ADVERTISEMENT

ಆರ್‌ಬಿಐ: ಸಕಾಲಿಕ ಕ್ರಮ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ಭಾರತೀಯ ರಿಸರ್ವ್ ಬ್ಯಾಂಕ್, ತನ್ನ ವಾರ್ಷಿಕ ಸಾಲ ನೀತಿಯಲ್ಲಿ ಅಲ್ಪಾವಧಿ ಬಡ್ಡಿ ದರ (ರೆಪೊ) ಶೇ 0.50ರಷ್ಟು ಕಡಿತ ಮಾಡಿ ಹಿತಕರವಾದ ಅಚ್ಚರಿ ಮೂಡಿಸಿದೆ. ಹಣದುಬ್ಬರ ನಿಗ್ರಹಕ್ಕಿಂತ ಅಭಿವೃದ್ಧಿಗೆ ಒತ್ತು ನೀಡಲು ಮುಂದಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ದುಬಾರಿ ಬಡ್ಡಿದರಗಳಿಂದಾಗಿ ಬಂಡವಾಳ ಹೂಡಿಕೆ ಸ್ಥಗಿತಗೊಂಡ, ಮಂದಗತಿಯ ಆರ್ಥಿಕ ವೃದ್ಧಿ ದರ (ಜಿಡಿಪಿ), ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣ ಹೆಚ್ಚಳ ಮತ್ತು ಜಾಗತಿಕ ಆರ್ಥಿಕ ಹಿನ್ನಡೆ ಕಾರಣಕ್ಕೆ ರಫ್ತು ಕುಸಿತದಂತಹ ವಾಸ್ತವ ಪರಿಸ್ಥಿತಿಗೆ ಕೇಂದ್ರೀಯ ಬ್ಯಾಂಕ್ ಸೂಕ್ತವಾಗಿ ಸ್ಪಂದಿಸಿದೆ. ವಾಣಿಜ್ಯ ಬ್ಯಾಂಕ್‌ಗಳು ತಮ್ಮ ವಿವಿಧ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಅನಿವಾರ್ಯವಾಗಿ ಕಡಿಮೆ ಮಾಡಬೇಕಾಗುವುದರಿಂದ ಗೃಹ ನಿರ್ಮಾಣ, ವಾಹನ ಖರೀದಿ, ವೈಯಕ್ತಿಕ, ಉದ್ದಿಮೆ ವಹಿವಾಟಿನ ಸಾಲಗಳು ಸ್ವಲ್ಪ ಅಗ್ಗವಾಗಲಿವೆ. ಇದರ ಫಲವಾಗಿ ಸರಕು ಸೇವೆಗಳ ಬೇಡಿಕೆ ಹೆಚ್ಚಳಗೊಂಡು ಅರ್ಥ ವ್ಯವಸ್ಥೆಯಲ್ಲಿ ಉತ್ಸಾಹ ಮತ್ತೆ ಗರಿಗೆದರುವ ಸಾಧ್ಯತೆಗಳಿವೆ. ಹಣದುಬ್ಬರ ಭೀತಿ ಸಂಪೂರ್ಣವಾಗಿ ನಿವಾರಣೆ ಆಗಿರದಿದ್ದರೂ, ಈಗಾಗಲೇ ಸಾಕಷ್ಟು ಕ್ಷೀಣಿಸಿರುವ ಉದ್ಯಮ ವಹಿವಾಟಿನ ಆತ್ಮವಿಶ್ವಾಸವು ಇನ್ನಷ್ಟು ಮಂಕಾಗುವ ಮೊದಲೇ `ಆರ್‌ಬಿಐ~ ಎಚ್ಚೆತ್ತುಕೊಂಡಿರುವುದು ಸಮರ್ಥನೀಯವಾಗಿದೆ.

ಹಣದುಬ್ಬರವು ಇನ್ನೂ `ಹಿತಕಾರಿ ಮಟ್ಟ~ಕ್ಕಿಂತ ಹೆಚ್ಚಿನ ಮಟ್ಟದಲ್ಲಿಯೇ ಇರುವಾಗ ರೆಪೊ ಶೇ 0.25ರಷ್ಟು ಕಡಿತವಾಗಲಿದೆ ಎಂದೇ ಉದ್ಯಮ ವಲಯ  ಬಹುವಾಗಿ ನಿರೀಕ್ಷಿಸಿತ್ತು. ಆದರೆ, ಈ ನಿರೀಕ್ಷೆ ತಲೆಕೆಳಗು ಮಾಡಿರುವ ಆರ್‌ಬಿಐ ಗವರ್ನರ್ ಡಿ. ಸುಬ್ಬರಾವ್ ಶೇ 0.50ರಷ್ಟು ಕಡಿತ ಮಾಡಿ, ಆರ್ಥಿಕ ವೃದ್ಧಿಗೆ ಒತ್ತು ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

`ಆರ್‌ಬಿಐ~ ಕ್ರಮಕ್ಕೆ ಒತ್ತಾಸೆಯಾಗಿ ಕೇಂದ್ರ ಸರ್ಕಾರವು ಸರಕುಗಳ ಪೂರೈಕೆಯಲ್ಲಿನ ಅಡಚಣೆ  ದೂರಮಾಡಿ, ಉದ್ಯಮಿಗಳಿಗೆ ಉತ್ತೇಜನ ನೀಡಲು ತೆರಿಗೆ ರಿಯಾಯ್ತಿ ಘೋಷಿಸಬೇಕಾಗಿದೆ. ಹಣದುಬ್ಬರ ನಿಗ್ರಹಿಸಲು ಸರ್ಕಾರವು ತನ್ನ ವಿತ್ತೀಯ ಕೊರತೆ ಮತ್ತು ಗರಿಷ್ಠ ಪ್ರಮಾಣದಲ್ಲಿ ಇರುವ ಸಾಲಕ್ಕೆ ಇನ್ನಷ್ಟು ಕಡಿವಾಣ ಹಾಕಿ ವಿತ್ತೀಯ ಶಿಸ್ತು ರೂಢಿಸಿಕೊಳ್ಳಬೇಕಾಗಿದೆ. ಸರ್ಕಾರ ತನ್ನ ವಿತ್ತೀಯ ಸ್ವೇಚ್ಛಾಚಾರಕ್ಕೆ ಮೂಗುದಾರ ಹಾಕಿ, ವರಮಾನ ವೃದ್ಧಿ, ಮೂಲಸೌಕರ್ಯಗಳಿಗೆ ಉತ್ತೇಜನ, ಪ್ರಗತಿಪರ ಸುಧಾರಣಾ ಕ್ರಮಗಳನ್ನು ಕೈಗೊಂಡರೆ ಮಾತ್ರ ಕೇಂದ್ರೀಯ ಬ್ಯಾಂಕ್‌ನ ನೀತಿ ನಿರೂಪಣೆಯ ಬಡ್ಡಿ ದರಗಳು ಇನ್ನಷ್ಟು ಕಡಿಮೆಯಾಗಿ ಆರ್ಥಿಕ ಚಟುವಟಿಕೆಗಳಿಗೆ ಅಗತ್ಯ ಉತ್ತೇಜನ ದೊರೆಯಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳ, ಸ್ಥಳೀಯವಾಗಿ ರೂಪಾಯಿ ಅಪಮೌಲ್ಯ, ಆಹಾರ ಧಾನ್ಯಗಳ ಬೆಲೆ ಏರಿಕೆಯು ಹಣದುಬ್ಬರ ಒತ್ತಡ ಹೆಚ್ಚಿಸುವ ಸಾಧ್ಯತೆಗಳೂ ಇದ್ದೇ ಇವೆ. ಅಂತಹ ಪರಿಸ್ಥಿತಿ ಮತ್ತೆ ಉದ್ಭವವಾದರೆ, ಮತ್ತೆ ಕಠಿಣ ನೀತಿ ಅನುಸರಿಸುವುದನ್ನು `ಆರ್‌ಬಿಐ~ ಗವರ್ನರ್ ಸುಬ್ಬರಾವ್ ಮುಕ್ತವಾಗಿ ಇರಿಸಿಕೊಂಡಿರುವುದನ್ನು ಮರೆಯುವಂತಿಲ್ಲ. ಕೇಂದ್ರೀಯ ಬ್ಯಾಂಕ್‌ನ ಬದಲಾದ ಆಕ್ರಮಣಕಾರಿ ಸ್ವರೂಪದ `ರೆಪೊ ದರ~ ಕಡಿತವು ಭವಿಷ್ಯದಲ್ಲಿ ಆರ್ಥಿಕ ವೃದ್ಧಿ ದರ ಸ್ಥಿರಗೊಳಿಸುವುದೇ ಕಾದು ನೋಡಬೇಕು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.