ಅತ್ಯಾಚಾರ ಪ್ರಕರಣಗಳಲ್ಲಿ ಸೂಕ್ತ ಸಾಕ್ಷ್ಯಗಳಿಲ್ಲದೆ ಆರೋಪಿಗಳು ಬಿಡುಗಡೆ ಆಗುವಂತಹ ನಿದರ್ಶನಗಳು ಹೇರಳವಾಗಿವೆ. ಇದಕ್ಕೆ ಮುಖ್ಯ ಕಾರಣ ಅತ್ಯಾಚಾರಕ್ಕೆ ಸಂಬಂಧಿಸಿದ ಸೂಕ್ತ ರೀತಿಯ ವೈದ್ಯಕೀಯ ಸಾಕ್ಷ್ಯ ಸಂಗ್ರಹಿಸುವಲ್ಲಿನ ವೈಫಲ್ಯ. ಅದೂ ಈ ಸಾಕ್ಷ್ಯ ಸಂಗ್ರಹಕ್ಕಾಗಿ ಅತ್ಯಾಚಾರಕ್ಕೊಳಗಾದ ಮಹಿಳೆಯರು ಒಳಗಾಗಬೇಕಾದ ವೈದ್ಯಕೀಯ ಪರೀಕ್ಷೆಗಳಂತೂ ಓಬೀರಾಯನ ಕಾಲದ್ದು ಹಾಗೂ ಅವೈಜ್ಞಾನಿಕವಾದದ್ದು. ಇವುಗಳಲ್ಲಿ ಎರಡು ಬೆರಳು ಪರೀಕ್ಷೆಯಂತೂ (ಟೂ ಫಿಂಗರ್ ಟೆಸ್ಟ್ –ಟಿಎಫ್‌ಟಿ) ಅಮಾನವೀಯವಾದದ್ದು.
ಈಗ ಈ ಪರೀಕ್ಷೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಅತ್ಯಾಚಾರ ಸಂತ್ರಸ್ತರ ವೈದ್ಯಕೀಯ ಹಾಗೂ ವಿಧಿವಿಜ್ಞಾನ ಪರೀಕ್ಷೆಗಳನ್ನು ನಡೆಸಲು ಅಗತ್ಯ ಉಪಕರಣಗಳನ್ನು ಒಳಗೊಂಡ ಪ್ರತ್ಯೇಕ ಕೋಣೆ ಇರಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೊಸ ಮಾರ್ಗದರ್ಶಿ ಸೂತ್ರಗಳು ಹೇಳಿವೆ. 2011ರಲ್ಲೇ ಮಹಾರಾಷ್ಟ್ರ ಸರ್ಕಾರ ಈ ಎರಡು ಬೆರಳಿನ ಪರೀಕ್ಷೆಯನ್ನು ನಿಷೇಧಿಸಿತ್ತು. ಅತ್ಯಾಚಾರ ಸಂತ್ರಸ್ತೆಯ ಮೇಲೆ ನಡೆಸಲಾಗುವ ‘ಎರಡನೇ ಲೈಂಗಿಕ ಹಲ್ಲೆ’ ಎಂದು ಬಣ್ಣಿಸಲಾಗುವ ಈ ಪರೀಕ್ಷೆಯನ್ನು ನಿಷೇಧಿಸಲು ತಡವಾಗಿಯಾದರೂ ಕೇಂದ್ರ ಮುಂದಾದದ್ದು ಸ್ವಾಗತಾರ್ಹ.
ಮಹಿಳೆಯ ಲೈಂಗಿಕ ಬದುಕಿನ ಇತಿಹಾಸ ಅರಿತುಕೊಳ್ಳಲು ನಡೆಸಲಾಗುತ್ತಿದ್ದ ಈ ಪರೀಕ್ಷೆ ಅಮಾನವೀಯವಷ್ಟೇ ಅಲ್ಲ. ಮಹಿಳೆಯನ್ನು ಅವಮಾನಿಸುವಂತಹದ್ದೂ ಆಗಿತ್ತು. ಭಾರತೀಯ ಸಾಕ್ಷ್ಯ ಕಾಯಿದೆಗೆ 2002ರಲ್ಲಿಯೇ ತಿದ್ದುಪಡಿಯಾಗಿದೆ. ಈ ಪ್ರಕಾರ, ಅತ್ಯಾಚಾರ ಸಂತ್ರಸ್ತೆಯ ಈ ಹಿಂದಿನ ಲೈಂಗಿಕ ಬದುಕಿನ ಕುರಿತಾಗಿ ಪ್ರಸ್ತಾಪ ಮಾಡುವುದನ್ನು ನಿಷೇಧಿಸಲಾಗಿದೆ. 2003ರಲ್ಲಿ ಸುಪ್ರೀಂಕೋರ್ಟ್ ಸಹ ಇಂತಹ ಪರೀಕ್ಷೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿತ್ತು.
ಅತ್ಯಾಚಾರದಿಂದಾಗುವ ಮಾನಸಿಕ ಹಾಗೂ ಸಾಮಾಜಿಕ ಪರಿಣಾಮಗಳನ್ನು ನಿರ್ವಹಿಸಬೇಕಾದ ಅಗತ್ಯವನ್ನು ಸರ್ಕಾರ ಕಡೆಗೂ ಮನಗಂಡಿದೆ ಎಂಬುದೇ ಸಮಾಧಾನ. ಅತ್ಯಾಚಾರ ಸಂತ್ರಸ್ತೆಯ ವಿಧಿ ವಿಜ್ಞಾನ, ವೈದ್ಯಕೀಯ ಪರೀಕ್ಷೆಗಾಗಿ ಪ್ರತ್ಯೇಕ ಕೊಠಡಿ ಮೀಸಲಿರಿಸುವುದು ಕೇಂದ್ರದ ಹೊರಡಿಸಿರುವ ಹೊಸ ಮಾರ್ಗದರ್ಶಿಸೂತ್ರಗಳ ಪ್ರಕಾರ ಈಗ ಕಡ್ಡಾಯ. ಲೈಂಗಿಕ ಹಿಂಸಾಚಾರದಿಂದ ಕುಗ್ಗಿದವರನ್ನು ಮತ್ತಷ್ಟು ಅವಮಾನಿಸದೆ ಘನತೆಯಿಂದ ನಡೆಸಿಕೊಳ್ಳಬೇಕೆಂಬ ಆಶಯ ಇಲ್ಲಿ ವ್ಯಕ್ತಪಡಿಸಲಾಗಿದೆ.
ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಇದು ಅನುಷ್ಠಾನವಾಗಬೇಕಿದೆ. ಆದರೆ ಆಸ್ಪತ್ರೆಗಳಲ್ಲಿನ ಮೂಲಸೌಕರ್ಯಗಳು ಆ ಮಟ್ಟಿಗೆ ಸಜ್ಜುಗೊಂಡಿವೆಯೇ ಎಂಬುದು ಪ್ರಶ್ನೆ. ಈ ಬಗ್ಗೆ ಸರ್ಕಾರ ಮೊದಲು ಗಮನಹರಿಸಬೇಕು. ಅತ್ಯಾಚಾರದಂತಹ ಅಪರಾಧಗಳನ್ನು ನಿರ್ವಹಿಸುವಲ್ಲಿ ಆಸ್ಪತ್ರೆಗಳಲ್ಲಿನ ಆರೋಗ್ಯ ಸಿಬ್ಬಂದಿಗೂ ಸಂವೇದನಾಶೀಲತೆಯ ತರಬೇತಿ ಅಗತ್ಯ. ಏಕೆಂದರೆ ಸಂತ್ರಸ್ತೆಗೆ ಆಪ್ತ ಸಲಹೆ, ಸಾಮಾಜಿಕ ಬೆಂಬಲ ಒದಗಿಸಬೇಕು. ಈ ಸುಧಾರಣೆ ಜಾರಿಗೆ ತರಲು ಬದ್ಧತೆ ಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.