ಈಜಿಪ್ಟ್‌ನ ಪದಚ್ಯುತ ಅಧ್ಯಕ್ಷ ಹೋಸ್ನಿ ಮುಬಾರಕ್ ಮತ್ತು ಅವರ ಸರ್ಕಾರದಲ್ಲಿ ಆಂತರಿಕ ಭದ್ರತಾ ಸಚಿವರಾಗಿದ್ದ ಹಬಿದ್ ಅಲ್ ಅಡ್ಲಿ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಅರಬ್ ಆಡಳಿತಗಾರರೊಬ್ಬರ ವಿರುದ್ದದ ಆರೋಪಗಳ ಬಗ್ಗೆ ನ್ಯಾಯಾಲಯ ತನಿಖೆ ನಡೆಸಿ ಶಿಕ್ಷೆ ವಿಧಿಸಿರುವುದು ಇದೇ ಮೊದಲ ಬಾರಿ. ಆದರೆ ಈ ಶಿಕ್ಷೆಯ ಬಗ್ಗೆ ಅಸಮಾಧಾನಗೊಂಡ ಜನ ಬೀದಿಗಿಳಿದಿರುವುದನ್ನು ನೋಡಿದರೆ ನ್ಯಾಯಾಲಯದ ತೀರ್ಪಿನಿಂದ ಮುಬಾರಕ್ ವಿರುದ್ದದ ಜನಾಂದೋಲನ ಕೊನೆಗೊಂಡಿದೆ ಎಂದು ಹೇಳಲಾಗದು.
ಕಳೆದ ವರ್ಷದ ಜನವರಿಯಲ್ಲಿ ಹೋಸ್ನಿ ಮುಬಾರಕ್ ಅವರ ಸರ್ವಾಧಿಕಾರಿ ಆಡಳಿತದ ವಿರುದ್ದ ದೇಶವ್ಯಾಪಿ ನಡೆದ ಪ್ರತಿಭಟನೆಯನ್ನು ಹತ್ತಿಕ್ಕಲು ನಡೆಸಲಾದ ಸೈನಿಕ ಕಾರ್ಯಾಚರಣೆಯಲ್ಲಿ ಸುಮಾರು 850 ಅಮಾಯಕರು ಪ್ರಾಣ ಕಳೆದುಕೊಂಡು ಸಾವಿರಾರು ಮಂದಿ ಗಾಯಗೊಂಡಿದ್ದರು.
`ಈ ಪ್ರಮಾಣದ ನರಮೇಧ ನಡೆಸಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ಸಾಲದು, ಮರಣದಂಡನೆ ವಿಧಿಸಬೇಕು~ ಎಂದು ಪ್ರತಿಭಟನೆಕಾರರು ಒತ್ತಾಯಿಸುತ್ತಿದ್ದಾರೆ. ಸೇನಾಡಳಿತದ ಕಾಲದಲ್ಲಿಯೇ ರಚಿಸಲಾದ ಕಾನೂನಿನಲ್ಲಿರುವ ದೋಷದಿಂದಾಗಿ ನ್ಯಾಯಬದ್ಧವಾಗಿ ತನಿಖೆಯೇ ನಡೆದಿಲ್ಲ ಎನ್ನುವ ಪ್ರತಿಭಟನೆಕಾರರ ಆರೋಪವನ್ನು ತಳ್ಳಿಹಾಕಲಾಗದು.
ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಮುಬಾರಕ್ ಮತ್ತು ಅವರ ಇಬ್ಬರು ಮಕ್ಕಳನ್ನು ನ್ಯಾಯಾಲಯ ಈಗಾಗಲೇ ಖುಲಾಸೆಗೊಳಿಸಿರುವುದು ಆ ದೇಶದ ಕಾನೂನಿನಲ್ಲಿರುವ ಹುಳುಕುಗಳನ್ನು ಬಯಲುಗೊಳಿಸಿದೆ. ಇದರಿಂದಾಗಿ ಶಿಕ್ಷೆಗೊಳಗಾದ ಮುಬಾರಕ್ ಮತ್ತು ಸಂಗಡಿಗರು ಮೇಲ್ಮನವಿ ಮೂಲಕ ಖುಲಾಸೆಗೊಳ್ಳುವ ಸಾಧ್ಯತೆಯೂ ಇದೆ.
ಹೋಸ್ನಿ ಮುಬಾರಕ್ 30 ವರ್ಷಗಳ ಕಾಲ ಈಜಿಪ್ಟ್ ದೇಶವನ್ನು ಸೇನಾ ಬಲದ ಮೂಲಕ ರಾಜ್ಯಭಾರ ನಡೆಸಿದ್ದ ಸರ್ವಾಧಿಕಾರಿ. ಈ ಅವಧಿಯಲ್ಲಿ ಸಾವಿರಾರು ರಾಜಕೀಯ ವಿರೋಧಿಗಳನ್ನು ನಿರ್ದಯವಾಗಿ ಹತ್ಯೆ ಮಾಡಿದ ಆರೋಪ ಅವರ ಮೇಲಿದೆ.
ಇದನ್ನು ಗಣನೆಗೆ ತೆಗೆದುಕೊಳ್ಳದೆ ಕಳೆದ ಜನವರಿಯಲ್ಲಿ ನಡೆದ ಹತ್ಯಾಕಾಂಡದಲ್ಲಿ ಮುಬಾರಕ್ ವಹಿಸಿದ್ದ ಪಾತ್ರದ ಬಗ್ಗೆ ಮಾತ್ರ ನ್ಯಾಯಾಲಯ ವಿಚಾರಣೆ ನಡೆಸಿರುವುದು ಆ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಅನುಮಾನದಿಂದ ನೋಡುವಂತೆ ಮಾಡಿದೆ.
ಹೋಸ್ನಿ ಮುಬಾರಕ್ ಕಟ್ಟಿ ಬೆಳೆಸಿರುವ ಸೇನಾ ವ್ಯವಸ್ಥೆ ಇನ್ನೂ ಪ್ರಭಾವಶಾಲಿಯಾಗಿರುವುದು ಇದಕ್ಕೆ ಕಾರಣ ಇದ್ದರೂ ಇರಬಹುದು. ಈ ಕಾರಣದಿಂದಾಗಿಯೇ ಸರ್ವಾಧಿಕಾರಿಯ ಪದಚ್ಯುತಿಯ ನಂತರ ದೇಶದ ಆಡಳಿತದ ಹೊಣೆ ಹೊತ್ತಿರುವ ಸೇನೆಯ ಉನ್ನತ ಮಂಡಳಿ `ತಮ್ಮವ~ರನ್ನು ರಕ್ಷಿಸುತ್ತಿದೆ ಎಂಬ ಆರೋಪ ಎದುರಿಸುತ್ತಿದೆ.
ಇನ್ನೆರೆಡು ವಾರಗಳಲ್ಲಿ ಈಜಿಪ್ಟ್‌ನ ಮತದಾರರು ಹೊಸ ಅಧ್ಯಕ್ಷನನ್ನು ಆಯ್ಕೆ ಮಾಡಲಿದ್ದಾರೆ. ಹೋಸ್ನಿ ಮುಬಾರಕ್ ವಿರುದ್ದದ ಜನಾಂದೋಲನದ ನೇತೃತ್ವ ವಹಿಸಿದ್ದ `ಮುಸ್ಲಿಮ್ ಬ್ರದರ್‌ಹುಡ್~ ಪಕ್ಷದ ನಾಯಕ ಮೊಹಮ್ಮದ್ ಮೊರ್ಸಿ ಮತ್ತು ಹಿಂದಿನ ಸರ್ಕಾರದಲ್ಲಿ ಪ್ರಧಾನಮಂತ್ರಿಯಾಗಿದ್ದ ಅಹ್ಮದ್ ಶಫಿಕ್ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಈ ಚುನಾವಣೆಯಲ್ಲಿ ವ್ಯಕ್ತವಾಗುವ ಜನಾದೇಶವೇ ಹೋಸ್ನಿ ಮುಬಾರಕ್ ಭವಿಷ್ಯವನ್ನು ನಿರ್ಧರಿಸಲಿದೆಯೇ ಹೊರತು ನ್ಯಾಯಾಲಯದ ಈಗಿನ ಆದೇಶ ಅಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.