ADVERTISEMENT

ಚುರುಮುರಿ: ಗ್ರೇಟ್ ಚೇಂಜ್

ಬಿ.ಎನ್.ಮಲ್ಲೇಶ್
Published 21 ಜುಲೈ 2022, 17:42 IST
Last Updated 21 ಜುಲೈ 2022, 17:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ರೀ... ನಾವೂ ಇಂಗ್ಲೆಂಡ್‌ಗೆ ಹೋಗಿ ಸೆಟ್ಲ್ ಆಗೋಣರೀ...’

ಮಡದಿ ಮಾತು ಕೇಳಿ ಚಕಿತಗೊಂಡ ತೆಪರೇಸಿ, ‘ಯಾಕೇ... ನಿನ್ನೆ ಇನ್ನೂ ಚೆನ್ನಾಗಿದ್ದೆ, ಇವತ್ತೇನಾಯ್ತು?’ ಎಂದ.

‘ನಿಮ್ ತಲೆ, ಪೇಪರ್ ನೋಡಿಲ್ವ? ಇನ್ಮೇಲೆ ಇಂಗ್ಲೆಂಡ್‌ನ ನಾವೇ ಆಳೋದು’.

ADVERTISEMENT

‘ಅಂದ್ರೆ?’

‘ನಮ್ ಸುಧಕ್ಕನ ಅಳಿಯ ರಿಷಿ ಅಂತ. ಅವರೇ ಮುಂದಿನ ಬ್ರಿಟನ್ ಪ್ರಧಾನಿ ಆಗೋದು...’

‘ಸುಧಕ್ಕ ಅಂದ್ರೆ... ಅದೇ ನಿಮ್ ದೊಡ್ಡಪ್ಪನ ಚಿಕ್ಕತ್ತೆಯ ಮೂರನೇ ಮಗನ ಹೆಂಡ್ತಿ ಇದ್ರಲ್ಲ ಅವರಾ?’

‘ನಂಗೆ ಸಿಟ್ ಬಂದ್ರೆ ಅಷ್ಟೆ... ಸುಧಕ್ಕ ಅಂದ್ರೆ ನಮ್ ಇನ್ಫೊಸಿಸ್ ಸುಧಕ್ಕ ಕಣ್ರಿ...’

‘ಓ... ಅವರಾ? ಸರಿ. ಅವರ ಅಳಿಯ ಫೈನಲ್ ಸುತ್ತಿಗೆ ಬಂದಿದಾರಂತೆ... ಇನ್ನೂ ಪ್ರಧಾನಿ ಆಗಿಲ್ವಲ್ಲ?’

‘ಆಗ್ತಾರೆ ಕಣ್ರಿ, ಇನ್ಮೇಲೆ ಅಮೆರಿಕ, ಇಂಗ್ಲೆಂಡ್ ಎಲ್ಲ ನಮ್ದೇ. ಅಮೆರಿಕದಲ್ಲಿ ಉಪಾಧ್ಯಕ್ಷೆ ಕಮಲಕ್ಕ ನಮ್ಮೋರು, ಇಂಗ್ಲೆಂಡ್‌ನಲ್ಲಿ ಪ್ರಧಾನಿನೇ ನಮ್ಮೋರು. ಇನ್ಮೇಲೆ ಇಂಡಿಯಾನೂ ಸೂರ್ಯ ಮುಳುಗದ ದೇಶ ಆಗುತ್ತೆ ನೋಡ್ತಿರಿ. ಸೋ... ನಾವೂ ಇಂಗ್ಲೆಂಡ್‌ಗೆ ಹೋಗ್ತಾ ಇದೀವಿ...’

‘ಅಲ್ಲಿ ಬಿಸಿಲು 40 ಡಿಗ್ರಿ ಅಂತ ಪೇಪರ್‌ನಲ್ಲಿ ಬಂದಿದೆ ಕಣೇ...’

‘ಬಿಸಿಲಾ? 50 ಡಿಗ್ರಿ ಆಗ್ಲಿ, ಹೋಗೋಣ. ಬ್ರಿಟಿಷ್‌ನೋರು ನೂರಾರು ವರ್ಷ ಭಾರತ ಆಳಿದ್ರು. ಈಗ ನಾವು ಇಂಗ್ಲೆಂಡ್ ಆಳೋ ಕಾಲ ಬಂದಿದೆ. ಎಂಥ ಚೇಂಜ್ ಅಲ್ವ?’

‘ಹೌದೌದು, ಗ್ರೇಟ್ ಚೇಂಜ್...!’

‘ಈಗ ಆ ಚೇಂಜ್ ನಮ್ಮನೇಲೂ ಆಗ್ಬೇಕು. ಇಷ್ಟು ದಿನ ನೀವು ಮನೆ ಅಧಿಕಾರ ನಡೆಸಿದ್ದು ಸಾಕು, ಇನ್ಮೇಲೆ ನಂಗೆ ಅಧಿಕಾರ ಬಿಟ್ಕೊಡಿ...’

‘ಆ... ಏನಂದೆ? ಯಾಕೋ ನಿನ್ನೆಯಿಂದ ಎರಡೂ ಕಿವಿ ಮುಚ್ಕಂಡಿದಾವೆ ಕಣೆ, ಡಾಕ್ಟರತ್ರ ಹೋಗ್ಬೇಕು...’ ಮೆಲ್ಲಗೆ ಮೇಲಕ್ಕೆದ್ದ ತೆಪರೇಸಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.