ಅವಧಿ ಪೂರ್ಣಗೊಳಿಸಲಿರುವ ರಾಜ್ಯದ ಇನ್ನೂರಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆಸುವ ಇರಾದೆ ರಾಜ್ಯ ಸರ್ಕಾರಕ್ಕೆ ಇದ್ದಂತೆ ಕಾಣುತ್ತಿಲ್ಲ. ಚುನಾವಣೆ ನಡೆಸಲು ಅಗತ್ಯವಾಗಿ ಬೇಕಾಗಿರುವ ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಒದಗಿಸಲು ಸರ್ಕಾರ ಮೀನ-ಮೇಷ ಎಣಿಸುತ್ತಿದೆ.
ಮೀಸಲಾತಿ ಪಟ್ಟಿ ನೀಡುವಂತೆ ಕೋರಿ ಆಯೋಗ ಆರು ತಿಂಗಳ ಹಿಂದೆಯೇ ಪತ್ರ ಬರೆದರೂ, ಸರ್ಕಾರ ಇದುವರೆಗೂ ಲಿಖಿತ ಉತ್ತರ ನೀಡಿಲ್ಲ. ಈ ನಿರಾಸಕ್ತಿಯ ಹಿಂದೆ ಚುನಾವಣೆ ಮುಂದೂಡುವ ಹುನ್ನಾರ ಅಡಗಿರಬಹುದು ಎಂಬ ಶಂಕೆ ಬಲಗೊಳ್ಳುವುದು ಸಹಜ. ಸರ್ಕಾರದ ವಿಳಂಬ ಧೋರಣೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಆಯೋಗ ಮುಂದಾಗಿದೆ. ನ್ಯಾಯಾಲಯದ ಮೊರೆ ಹೋಗುವುದು ಬಿಟ್ಟು, ಆಯೋಗಕ್ಕೆ ಅನ್ಯಮಾರ್ಗ ಇದ್ದಂತಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಯಾವುದೇ ಕಾರಣಕ್ಕೂ ಮುಂದೂಡಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ.
ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಿ ಹಲವು ಸಲ ಛೀಮಾರಿ ಹಾಕಿಸಿಕೊಂಡರೂ ಸರ್ಕಾರ ಪಾಠ ಕಲಿತಿಲ್ಲ ಎಂಬುದು ಪದೇ ಪದೇ ಸಾಬೀತಾಗಿದೆ. ಅಂತಹ ಪರಿಸ್ಥಿತಿ ಪುನಃ ತಲೆದೋರುವ ಎಲ್ಲ ಸಾಧ್ಯತೆ ಈಗ ಗೋಚರಿಸುತ್ತಿದೆ.
ಮೀಸಲಾತಿ ನಿಗದಿ ಮಾಡುವ ಹೊಣೆಗಾರಿಕೆ ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆಯದು. 2011ರ ಜನಗಣತಿ ವಿವರಗಳನ್ನು ಮುಂದಿನ ವರ್ಷದ ಮಾರ್ಚ್ ಒಳಗೆ ಒದಗಿಸಲು ಸಾಧ್ಯವಿಲ್ಲ ಎಂದು ಜನಗಣತಿ ನಿರ್ದೇಶನಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ 2001ರ ಜನಗಣತಿಯನ್ನು ಮಾನದಂಡ ವಾಗಿಸಿಕೊಂಡು ವಾರ್ಡ್‌ಗಳಿಗೆ ಮೀಸಲಾತಿಯನ್ನು ರೊಟೇಷನ್ ಆಧಾರದ ಮೇಲೆ ಈ ವರ್ಷದ ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ಆಯೋಗ ಕೋರಿತ್ತು.
ಆದರೆ, ಈ ಸಂಬಂಧ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವರ್ಷದಿಂದ ಚುನಾವಣಾ ತಯಾರಿ ನಡೆಸಿರುವ ಆಯೋಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸ್ಥಳೀಯ ಸಂಸ್ಥೆಗಳ ಅಧಿಕಾರ ಅವಧಿ ಮೊದಲೇ ನಿಗದಿಯಾಗಿರುತ್ತದೆ.
ವಾರ್ಡ್‌ವಾರು ಮೀಸಲಾತಿ ನಿಗದಿ ಸೇರಿದಂತೆ ಚುನಾವಣೆಗೆ ಪೂರಕವಾದ ಕಾರ್ಯಗಳನ್ನು ಮೊದಲೇ ಆರಂಭಿಸಿ ಚುನಾವಣೆಗಳನ್ನು ಸಕಾಲದಲ್ಲಿ ನಡೆಸಲು ಬೇಕಾದ ಭೂಮಿಕೆಯನ್ನು ಒದಗಿಸುವ ವಿಷಯದಲ್ಲಿ ಸರ್ಕಾರ ಸೋತಿದೆ. ಈ ವೈಫಲ್ಯದ ಹಿಂದೆ ರಾಜಕೀಯ ದುರುದ್ದೇಶ ಇರುವ ಸಾಧ್ಯತೆಗಳನ್ನು ತಳ್ಳಿ ಹಾಕಲಾಗದು. ವಿಧಾನಸಭಾ ಚುನಾವಣೆ ಬಾಗಿಲು ಬಡಿಯುತ್ತಿದೆ. ಈ ಹಂತದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿದರೆ ಅದನ್ನು ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಪರಿಗಣಿಸುವ ಸಂಭವವೇ ಹೆಚ್ಚು.
ಅಂತಃಕಲಹದಲ್ಲಿ ಮುಳುಗಿರುವ ಆಡಳಿತಾರೂಢ ಬಿಜೆಪಿಗೆ ವಿಶ್ವಾಸ ಕೊರತೆ ಇದ್ದಂತಿದೆ. ತಕ್ಕಡಿ ಏರುಪೇರಾದರೆ ಅದು ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎಂಬ ಅಳುಕು ಆ ಪಕ್ಷವನ್ನು ಕಾಡುತ್ತಿರಬಹುದು. ಆಡಳಿತ ಪಕ್ಷಕ್ಕೆ ಆಗುವ ಲಾಭ-ನಷ್ಟದ ಲೆಕ್ಕಾಚಾರ ಏನೇ ಇರಲಿ; ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಕ್ರಮ ಸಂವಿಧಾನಕ್ಕೆ ವಿರುದ್ಧವಾದುದು. ಯಾವುದೇ ಚುನಾವಣೆ, ಆಳುವ ಪಕ್ಷದ ಮರ್ಜಿಗೆ ಒಳಗಾಗಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.