ADVERTISEMENT

ಯೋಗೇಂದ್ರ ಯಾದವ್ ಅವರ ವಿಶ್ಲೇಷಣೆ: ಭಾರತ.. ಒಂದಾನೊಂದು ಕಾಲದಲ್ಲಿ!

ಯೋಗೇಂದ್ರ ಯಾದವ್
Published 6 ಮೇ 2025, 23:48 IST
Last Updated 6 ಮೇ 2025, 23:48 IST
<div class="paragraphs"><p>ಯೋಗೇಂದ್ರ ಯಾದವ್ ಅವರ ವಿಶ್ಲೇಷಣೆ: ಭಾರತ.. ಒಂದಾನೊಂದು ಕಾಲದಲ್ಲಿ!</p></div>

ಯೋಗೇಂದ್ರ ಯಾದವ್ ಅವರ ವಿಶ್ಲೇಷಣೆ: ಭಾರತ.. ಒಂದಾನೊಂದು ಕಾಲದಲ್ಲಿ!

   

ಅಗತ್ಯ ಇಲ್ಲದಲ್ಲಿ ಮೂಗು ತೂರಿಸುವುದನ್ನು ಬಿಟ್ಟುಬಿಟ್ಟರೆ ನೀವು ಇನ್ನೂ ಹೆಚ್ಚಿನದನ್ನು ಕಾಣಲು ಸಾಧ್ಯ. ಗೋಪಾಲಕೃಷ್ಣ ಗಾಂಧಿ ಅವರು ಸ್ವತಂತ್ರ ಭಾರತದ ಇತಿಹಾಸದ ಕುರಿತು ರಚಿಸಿರುವ ‘ದಿ ಅನ್‌ಡೈಯಿಂಗ್‌ ಲೈಟ್‌’ ಎಂಬ ಕೃತಿಯನ್ನು ಓದಿ ಮುಗಿಸಿದಾಗ ನನಗೆ ಹಾಗೆ ಅನ್ನಿಸಿತು. ದೊಡ್ಡ ಮತ್ತು ಸಣ್ಣ ಪ್ರಕರಣಗಳು, ರಾಷ್ಟ್ರೀಯ ಮತ್ತು ಕೌಟುಂಬಿಕ ನಾಟಕಗಳೆಲ್ಲವನ್ನೂ ತಮ್ಮನ್ನು ಅದರ ಕೇಂದ್ರದಲ್ಲಿ ಇರಿಸಿಕೊಳ್ಳದೆಯೇ ದಾಖಲಿಸುವುದು ಸಣ್ಣ ಸಾಧನೆ ಏನಲ್ಲ. 

ಸ್ವ ಎಂಬುದನ್ನು ಮೀರಿ ನಿಲ್ಲುವುದು ಮೋಹಕವಾದ ವೈಯಕ್ತಿಕ ಸದ್ಗುಣವಷ್ಟೇ ಅಲ್ಲ, ಗೋಪಾಲಕೃಷ್ಣ ಅವರಿಗೆ ಇದು ದೂರದಲ್ಲೇ ನಿಂತು ಇತಿಹಾಸವನ್ನು ಓದುವ ಮತ್ತು ನೋಡುವ ವಿಧಾನ. ನಿಜ ಹೇಳಬೇಕೆಂದರೆ, ಗೋಪಾಲಕೃಷ್ಣ ಅವರದ್ದು ಸ್ವತಂತ್ರ ಭಾರತದ ವಸ್ತುನಿಷ್ಠ ಇತಿಹಾಸವನ್ನು ಕಟ್ಟಿಕೊಡುವ ಪ್ರಯತ್ನ ಅಲ್ಲ. ಇಲ್ಲಿ ಹೊಸ ಹೊಸ ಆಕರಗಳಿಲ್ಲ, ಭಾವೋನ್ಮಾದಕ್ಕೆ ಕಾರಣವಾಗಬಲ್ಲ ಹೊಸ ಸಂಗತಿಗಳಿಲ್ಲ. ಇತಿಹಾಸದ ಹೊಸ ಸಿದ್ಧಾಂತವನ್ನು ಕಟ್ಟಿಕೊಡುವ ಪ್ರಯತ್ನವೂ ಇಲ್ಲಿ ಇಲ್ಲ. ಇದು ಆತ್ಮಚರಿತ್ರೆಯೂ ಅಲ್ಲ. ಪುಸ್ತಕವೇ ಹೇಳುವಂತೆ, ಇದೊಂದು ವೈಯಕ್ತಿಕ  ಇತಿಹಾಸ. ವ್ಯಕ್ತಿಯೊಬ್ಬ ಕಂಡಂತೆ ಹಿಂದಿನ 80 ವರ್ಷಗಳ ಇತಿಹಾಸ. ಭಾರತೀಯನೊಬ್ಬನ ಬದುಕು ಮತ್ತು ಮನಸ್ಸಿನ ಮುಂದೆ ಸ್ವತಂತ್ರ ಭಾರತದಲ್ಲಿ ದೊಡ್ಡ ದೊಡ್ಡ ಪ್ರಕರಣಗಳು ಹೇಗೆ ತೆರೆದುಕೊಂಡವು ಎಂಬುದರ ಕತೆ ಇದು. 

ADVERTISEMENT

ಗೋಪಾಲಕೃಷ್ಣ ಗಾಂಧಿ ಅಪರಿಚಿತ ವ್ಯಕ್ತಿಯೇನೂ ಅಲ್ಲ. ಒಂದು ವೇಳೆ ನಿಮ್ಮ ತಂದೆಯ ಅಜ್ಜ ರಾಷ್ಟ್ರಪಿತನಾಗಿ, ತಾಯಿಯ ಅಜ್ಜ ಭಾರತದ ಕೊನೆಯ ಗವರ್ನರ್‌ ಜನರಲ್‌ ಆಗಿದ್ದರೆ ಬಹುಶಃ ಅಪರಿಚಿತರಾಗಿ ಉಳಿಯುವುದು ನಿಮಗೆ ಸಾಧ್ಯವಿಲ್ಲ. ಗೋಪಾಲಕೃಷ್ಣ (ಮತ್ತು ಅವರ ಒಡಹುಟ್ಟಿದವರು ಕೂಡ) ಅವರ ಬಹುದೊಡ್ಡ ಸಾಧನೆ ಎಂದರೆ, ತಮ್ಮ ವಂಶ ಪರಂಪರೆಯನ್ನು ಅವರು ಸಹಜವಾಗಿ ಸ್ವೀಕರಿಸಿದ್ದಾರೆ. ತಮ್ಮ ವಂಶ ಪರಂಪರೆಯ ಕುರಿತು ಅವರು ಅಹಂ ತೋರಿದ್ದೂ ಇಲ್ಲ ಅದನ್ನೊಂದು ಶಿಲುಬೆಯಂತೆ ಹೊತ್ತದ್ದೂ ಇಲ್ಲ. ಹಾಗಿದ್ದರೂ ಅವರು ತಮ್ಮ ಉಪನಾಮವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಗಳಿಂದ ಈ ನಡವಳಿಕೆಯು ಅವರನ್ನು ರಕ್ಷಿಸಲಿಲ್ಲ. ಅನಾಮಧೇಯ ವ್ಯಕ್ತಿಯೊಬ್ಬ ತಮಗೆ ಬರೆದ ಪತ್ರದ ಮೂಲಕ ಅವರು ಇದನ್ನು ತೋರಿಸಿದ್ದಾರೆ: ‘ಗಾಂಧಿ ಎಂಬ ಚೆಕ್‌ ಅನ್ನು ನೀವು ಯಾವಾಗಲೂ ನಗದೀಕರಿಸಿಕೊಂಡಿದ್ದೀರಿ ಮತ್ತು ಆಯಕಟ್ಟಿನ ಹುದ್ದೆಗಳನ್ನು ಪಡೆದುಕೊಂಡಿದ್ದೀರಿ... ನೀವೊಬ್ಬ ಬಹಳ ಸಾಧಾರಣವಾದ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿ... ನಿಮಗೆ ಆತ್ಮಗೌರವವೇ ಇಲ್ಲವೇ?’

ಗೋಪಾಲಕೃಷ್ಣ ಅವರನ್ನು 2007ರಲ್ಲಿ ಮೊದಲ ಬಾರಿ ನಾನು ಎದುರಾದೆ.  ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿಯ ಹಿಂದಿನ ತರ್ಕ ಏನು ಎಂಬುದನ್ನು ವಿವರಿಸಿ ಲೇಖನವೊಂದನ್ನು ಬರೆದಿದ್ದೆ. ಕೆಲ ದಿನಗಳಲ್ಲಿ ರಾಜಭವನ, ಕೋಲ್ಕತ್ತ, ಪಶ್ಚಿಮ ಬಂಗಾಳ ಎಂಬ ವಿಳಾಸದಿಂದ ನನಗೆ ಪತ್ರವೊಂದು ಬಂದಿತು. ಅಚ್ಚುಕಟ್ಟಾದ ಕೈಬರಹದಲ್ಲಿ ನನ್ನ ವಿಳಾಸ ಬರೆಯಲಾಗಿತ್ತು. ಲಕೋಟೆಗೆ ಸಾಮಾನ್ಯ ಅಂಚೆ ಚೀಟಿಯನ್ನು ಅಂಟಿಸಲಾಗಿತ್ತು (ಆಗ ಅಧಿಕೃತ ಸಂವಹನಗಳಿಗೆ ಪ್ರತ್ಯೇಕವಾದ ಅಂಚೆ ಚೀಟಿಗಳಿದ್ದವು). ಲಕೋಟೆಯಲ್ಲಿ ರಾಜ್ಯಪಾಲರ ಲೆಟರ್‌ಹೆಡ್‌ನಲ್ಲಿ ಅದೇ ಅಚ್ಚುಕಟ್ಟಾದ ಕೈಬರಹದಲ್ಲಿ ನನ್ನ ಲೇಖನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಬಗ್ಗೆ ಇನ್ನಷ್ಟು ಸಂವಾದ ನಡೆಸಲು ಬಯಸುವುದಾಗಿ ಹೇಳಿದ್ದರು. 

ಬಹಳ ದಿನ ಇದು ನನ್ನನ್ನು ಕಾಡಿತು– ರಾಜ್ಯಪಾಲರೊಬ್ಬರು ಕೈಬರಹದಲ್ಲಿ ಪತ್ರವೊಂದನ್ನು ಬರೆಯುವುದು, ಲಕೋಟೆಯ ಮೇಲೆ ವಿಳಾಸವನ್ನು ಕೂಡ ಕೈಬರಹದಲ್ಲಿಯೇ ಬರೆಯುವುದು ನನ್ನಲ್ಲಿ ಅಚ್ಚರಿ ಮೂಡಿಸಿತ್ತು. ನನ್ನ ಪುಟ್ಟ ಕಚೇರಿಯಲ್ಲಿ ನಾನೇ ಕೈಬರಹದಲ್ಲಿ ಬರೆಯುವುದನ್ನು ಎಂದೋ ನಿಲ್ಲಿಸಿದ್ದೇನೆ. ಗೋಪಾಲಕೃಷ್ಣ ಅವರದ್ದು ಹವ್ಯಾಸ ಅಥವಾ ಅಭ್ಯಾಸವಷ್ಟೇ ಅಲ್ಲ, ಅದೊಂದು ಸಂಸ್ಕಾರ. 

ಗೋಪಾಲಕೃಷ್ಣ ಅವರ ಮೇಲೆ ಮಹಾತ್ಮ ಗಾಂಧಿಗಿಂತ (ಗಾಂಧಿ ಹತ್ಯೆಯಾದಾಗ ಗೋಪಾಲಕೃಷ್ಣ ಅವರಿಗೆ ಎರಡೂವರೆ ವರ್ಷ ವಯಸ್ಸು) ಹೆಚ್ಚು ಪ್ರಭಾವ ಬೀರಿದವರು ತಾಯಿಯ ಅಜ್ಜ ಸಿ. ರಾಜಗೋಪಾಲಾಚಾರಿ ಅಥವಾ ರಾಜಾಜಿ. ತಾವು ಅಜ್ಜನ ಪ್ರೀತಿಯ ಮೊಮ್ಮಗ ಎಂದು ಅವರೇ ಹೇಳಿಕೊಂಡದ್ದಿದೆ. ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ಸಿಗದೇ ಇದ್ದಾಗ ರಾಜಾಜಿ ತಮಿಳುನಾಡಿನ ಮುಖ್ಯಮಂತ್ರಿ ಆದ ರೀತಿ ಸಂಶಯಾಸ್ಪದ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ: ‘ಇದು ಪ್ರಜಾಸತ್ತಾತ್ಮಕ ಅಲ್ಲ, ನಾಮನಿರ್ದೇಶನದ ಮಾದರಿಯಲ್ಲಿ ಅಲ್ಲದೇ ಇದ್ದರೂ ಚುನಾವಣಾ ಫಲಿತಾಂಶ ಬಂದ ಬಳಿಕ ಯಾವ ರೀತಿ ಆಗಬೇಕಿತ್ತೋ ಆ ರೀತಿ ಆಗಲಿಲ್ಲ’. ತಮ್ಮ ಕುಟುಂಬದ ಕುರಿತು ಇರುವ ಮುಜುಗರದಾಯಕವಾದ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೂ ಅವರಿಗೆ ಯಾವ ಹಿಂಜರಿಕೆಯೂ ಇಲ್ಲ: ‘ನಮ್ಮ ಕುಟುಂಬಕ್ಕೆ ಹರಿಜನಸೇವೆಯ ಪ್ರಭಾವಳಿ  ಇದೆ. ಆದರೆ, ಆತ್ಮೀಯ ಗೆಳೆಯರ ಬಳಗದಲ್ಲಿ ದಲಿತರು ಒಬ್ಬರೂ ಇಲ್ಲ. ಮುಸ್ಲಿಂ, ಕ್ರೈಸ್ತ ಮತ್ತು ಸಿಖ್‌ ಗೆಳೆಯರಿದ್ದಾರೆ. ಅಮೆರಿಕದ ಕಪ್ಪು ವರ್ಣೀಯ ಗೆಳೆಯರಿದ್ದಾರೆ. ಜಗತ್ತಿನ ವಿವಿಧ ಭಾಗಗಳ ಯಹೂದಿ ಗೆಳೆಯರಿದ್ದಾರೆ. ಆದರೆ, ಭಾರತದ ಒಬ್ಬನೇ ಒಬ್ಬ ದಲಿತ ಇಲ್ಲ’.

ಈ ಕತೆಯು ಈ ಹಿಂದೆ ಪರಂಪರೆಯನ್ನು ಗೌರವಿಸುವ ನಾಯಕರು ಇದ್ದರು ಎಂಬುದನ್ನು ನೆನಪಿಸುತ್ತದೆ. ಕಮ್ಯುನಿಸ್ಟ್‌ ನಾಯಕ ಇ.ಎಂ.ಎಸ್‌ ನಂಬೂದಿರಿಪಾಡ್‌ ಅವರ ಸರ್ಕಾರವನ್ನು ನೆಹರೂ ಅವರು ನ್ಯಾಯಯುತವಲ್ಲದ ರೀತಿಯಲ್ಲಿ ವಜಾ ಮಾಡಿದ್ದರು. ಆದರೆ, ನೆಹರೂ ಸಾವಿನ ಬಳಿಕ ನಂಬೂದಿರಿಪಾಡ್‌ ಅವರು ಅವರ ಕುರಿತು ನಿರರ್ಗಳವಾಗಿ ಮಾತನಾಡಿದ್ದರು. 1962ರ ಚೀನಾ–ಭಾರತ ಯುದ್ಧದ ಬಳಿಕ ಸೇಂಟ್‌ ಸ್ಟೀಫನ್‌ ಕಾಲೇಜಿನಲ್ಲಿ ಮಾತನಾಡಿದ್ದ ಜಯಪ್ರಕಾಶ ನಾರಾಯಣ್‌ ಅವರು ‘ಏನಿದ್ದರೂ ಚೀನೀಯರು ನಮಗೆ ಏಷ್ಯಾದ ಗೆಳೆಯರು’ ಎಂದಿದ್ದರು. ಘನತೆಯ ರಾಜಕಾರಣ ಮಾಡಿದ ಮನಮೋಹನ್‌ ಸಿಂಗ್‌ ಅವರ ಕಾಲದವರೆಗೆ ಈ ಪರಂಪರೆ ಇತ್ತು ಎಂಬುದನ್ನು ಗೋಪಾಲಕೃಷ್ಣ ನೆನಪಿಸುತ್ತಾರೆ. 

ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು ಹೇಗೆ ವರ್ತಿಸಬೇಕು ಎಂಬ ಮಾದರಿ ಹಾಕಿಕೊಡುವ ಮೂಲಕ ಈ ಪರಂಪರೆಗೆ ಗೋಪಾಲಕೃಷ್ಣ ಅವರೂ ಕೊಡುಗೆ ನೀಡಿದ್ದಾರೆ. ರಾಜ್ಯಪಾಲರಾಗಿದ್ದಾಗ ನ್ಯಾಯಪರತೆ ಮತ್ತು ನಿರ್ಭೀತಿಯಿಂದ ಕೆಲಸ ಮಾಡಿದ್ದ ಅವರು ಸಾಂವಿಧಾನಿಕ ಮರ್ಯಾದೆಯನ್ನು ಎಂದೂ ಮೀರಿದವರಲ್ಲ. ನಂದಿಗ್ರಾಮ ಹೋರಾಟ ನಡೆಯುತ್ತಿದ್ದ ಪ್ರಕ್ಷುಬ್ಧ ಸಂದರ್ಭದಲ್ಲಿ ಅವರು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದರು. ನಂದಿಗ್ರಾಮದಲ್ಲಿ ನಡೆದ ಹತ್ಯೆಗಳಿಗೆ ಸರ್ಕಾರವೇ ಹೊಣೆ ಎಂಬ ಹೇಳಿಕೆ ನೀಡಿದ ನಾಲ್ಕನೇ ದಿನ ಗೋಪಾಲಕೃಷ್ಣ ಅವರು ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಅವರನ್ನು ಭೇಟಿಯಾದರು. ‘ನಿಮಗೆ ಬೇಕಿದ್ದರೆ ಕೇಂದ್ರಕ್ಕೆ ಹೇಳಿ ರಾಜ್ಯಪಾಲರನ್ನು ಬದಲಾಯಿಸಿಕೊಳ್ಳಿ’ ಎಂದು ಗೋಪಾಲಕೃಷ್ಣ ಅವರು ಬುದ್ಧದೇವ ಅವರಿಗೆ ಹೇಳುತ್ತಾರೆ. ಆಗ ಕೇಂದ್ರದ ಆಡಳಿತಾರೂಢ ಮೈತ್ರಿಕೂಟದಲ್ಲಿ ಎಡರಂಗವೂ ಇತ್ತು. ‘ನಾನು ಅಂತಹ ವ್ಯಕ್ತಿ ಅಲ್ಲ, ಅಂತಹುದನ್ನು ನಾನು ಯಾವತ್ತೂ ಮಾಡುವುದಿಲ್ಲ’ ಎಂದು ಬುದ್ಧದೇವ ಪ್ರತಿಕ್ರಿಯೆ ನೀಡುತ್ತಾರೆ. 

ಇತಿಹಾಸವು ಶ್ರೇಷ್ಠ ವ್ಯಕ್ತಿಗಳಿಂದಷ್ಟೇ ರೂಪುಗೊಳ್ಳುವುದಿಲ್ಲ, ಸಾಮಾನ್ಯ ಜನ ಅವರನ್ನು ಮೀರಿಸಬಲ್ಲರು ಎಂಬುದನ್ನೂ ಕೃತಿಯು ನೆನಪಿಸುತ್ತದೆ. 

ರಾಜಾಜಿ ಮಗಳು ನಮಗಿರಿ ಅವರಿಗೆ ಹೈದರಾಬಾದ್‌ ನಿಜಾಮ ವಜ್ರದ ಹಾರವೊಂದನ್ನು ಉಡುಗೊರೆಯಾಗಿ ಕೊಟ್ಟ ಕತೆಯೂ ಪುಸ್ತಕದಲ್ಲಿ ಇದೆ. ವಿಧವೆಯಾಗಿರುವ ಮಗಳು ಇಂತಹ ಹಾರವನ್ನು ಧರಿಸುವುದಿಲ್ಲ ಎಂದು ಹೇಳಿ ಉಡುಗೊರೆಯನ್ನು ರಾಜಾಜಿ ಹಿಂದಿರುಗಿಸುತ್ತಾರೆ. ‘ತಂದೆಯವರ ನಿರ್ಧಾರದ ಕುರಿತು ವಿಷಾದವೇನೂ ಇಲ್ಲ. ಆದರೆ, ವಿಧವೆ ಎಂಬುದನ್ನು ಇಲ್ಲಿ ಬಳಸಿಕೊಳ್ಳಬೇಕಾಗಿರಲಿಲ್ಲ. ಬದಲಿಗೆ, ನಾವು ಗಾಂಧೀಜಿಯ ಅನುಯಾಯಿಗಳು, ಇಂತಹ ದುಬಾರಿ ವಸ್ತು ಬಳಸುವುದಿಲ್ಲ ಎಂದು ಹೇಳಬಹುದಿತ್ತು’ ಎಂದು ಕೆಲವು ವರ್ಷಗಳ ಬಳಿಕ ನಮಗಿರಿ ಹೇಳುತ್ತಾರೆ. ‘ಶ್ರೇಷ್ಠ ವ್ಯಕ್ತಿಗಳ ಕುಟುಂಬಗಳಿಗೆ ಸೇರಿದ ಹೆಣ್ಣುಮಕ್ಕಳು ದ್ವಂದ್ವದ ಸಂದರ್ಭಗಳಲ್ಲಿ ತಮ್ಮ ಪೂರ್ವಜರನ್ನು ಮೀರಿಸಿಬಿಡಬಹುದು’ ಎಂದು ಗೋಪಾಲಕೃಷ್ಣ ಬರೆಯುತ್ತಾರೆ. 

ಈ ವಾರದಲ್ಲಿ ಓದಬಹುದಾದ ಇನ್ನೊಂದು ಕತೆ ಮಕ್ಬೂಲ್‌ ಶೇರ್ವಾನಿ ಹುತಾತ್ಮನಾದ ಸಂಗತಿಯದ್ದು– ‘ಇದು ಮತಾಂಧತೆಯ ಅತಿ ದೊಡ್ಡ ಸಂತ್ರಸ್ತ ಮತ್ತು ಮಾನವ ದಿಟ್ಟತನದ ಅತಿದೊಡ್ಡ ಸಂಕೇತದ ಕತೆ’. 1947ರಲ್ಲಿ ಪಾಕಿಸ್ತಾನದ ಸಶಸ್ತ್ರ ಪಡೆಗಳು ಕಾಶ್ಮೀರವನ್ನು ಆಕ್ರಮಿಸಲು ಆದಿವಾಸಿಗಳನ್ನು ಬಳಸಿಕೊಂಡಾಗ, ಶೇಖ್‌ ಅಬ್ದುಲ್ಲಾ ಅವರ ಅನುಯಾಯಿಯಾಗಿದ್ದ 19 ವರ್ಷದ ಮಕ್ಬೂಲ್‌ ಸ್ಥಳೀಯವಾಗಿ ಪ್ರತಿರೋಧವನ್ನು ಸಂಘಟಿಸುತ್ತಾರೆ. ಕೊನೆಗೂ ಅವರನ್ನು ಆಕ್ರಮಣಕಾರರು ಹಿಡಿಯುತ್ತಾರೆ. ಬಾರಾಮುಲ್ಲಾ ಚೌಕದಲ್ಲಿ ನಿಲ್ಲಿಸಿ ‘ಪಾಕಿಸ್ತಾನ ಜಿಂದಾಬಾದ್‌’ ಎಂದು ಕೂಗಲು ಹೇಳುತ್ತಾರೆ. 14 ಆದಿವಾಸಿಗಳು ಗುಂಡಿಕ್ಕುವ ಮೊದಲು ಶೇರ್ವಾನಿ ಹೇಳಿದ್ದು ‘ಹಿಂದೂ–ಮುಸ್ಲಿಂ ಒಗ್ಗಟ್ಟಿಗೆ ಜಯವಾಗಲಿ’ ಎಂದು. ‘ಹಿಂದೂ, ಸಿಖ್‌, ಮುಸ್ಲಿಂ ಅಥವಾ ಯಾರು ಬೇಕಿದ್ದರೂ ಹೆಮ್ಮೆ ಪಡಬಹುದಾದ ಹುತಾತ್ಮನ ಕತೆ ಇದು’ ಎಂದು ಶೇರ್ವಾನಿಯ ಸಾವನ್ನು ಗೋಪಾಲಕೃಷ್ಣ ಬಣ್ಣಿಸುತ್ತಾರೆ. 

ಕಾಶ್ಮೀರಿ ಅಸ್ಮಿತೆಗಾಗಿ ಇನ್ನೊಬ್ಬ ಧೈರ್ಯಶಾಲಿ ಪಹಲ್ಗಾಮ್‌ನಲ್ಲಿ ಜೀವ ತೆರುತ್ತಾರೆ. ಅವರೇ ಕುದುರೆ ಸವಾರಿ ಸೇವೆ ಒದಗಿಸುತ್ತಿದ್ದ 29 ವರ್ಷದ ಸಯ್ಯದ್‌ ಅದಿಲ್‌ ಹುಸೇನ್‌. ಉಗ್ರರು ದಾಳಿ ನಡೆಸಿದಾಗ ಅವರನ್ನು ತಡೆಯಲು ಯತ್ನಿಸಿದರು. ಕುದುರೆಯಲ್ಲಿ ತಾವು ಕರೆತಂದಿದ್ದವರನ್ನು ರಕ್ಷಿಸಲು ಯತ್ನಿಸಿ ಉಗ್ರರ ಗುಂಡಿಗೆ ಬಲಿಯಾದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.