿಸುವುದರಿಂದ ಈಗಾಗಲೇ ವಾಹನ ನಿಬಿಢವಾಗಿರುವ ಬೆಂಗಳೂರಿನ ಸಮಸ್ಯೆಗಳಿಗೆ ಯಾವ ಪರಿಹಾರ ದೊರೆಯುತ್ತದೆ? ವಾಹನಗಳಿಂದ ಉಂಟಾಗುತ್ತಿರುವ ಮಾಲಿನ್ಯಕ್ಕೇನು ಪರಿಹಾರ?

7.ವಿಧವೆಯರು, ವೃದ್ಧರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಒದಗಿಸಲಾಗಿರುವ ಸಂಪನ್ಮೂಲವನ್ನು ಅರ್ಹರಿಗೆ ಪರಿಣಾಮಕಾರಿಯಾಗಿ ವಿತರಿಸುವ ಮಾರ್ಗಗಳೇನು? ಇದು ಕಲ್ಯಾಣ ಕಾರ್ಯಕ್ರಮಗಳಿಗೇ ಮೀಸಲಾಗಿರುವ ಅಧಿಕಾರಶಾಹಿಯೊಂದು ವಿಸ್ತಾರಗೊಳ್ಳುವುದಕ್ಕೆ ಕಾರಣವಾಗಲಾರದೆ?

8. ಬಯೋಮೆಟ್ರಿಕ್ಸ್, ಆಂಗ್ಲಮಾಧ್ಯಮ ಶಾಲೆಗಳು ಮತ್ತು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸುವುದರಿಂದ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದಕ್ಕೆ ಸಾಧ್ಯವೇ?

9.ಯುವಕರಲ್ಲಿ ಕೌಶಲಾಭಿವೃದ್ಧಿಯ ಉದ್ದೇಶ ‘ಕರ್ನಾಟಕವನ್ನು ವಿದೇಶಿ ಉದ್ಯೋದ ಆದ್ಯತಾ ರಾಜ್ಯ’ವನ್ನಾಗಿ ಮಾಡುವುದೇ ಆಗಿದ್ದರೆ ಕರ್ನಾಟಕದ ‘ಚೀನಾ ಕನಸ’ನ್ನು ಸಾಕಾರಗೊಳಿಸುವುದಕ್ಕೆ ಬೇಕಿರುವ ಕೌಶಲ ಹೊಂದಿದ ಉದ್ಯೋಗಿಗಳನ್ನು ಎಲ್ಲಿಂದ ತರುವುದು?

10.ಜಿಲ್ಲಾವಾರು ವಿಶೇಷ ಉತ್ಪಾದನಾ ವಲಯಗಳನ್ನು ರೂಪಿಸಿ ಕರ್ನಾಟಕವನ್ನು ‘ಹೊಸ ಚೀನಾ’ ಆಗಿ ಅಭಿವೃದ್ಧಿಪಡಿಸುವ ಗುರಿ ಇದ್ದರೆ ಅದಕ್ಕೆ ಬೇಕಾಗಿರುವ ಭೂಸ್ವಾಧೀನ ಹೇಗಿರುತ್ತದೆ? ಉತ್ಪಾದನಾ ಮಾದರಿಗಳು ಯಾವುವು? ಕಾರ್ಮಿಕರ ಹಿತ ಕಾಯುವ ಕಾನೂನುಗಳು ಯಾವುವು?

11 ಜಾತಿ ಸಂಘಟನೆಗಳಿಗೆ ಹಣವನ್ನು ಒದಗಿಸುವುದು ಆಯಾ ಜಾತಿಗಳಿಗೆ ಸೇರಿದವರ ಕಲ್ಯಾಣಕ್ಕೆ ಹೇಗೆ ಕಾರಣವಾಗುತ್ತದೆ?

12.ಘೋಷಿಸಿರುವಂತೆ ‘ಪ್ರತಿಯೊಬ್ಬನೂ ಒಂದು ಮರ ನೆಟ್ಟರೆ, ಪ್ರತೀ ಹಳ್ಳಿಯಲ್ಲೊಂದು ತೋಪು ಮತ್ತು ಪ್ರತೀ ಜಿಲ್ಲೆಯಲ್ಲೊಂದು ಅರಣ್ಯ’ ಸಾಧ್ಯವಾಗುವುದಾದರೆ ಅದಕ್ಕೆ ಕೇವಲ 10 ಕೋಟಿ ರೂಪಾಯಿಗಳ ಅನುದಾನ ಸಾಕೇ?

13.ಕೃಷ್ಣರಾಜ ಸಾಗರದ ‘ಬೃಂದಾವನ’ವನ್ನು ‘ಡಿಸ್ನಿಲ್ಯಾಂಡ್’ ಆಗಿ ಪರಿವರ್ತಿಸುವುದೇ ಆದರೆ ಮಿಕಿ ಮೌಸ್ ಮತ್ತು ಡೊನಾಲ್ಡ್ ಡಕ್ ಬದಲಿಗೆ ಅಲ್ಲಿ ನಮ್ಮ ಪಂಚತಂತ್ರದ ಪಾತ್ರಗಳಿರುತ್ತವೆಯೇ?

14 ಈ ಬಜೆಟ್ ಮೈತ್ರಿಕೂಟದ ಪಾಲುದಾರರ ಕನಸು ಮತ್ತು ಕಾಣ್ಕೆಯ ಫಲವಾಗಿದೆಯೆಂದು ಹೇಳಲಾಗಿದೆ. ಅಂದರೆ ರಾಮನಗರದಲ್ಲಿ ನಿರ್ಮಿಸಲಾಗುವ ‘ಚಲನಚಿತ್ರ ವಿಶ್ವವಿದ್ಯಾಲಯ’ದಲ್ಲಿ ಈ ಕನಸು, ಕಾಣ್ಕೆಗಳು ಅದರ ಮುಖ್ಯ ಪಾತ್ರಧಾರಿಗಳ ಮೂಲಕ ಸಾಕಾರಗೊಳ್ಳುತ್ತದೆಯೇ?

15ವೇಳೆಗೆ ಬೆಂಗಳೂರು ವಾಸಿಸುವುದಕ್ಕೆ ಅಯೋಗ್ಯವಾಗಿ ನಗರವಾಗುವುದರಿಂದ ರಾಮನಗರ ಕರ್ನಾಟಕದ ಹೊಸ ರಾಜಧಾನಿಯಾಗುತ್ತದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.