ADVERTISEMENT

ಆಫ್ಘನ್ ಶಾಂತಿಗೆ ಆಘಾತ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಆಫ್ಘಾನಿಸ್ತಾನದ ಶಾಂತಿ ಸಮಿತಿಯ ಅಧ್ಯಕ್ಷ ಬಹ್ರನುದ್ದೀನ್ ರಬ್ಬಾನಿ ಅವರ ಹತ್ಯೆ ದೇಶವನ್ನು ಮತ್ತಷ್ಟು ಅಭದ್ರತೆಯತ್ತ ದೂಡಿದೆ. ವಿವಿಧ ದೇಶಗಳ ಒಂದೂವರೆ ಲಕ್ಷ ಸೈನಿಕರು ತಾಲಿಬಾನ್ ಮತ್ತಿತರ ಉಗ್ರವಾದಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
 
ಬಹುರಾಷ್ಟ್ರೀಯ ಪಡೆಯ ಹದ್ದಿನ ಕಣ್ಣು ಮತ್ತು ಕಾರ್ಯಾಚರಣೆಯ ನಡುವೆಯೂ ತಾಲಿಬಾನ್‌ಗಳು ಮೇಲುಗೈ ಸಾಧಿಸುತ್ತಿರುವುದು ಆಘಾತಕಾರಿ. ದೇಶದ ರಾಜಧಾನಿ ಕಾಬೂಲ್‌ನಲ್ಲಿಯೇ ರಬ್ಬಾನಿ ಅವರ ಹತ್ಯೆಯಾಗಿರುವುದು ಅಧ್ಯಕ್ಷ ಹಮೀದ್ ಕರ್ಜೈ ಅವರ ಆಡಳಿತದ ವೈಫಲ್ಯಕ್ಕೆ ದೊಡ್ಡ ನಿದರ್ಶನ.

ತಾಜಿಕ್ ಜನಾಂಗದ ನಾಯಕ ರಬ್ಬಾನಿ ಸಾಮಾನ್ಯ ವ್ಯಕ್ತಿಯಲ್ಲ. ಮುಜಾಹಿದ್ದೀನ್ ಸೇನೆ ರಚಿಸಿ ಸೋವಿಯತ್ ಸೇನಾ ಆಕ್ರಮಣದ ವಿರುದ್ಧ ಸೆಣಸಿ ಗೆದ್ದವರು.
 
ನಂತರ ಅಧಿಕಾರ ಕಬಳಿಸಿದ ತಾಲಿಬಾನ್ ವಿರುದ್ಧ ದೇಶದ ಉತ್ತರ ಭಾಗದ ವಿವಿಧ ಜನಾಂಗಗಳ ಗುಡ್ಡಗಾಡು ಜನರನ್ನು ಸಂಘಟಿಸಿ (ನಾರ್ದರ್ನ್ ಅಲೆಯನ್ಸ್) ಹೋರಾಡಿ ಗೆದ್ದವರು. ಅವರಿಗೆ ಅಮೆರಿಕ ಸದಾ ಬೆಂಬಲವಾಗಿ ನಿಂತಿತ್ತು. ತಾಲಿಬಾನ್ ಸೋಲಿನ ನಂತರ ದೇಶದ ಮೊದಲ ಅಧ್ಯಕ್ಷರಾಗಿದ್ದವರು ಅವರೇ.
ಚುನಾವಣೆಗಳಲ್ಲಿ ಕರ್ಜೈ ಗೆದ್ದ ನಂತರ ಅವರ ಹೋರಾಟದ ಅನುಭವವನ್ನು ಬಳಸಿಕೊಂಡು ದೇಶದಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಅವರನ್ನು ಶಾಂತಿ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.

ಮುಖ್ಯವಾಗಿ ತಾಲಿಬಾನ್ ನಾಯಕರ ಮನವೊಲಿಸಿ ಸಂಘರ್ಷ ನಿಲ್ಲುವಂತೆ ಮಾಡುವುದು ಅವರ ಕೆಲಸವಾಗಿತ್ತು. ಇದೀಗ ಸಂಧಾನದ ಹೆಸರಿನಲ್ಲಿ ಅವರನ್ನು ಭೇಟಿ ಮಾಡಿದ ತಾಲಿಬಾನ್ ಆತ್ಮಹತ್ಯಾ ದಳ ಬಾಂಬ್ ಸ್ಫೋಟಿಸುವ ಮೂಲಕ ಅವರನ್ನು ಕೊಂದಿದೆ.

 ತಾಲಿಬಾನ್‌ಗಳ ರಹಸ್ಯ ಕಾರ್ಯಾಚರಣೆಗೆ ಇತ್ತೀಚೆಗೆ ತಾನೆ ಅಧ್ಯಕ್ಷ ಕರ್ಜೈ ಅವರ ಸಹೋದರ ಮತ್ತು ಬಲಿಷ್ಠ ನಾರ್ದರ್ನ್ ಅಲೆಯನ್ಸ್‌ನ ಪೊಲೀಸ್ ಮುಖ್ಯಸ್ಥ ಜನರಲ್ ದಾವುದ್ ದಾವುದ್ ಬಲಿಯಾಗಿದ್ದಾರೆ. ಇವು ಎದ್ದು ಕಾಣುವ ಘಟನೆಗಳಷ್ಟೆ. ತಾಲಿಬಾನ್ ದಾಳಿಗೆ ಕರ್ಜೈ ಸರ್ಕಾರದ ಅನೇಕ ಬೆಂಬಲಿಗ ನಾಯಕರ, ಅಷ್ಟೇ ಏಕೆ, ಬಹುರಾಷ್ಟ್ರೀಯ ಪಡೆಗಳ ಸೈನಿಕರ ಹತ್ಯೆಯಾಗುತ್ತಿದೆ.
 
ಬಹುರಾಷ್ಟ್ರೀಯ ಪಡೆಗಳು ಗಮನಾರ್ಹ ಯಶಸ್ಸು ಸಾಧಿಸುತ್ತಿವೆ ಎಂದು ಅಮೆರಿಕ ಹೇಳುತ್ತಿದೆಯಾದರೂ ಇಂಥ ಘಟನೆಗಳು ನಡೆಯುತ್ತಿರುವುದನ್ನು ನೋಡಿದರೆ ಅಲ್ಲಿನ ಪರಿಸ್ಥಿತಿ ಬೇರೆಯೇ ಇದ್ದಂತೆ ಕಾಣುತ್ತಿದೆ. ಬಹುರಾಷ್ಟ್ರೀಯ ಸೇನೆ ನಡೆಸುತ್ತಿರುವ ಬಾಂಬ್ ದಾಳಿಗಳಲ್ಲಿ ಹೆಚ್ಚು ಸಾವುನೋವಿಗೆ ಈಡಾಗುತ್ತಿರುವವರು ಸಾಮಾನ್ಯ ಜನತೆ.
 
ಹೀಗಾಗಿ ಸೇನೆ ಜನರ ಬೆಂಬಲ ಗಳಿಸಿಕೊಳ್ಳುವಲ್ಲಿ ಸಫಲವಾಗಿಲ್ಲ. ಪರಿಸ್ಥಿತಿ ಕೈಮೀರುತ್ತಿರುವುದನ್ನು ತಿಳಿದೇ ಅಮೆರಿಕ ಅಲ್ಲಿರುವ ತನ್ನ ಸೈನಿಕರನ್ನು ಹಂತ ಹಂತವಾಗಿ ವಾಪಸ್ ಪಡೆಯುವುದಾಗಿ ಪ್ರಕಟಿಸಿದೆ.

ತಾಲಿಬಾನ್ ವಿರುದ್ಧ ಸಂಘರ್ಷಕ್ಕಿಳಿದ ಅಮೆರಿಕ ಇದೀಗ ಕರ್ಜೈ ಸರ್ಕಾರ ಮತ್ತು ಆ ಸಂಘಟನೆಯ ನಾಯಕರ ಜೊತೆಗೇ ಶಾಂತಿ ಒಪ್ಪಂದ ಮಾಡಿಸಲು ರಹಸ್ಯವಾಗಿ ಹೆಣಗಾಡುತ್ತಿರುವುದು ಒಂದು ವಿಪರ್ಯಾಸ.

ಇರಾಕ್ ಮತ್ತು ಆಫ್ಘಾನಿಸ್ತಾನದ ಅನುಭವದಿಂದ ಅಮೆರಿಕ ಇನ್ನಾದರೂ ಪಾಠ ಕಲಿತು ಮಿಲಿಟರಿ ಸಾಹಸಕ್ಕಿಳಿಯುವುದನ್ನು ಬಿಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.