ADVERTISEMENT

ಪ್ಯಾರ್‌ಗೆ ಆಗ್ಬಿಟ್ಟೈತೆ!

ಗುರು ಪಿ.ಎಸ್‌
Published 10 ಏಪ್ರಿಲ್ 2019, 18:30 IST
Last Updated 10 ಏಪ್ರಿಲ್ 2019, 18:30 IST
   

‘ಭಾಯಿಯೋ, ಆ ಇಸ್ಲಾಮಾಬಾದ್ ಟೀಂ ಬಹೂತ್ ಡೇಂಜರಸ್... ಅವರು ದುಷ್ಟರು. ಕಾಲು ಕೆರೆದ್ಕೊಂಡ್ ಜಗಳಕ್ಕೆ ಬರ್ತಾರೆ. ಇನ್ಮುಂದೆ ಅವರ ಜೊತೆ ಮ್ಯಾಚ್ ಆಡೋದೇ ಬೇಡ’ ಕಣ್ಣು ಕೆಂಪಗೆ ಮಾಡ್ಕೊಂಡು ಹೇಳ್ದ ದೆಹಲಿ ಟೀಂ ಕಪ್ತಾನ.

‘ಹೌದಣ್ಣ... ನಮ್ ಏರಿಯಾ ಜನರಿಗೆ ಆ ಟೀಂ ಅಂದ್ರೆ ಆಗಲ್ಲ.. ಅವರ ಜೊತೆ ನಮ್ ದುಷ್ಮನಿ ಹೆಚ್ಚಾದಷ್ಟೂ ನಮ್ ಮಂದಿ ನಮ್ನ ಜಾಸ್ತಿ ಇಷ್ಟ ಪಡ್ತಾರೆ’ ಎಂದ ಉಪ ನಾಯಕ ವಿಜಿ.

‘ನಮ್ ಟೀಂ ಸ್ಟ್ರಾಂಗ್ ಆಗ್ಬೇಕಂದ್ರೆ ನಮ್ ಏರಿಯಾ ಜನ್ರ ಸಪೋರ್ಟ್ ಬೇಕೇ ಬೇಕು... ನಮ್ ಪಕ್ಕದ ರೋಡಲ್ಲಿರೋ ಅಮೇಥಿ ಟೀಂನವರು ಇಸ್ಲಾಮಾಬಾದ್ ಟೀಂಗೇ ಸಪೋರ್ಟ್ ಮಾಡ್ತಿದಾರೆ ಅಂತಾ ಜನ್ರಿಗೆ ಹೇಳಿಬಿಡೋಣ. ಇಸ್ಲಾಮಾಬಾದ್ ಮೇಲಿನ ಸಿಟ್ಟು ಅಮೇಥಿ ಕಡೆ ತಿರುಗಿದರೆ, ನಮಗೆ ಜಾಸ್ತಿ ಸಪೋರ್ಟ್ ಸಿಗುತ್ತೆ. ನಾವು ಮ್ಯಾಚ್ ಗೆಲ್ಲೋದು ಸುಲಭ ಆಗುತ್ತೆ’ ಕಣ್ಣು ಹೊಡೆದ ಕಪ್ತಾನ.

ADVERTISEMENT

ಮರುದಿನ, ಪೇಪರ್ ಕೈಲಿ ಹಿಡಿದು ಓಡಿ ಬಂದ ವಿಜಿ. ‘ಅಣ್ಣಾ, ಇದೇನಿದು ಇಸ್ಲಾಮಾಬಾದ್ ಟೀಂ ಕ್ಯಾಪ್ಟನ್‌ಗೆ ನಿಮ್ ಮೇಲೆ ಪ್ಯಾರ್‌ಗೆ ಆಗ್ಬಿಟ್ಟೈತೆ. ‘ಸೌಹಾರ್ದ ಪಂದ್ಯ’ ಆಡೋಕೆ, ಅಮೇಥಿಗಿಂತ ದೆಹಲಿ ಟೀಂ ಗೆದ್ರೆ ಚಂದ ಅಂತಾ ಹೇಳಿಕೆ ಕೊಟ್ಟಿದಾನೆ!’.

‘ಗೊತ್ತಾಯ್ತು. ಆ ಕ್ಯಾಪ್ಟನ್ ಮಾತು ಕೇಳ್ದಾಗಿಂದ ಖಾನಾ ಪೀನಾ ಸೇರ್ತಿಲ್ಲ, ನೀಂದ್ ಗೀಂದ್ ಬರ್ತಿಲ್ಲ ನಂಗೆ’ ತಲೆ ಮೇಲೆ ಕೈ ಹೊತ್ತು ಕೂತ ಕಪ್ತಾನ.

‘ಅಮೇಥಿ ಟೀಂನವರ ದಿಲ್ ಖುಷ್ ಆಗಿದೆಯಂತೆ, ಆ ಕ್ಯಾಪ್ಟನ್ ಮಾತು ಕೇಳಿ’ ಉರಿಯುವ ಬೆಂಕಿಗೆ ತುಪ್ಪ ಸುರಿದ ವಿಜಿ.

ಇಸ್ಲಾಮಾಬಾದ್ ಕ್ಯಾಪ್ಟನ್‌ಗೆ ಫೋನ್ ಮಾಡು.

‘ಥ್ಯಾಂಕ್ಸ್ ಹೇಳ್ತೀರಾ ಅಣ್ಣಾ?’.

‘ಇಲ್ಲ. ಸೌಹಾರ್ದದ ಮ್ಯಾಚ್‌ನ ವರ್ಲ್ಡ್ ಕಪ್ ಮುಗಿದ ಮೇಲೆ ಆಡೋಣ... ಸದ್ಯಕ್ಕೆ ನಿಮ್ಮನ್ನ, ನಿಮ್ಮ ಟೀಂನ ಕಂಡರೆ ನಮಗಾಗಲ್ಲ ಅಂತಾ ಹೇಳಿಕೆ ಕೊಡು ಅಂತಾ ರಿಕ್ವೆಸ್ಟ್ ಮಾಡ್ಕೋತೀನಿ. ಹೇಟ್ ಮಿ ಪ್ಲೀಸ್ ಅಂತೀನಿ!’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.