ADVERTISEMENT

ಆರ್‌ಟಿಇ ಜಾರಿಗೆ ತಡವೇಕೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 19:30 IST
Last Updated 14 ಸೆಪ್ಟೆಂಬರ್ 2011, 19:30 IST

ಆರರಿಂದ ಹದಿನಾಲ್ಕು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವ ಕೇಂದ್ರ ಸರ್ಕಾರದ ಮಹತ್ವದ ಶಿಕ್ಷಣ ಹಕ್ಕು ಕಾಯ್ದೆಯನ್ನು (ಆರ್‌ಟಿಇ) ಜಾರಿಗೆ ತರಲು ಕರ್ನಾಟಕ ಸರ್ಕಾರ ಇನ್ನೂ ಮೀನ ಮೇಷ ಎಣಿಸುತ್ತಿರುವುದೇಕೆ ಎನ್ನುವುದು ಅರ್ಥವಾಗದ ಸಂಗತಿ.

ಈ ಕಾಯ್ದೆ ಅನ್ವಯ ಆಯಾ ಬಡಾವಣೆಗಳಲ್ಲಿನ ಖಾಸಗಿ ಶಾಲೆಗಳಲ್ಲೂ ಬಡ ಮಕ್ಕಳಿಗೂ ಯಾವುದೇ ತಾರತಮ್ಯವಿಲ್ಲದೆ ಶೇ 25ರಷ್ಟು ಸೀಟುಗಳನ್ನು ಕಾಯ್ದಿರಿಸಬೇಕು. ಇದು ಕಡ್ಡಾಯ. ಬಡಮಕ್ಕಳ ಶಿಕ್ಷಣಕ್ಕಾಗಿ ಕಾಯ್ದಿರಿಸುವ ಈ ಮೀಸಲಾತಿಗೆ ಖಾಸಗಿ ಶಾಲೆಗಳಿಂದ ವಿರೋಧ ವ್ಯಕ್ತವಾಗಿರುವುದು ವಿಪರ್ಯಾಸ.

ಶಿಕ್ಷಣ ಎಂದರೆ ಕೇವಲ ಹಣ ಮಾಡುವ ದಂಧೆಯಲ್ಲ. ಬಡಮಕ್ಕಳ ಶಿಕ್ಷಣಕ್ಕೆ ತಗಲುವ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾಗಳೇ ಭರಿಸಲಿವೆ. ಆದರೂ, ಖಾಸಗಿ ಶಿಕ್ಷಣ ಸಂಸ್ಥೆಗಳು ತಾರತಮ್ಯ ಮನೋಭಾವ ಅನುಸರಿಸುವುದು ಅಕ್ಷಮ್ಯ. ಎಲ್ಲ ಮಕ್ಕಳಿಗೂ ಸಮಾನ ಅವಕಾಶ ಮತ್ತು ಕಡ್ಡಾಯವಾಗಿ ಶಿಕ್ಷಣ ನೀಡಬೇಕಾದುದು ಸರ್ಕಾರ ಮತ್ತು ಎಲ್ಲ ಶಿಕ್ಷಣ ಸಂಸ್ಥೆಗಳ ಗುರಿಯಾಗಬೇಕೆನ್ನುವುದು ಕೇಂದ್ರ ಸರ್ಕಾರದ ಆಶಯ.
 
ಬಡಮಕ್ಕಳಿಗೆ ಪ್ರವೇಶ ನೀಡಲು ಕೆಲವು ಶಾಲೆಗಳು ತೋರುತ್ತಿರುವ ವಿರೋಧಕ್ಕೆ ಹೆದರಿ ರಾಜ್ಯದ ಬಿಜೆಪಿ ಸರ್ಕಾರ ಇನ್ನೂ ತನ್ನ ನಿಯಮಾವಳಿಗಳನ್ನು ಸಿದ್ಧಪಡಿಸಿ ಅಧಿಸೂಚನೆ ಹೊರಡಿಸದಿರುವುದು ವಿಚಿತ್ರ. ಈ ವಿಳಂಬದಿಂದ ರಾಜ್ಯ ಸರ್ಕಾರ ಉಳ್ಳವರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಪರ ಎನ್ನುವ ಅನುಮಾನಕ್ಕೆ ಈಗ ಎಡೆಕೊಟ್ಟಿದೆ.

 ರಾಜ್ಯ ಸರ್ಕಾರದ ಈ ಧೋರಣೆಯಿಂದ ದೈಹಿಕ ಅಸಾಮರ್ಥ್ಯ ಹೊಂದಿದ ಶಾಲಾ ಮಕ್ಕಳಿಗಾಗಿ ನೀಡುವ ವಾಹನ ಸೌಲಭ್ಯ, ಅವರ ಪ್ರಾಥಮಿಕ ಶಿಕ್ಷಣಕ್ಕೆ ನೀಡುವ ಅನುದಾನ, ಬೀದಿ ಮಕ್ಕಳಿಗಾಗಿ ವಸತಿ ಶಾಲೆಗಳ ಆರಂಭಕ್ಕೆ ಸಿಗುವ ಹಣಕಾಸಿನ ನೆರವಿಗೆ ಕೊಕ್ಕೆ ಬೀಳಲಿದೆ.

ಕರ್ನಾಟಕದಂತೆ ಇನ್ನೂ ಇತರೆ ಹದಿನಾಲ್ಕು ರಾಜ್ಯಗಳೂ ಇದೇ ಹಾದಿಯನ್ನು ತುಳಿದಿರುವುದು ದುರದೃಷ್ಟಕರ. ಕೇಂದ್ರ ಸರ್ಕಾರದ ಪೂರ್ಣ ಅನುದಾನದಿಂದಲೇ ನಡೆಯುವ ಸರ್ವ ಶಿಕ್ಷಣ ಅಭಿಯಾನ ಯೋಜನೆಗಳಿಗೂ ನೀಡುವ ಹಣದಲ್ಲಿಯೂ ಸ್ವಲ್ಪ ಪ್ರಮಾಣವನ್ನು ಕಡಿತ ಮಾಡಲು ಕೇಂದ್ರ ಸರ್ಕಾರ ಗಂಭೀರವಾಗಿ ಆಲೋಚಿಸುತ್ತಿರುವುದಕ್ಕೆ ರಾಜ್ಯಗಳ ನಿರ್ಲಕ್ಷ್ಯವೇ ಹೊಣೆ.

ಆರ್‌ಟಿಇ ಜಾರಿಗೆ ಬಂದು ವರ್ಷವಾಯಿತು. ಈ ಕಾಯ್ದೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಕೆಲವು ನಿಯಮಾವಳಿಗಳನ್ನು ರೂಪಿಸಿ ಅವುಗಳನ್ನು ಪ್ರಕಟಿಸಬೇಕು. ಈ ನಿಯಮಾವಳಿಗಳನ್ನು ಪಾಲಿಸಬೇಕೆಂದು ಎಲ್ಲ ಖಾಸಗಿ ಶಾಲೆಗಳಿಗೆ ಕಟ್ಟಾಜ್ಞೆ ಮಾಡಬೇಕಷ್ಟೆ. ಆದರೆ ಇಂತಹ ಯತ್ನವೇ ನಡೆಯದಿರುವುದು ರಾಜ್ಯ ಸರ್ಕಾರದ ಬೇಜವಾಬ್ದಾರಿಯಲ್ಲದೆ ಮತ್ತೇನೂ ಅಲ್ಲ.

ಈ ಕಾಯ್ದೆಯ ಜಾರಿಗೆ ವಿರೋಧ ಮಾಡುತ್ತಿರುವ ಖಾಸಗಿ ಶಾಲೆಗಳ ಮುಖ್ಯಸ್ಥರನ್ನು ಕರೆದು ಸಾಧಕ ಬಾಧಕಗಳನ್ನು ಚರ್ಚಿಸಬೇಕು. ಅವರನ್ನು ಮನವೊಲಿಸುವ ಪ್ರಯತ್ನ ಫಲಿಸದಿದ್ದರೆ ಕಠಿಣ ಕಾನೂನು ಕ್ರಮ ಜರುಗಿಸುವುದಕ್ಕೆ ಮುಂದಾಗಬೇಕು. ಬಡಮಕ್ಕಳ ಬಗೆಗೆ ಖಾಸಗಿ ಶಾಲೆಗಳ ಅಮಾನವೀಯ ಮುಖ ಬದಲಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.