ದಲಿತ ಯುವಕನನ್ನು ಮದುವೆಯಾದ ಕಾಲೇಜು ಉಪನ್ಯಾಸಕಿಯೊಬ್ಬರನ್ನು ಆಕೆಯ ಸೋದರನೇ ಕೊಲೆ ಮಾಡಿದ ಅಮಾನವೀಯ ಘಟನೆ ಮೈಸೂರಿನಲ್ಲಿ ನಡೆದಿದೆ.
ಕೆಲವು ತಿಂಗಳ ಹಿಂದೆ ಮದ್ದೂರು ತಾಲ್ಲೂಕಿನ ಆಬಲಪಾಡಿ ಎಂಬಲ್ಲಿ ಇಂಥದೇ ಪ್ರಕರಣ ನಡೆದಿತ್ತು. ದಲಿತ ಯುವಕನನ್ನು ಪ್ರೀತಿಸುತ್ತಿದ್ದ ಯುವತಿಯನ್ನು ಆಕೆಯ ತಂದೆ ಹಾಗೂ ಬಂಧುಗಳು ನೇಣುಹಾಕಿ ಕೊಂದು ಹಾಕಿದ್ದರು. ಈ ಎರಡೂ ಪ್ರಕರಣಗಳು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಆಳವಾಗಿ ಬೇರು ಬಿಟ್ಟಿರುವ ಜಾತಿ ಅಸಹನೆಯ ಪರಾಕಾಷ್ಠೆಗೆ ಹೊಸ ಉದಾಹರಣೆಗಳು.
ದಲಿತರು ಶೈಕ್ಷಣಿಕವಾಗಿ ಮಾತ್ರವಲ್ಲದೆ, ಆರ್ಥಿಕವಾಗಿ, ಸಾಮಾಜಿಕವಾಗಿ ಉನ್ನತಿಗೆ ಏರಿದ್ದರೂ ಅವರನ್ನು ಸಮಾನರೆಂದು ಪರಿಗಣಿಸದ ಅಸಹಿಷ್ಣು ಮನಃಸ್ಥಿತಿ ಸಮಾಜದಲ್ಲಿ ಇನ್ನೂ ಉಳಿದು ಬಂದಿರುವುದು ವಿಪರ್ಯಾಸ. ದಲಿತ ಯುವಕರನ್ನು ಮದುವೆಯಾಗಲು ಮುಂದಾಗುವ ತಮ್ಮ ಮಕ್ಕಳನ್ನೇ ಕೊಂದು ಹಾಕುವಂತಹ ಪಾಲಕರ ಮನಃಸ್ಥಿತಿ ಅಮಾನವೀಯ.
ಸ್ನಾತಕೋತ್ತರ ಪದವಿ ಪಡೆದ ಯುವತಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದರೂ ಮದುವೆಗೆ ಸಂಬಂಧಿಸಿ ಆಕೆಯ ಸ್ವಂತ ನಿರ್ಧಾರವನ್ನು ಗೌರವಿಸಲಾಗದ ಪಾಳೇಗಾರಿಕೆ ಪ್ರವೃತ್ತಿ ಸಮಾಜದಲ್ಲಿರುವುದು ನಾಚಿಕೆಗೇಡಿನ ಸಂಗತಿ.
ಇಂಥ ಪ್ರಕರಣಗಳು ನಾಗರಿಕ ಸಮಾಜಕ್ಕೆ ಕಳಂಕ ತರುವಂಥವು. ದೇಶವು ಸರ್ವ ಸಮಾನತೆ ಆದರ್ಶದ ಸಂವಿಧಾನವನ್ನು ಅಂಗೀಕರಿಸುವುದಕ್ಕೆ ದಶಕಗಳ ಮೊದಲೇ ಮೈಸೂರು ಸಂಸ್ಥಾನದ ಅರಸರು ಹಿಂದುಳಿದ ಮತ್ತು ದಲಿತ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದಕ್ಕೆ ಮೀಸಲಾತಿಯಂಥ ಕ್ರಾಂತಿಕಾರಕ ಕ್ರಮಗಳ ಮೂಲಕ ಸಾಮಾಜಿಕ ಜಾಗೃತಿಯನ್ನು ಉಂಟು ಮಾಡಿದ್ದರು.
ಅಂತರಜಾತೀಯ ಮದುವೆಗಳನ್ನು ಒಂದು ಸಾಮಾಜಿಕ ಆಂದೋಲನವನ್ನಾಗಿ ನಡೆಸಿಕೊಂಡು ಬಂದ ಪರಂಪರೆಯೂ ಮೈಸೂರಿನ ಪ್ರಗತಿಪರ ಸಂಘಟನೆಗಳಿಗಿದೆ. ಅಂಥ ಹಿನ್ನೆಲೆಯ ಮೈಸೂರಿನಲ್ಲಿ ಇಂಥ ಪ್ರಕರಣ ನಡೆದಿರುವುದು ಇತಿಹಾಸದ ವ್ಯಂಗ್ಯ.
ಹೆಣ್ಣು ಇಂದು ಶಿಕ್ಷಣ ಪಡೆದು ಎಲ್ಲ ರಂಗಗಳಲ್ಲಿ ಪುರುಷರಿಗೆ ಸಮಾನವಾಗಿ ತನ್ನ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾಳೆ. ಆರ್ಥಿಕ ಸ್ವಾವಲಂಬನೆ ಗಳಿಸಿದರೂ ಅವಳ ಸ್ವಾತಂತ್ರ್ಯವನ್ನು ಗೌರವಿಸದ ಸಾಂಪ್ರದಾಯಿಕ ಧೋರಣೆ ಕುಟುಂಬದಲ್ಲಿ ವ್ಯಕ್ತವಾಗುತ್ತಿದೆ.
ವರದಕ್ಷಿಣೆಯಂಥ ಸಾಮಾಜಿಕ ಅನಿಷ್ಟಗಳಿಗೆ ಸುಶಿಕ್ಷಿತ ಹೆಣ್ಣುಮಕ್ಕಳೇ ಜೀವ ಕಳೆದುಕೊಳ್ಳುವ ಸ್ಥಿತಿ ಉಳಿದಿದೆ. ಹೆಣ್ಣುಮಕ್ಕಳ ಬದುಕಿನ ಹಕ್ಕಿನ ಮೇಲೆ ನಡೆಸುವ ಇಂಥ ಪೈಶಾಚಿಕ ದಾಳಿಯನ್ನು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳಿಂದ ತಡೆಗಟ್ಟದಿದ್ದರೆ ಇಂಥ ಇನ್ನಷ್ಟು ದುಷ್ಕೃತ್ಯಗಳು ಮುಂದುವರಿಯುತ್ತವೆ.
ಕುಟುಂಬ ಪ್ರತಿಷ್ಠೆಯ ಹೆಸರಿನಲ್ಲಿ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಹಾಗೆ ಕ್ರೂರವಾಗಿ ವರ್ತಿಸಿದವರು ಕುಟುಂಬದ ಗೌರವವನ್ನು ಉಳಿಸುವುದಕ್ಕಿಂತ ಕೊಲೆಗಾರರಾಗಿ ಸಮಾಜದಲ್ಲಿ ಪ್ರತಿಷ್ಠಾಪಿತರಾಗುತ್ತಾರೆ, ಕುಟುಂಬಕ್ಕಷ್ಟೇ ಅಲ್ಲದೆ, ತಾವು ಪ್ರತಿನಿಧಿಸುವ ಸಮುದಾಯಕ್ಕೂ ಕೆಟ್ಟ ಹೆಸರು ತರುತ್ತಾರೆ ಎಂಬುದನ್ನು ಮರೆಯಬಾರದು.
ಆದ್ದರಿಂದ ಸರ್ಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಹಂತಕರು ಕೊಲೆ ಆರೋಪಕ್ಕೆ ಗರಿಷ್ಠ ಶಿಕ್ಷೆ ಪಡೆಯುವಂತೆ ಕಾನೂನು ಕ್ರಮ ಜರುಗಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.